ದೇಶದ ಮುಂದಿನ ಪ್ರಜೆಯನ್ನು ಸಿದ್ದಗೊಳಿಸುವ ಕೌಶಲ್ಯ ಶಿಕ್ಷಕರು ಹೊಂದಿರಬೇಕು

0
13

ಕಲಬುರಗಿ: ಜಸ್ಟಿಸ್ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ವತಿಯಿಂದ “ಶಿಕ್ಷಕರ ದಿನಾಚರಣೆ” ಪ್ರಯುಕ್ತ, “ಗುಣಮಟ್ಟದ ಶಿಕ್ಷಣ” ಸಂವಾದ ಕಾರ್ಯಕ್ರಮ ಮತ್ತು “ಉತ್ತಮ ಶಿಕ್ಷಕ ಪ್ರಶಸ್ತಿ” ಪ್ರದಾನ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳು ಮತ್ತು ವಿಶೇಷ ಉಪನ್ಯಾಸಕರಾದ ಹಿರಿಯ ವೈದ್ಯ ಸಾಹಿತಿ ಹಾಗು ದೂರದರ್ಶನ ಚಂದನದ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಮಾತನಾಡುತ್ತ, “ಅತ್ಯುತ್ತಮ ಶಿಕ್ಷಕರ ಹತ್ತು ಗುಣಲಕ್ಷಣಗಳನ್ನು ತಿಳಿಸಿದರು.

ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅರಳಲು ಶಿಕ್ಷಕರು ಅವಕಾಶ ಮಾಡಿಕೊಡುವುದೇ ಶಿಕ್ಷಣದ ಮೂಲ ಉದ್ದೇಶ ಎಂದರು.

Contact Your\'s Advertisement; 9902492681

ಇಂದು ವಿದ್ಯಾರ್ಥಿ-ಶಿಕ್ಷಕ-ಪಾಲಕ ಮೂವರೂ ಸರಿ ಸಮಾನರಾಗಿ ಪ್ರಯತ್ನ ಪಟ್ಟರೆ ಪರಿಪೂರ್ಣ ಶಿಕ್ಷಣವಾಗುತ್ತದೆ. ಭಾರತ ದೇಶಕ್ಕೆ ತನ್ನದೆ ಆದ ಪರಂಪರೆ ಇದೆ. ಪ್ರಾಚೀನ ಭಾರತದಲ್ಲಿ ಶಿಕ್ಷಣ, ವೈದ್ಯಕೀಯ, ಜ್ಯೋತಿಷ್ಯವಿಜ್ಞಾನ ಇವುಗಳಲ್ಲಿ ಅಚಲ ನಂಬಿಕೆ ಇತ್ತು, ಇವುಗಳು ಪವಿತ್ರವಾಗಿದ್ದವು. ಶಿಕ್ಷಕರು, ವೈದ್ಯರು, ಜ್ಯೋತಿಷಿಗಳು ತಮ್ಮಲ್ಲಿ ಬರುವ ಜನರ ಸೇವೆ ಮಾಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಇವು ಕೇವಲ ಹಣಗಳಿಸುವ ವೃತ್ತಿಗಳಾಗುತ್ತಿವೆ, ಹಾಗಾಗದಂತೆ ಎಚ್ಚರಿಕೆಯಿಂದ ಇರಬೇಕೆಂದರು.

ಶಿಕ್ಷಕರಲ್ಲಿರುವ ಪ್ರಮುಖ ಗುಣಗಳೆಂದರೆ: ತಮ್ಮ ಕಾರ್ಯದ ಬಗ್ಗೆ, ಮಕ್ಕಳ ಬಗ್ಗೆ ಸಮಚಿತ್ತ ಇರಬೇಕು. ವೃತ್ತಿಯ ಬಗ್ಗೆ ಅದಮ್ಯ ಒಲವು ಹೊಂದಿರಬೇಕು. ಅನ್ವೇಷಣಾ ಮನೋಭಾವ, ಪರಿಣಾಮಕಾರಿ ಸಂವಹನ ಶಿಕ್ಷಕರಲ್ಲಿರಬೇಕು, ಮಕ್ಕಳ ಸಮಸ್ಯೆಗಳನ್ನು ಕೇಳಬೇಕು. ಅವರಿಗೆ ಪ್ರಶ್ನೆ ಕೇಳುವ ಮನೋಭಾವ ಬೆಳೆಸಬೇಕು. ಅವರ ಧ್ವನಿಯನ್ನು ಗಮನಿಸಿ ಸಮಸ್ಯೆ ಬಗೆಹರಿಸಬೇಕು. ದೇಶದ ಮುಂದಿನ ಪ್ರಜೆಯನ್ನು ಸಿದ್ದಗೊಳಿಸುವ ಕೌಶಲ್ಯ ಶಿಕ್ಷಕರು ಹೊಂದಿರಬೇಕು. ಮಕ್ಕಳಿಗೆ ಸರಿ-ತಪ್ಪುಗಳನ್ನು ತಿಳಿಸಿ ಸರಿಯಾದ ಮಾರ್ಗದೆಡೆಗೆ ಮುನ್ನೆಡಸಬೇಕು.

ಶಿಕ್ಷಕರು ಧ್ವನಿ-ಹಾವ-ಭಾವ ಪದ ಪ್ರಯೋಗದ ಕಡೆಗೆ ಗಮನ ಕೊಡಬೇಕು. ಸಂವಹನ ತಂತ್ರ ಕಲಿಸಬೇಕು. ಹಾಡು, ಕಥೆ, ಹರಟೆ ಮೂಲಕವೂ ವಿಷಯ ಕಲಿಸಬೇಕು. ವಿಜ್ಞಾನವನ್ನು ದೈನಂದಿನ ಉದಾಹರಣೆಗಳ ಮೂಲಕ ಸರಳವಾಗಿ ತಿಳಿಸಬೇಕು. ಕಸದಲ್ಲಿ ರಸ, ಉಪಯೋಗವಿಲ್ಲದ ವಸ್ತುಗಳನ್ನು ಬಳಸಿಕೊಂಡು ಪ್ರಯೋಗದ ಮೂಲಕ ತಿಳಿಸಬೇಕು. ಪಾಠ ಮಾಡುವ ಮೊದಲು ನಿತ್ಯ ಪೂರ್ವ ಸಿದ್ಧತೆಗಳು ಮಾಡಿಕೊಳ್ಳಬೇಕು.

ಮಕ್ಕಳ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಮಕ್ಕಳ ಬೌದ್ಧಿಕ ಮಟ್ಟಕ್ಕೆ ಇಳಿದು ಹೇಳುವ ಜಾಣ್ಮೆ ಮತ್ತು ತಾಳ್ಮೆ ಶಿಕ್ಷಕನಲ್ಲಿರಬೇಕು. ಶಿಕ್ಷಕ ಪ್ರತಿನಿತ್ಯ ನಿರಂತರ ಹೊಸದನ್ನು ಕಲಿಯುತ್ತಾ ಇರಬೇಕು. ಇದು ಬದುಕಿನ ಅವಿಭಾಜ್ಯ ಅಂಗವಾಗಿರಬೇಕು. ಸೃಜನಶೀಲತೆ ಹೊಂದಿರಬೇಕು. ನಾವು ಬಳಸುವ ಭಾಷೆ ಬೇರೆಯವರ ಬದುಕನ್ನು ರೂಪಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ವೇಗ, ಭಾಷಾ ಸಮಸ್ಯೆ, ಹಸಿವು, ಅನಾರೋಗ್ಯ ಇನ್ನಿತರ ಸಮಸ್ಯೆಗಳನ್ನು ಕೇಳಿ ಬಗೆಹರಿಸಲು ಆಪ್ತ ಸಲಹೆ ವಿಧಾನಗಳ ಜ್ಞಾನ ಹೊಂದಿರಬೇಕೆಂದು ತಿಳಿಸಿದರು. ಪಾಲಕರಷ್ಟೇ ಜವಾಬ್ದಾರಿ ಶಿಕ್ಷಕನಿಗಿರಬೇಕು.

ಕಾರ್ಯಕ್ರಮ ಉದ್ಘಾಟಿಸಿದ ಪ್ರೊ. ದಯಾನಂದ ಅಗಸರ್ ಉಪಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಅವರು ಕಲಬುರಗಿ ವಿಭಾಗದ ವಿವಿಧ ಶಾಲೆಯ ಸುಮಾರು 50 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಮಾತನಾಡುತ್ತ, “ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು. ಶಿಕ್ಷಕರಲ್ಲಿ ವೃತ್ತಿ ಬಗ್ಗೆ ಪ್ರೀತಿ ಮತ್ತು ಗೌರವ ಇರಬೇಕು. ಆಗಲೇ ಮಕ್ಕಳ ಭವಿಷ್ಯ ರೂಪಿಸಲು ಸಮರ್ಥರಾಗುತ್ತಾರೆ ಎಂದರು. ಶಿಕ್ಷಕರಿಗೆ ಶಿಕ್ಷಣ ಎಂಬುದು ಬದುಕಿಗೆ ಸಿದ್ಧತೆಯಲ್ಲ, ಶಿಕ್ಷಣವೇ ಬದುಕಾಗಬೇಕು ಅಂದಾಗ ಮಾತ್ರ ಶಿಕ್ಷಕರಿಗೆ ನೆಮ್ಮದಿ ಎಂದರು.

ಮುಖ್ಯ ಅತಿಥಿಗಳಾದ ಶ್ರೀ ಸೂರ್ಯಕಾಂತ ಮದಾನೆ ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಲಬುರಗಿ ರವರು ಮಾತನಾಡುತ್ತ, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದಂತೆ ಶಿಕ್ಷಕರು ಗಮನ ಹರಿಸಬೇಕು. ಮಕ್ಕಳಲ್ಲಿ ಪ್ರತಿ ವಿಷಯದ ಬಗ್ಗೆ ಜ್ಞಾನ ಮೂಡಿಸಬೇಕು ಇದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದರು. ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನದ ವತಿಯಿಂದ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು ಮತ್ತು ಶಿಕ್ಷಕರಿಗೆ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಚನ್ನಾರಡ್ಡಿ ಪಾಟೀಲ ಕಾರ್ಯದರ್ಶಿಗಳು, ಜಸ್ಟಿಸ್ ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ (ರಿ) ಹಾಗೂ ಸಂಸ್ಥಾಪಕರು ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, “ಗೌರವಾನ್ವಿತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು ಶಿಕ್ಷಕರ ಬಗ್ಗೆ ಅಪಾರ ಗೌರವ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಉತ್ತಮ ಶಿಕ್ಷಕರು ಮಕ್ಕಳ ಹೃದಯದಲ್ಲಿ ಜೀವನವಿಡೀ ಇರುತ್ತಾರೆ. ಅವರ ಸೇವೆಗೆ ಕೊಡುವದು ಸಂಬಳವಲ್ಲ ಅದು ಗೌರವಧನ.  ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನದ ಮೂಲಕ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಶಿಕ್ಷಕರ ಕೌಶಲ್ಯ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಶಿಕ್ಷಕರು ಇದರ ಲಾಭ ಪಡೆದು ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡಿ ಮಕ್ಕಳ ಭವಿಷ್ಯ ರೂಪಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಎಮ್. ರೆಡ್ಡಿ ಜಿಲ್ಲಾನ್ಯಾಯಾಧೀಶರು (ನಿ) ಹಾಗೂ ಅಧ್ಯಕ್ಷರು ಜಸ್ಟಿಸ್ ಶಿವರಾಜ್ ವಿ. ಪಾಟೀಲ ಪ್ರತಿಷ್ಠಾನ (ರಿ) ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥರೆಡ್ಡಿ ಖ್ಯಾತ ನೇತ್ರತಜ್ಞರು, ಡಾ. ರಾಜೇಶ್ವರಿ ವಿಶ್ವನಾಥರೆಡ್ಡಿ ಖ್ಯಾತ ನೇತ್ರತಜ್ಞರು, ಹಿರಿಯ ವಕೀಲರಾದ ಶಿವಕುಮಾರ ಮಾಲಿಪಾಟೀಲ, ಅಭಿಷೇಕ ಚನ್ನಾರಡ್ಡಿ ಪಾಟೀಲ ಶೈಕ್ಷಣಿಕ ನಿರ್ದೇಶಕರು ಸರ್ವಜ್ಞ ಕಾಲೇಜ, ಪ್ರಾಚಾರ್ಯರಾದ ಪ್ರಶಾಂತ ಕುಲಕರ್ಣಿ, ಶ್ರೀಮತಿ ವಿನುತಾ ಆರ್.ಬಿ., ಕರುಣೇಶ್ ಹಿರೇಮಠ, ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಕು. ವೀರಶ್ರೀ ತಂಡದವರು ಪ್ರಾರ್ಥಿಸಿದರು. ಶ್ರೀಮತಿ ಆರ್.ಜೆ.ವಾಣಿ ನಿರೂಪಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು. ಸನ್ಮಾನ ಸ್ವೀಕರಿಸಿದ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here