ಕಾರ್ತಿಕನ ತಂದೆ-ತಾಯಿಗಳಿಗೆ ಮಾತೋಶ್ರೀ ಗಂಗಮ್ಮ ಬಣಗಾರ್ ಸೇವಾ ಪ್ರಶಸ್ತಿ ಪ್ರದಾನ

0
23

ಸುರಪುರ: ಮಾತೋಶ್ರೀ ಗಂಗಮ್ಮ ಬಣಗಾರ್ ರುಕ್ಮಾಪುರ ಸೇವಾ ಟ್ರಸ್ಟ್ ಹಾಗೂ ರುಕ್ಮಾಪುರದ ಶ್ರೀ ಗುರುಶಾಂತಮೂರ್ತಿ ಹಿರೇಮಠ ಸಂಸ್ಥಾನ ಸಂಯುಕ್ತಾಶ್ರಯದಲ್ಲಿ ಇತ್ತಿಚೆಗೆ ವಿದ್ಯಾರ್ಥಿ ಕಾರ್ತಿಕನ ತಂದೆ-ತಾಯಿಗಳಿಗೆ ಮಾತೋಶ್ರೀ ಗಂಗಮ್ಮ ಬಣಗಾರ್ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ರುಕ್ಮಾಪುರ ಗುರುಶಾಂತಮೂರ್ತಿ ಹಿರೇಮಠ ಸಂಸ್ಥಾನದಲ್ಲಿ ಮಹಾನವಮಿ ದಿನದಂದು ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಕಾರ್ತಿಕನ ತಂದೆ ಕೀರಪ್ಪ ಬಡಗಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ರುಕ್ಮಾಪುರ ಗ್ರಾಮ ಶ್ರಮಜೀವಿಗಳ, ಶಿಕ್ಷಣವಂತರ, ಸಮಾಜ ಸೇವಕರೆಂದು ಹೆಸರಾಗಿತ್ತು. ಸತ್ತ ಮೇಲೂ ಸಮಾಜ ಸೇವೆ ಮಾಡಿದ ವಿದ್ಯಾರ್ಥಿ ಕಾರ್ತಿಕನಿಂದಾಗಿ ಈಗ ತ್ಯಾಗವಂತರ ಭೂಮಿಯೂ ಆಗಿದೆ ಎಂದು ಹೇಳಿದರು.

Contact Your\'s Advertisement; 9902492681

ವಿದ್ಯಾರ್ಥಿ ಕಾರ್ತಿಕ ನಿಧನ ನಂತರ ಆತನ ದೇಹದ ಪ್ರಮುಖ ಅಂಗಗಳಾದ ಹೃದಯ, ಕಿಡ್ನಿಗಳು, ಕಣ್ಣುಗಳು ಐವರ ಬಾಳಿಗೆ ಬೆಳಕಾಗಿದೆ ಎಂದರೆ ಅದೇನು ಸಣ್ಣ ವಿಷಯವಲ್ಲ. ಕಾರ್ತಿಕ ಹಾಗೂ ಅವರ ಕುಟುಂಬದ ಸದಸ್ಯರು ದೇಶಕ್ಕೆ ಮಾತ್ರವಲ್ಲದೆ ವಿದೇಶಕ್ಕೂ ಮಾದರಿಯಾಗಿದ್ದಾರೆ. ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗುವ ಈ ದೇಹದ ಪ್ರಮುಖ ಅಂಗಗಳನ್ನು ಅಗತ್ಯ ಇರುವವರಿಗೆ ದಾನ ಮಾಡಲು ಪ್ರತಿಯೊಬ್ಬರೂ ಪಣ ತೊಡುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಹಾವೇರಿಯ ಪ್ರಭಯ್ಯಸ್ವಾಮಿ ಹಿರೇಮಠ ಮಾತನಾಡಿ, ಹೃದಯ, ಕಣ್ಣು, ಕಿಡ್ನಿಗಳ ದಾನ ಮಾಡಿದ ವಿದ್ಯಾರ್ಥಿ ಹಾಗೂ ಕುಟುಂಬದವರ ತ್ಯಾಗ ಮನೋಭಾವದ ಕುರಿತು ಪತ್ರಿಕೆಗಳಲ್ಲಿ ತಿಳಿದುಕೊಂಡಿದ್ದೆ. ಆದರೆ ಇದೇ ಗ್ರಾಮದವರೆಂದು ತಾನು ತಿಳಿದಿರಲಿಲ್ಲ ಎಂದ ಅವರು ಕಾರ್ತಿಕ ಹಾಗೂ ಅವರ ಕುಟುಂಬದವರ ಕಾರ್ಯವನ್ನು ಶ್ಲಾಘಿಸಿದರು. ಇವರ ಕಾರ್ಯವನ್ನು ನೋಡಿದರೆ ಮತ್ತೊಬ್ಬ ಸ್ವಾಮಿ ವಿವೇಕಾನಂದನಾಗಿ ಕಾರ್ತಿಕ ನನಗೆ ಕಂಡು ಬಂದಿದ್ದಾನೆ. ಇಂತಹ ಮಹನೀಯರ ಆದರ್ಶ ಕಾರ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಟ್ರಸ್ಟ್‌ನ ಸಂಚಾಲಕ ಸುಭಾಷ್ ಬಣಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು ಸಮಾಜ ಸೇವೆಯಲ್ಲಿ ತೊಡಗಿದವರನ್ನು ಗುರುತಿಸಿ, ಗೌರವಿಸುವುದು ಸೇರಿದಂತೆ, ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಲು ಈ ಟ್ರಸ್ಟ್‌ನ್ನು ಆರಂಭಿಸಲಾಗಿದೆ. ಇಂದೇ ಈ ಟ್ರಸ್ಟ್ ಉದ್ಘಾಟನೆಗೊಂಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು. ಹಣ ಸಿಗುತ್ತದೆ ಎಂದರೆ ತೇಗೆದುಕೊಳ್ಳುವವರೇ ಹೆಚ್ಚು. ಆದರೆ ಕಾರ್ತಿಕ ತಂದೆ ತಾಯಿಗಳ ಕಾರ್ಯ ಶ್ಲಾಘನೀಯ. ಪರಿಹಾರವಾಗಿ ಹಲವಾರು ಸಂಘ-ಸಂಸ್ಥೆಗಳು, ವ್ಯಕ್ತಿಗಳು ಹಣದ ಸಹಾಯ ಮಾಡಲು ಮುಂದೆ ಬಂದರೂ, ಅದನ್ನು ತೇಗೆದುಕೊಳ್ಳದೆ, ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಐವರ ಬಾಳಿಗೆ ಬೆಳಕಾದ ಇಂತಹ ಕುಟುಂಬಕ್ಕೆ ಬರುವ ನವೆಂಬರ್ ಒಂದರಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

ಟ್ರಸ್ಟನ್ ಅಧ್ಯಕ್ಷ ಅಶೋಕ ಬಣಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗವೂ ಕೂಡಾ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೋಟಿಗಟ್ಟಲೇ ಹಣ ಸಿಗುತ್ತದೆ ಎಂದರೆ, ಒಂದು ಕಣ್ಣಾಗಲಿ, ಕಿಡ್ನಿಯಾಗಲಿ ಯಾರೂ ಕೊಡಲು ಮುಂದೆ ಬರುವುದಿಲ್ಲ. ಕೋಟಿಗಿಂತಲೂ ಮಿಗಿಲಾದ ದೇಹದ ಅಂಗಾಂಗಳನ್ನು ಯಾವುದೇ ಹಣದ ಆಸೆಗೆ ಒಳಗಾಗದೇ, ಐವರ ಬಾಳಿಗೆ ಬೆಳಕಾಗುವಂತೆ ಮಾಡಿದ ಕಾರ್ತಿಕ ಹಾಗೂ ಅವರು ತಂದೆ-ತಾಯಿಗಳ ಕಾರ್ಯ ಶ್ಲಾಘನೀಯ ಎಂದರು.

ಸಮಾಜದಲ್ಲಿ ಉತ್ತಮ ಕಾರ್ಯ ಮಾಡಲು ಹಾಗೂ ಉತ್ತಮ ಕಾರ್ಯ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ನಮ್ಮ ಟ್ರಸ್ಟ್ ಆರಂಭಿಸಲಾಗಿದೆ ಎಂದು ಟ್ರಸ್ಟ್‌ನ ಧ್ಯೆಯೋದ್ದೇಶಗಳನ್ನು ವಿವರಿಸಿದರು.

ಕಾರ್ಯಕ್ರಮ ನಿರೂಪಣೆ ಮಾಡಿದ ಮಂಜುನಾಥ ಚೆಟ್ಟಿ ಮಾತನಾಡಿ, ಕಾರ್ತಿಕ ಸೇವೆ ಸ್ಮರಣೀಯ ಹಾಗೂ ಮಾದರಿಯವಾದದು. ಅವರ ಹೆಸರಿನಲ್ಲಿ ಶಾಶ್ವತವಾದ ಕಾರ್ಯ ನಡೆಯಬೇಕು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಸುರೇಂದ್ರನಾಯಕ್, ಗ್ರಾ.ಪಂ. ವಿಶ್ವನಾಥ ದೇವಶೆಟ್ಟಿ, ಟ್ರಸ್ಟ್‌ನ ಸದಸ್ಯರಾದ ಚಂದ್ರಕಾಂತ ಬಣಗಾರ್, ಮಂಜುನಾಥ ನಾಗಲೀಕರ್, ಮಲ್ಲಪ್ಪ ಹೂಗಾರ್, ಸದಾಶಿವ ಮಿಣಜಗಿ, ಶರಣಪ್ಪ ಬಡಗಾ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ವಿಜಯಕುಮಾರ್ ಬಣಗಾರ್ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here