ತೋರಲು ನರ ರೂಪ: ಭಾವಿಸಲು ಹರ ರೂಪ

0
204
ಕಲ್ಯಾಣವೆಂಬ ಪ್ರಣತಿಯಲ್ಲಿ, ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ
ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಯ್ಯ ಶಿವನ ಪ್ರಕಾಶ!
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯ ಅಸಂಖ್ಯಾತ
ಭಕ್ತಗಣಂಗಳು ಶಿವಭಕ್ತರಿದ್ದ ಕ್ಷೇತ್ರವೆ
ಅವಿಮುಕ್ತಕ್ಷೇತ್ರವೆಂಬುದು ಹುಸಿಯೇ? ಗುಹೇಶ್ವರಲಿಂಗದಲ್ಲಿ
ಎನ್ನ ಪರಮಾರಾಧ್ಯ ಸಂಗನ ಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯ
-ಅಲ್ಲಮಪ್ರಭು

ಸೃಷ್ಟಿ ಈವರೆಗೆ ತನ್ನ ಅಸ್ತಿತ್ವದ ಬಣ್ಣ ಮತ್ತು ಬದಲಾವಣೆ ಕಳೆದುಕೊಂಡಿಲ್ಲ. ಆದರೆ ಸೃಷ್ಟಿಯ ಆಶ್ರಯ ಪಡೆದ ಮನುಷ್ಯ ಮಾತ್ರ ಹಲವು ಅಸ್ತಿತ್ವ ಮತ್ತು ಬಣ್ಣ ತೊಡುತ್ತಿದ್ದಾನೆ. ಸೃಷ್ಟಿಯನ್ನು ರಚಿಸಿರುವ ದೇವರು ಬಲು ವಿಸ್ಮಯಕಾರಿ. ಈ ಸೂರ್ಯ, ಚಂದ್ರ, ನಕ್ಷತ್ರ, ಮನುಷ್ಯ, ಪ್ರಾಣಿ, ಪಶು ಪಕ್ಷಿ ಸಕಲ ಚರಾಚರವೆಲ್ಲವೂ ಆತನ ಕರುಣೆಯ ಶಿಶುಗಳು. ಸೃಷ್ಟಿಕರ್ತ ಪರಮಾತ್ಮನಿಗೆ ಸೃಷ್ಟಿ ಮಾಡುವುದು, ಕಾಪಾಡುವುದು, ಲಯ ಮಾಡುವುದು ಸೇರಿದಂತೆ ಎಲ್ಲವೂ ಗೊತ್ತು. ಸೃಷ್ಟಿಯ ಈ ಮಹಿಮೆಯನ್ನು ಕಂಡು ಅಲ್ಲಮಪ್ರಭುಗಳು “ಲೀಲೆಯಾದೊಡೆ ಉಮಾಪತಿ. ಲೀಲೆ ತಪ್ಪಿದಡೆ ಸ್ವಯಂಭೂ” ಎಂದಿದ್ದಾರೆ. ಇದನ್ನೇ ಬಸವಣ್ಣನವರು ಸಮುದ್ರೊಳಗಿನ ಘನತರ ಎಂದು ಕರೆದಿದ್ದಾರೆ.

ಇಂತಹ ದೇವರು ನಮ್ಮನ್ನು ಇಲ್ಲಿಗೆ ಯಾಕೆ ಕಳಿಸಿದ್ದಾನೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬುದ್ಧಿಶಕ್ತಿ ಹೊಂದಿರುವ ಮನುಷ್ಯ ಯೋಚಿಸಿ ಕಾರ್ಯಪ್ರವೃತ್ತನಾಗಬೇಕು. ನಮ್ಮಲ್ಲಿರುವ ಬುದ್ಧಿಯನ್ನು ಯಾರ ಕೈಯಲ್ಲೂ ಕೊಡಬಾರದು. ನಾವು ಯಾರಿಗೂ ಮಾರಾಟವಾಗಬಾರದು. ನಮ್ಮ ಬುದ್ಧಿ ನೆಟ್ಟಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಾವು ಗಂಧದ ಮರದಂತಿರಬೇಕು. ನಮ್ಮನ್ನು ಸೃಷ್ಟಿಸಿದ ದೇವರ ಬಗ್ಗೆ ನಾವು ಬಹಳ ಗೌರವ ಇಟ್ಟುಕೊಳ್ಳಬೇಕು. ಕಲ್ಲು, ಮಣ್ಣು, ಇಟ್ಟಿಗೆಗಳಿಂದ ಮಾಡಿದ ದೇವರು ದೇವರಲ್ಲ. “ಕೈಲಾಸವೆಂಬುದು ಕೈಕೂಲಿಯೇ” ಎಂದು ಶರಣರು ಪ್ರಶ್ನಿಸಿದ್ದಾರೆ. ಇನ್ನೊಬ್ಬರಿಗೆ ಮೋಸ ಮಾಡದೆ, ಇನ್ನೊಬ್ಬರನ್ನು ಹಾಳು ಮಾಡದೆ ಬದುಕಿದರೆ ದೇವರು ನಮ್ಮ ಮನೆ ಬಾಗಿಲು ಕಾಯುತ್ತಾನೆ.

Contact Your\'s Advertisement; 9902492681

ಜೀವ-ಜೀವಾತ್ಮ ಆಗಬೇಕು. ತಾನು, ತನ್ನದು, ಕಾಮ, ಕ್ರೋಧ, ಬದುಕು ಜೀವವಾದರೆ, ಕೇವಲ ಜೀವ ಮಾತ್ರವಲ್ಲ ಎಲ್ಲ ಆತ್ಮಗಳು ಒಂದೇ ಎಂದು ಹೇಳುವುದು ಜೀವಾತ್ಮ. ಜೀವ ಇರುವವರು ಏನೆಲ್ಲ ಗಲಾಟೆ ಮಾಡಿಕೊಂಡಿರುತ್ತಾರೆ. ಆದರೆ ಜೀವಾತ್ಮರು ಇಂತಹ ಯಾವುದೇ ಗಲಾಟೆಗೆ ಒಳಗಾಗಿರುವುದಿಲ್ಲ. ನಾನು ಎನ್ನುವುದು ಜೀವ. ನೀನು ಎನ್ನುವುದು ಜೀವಾತ್ಮ. ಲಜ್ಜೆಗೆಡಬೇಕು, ಭಾವ ನಿರ್ಭಾವ ಆಗಬೇಕು. ಭಾವ ಬೆತ್ತಲೆ ಆಗಬೇಕು. ಶರಣರು ಇಂತಹ ಸಕಲ ಜೀವಾತ್ಮರಿಗೆ ಲೇಸು ಬಯಸುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಜೀವಾತ್ಮರಾದರೆ ಬುದ್ಧ, ಬಸವ, ಕಬೀರ ಆಗುತ್ತೇವೆ. ಜೀವಾತ್ಮರಾದ ಮಹಾತ್ಮರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗಿಲ್ಲ. ಅವರು ಕಾಲಾತೀತರಲ್ಲದೆ ದೇಶಾತೀತರೂ ಆಗಿದ್ದಾರೆ.

“ಒಲ್ಲೆನೆಂಬುದು ವೈರಾಗ್ಯ, ಒಲಿಯನೆಂಬುದು ಕಾಯಗುಣ” ಎನ್ನುವ ವಚನದಂತೆ ಗಂಡ-ಹೆಂಡತಿ, ಮಕ್ಕಳು ನಾನು, ನನ್ನದು ಎಂಬ ಬಯಕೆಗಳ ಆಗರ ಜೀವಿಗಳಿಗಿರುತ್ತದೆ. “ಬಲ್ಲೆನೆಂಬುದ ಬಲಗೈ ನುಂಗಿತ್ತು ಮಾಯೆ, ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯ” ಎಂಬ ಅಹಂಕಾರವಳಿದ ಭಾವ ಜೀವಾತ್ಮರಿಗಿರುತ್ತದೆ. ದೇವರ ಮನೆಯಿದು ಈ ಜಗವೆಲ್ಲ. ಬಾಡಿಗೆದಾರರು ಜೀವಿಗಳೆಲ್ಲ ಎಂದು ದಾಸರು ಹಾಡಿದ್ದಾರೆ. ಮನುಷ್ಯನಿಗೆ ವಿನಯವೇ ಭಕ್ತಿ ಆಗಬೇಕು. ಇಂತಹ ಶುದ್ಧ ಭಕ್ತಿಯ ಶುಲ್ಕವನ್ನು ನಾವು ದೇವರಿಗೆ ಕಟ್ಟಲೇಬೇಕು. ಅಂದಾಗ ಮಾತ್ರ ನಾವೂ ಜೀವಾತ್ಮರಾಗಬಹುದು. ಇದಕ್ಕೆ ಶರಣರ ವಚನಗಳ ಪಚನವೇ ರಹದಾರಿ.

ದನ ಕಾಯುತ್ತಿದ್ದ ಸೊನ್ನಲಿಗೆಯ ಸಿದ್ಧರಾಮ ಶ್ರೀಶೈಲದ ಮಲ್ಲಯ್ಯನನ್ನು ಕಾಣುವ ತವಕದಿಂದ ಬೆಟ್ಟ ಹಾರಿದಾಗ ಪರಮಾತ್ಮ ಬಂದು ಆ ಹುಡುಗನ್ನು ರಕ್ಷಿಸಿದ ಎಂಬ ಪುರಾಣದ ಕಥೆ ಹೇಗಾದರೂ ಇದ್ದಿರಲಿ, ಸಿದ್ಧರಾಮನಿಗೆ ನಿಜ ಮಲ್ಲಯ್ಯನ ಸಾಕ್ಷಾತ್ಕಾರವಾಯಿತು ಎಂಬುದನ್ನು ಮಾತ್ರ ನಾವು ಒಪ್ಪಿಕೊಳ್ಳಲೇಬೇಕು. ಕೆರೆ, ಕಟ್ಟೆ ಕಟ್ಟಿಸುತ್ತ ಭಕ್ತಿ, ಧ್ಯಾನ, ದಾನ ಮಾಡಿಕೊಮಡಿದ್ದ ಯೋಗಪ್ರಭು ಸಿದ್ಧರಾಮನ ಸೊನ್ನಲಿಗೆಗೆ ಬಳ್ಳಿಗಾವಿಯ ಮಾಯಾ ಕೋಲಾಹಲ ಅಲ್ಲಮಪ್ರಭು ಬಂದು ಪರೀಕ್ಷೆ ನಡೆಸಿದರು. ಅವರಿಬ್ಬರ ಮಧ್ಯೆ ಬಹು ದೊಡ್ಡ ಮಾತಿನ ಮಂಥನನಡೆಯಿತು. ಸಿದ್ಧರಾಮನಲ್ಲಿ ಮನೆ ಮಾಡಿಕೊಂಡಿದ್ದ ಅಹಮಿಕೆಯನ್ನು ಹೊರಹಾಕಿ ಅವರಲ್ಲಿರುವ ಜೀವಾತ್ಮವನ್ನು ಮೇಲಕ್ಕೆತ್ತಿದವರು ಅಲ್ಲಮಪ್ರಭುಗಳು. ಕೆರೆ, ಕಟ್ಟೆ, ಗುಡಿ-ಗುಂಡಾರ ಕಟ್ಟಿ, ಕಣ್ಣು ಮುಚ್ಚಿ ಧ್ಯಾನ ಮಾಡುತ್ತ ಕುಳಿತರೆ ಕೈಲಾಸ ಪ್ರಾಪ್ತಿ ಆಗುವುದಿಲ್ಲ. ಕೈಲಾಸವೆಂಬುದು ಮೇಲಿಲ್ಲ. ಅದೊಂದು ಹಾಳು ಬೆಟ್ಟ. ಅಲ್ಲಿರುವವನೊಬ್ಬ ಹೆಡ್ಡ. ಇದು ನಿನ್ನ ಕೆಲಸವಲ್ಲ. ನಿನ್ನ ನಿಜವಾದ ಕೆಲಸ ಬಸವ ಸ್ಥಾಪಿತ ಅನುಭವ ಮಂಟಪದಲ್ಲಿ ಇದೆ ನಡೆ ಅಲ್ಲಿಗೆ ಎಂದು ಸಿದ್ಧರಾಮನನ್ನು ಬಸವ ಕಲ್ಯಾಣಕ್ಕೆ ಕರೆ ತಂದರು ಅಲ್ಲಮರು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here