ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲ್ಲೊಂದು ಮನೆಯ ಮಾಡಿ
ನೆರೆ ತೊರೆಗಳಿಗೆ ಅಂಜಿದೊಡೆಂತಯ್ಯ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ
ಚನ್ನಮಲ್ಲಿಕಾರ್ಜುನ ದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
-ಅಕ್ಕಮಹಾದೇವಿ
ಅಕ್ಕನ ಹೆಸರು ಕೇಳುತ್ತಲೇ ಹೃದಯದಲ್ಲಿ ಸಂತೋಷ ತುಂಬಿ ಬರುತ್ತದೆ. ಅದು ಅಚ್ಚಳಿಯದ ಪ್ರಕಾಶ. ಹಗಲಿದ್ದು ರಾತ್ರಿ ಇಲ್ಲವಾಗುವ ಪ್ರಕಾಶವಲ್ಲ. ನಿರಂತರವಾಗಿ ಬೆಳಗುವ ಜ್ಯೋತಿ ಪ್ರಕಾಶ ಅಕ್ಕನ ಜೀವನ. ಜಗತ್ತಿನ ಜನತೆಗೆ ಜೀವನದ ಜ್ಯೋತಿಯನ್ನು ಪ್ರಜ್ವಲಿಸಿ ದಾರಿ ತೋರ ಬಂದ ಜಗನ್ಮಾತೆ. ಆಕೆಯ ದೈವಿಪ್ರೇಮ ಅಗಾಧವಾದದದು. ಅಪರಿಮಿತವಾದುದು. ಲೋಕದ ಮತಿಗೆ ಮುಟ್ಟದಿರುವುದು. ಆಪತ್ತಿಗೆ ಸಖಿಯರನಾರನೂ ಕಾಣೆ ಅನ್ನುವ ಅಳಲು ಆಕೆಯದು. ಆದರೂ ಅವಳ ಅವಧಾನ, ವ್ಯವಧಾನ ಅಪರಿಮಿತವಾದುದು. ಸದಾ ಎಚ್ಚರಿಕೆಯ ನಡೆ ಅವಳದು. ಲೋಕದ ಆಸೆ, ಆಕ್ಷಾಂಕ್ಷೆಗಳಿಗೆ ಕಿಂಚತ್ ಅಲುಗಾಡದ ಅಸೀಮ ಭಕ್ತಿ ಅವಳದು. ಆಕೆ ಜೀವಂತ ಜ್ಯೋತಿರ್ಲಿಂಗ.
ಆಕೆಯ ವೈವಾಹಿಕ ಸಬಂಧ ಯಾರೂ ಕಂಡು ಕೇಳರಿಯದ ಊಹಿಸಲಾಗದ ಸಂಬಂಧ. ತಾಯಿ ಲಿಂಗಮ್ಮ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ, ಒಂದು ವಸ್ತು ಹುಟ್ಟಿದೆ ಎಂದ ಮೇಲೆ ಆ ವಸ್ತು ಜರ್ಜಿರಿತವಾಗುತ್ತದೆ. ಹುಟ್ಟಿಲ್ಲದ ಸಾವಿಲ್ಲದ, ರೂಹಿಲ್ಲದ ಚಲುವ ನನ್ನ ಗಂಡ ಎಂದು ಹೇಳುತ್ತಾಳೆ. ಅಮಂಗಲ ಮನುಷ್ಯನ ಸೃಷ್ಟಿ. ಮಂಗಲ ದೇವನ ಸೃಷ್ಟಿ. ದೇವರು ಕೇಡು ಮಾಡುವವನ್ನಲ್ಲ. ಅವನು ಕೇಡಿಗೆ ಒಳಗಾಗುವವನೂ ಅಲ್ಲ. ಸಾವು ಇರುವಲ್ಲಿ ಹುಟ್ಟಿದೆ. ನಾವು ನಿಜವಾದ ದೇವರನ್ನು ಕಾಣಬೇಕು. ದುಃಖವಿಲ್ಲದೆ ಜಗತ್ತಿಲ್ಲ. ನಾನು ಒಲಿದ ಚೆಲುವ ಭವವಿಲ್ಲದ, ಭಯವಿಲ್ಲದ, ನಿರ್ಭಯ, ಕುಲ ಸೀಮೆಯಿಲ್ಲದ ನಿಸ್ಸೀಮ ಚೆಲುವನಾಗಿದ್ದಾನೆ. ಈ ಸಾವ, ಕೆಡುವ ಗಂಡರನ್ನು ಒಲೆಯೊಳಗಿಕ್ಕವ್ವ ಎಂದು ಮಹಾದೇವಿ ಬಾಂಬ್ ಸ್ಫೋಟ ಮಾಡುತ್ತಾಳೆ.
ಪರಮಾತ್ಮ ಸರ್ವವ್ಯಾಪಿಯಾಗಿದ್ದಾನೆ. ಆತ ಗುಡಿ, ಚರ್ಚು, ಮಸೀದಿಗಳಲ್ಲಿ ಇಲ್ಲ. ಆತ ಸರ್ವ ಶಕ್ತನಾಗಿದ್ದಾನೆ. ಆತ ಸತ್ಯಂ, ಶಿವಂ, ಸುಂದರ ಆಗಿದ್ದಾನೆ. ಅಂಗದ ಮೇಲೆ ಲಿಂಗವಿದ್ದವರು ನಿಚ್ಚ ಮುತೈದೆಯರು. ನಾನು ಅಂತಹ ದೇವನಿಗೆ ಒಲಿದಿದ್ದೇನೆ. ಇದನ್ನು ಸುರಕ್ಷಿತ ಮಾಡಬೇಡ. ನನಗಾಗಿ ಹರಕೆ, ಪೂಜೆ ಮಾಡಬೇಡ ಎಂದು ಮಹಾದೇವಿ ತನ್ನ ತಾಯಿಗೆ ಹೇಳುತ್ತಾಳೆ. ಆದರೆ ಜನ ನಿನ್ನ ಕುರಿತು ಏನೇನೋ ಅಂತಾರಲ್ಲ? ಎಂದು ಕೇಳಿದಾಗ, ಜನ ಎಲ್ಲರಿಗೂ ಮಾತನಾಡುತ್ತಾರೆ. ಲೋಕ ಒಪ್ಪುವಂತೆ ಯಾರಿಗೂ ಬದಕಲು ಆಗುವುದಿಲ್ಲ. ನಮಗೆ ಅನುಕೂಲ ಹಾಗೂ ಪ್ರಕೃತಿಯ ನಿಯಮಕ್ಕೆ ತಕ್ಕಂತೆ ನಡೆಯಬೇಕು. ಜನರ ಮಾತಿಗೆ ನೀನು ತಲೆ ಕೆಡಿಸಿಕೊಳ್ಳಬೇಡ. ಸಮಾಧಾನಿಯಾಗಿರು ಎಂದು ತಾಯಿಯನ್ನು ಸಂತೈಸುತ್ತಾಳೆ.
ಆದರೂ ತಾಯಿಗೆ ಸಮಾಧಾನ ಆಗುವುದಿಲ್ಲ. ಹೀಗಿರುವಾಗ ಆ ಊರಲ್ಲಿ ಆನೆ ಅಂಬಾರಿಯ ಮೇಲೆ ರಾಜನ “ವೈಯಾಳಿ” ನಡೆದಿರುತ್ತದೆ. ಅಂತರ್ಮುಖಿಯಾಗಿದ್ದ ಮಹಾದೇವಿಯನ್ನು ಬಹಿರ್ಮುಖಿಯಾಗಿಸಲು ಆಕೆಯ ಗೆಳತಿಯರು ಮೆರವಣಿಗೆ ನೋಡಲು ತಮ್ಮ ಮನೆಯ ಮಾಳಿಗೆಯ ಮೇಲೆ ಕರೆದು ತರುತ್ತಾರೆ. ನಿರ್ಮಲಶೆಟ್ಟಿಯ ಮನೆ ಮುಂದೆ ಆನೆಯ ಸೊಂಡಿಲಿನಿಂದ ರಾಜನಿಗೆ ಹಾಕಲಾಗುವ ಹೂಮಾಲೆ ಮೇಲಕ್ಕೆ ತೂರಿದಾಗ ರಾಜನ ಕಣ್ಣಿಗೆ ಮಹಾದೇವಿಯ ಮುಖ ಸೌಂದರ್ಯ ಕಂಗೊಳಿಸುತ್ತದೆ. ಮಾಹಾದೇವಿಗೆ ಮಾರು ಹೋಗುತ್ತಾನೆ. ಮೆರವಣಿಗೆ ಮೊಟಕುಗೊಳಿಸಿ ಆಕೆಯನ್ನು ತಾನು ವರಿಸಬೇಕು. ಆಕೆಯನ್ನು ನಾನು ಪಟ್ಟದ ರಾಣಿಯನ್ನಾಗಿ ,ಮಾಡಿಕೊಳ್ಳುತ್ತೇನೆ ಎಂದು ತನ್ನ ಮಂತ್ರಿ “ವಸಂತಕ”ನನ್ನು ಅವರ ಮನೆಗೆ ಕಳಿಸುತ್ತಾನೆ.
ಮಂತ್ರಿ ವಸಂತಕ ಆಕೆಯ ಲೋಕ ವಿರೋಧಿ ನಡೆ ಹಾಗೂ ಆಕೆಯ ಒಲವು-ನಿಲುವುಗಳ ಬಗ್ಗೆ ಹೇಳಿದರೂ ಕಾಮಾತುರನಾದ ರಾಜ ಅವನ ಈ ಮಾತುಗಳನ್ನು ಕಿವಿಯಲ್ಲಿ ಹಾಕಿಕೊಳ್ಳದೆ, “ನೀನು ಅವರ ಮನೆಗೆ ಹೋಗಿ ವಿಚಾರಿಸು ಎಂದು ರಾಜಾಜ್ಞೆಯನ್ನು ವಿಧಿಸುತ್ತಾನೆ. ಮಹಾದೇವಿಯ ಮನೆಗೆ ಬಂದ ವಸಂತಕ ರಾಜನ ಆಸೆಯನ್ನು ವಿವರಿಸುತ್ತಾನೆ. “ನಿಮ್ಮ ರಾಜ ಭವಿಯಾಗಿದ್ದಾನೆ. ನಾವು ಭಕ್ತರು. ಈ ಸಬಂಧ ನಮಗೆ ಬೇಡ” ಎಂದು ನಿರ್ಮಲಶೆಟ್ಟಿ-ಲಿಂಗಮ್ಮ ಹೇಳುತ್ತಾರೆ.
ಕೊನೆಗೆ ಮಹಾದೇವಿಯನ್ನು ವಿಚಾರಿಸಿದಾಗ, ಈಗಾಗಲೇ ನನಗೆ ಲಿಂಗಯ್ಯನ ಜೊತೆ ಮದುವೆಯಾಗಿದೆ ಎಂದು ಕೊರಳಲ್ಲಿನ ಲಿಂಗ ತೆಗೆದು ತೋರಿಸುತ್ತಾಳೆ. ಆದರೂ ಮಹಾದೇವಿಯ ಮನದಲ್ಲಿ ತಳಮಳ ಉಂಟಾಗುತ್ತದೆ. ತಂದೆ-ತಾಯಿ ಜೊತೆ ಗುರುಲಿಂಗ ದೇವರ ಬಳಿ ಹೋಗುತ್ತಾಳೆ. ಈ ವಿಷಯ ಕೇಳಿದ ಗುರುಗಳು ಮುಗುಳ್ನಕ್ಕು, ಚೆನ್ನಮಲ್ಲಿಕಾರ್ಜುನ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ. ಆದಷ್ಟು ಬೇಗ ತನ್ನ ತೋಳ್ತೆಕ್ಕೆಗೆ ತೆಗೆದುಕೊಳ್ಳುತ್ತಾನೆ. ಈಗ ಬಂದೊದಗಿದ ಕಷ್ಟವೇ ಮುಂದೆ ನಿನಗೆ ಸುಖ ತಂದುಕೊಡಬಲ್ಲುದು ಎಂದು ಅವರು ಹೇಳುತ್ತಾರೆ.
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)