ಹೆದರಿದ ಹರಿಣಿಯಂತಾದ ಅಕ್ಕ ಮಹಾದೇವಿ

0
103
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನಕರಗದವರಲ್ಲಿ ಪುಷ್ಟಪವನೊಲ್ಲೆಯಯ್ಯ ನೀನು
ಹದುಳಿಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು
ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ

ಅಕ್ಕನ ಜೀವನ ಒಂದು ದನಿಕ್ಕೆ ರೂಪುಗೊಂಡದ್ದಲ್ಲ. ತಕ್ಷಣಕ್ಕೆ ಆಕಾಶದಿಂದ ಬಿದ್ದ ಮಳೆ ಹನಿಯೂ ಅಲ್ಲ. ಮಳೆಹನಿಯೊಂದು ಸಿಂಪಿನಲ್ಲಿ ಬಿದ್ದು ರತ್ನವಾದಂತೆ ಅವಳ ಬದುಕು.ಒಂದು ಸುದಂರ, ಉನ್ನತ ಉಜ್ಜೀವನ ಅವಳದು. ಹಂಬಲದುಂಬಿದ ಪ್ರಾರ್ಥನೆ, ಸತ್ಯ, ತ್ಯಾಗ, ಪ್ರೀತಿಯಿಂದ ರೂಪುಗೊಂಡದ್ದು ಅವಳ ಜೀವನ. ಯಶಸ್ಸು ನಿರಾಯಾಸವಾಗಿ ಸಿಗುವುದಿಲ್ಲ. ಅಕ್ಕನ ಯಶಸ್ಸಿನ ಹಿಂದೆ ಬಹು ದೊಡ್ಡ ಪರಿಶ್ರಮವಿದೆ. ಅರಮನೆಯಲ್ಲಿದ್ದ ಅಕ್ಕ ಸದಾ ಧ್ಯಾನಮಗ್ನಳಾಗಿ, ಲಿಂಗಪೂಜೆಯಲ್ಲಿ ನಿರತಳಾಗಿದ್ದರೂ ಅದೇನೋ ಕೊರತೆ, ಅದೆಂಥದೋ ತಳಮಳ ಕಾಡುತ್ತಿತ್ತು.

Contact Your\'s Advertisement; 9902492681

ಅಕ್ಕನ ವೈರಾಗ್ಯದ ಜೀವನ ಕಂಡ ಮಂತ್ರಿ ವಸಂತಕನಿಗೆ ಮಹಾದೇವಿ ಒಮ್ಮೊಮ್ಮೆ ತನ್ನ ಮಗಳಂತೆ ಕಂಡು ಬರುತ್ತಿದ್ದಳು. ಸಾಧನೆಗೆ ಮುಖ ಮಾಡಿ ನಿಂತಿದ್ದ ಅಕ್ಕನಿಗೆ ಬಿದ್ದಷ್ಟು ಪುಟಿದೇಳುವ ಉತ್ಸಾಹ, ಹುಮ್ಮಸ್ಸು ಇತ್ತು. ಹಗಲೆನ್ನೆ, ಇರುಳೆನ್ನೆ.. ಮನ ಘನವಾದುದಿಲ್ಲ” ಎಂದು ವಚನ ಬರೆಯುತ್ತಾಳೆ. ಕತ್ತಲೆಯಲ್ಲಿ ಕನ್ನಡಿ ನೋಡಿ ಕಳವಳಗೊಂಡಂತಾದ ಅಕ್ಕ ಬಸವಣ್ಣನವರನ್ನು ನೆನೆಯುತ್ತ, ನೆನೆಯುತ್ತ ಹರನೇ ತನ್ನ ರೂಪ ತೋರಲು ಬಂದ ಬಸವ ಕರುಣೆಗಾಗಿ ಬಸವನ ನೆನೆ ಮನವೆ, ಸಂಗನ ಬಸವನ ನೆನೆ ಮನವೆ ಎಂದು ಆರ್ತತೆಯಿಂದ ಕರೆಯುತ್ತಾಳೆ. ಗುರುವೆ ನಿನ್ನಡಿಗೆ ಬಯಸುವ ಹೂ ಮಣ್ಣಲ್ಲಿ ಬಿದ್ದು ದೂಲಾಗುವ ಮುನ್ನ ಕೌಶಿಕನ ಮುಂದೆ ಆಹಾರವಾಗುವ ಮುಂಚೆ ಎತ್ತಿಕೋ ಎಂದು ಬೇಡಿಕೊಳ್ಳುತ್ತಾಳೆ.

ಅರಮನೆಯಿಂದ ತವರು ಮನೆಗೆ ಹೋಗಿದ್ದ ಲಿಂಗರತಿ (ಮದನರತಿ) ಉಡುತಡಿಯ ಚರ ಜಂಗಮರಿಂದ ಕೇಳಿ ಪಡೆದ ತಾಡೋಲೆಯೊಂದನ್ನು ಅಕ್ಕಮಹಾದೇವಿಯ ಕೈಗಿತ್ತಾಗ ಅದನ್ನು ಓದಿ ಆನಂದವಾಯಿತು. ಅವರು ಎಲ್ಲಿಯವರು? ಇಲ್ಲಿಗ್ಯಾಕೆ ಬಂದಿದ್ದಾರಂತೆ? ಇನ್ನೆಷ್ಟು ದಿನ ಅಲ್ಲಿರುತ್ತಾರೆ ಎಂದೆಲ್ಲ ಕೇಳಿ ತಿಳಿದಳು. ಅವರಿಗೆ ಮುಖ್ಯವಾದ ಕೆಲಸವೊಂದು ಇದೆಯಂತೆ! ಅದನ್ನು ಮುಗಿಸಿಕೊಂಡೇ ಹೋಗುತ್ತಾರಂತೆ ಎಂದು ಲಿಂಗರತಿ ಹೇಳಿದಾಗ ಮಹಾದೇವಿಗೆ ಖುಷಿಯೋ ಖುಷಿ. ಆನಂದವೋ ಆನಂದ. ಅವಳ ಮನಸ್ಸು ಪ್ರಫುಲ್ಲಿತವಾಗುತ್ತದೆ.

ವಸಂತಕನ್ನು ಕರೆ ಕಳುಹಿಸಿ, ಕಲ್ಯಾಣದ ಜಂಗರನ್ನು ನೋಡುವ ಆಸೆಯಿದೆ. ನಿಮ್ಮ ರಾಜನಿಗೆ ಹೇಳಿ ಅವರನ್ನು ಅರಮನೆಗೆ ಕರೆಯಿಸಿ ಎಂದು ಹೇಳುತ್ತಾಳೆ. ಇತ್ತ ತಾನು ಕೃಷಿ, ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ತನು ಕರಗದವರ ಮುಂದೆ ಮುಂತಾದ ವಚನಗಳನ್ನು ಹಾಡುತ್ತ ಅಣ್ಣ ಬಸವಣ್ಣನವರು ಜಗತ್ತಿಗೆ ಪ್ರೀತಿಯ ಪಾಠ ಹೇಳಿಕೊಡಲು ಬಂದಿದ್ದಾರೆ. ಅವರಿಗಿಂತ ಮುಂಚೆ ಇವನಾರವ, ಇವನಾರವ ಎನ್ನುವಂತಿದ್ದ ಸಮಾಜದಲ್ಲಿ ಇವನಮ್ಮವ, ಇವ ನಮ್ಮವ ಆಯಿತು. ಕಾಯಕದಿಂದ ಈ ಜಗತ್ತನ್ನು ಸುಂದರಗೊಳಿಸಿದಾತ. ವ್ರತ ತಪ್ಪಿದಡೆ ಸಹಿಸಬಹುದು. ಕಾಯಕ ತಪ್ಪಿದಡೆ ಸಹಿಸಲಾಗದು ಎಂದು ಶರಣರು ಹೇಳಿದ್ದು ನಿಜ ಎಂದುಕೊಂಡು ಅಣ್ಣ ಬಸವಣ್ಣ ಹಾಗೂ ವಚನಕಾರರನನ್ನು ಮನದಲ್ಲಿ ಕೊಂಡಾಡಿದಳು.

ಅದೊಂದು ದಿನ ಕಲ್ಯಾಣದ ಜಂಗಮರು ಮನೆಗೆ ಅರಮನೆಗೆ ಬಂದರು. ಅವರನ್ನು ಕಂಡ ಕೂಡಲೇ ಆನಂದತುಂದಿಲಳಾದ ಅಕ್ಕ “ಶರಣು-ಶರಣಾರ್ಥಿ” ಹೇಳಿದಳು. ಪೂಜೆ-ಪ್ರಸಾದ ಮಾಡಿದ ಜಂಗಮರು, ಬಸವಣ್ಣ ದೇಹಧಾರಿ. ಜಡ ಮನುಷ್ಯರಲ್ಲಿ ಚೈತನ್ಯ ತುಂಬಿದ ಸದ್ಗುರುದೇವ. ಘನಲಿಂಗದೇವ. ಭ-ಎಂಬಲ್ಲಿ ಎನ್ನ ಭವ ಹರಿಯುತ್ತು. ಸ-ಎಂಬಲ್ಲಿ ಸರ್ವಜ್ಞಾನಿಯಾದೆನು. ವ-ಎಂದು ವಚಿಸುವೊಡೆ ಚೈತನ್ಯಾತ್ಮಕನಾದೆನು, “ಗಿಳಿಯ ಹಂಜರವನ್ನಿಕ್ಕಿ…” ಎಂಬಿತ್ಯಾದಿ ವಚನ ಹಾಗೂ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದರು ಮಾತ್ರವಲ್ಲ ಕೈಲಾಸವೆ ಕಲ್ಯಾಣಕ್ಕಿಳಿದಿದೆ. ನಿಮ್ಮೊಬ್ಬರ ಕೊರತೆ ಮಾತ್ರ ಎದ್ದು ಕಾಣುತ್ತಿದೆ ಎಂದರು. ಈ ಸಂಗತಿಯನ್ನು ತಿಳಿದ ಅಕ್ಕನಿಗೆ ರೋಮಾಂಚನವಾಗುತ್ತದೆ.

ಪ್ರತಿ ಎರಡ್ಮೂರು ದಿನಕ್ಕೊಮ್ಮೆ ಅರಮನೆಗೆ ಬರುತ್ತಿದ್ದ ಕಲ್ಯಾಣದ ಜಂಗಮರ ವಚನೋಪದೇಶ ಕೇಳಿ ಧ್ಯಾನಮಗ್ನಳಾಗಿರುತ್ತಿದ್ದ ಅಕ್ಕ ಮೈಮರೆತು ಹಾಡುತ್ತಿದ್ದಳು. ಒಂದೊಮ್ಮೆ ಮೈಮೇಲಿನ ಸೆರಗು ಜಾರಿದ್ದರೂ ಚನ್ನಮಲ್ಲಿಕಾರ್ಜುನನ ಧ್ಯಾನದಲ್ಲಿ ಮುಳಗಿದ್ದಳು. ಇದನ್ನು ಮೇಲಿನಿಂದಲೇ ನೋಡೊದ ಕೌಶಿಕ, ಬಹುಶಃ ಈ ಜಂಗಮರಲ್ಲೆ ಒಬ್ಬಾತ ಚನ್ನಮಲ್ಲಿಕಾರ್ಜುನ ಇರಬೇಕು. ಅಂತೆಯೇ ಮಹಾದೇವಿ ಮೈಮರೆತಿದ್ದಾಳೆ ಎಂದುಕೊಂಡು ಸಿಟ್ಟಿಗೆದ್ದು ಕೆಳಗಿಳಿದು ದಡದಡನೆ ಬರುತ್ತಾನೆ. ಹೆದರಿದ ಅಕ್ಕ ಹರಿಣಿಯಂತಾಗುತ್ತಾಳೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ:ಎಚ್.ಸಿ.ಜಿ.ಆಸ್ಪತ್ರೆ ಎದುರು,ಖೂಬಾ ಪ್ಲಾಟ್,ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here