ಕಲಬುರಗಿ: ವಚನಗಳ ಕಾಲ ಇತಿಹಾಸ, ವಚನಗಳು ಸರ್ವಕಾಲಿಕ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅಭಿಪ್ರಾಯಪಟ್ಟರು.
ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ಅಪ್ಪ ಪಬ್ಲಿಕ್ ಶಾಲಾ ಆವರಣದಲ್ಲಿರುವ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಅವರು, ವಿಚಾರ, ನಂಬಿಕೆಯಲ್ಲಿ ಭಿನ್ನತೆ ಇರಬಹುದು. ಆದರೆ ಇತರರನ್ನು ಹಳಿಯಬಾರದು. ಇದನ್ನು ಬಸವಣ್ಣನವರು ಇದಿರ ಹಳಿಯಲು ಬೇಡ ಎಂದು ಅಂದೇ ಹೇಳಿದ್ದಾರೆ. ಯಾವುದೇ ವಿಚಾರ ಚರ್ಚೆ, ವಿಚಾರಕ್ಕೆ ಅತೀತವಲ್ಲ ಎಂದರು.
ಅನುಭವ ಮಂಟಪ ಅದೊಂದು ಕೇವಲ ಕಟ್ಟಡವಲ್ಲ. ಇಂದಿನ ಸಮಸ್ಯೆಗಳಿಗೂ ಶರಣರ ವಿಚಾರಗಳು ಬೆಳಕಿನೋಪಾದಿಯಲ್ಲಿ ಕಂಡು ಬರುತ್ತವೆ. ಚೌಕಟ್ಟು ಮೀರಿದ, ಸೀಮಾತೀತ ಮಹಾತ್ಮರು ಹಾಗೂ ಸಾಧಕರನ್ನು ಚೌಕಟ್ಟಿಗೆ ಸಿಲಿಕಿಸುವ ತಂತ್ರ ಮೊದಲಿನಿಂದಲೂ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಬಸವರಾಜ ಡೋಣೂರ, ದೇಶ ಕಟ್ಟುವ, ನಾಡು ಕಟ್ಟುವ ಕೆಲಸಕ್ಕೆ ಪ್ರತಿರೋಧಗಳು ಬರುತ್ತವೆ. ಇವುಗಳನ್ನು ಮೀರಿ ಬೆಳೆಯಬೇಕು. ಈ ಹಿಂದೆ ವೈಚಾರಿಕ ಭಿನ್ನಾಭಿಪ್ರಾಯ ಮೀರಿ ದೇಶ ಕಟ್ಟುವ ಕೆಲಸ ನಡೆದಿತ್ತು ಎಂದರು.
ಬಸವತತ್ವದ ಮೇಲೆ ಯಾರೂ ಮಾಲೀಕತ್ವ ಸಾಧಿಸುವ ಅಗತ್ಯವಿಲ್ಲ. ಬಸವಣ್ಣನವರು ಅಧ್ಯಾತ್ಮ, ಅನುಭಾವ ಸಾಹಿತ್ಯ ನೀಡಿದ್ದಾರೆ ಎಂದು ಕೃತಿಯ ಆಶಯ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಗದಗನ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.