ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಂವಿಧಾನದ 371 (ಜೆ) ಕಲಂ ಜಾರಿಯಾಗಿದ್ದರೂ ಸಮರ್ಪಕವಾಗಿ ಅನುಷ್ಠಾನ ಆಗದೆ ಇದ್ದುದ್ದರಿಂದ ಈ ಭಾಗದ ಜನರಿಗೆ ಅದರ ಲಾಭ ಆಗುತ್ತಿಲ್ಲ.ಇಷ್ಷೆ ಅಲ್ಲದೆ ಕೆಲವು ಲೋಪದೋಷಗಳು ಇವೆ.ಮತ್ತು ಗೊಂದಲುಗಳಿವೆ.ಅವುಗಳ ಬಗ್ಗೆ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ನಿವಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮಕೈಗೊಳ್ಳಬೇಕು.
371 (ಜೆ) ಜಾರಿಯಾಗಿ 10 ವರ್ಷ ಕಳೆದರೂ ಪ್ರತ್ಯೇಕ ಸಚಿವಾಲಯ ಕಚೇರಿ ಸ್ಥಾಪನೆಗೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುವ ಉದ್ದೇಶವಾದರೂ ಎನು?ಯಾಕೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಮಲತಾಯಿ ಧೋರಣೆ?.ದಶಕಗಳ ಹೋರಾಟದ ಫಲವಾಗಿ ಸಂವಿಧಾನದ 371 ಜೆ ಕಲಂ ಲಭಿಸಿದೆ.ಕಲ್ಯಾಣ ಕರ್ನಾಟಕದಲ್ಲಿ ಮತ್ತೊಂದು ಕ್ರಾಂತಿ ಉಂಟಾಗಿದೆ.
ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ದೂರ ತಳ್ಳುವ ನೀತಿ ಅನುಸರಿಸುತ್ತಿದೆ.ಇರರ ಲಾಭ ಪಡೆದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮಗೆ ಇದರಿಂದ ಯಾವುದೇ ಅನುಲವಾಗದಂತೆ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
371 (ಜೆ) ಕಲಂ ಜಾರಿಗಾಗಿ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ತೋರಿದ್ದರಿಂದ ಇಂದು ಜಾರಿಯಲ್ಲಿದೆ. ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ತಂದು ಅದಕ್ಕೆ ಸಂಬಂದಿಸಿದಂತೆ ಅಭಿವೃದ್ಧಿ ಮಂಡಳಿ, ನೇಮಕಾತಿಗಳು, ಮುಂಬಡ್ತಿಗಳು, ಶೈಕ್ಷಣಿಕ ಮೀಸಲಾತಿಯ ಪ್ರಕ್ರಿಯೆಗಳು,ಹೊಸ ಹೊಸ ಯೋಜನೆಗಳು ಸಮರೋಪಾದಿಯಲ್ಲಿ ಅನುಷ್ಠಾನವಾಗುವಂತೆ ವಿಶೇಷ ಕ್ರಮ ಕೈಗೊಳ್ಳಬೇಕು.
ಕಲ್ಯಾಣ ಕರ್ನಾಟಕ ಭಾಗದ ಸಚಿವರಿಗೆ ಈ ಇಲಾಖೆಯನ್ನು ನಿರ್ವಹಿಸುವ ಜವಾಬ್ದಾರಿ ವಹಿಸಬೇಕು ಎಂದ ಅವರು ಅಧಿವೇಶನದಲ್ಲಿ ಕೂಡಲೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಪಕ್ಷಾತೀತವಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು.
ವಿಶೇಷವಾಗಿ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರೀಯಾಂಕ ಖರ್ಗೆ ಈ ವಿಷಯದಲ್ಲಿ ಮುತುವರ್ಜಿ ವಹಿಸಬೇಕು.ಸರಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇಷ್ಷೇ ಅಲ್ಲದೆ ರಾಜ್ಯದಲ್ಲಿ ನಡೆಯುವ ಎಲ್ಲಾ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯ ಮಾನದಂಡದಂತೆ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ರಾಜ್ಯ ಮಟ್ಟದ ಮೇರಿಟ್ ನಲ್ಲಿ ಆಯ್ಕೆಯಾದರೆ ಅದನ್ನು ಗಣನೆಗೆ ತೆಗೆದುಕೊಂಡು ಪರಿಗಣಿಸಬೇಕು.ನಂತರ ನಮ್ಮ ಪಾಲಿನ ನೇಮಕಾತಿಗಳು ಸಿಗುವ ನಿಟ್ಟಿನಲ್ಲಿ ತುರ್ತು ಕ್ರಮ ಜರುಗಿಸಬೇಕು.
ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 371 ಜೆ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಘೋಷಣೆ ಮಾಡಬೇಕು.ಇಲ್ಲದಿದ್ದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮತ್ತೊಂದು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.