ಯುವಜನತೆ ಮತ್ತು ರಾಜಕಾರಣ…..!

0
356

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ಎಂದು ನಾವೆಲ್ಲರೂ ಹೇಳುತ್ತೇವೆ. ಹೌದು ನಿಜಕ್ಕೂ ಹೆಮ್ಮೆಯಿಂದ ಹೇಳಲೇಬೇಕು. ಆದರೆ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ‘ಪ್ರಜಾಪ್ರಭುತ್ವ ಭಾರತದ ‘ ಬಲಿಷ್ಠತೆಗಾಗಿ ನಾವೆಷ್ಟು ಆಸಕ್ತರಾಗಿದ್ದೇವೆ? ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅದೆಷ್ಟು ಗೌರವಿಸುತ್ತಿದ್ದೇವೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟು ಚುನಾವಣೆಗಳು ನಿಷ್ಠೆ, ಪ್ರಾಮಾಣಿಕತೆಯಿಂದ ನಡೆಸುತ್ತಿದ್ದೇವೆ? ಪ್ರಜಾಪ್ರಭುತ್ವ ರಾಷ್ಟ್ರದ ಉಳಿವಿಗಾಗಿ ಈ ದೇಶದ ಪ್ರಜ್ಞಾವಂತ ಜನತೆ ಜಾಗ್ರತರಾಗಿದ್ದಾರೆಯೇ? ಹೀಗೆ ಹಲವಾರು ಪ್ರಶ್ನೆಗಳು ಚುನಾವಣೆ ಪೂರ್ವ ಹಾಗೂ ನಂತರದ ದಿನಗಳಲ್ಲಿ ಬಹು ಚರ್ಚೆಗೆ ಒಳಪಟ್ಟು ಮರೆಯಾಗುತ್ತವೆ .

ಪ್ರಸ್ತುತ ಭಾರತದ ಆಡಳಿತ ವ್ಯವಸ್ಥೆ ಬಗ್ಗೆ ಮಾತನಾಡುವ ಬಹುತೇಕ ಜನರು ರಾಜಕೀಯ ವ್ಯವಸ್ಥೆಗೆ ಗೌರವ ನೀಡದೇ ಕೀಳು ಭಾವನೆಯ ದ್ರಷ್ಟಿಯಲ್ಲಿ ನೋಡುವಂತಹ ಹೀನಾಯ ಸ್ಥಿತಿ ರಾಜಕೀಯ ವಲಯದ ಸ್ಥಿತಿಗತಿ ಗಮನಿಸಿದರೆ ಗೊತ್ತಾಗಬಹುದು . ಪ್ರಜಾಪ್ರಭುತ್ವ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ವ್ಯವಸ್ಥೆ ಜಾರಿಯಲ್ಲಿದೆ. ನೇರವಾಗಿ ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿ ತನ್ನ ಕ್ಷೇತ್ರದ ಅಭಿವ್ರದ್ಧಿಗಾಗಿ ಸೇವೆ ಸಲ್ಲಿಸಲು ಸದಾವಕಾಶ ಪಡೆದುಕೊಳ್ಳುತ್ತಾನೆ . ದೇಶದ ಪ್ರತಿಯೊಬ್ಬ ನಾಗರಿಕನಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಹಾಗೂ ಮತದಾನದ ಹಕ್ಕು ನಮ್ಮ ಭಾರತ ಸಂವಿಧಾನದ ಮೂಲಕ ಪಡೆದುಕೊಂಡಿದ್ದಾನೆ .

Contact Your\'s Advertisement; 9902492681

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನ ಹಕ್ಕು ಕಲ್ಪಿಸಲಾಗಿದೆ. ಇಲ್ಲಿ ಮೇಲು ಕೀಳು, ಬಡವ ಶ್ರೀಮಂತ, ಬೇಧ ಭಾವ, ಜಾತಿ ಮತ ಎನ್ನದೇ ಸಾರ್ವಭೌಮ, ಸ್ವಾತಂತ್ರ್ಯ, ಜಾತ್ಯಾತೀತ, ಸಮಾನತೆಯ ಪ್ರತಿಪಾದಿಸುವ ಸಂವಿಧಾನ ಜಗತ್ತಿನ ಶ್ರೇಷ್ಟ ಸಂವಿಧಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವುದು ಪ್ರಜಾಪ್ರಭುತ್ವದ ರಾಷ್ಟ್ರ ಭಾರತದ ಹೆಮ್ಮೆ.

ಹೌದು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿರುವ ನಾವುಗಳು ದಕ್ಷ, ಪ್ರಾಮಾಣಿಕ, ನಿಷ್ಠೆ, ಸ್ವಚ್ಛ ಆಡಳಿತ , ದೇಶದ ಸರ್ವಾಂಗೀಣ ವಿಕಾಸದ ದ್ರಷ್ಟಿಯಿಂದ ಸರ್ಕಾರ ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಮೂಲ್ಯವಾದ ಅಧಿಕಾರ ಈ ದೇಶದ ಎಲ್ಲಾ ಜನರಿಗೆ ನೀಡಿರುವುದು ಪ್ರಜಾಪ್ರಭುತ್ವ ಬಲಿಷ್ಠತೆ, ರಾಷ್ಟ್ರದ ಏಳಿಗೆಗೆ ಸಾಕ್ಷಿಯಾಗಿದೆ. ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗೆ ಇರುವ ‘ಏಕಮತ’ ಹಕ್ಕು ದೇಶದ ಸಾಮಾನ್ಯ ಪ್ರಜೆಗೂ ಸಮಾನವಾಗಿ ನೀಡಿರುವ ಭಾರತ ಸಂವಿಧಾನಕ್ಕೆ ನಾವು ಗೌರವಿಸಲೇಬೇಕು.

ಒಂದು ದೇಶ ಸಮಗ್ರಅಭಿವ್ರದ್ಧಿ ಹಾಗೂ ಭಾವೈಕ್ಯತೆ ನೆಲೆಯೊಳಗೆ ಗಟ್ಟಿಗೊಳಿಸುವಲ್ಲಿ ಆ ದೇಶದ ಯುವ ಸಮೂಹದ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಜೀವಪರ, ಜನಪರ ಚಿಂತನೆ, ಮಾನವೀಯ ಮೌಲ್ಯಯುಳ್ಳ ಸ್ವಂತಂತ್ರ ಅಲೋಚನಾ ಶಕ್ತಿ ಹೊಂದಿರುವ ಯುವ ಉತ್ಸಾಹಿಗಳು ವಾಸ್ತವ ರಾಜಕಾರಣ ಹಾಗೂ ಭವಿಷ್ಯ ಭಾರತದ ಆಡಳಿತ ವ್ಯವಸ್ಥೆ ಮುನ್ನಡೆಸಲು ಹೆಗಲು ಕೊಡುವುದು ಅನಿವಾರ್ಯವಾಗಿದೆ. ಈ ನಿಲುವುನೊಳಗೆ ವಿಚಾರಿಸುವಂತ ದೇಶದ ಪ್ರಜ್ಞಾವಂತ ಯುವ ಜನತೆ ಪ್ರಸ್ತುತ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡುವುದು ತೀರ ಅವಶ್ಯ ಹಾಗೂ ಹೊಸ ಬೆಳವಣಿಗೆಯ ಪರ್ವ .

ಪ್ರಾದೇಶಿಕ ಹಾಗೂ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳ (ಪ್ರಣಾಳಿಕೆ )ಪೂರ್ವಯೋಜಿತ ಭರವಸೆಯ ಮಾತುಗಳ ಸುಳಿಗೆ ಸಿಲುಕಿರುವ ದೇಶದ ಜನತೆ ಭ್ರಮನಿರಸನಗೊಂಡು ಅಸಾಹಯಕತೆ ಭಾವದಿಂದ ನಿರಾಸೆಯ ಜೀವನ ಶೈಲಿಯಲ್ಲಿ ಮೈಗೂಡಿಸಿಕೊಂಡು ಬದುಕುವಂತಾಗಿದೆ . ಸಮಗ್ರ ಅಭಿವ್ರದ್ಧಿಗೆ ಪೂರಕವಾದ ಯೋಜನೆಗಳು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮುದ್ರಿಸಿ ಬಿಡುಗಡೆ ಮಾಡುವ ಮೂಲಕ ಮತದಾರರಿಗೆ ಆಮಿಷ ಒಡ್ಡುವುದು, ಭರವೆಸೆಯ ಹೆಸರಲ್ಲಿ ದಿಕ್ಕು ತಪ್ಪಿಸುವುದು, ತಮ್ಮ ಸರ್ಕಾರದ ವಿಫಲ ಸಾಧನೆಗಳು ಮುಚ್ಚಿಸಿಕೊಳ್ಳಲು ಹೊಸ ತೋರಿಕೆಯ ಸಾಹಸಗಳಿಗೆ ಕೈ ಹಾಕುವುದು ಇಂತಹ ರಣತಂತ್ರಗಳು ಹೆಣೆಯುವುದು ಎಲ್ಲಾ ಚುನಾವಣೆಗಳಲ್ಲಿ ಹಾಗೂ ಎಲ್ಲಾ ಪಕ್ಷಗಳು ಬಹಿರಂಗವಾಗಿ ನಡೆಸಲು ಎಗ್ಗಿಲ್ಲದೆ ಪ್ರಯತ್ನಿಸುತ್ತವೆ .

ದೇಶದ ಜನಸಾಮಾನ್ಯರ ಬದುಕಿಗೆ ಅಗತ್ಯವಿರುವ ಕನಿಷ್ಟ ಮೂಲಭೂತ ಸೌಕರ್ಯಗಳು ಒದಗಿಸುವ ಜನಪರ ಚಿಂತನೆ ನಡೆಸುವ ಸರ್ಕಾರಗಳು ಇಂದು ಮರಿಚಿಕೆಯಾಗಿವೆ. ಸುಮಾರು ೨೦೦ ವರ್ಷಗಳ ಕಾಲ ಪರದೇಶಿಗಳ ಕೈಯಲ್ಲಿ ಗುಲಾಮಗಿರಿ ವ್ಯವಸ್ಥೆಯೊಳಗೆ ಬದುಕುವಂತೆ ಮಾಡಿದ ದೇಶದ ಅಪ್ರಜ್ಞಾವಂತ ಮೇಲ್ವರ್ಗದವರು ಇಂದಿಗೂ ಅದೇ (ಅಂತರೀಕ ಗುಲಾಮಗಿರಿ) ವ್ಯವಸ್ಥೆಯಲ್ಲಿ ಬದುಕುವಂತೆ ಮಾಡಲು ವ್ಯವಸ್ಥಿತ ಹುನ್ನಾರ ನಿರಂತರವಾಗಿ ನಡೆಯುತ್ತಿದೆ.

ಭಾರತ ದೇಶ ಬಾಹ್ಯವಾಗಿ ಸ್ವತಂತ್ರಗೊಂಡು ೭೦ ವರ್ಷಗಳು ಕಳೆದರೂ ಇನ್ನೂ ಅಂತರೀಕ ಗುಲಾಮಗಿರಿತನ ವ್ಯವಸ್ಥೆ ಜೀವಂತವಾಗಿರುವುದು ದೇಶದ ಬಹುದೊಡ್ಡ ದುರಂತ ಎನ್ನಬಹುದು. ಅಂದಿನಿಂದ ಇಂದಿನವರೆಗೆ ದೇಶದ ಬಹುದೊಡ್ಡ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಹಸಿವು, ಜಾತೀಯತೆ, ಭ್ರಷ್ಟಾಚಾರ, ದೌರ್ಜನ್ಯ, ಹಿಂಸೆ, ಮಹಿಳಾ ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳು ನರ್ತಿಸುತ್ತಿವೆ .

ಜಗತ್ತಿನ ಅತಿ ಹೆಚ್ಚು ಯುವ ಸಾಮರ್ಥ್ಯ ಹೊಂದಿರುವ ದೇಶ ಭಾರತ. ಸುಮಾರು ೬೦ ಪ್ರತಿಶತಕ್ಕಿಂತ ಹೆಚ್ಚು ಯುವ ಜನತೆ ಭಾರತದಲ್ಲಿರುವುದು ಹೆಮ್ಮೆಯೆನಿಸುತ್ತದೆ . ಆದರೆ ಬಹುತೇಕ ಯುವ ಜನತೆ ತಮ್ಮ ಯುವ ಶಕ್ತಿ ದೇಶದ ಅಭಿವ್ರದ್ಧಿ, ಐಕ್ಯತೆ, ಸಮಾನತೆ, ಏಳಿಗೆಗೆ ಮೀಸಲಿಟ್ಟು ಅಲೋಚಿಸುವ ಸಾಮಾರ್ಥ್ಯ ಪಳಗಿಸುವಲ್ಲಿ ಬಳಕೆಯಾಗದೇ ವ್ಯರ್ಥವಾಗುತ್ತಿರುವುದು ವಿಪರ್ಯಾಸವೇ ಸರಿ .

ದೇಶದ ಬಹುತೇಕ ಯುವ ಜನತೆ ಶಿಕ್ಷಣ ಪಡೆದು ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾರೆ. ವ್ರತ್ತಿಪರ ಶಿಕ್ಷಣ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಬದುಕಿಗೆ ಆಸರೆಯಾಗುವ ವ್ರತ್ತಿಕಡೆ ವಾಲುವುದು ಸಾಮಾನ್ಯವಾಗಿದೆ . ಇನ್ನೂ ಕೆಲವರು ಬಡತನದ ಬೇಗೆಯಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ . ಉನ್ನತ ಶಿಕ್ಷಣ ಕಲಿಯಲು ಸಾಧ್ಯವಾಗದ ಗ್ರಾಮೀಣ ಪ್ರದೇಶದ ಅದೆಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಜೀವನೋಪಾಯದ ಉದ್ದೇಶದಿಂದ ಉದ್ಯೋಗ ಹುಡುಕಿಕೊಳ್ಳಲು ಹರಸಾಹಸ ಪಡುತ್ತಾರೆ. ಇನ್ನೂ ಕೆಲವರು ಸಕಾಲಕ್ಕೆ ಉದ್ಯೋಗ ಸಿಗದೇ ನಿರುದ್ಯೋಗ ಸಮಸ್ಯೆಯಿಂದ ಅಮೂಲ್ಯವಾದ ಯುವ ಸಮಯ ವ್ಯರ್ಥವಾಗಿಸಿಕೊಳ್ಳುತ್ತಿದ್ದಾರೆ . ಇಂತಹ ಬಿಕ್ಕಟ್ಟಿನಲ್ಲಿ ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಯೋಚಿಸುವಂತಹ ಮನಸ್ಥಿತಿಗಳು ಕಡಿಮೆಯಾಗುತ್ತಿವೆ . ದೇಶದ ಪರಿಸ್ಥಿತಿ, ಸಮಾಜದಲ್ಲಿ ತಾಂಡವಾಡುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತು ಯೋಚಿಸುವಂತಹ ಯುವ ಜನತೆ ಇಂದು ಬಹುತೇಕ ಕಡಿಮೆಯಾಗಿದೆ.

ಒಂದು ಕೋಮು, ಹಿಂಸೆ, ಜಾತಿ,ಧರ್ಮದ ಚೌಕಟ್ಟಿನೊಳಗೆ ಬದುಕುವಂತೆ ಪ್ರೇರೆಪಿಸುವ ಸಂಘಟನೆಗಳು ಈ ನೆಲದಲ್ಲಿ ಸ್ಥಾಪಿತವಾಗಿವೆ . ಅಸಮಾನತೆ, ಅಧರ್ಮ, ಅನಾಚಾರ, ಜಾತೀಯತೆ ಪೋಷಿಸುವ ಸಂಘಟನೆಗಳು ಯುವ ಜನತೆಯ ತಲೆಯಲ್ಲಿ ಧರ್ಮದ ಅಫೀಮ್ ತುಂಬುತ್ತಿವೆ . ದೇಶದ ಭಾವೈಕತೆ, ಸಮಾನತೆ, ಬಹುತ್ವ ಕಾಪಾಡುವ ಯುವ ನಾಯಕರು ದ್ವೇಷ, ಹಿಂಸೆ , ಕೋಮುವಾದ, ಜಾತೀಯತೆ, ಅಸಮಾನತೆ ಬಿತ್ತುವ ರೊಬೋಟ್ ಗಳಾಗಿ ಪರಿವರ್ತನೆವಾಗುತ್ತಿವೆ. ಇದು ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಕರೆದರೂ ಅತಿಶೋಕ್ತಿಯಿಲ್ಲ.

ರಾಷ್ಟ್ರದ ಏಳಿಗೆ , ಬಹುತ್ವ, ಸಮಾನತೆ, ಜನಪರ ಅಭಿವ್ರದ್ಧಿಗಾಗಿ ಆಯ್ಕೆಯಾಗುವ ನಿಸ್ವಾರ್ಥ , ಪ್ರಾಮಾಣಿಕ, ದಕ್ಷ, ಸರಳ ವ್ಯಕ್ತಿತ್ವದ ಜನಪರ ರಾಜಕಾರಣಿಗಳು ಇಂದು ದೀಪ ಹಚ್ಚಿ ಹುಡುಕಿದರೂ ಬೆರಳಣಿಕೆಯಷ್ಟು ಸಿಗುವುದು ತುಂಬಾ ಅಪರೂಪ. ಇಂತಹ ಭ್ರಷ್ಟ, ಅಪ್ರಮಾಣಿಕ, ಸ್ವಾರ್ಥ, ಗುಂಡಾಗಿರಿ ಹಿನ್ನಲೆಯ ರಾಜಕೀಯ ವ್ಯಕ್ತಿಗಳಿಗೆ ಮತ್ತೆ ಮತ್ತೆ ಮಣೆಹಾಕುವುದು ನಮ್ಮನ್ನು ನಾವೇ ಆತ್ಮವಂಚನೆ ಮಾಡುಕೊಳ್ಳುವ ಮುಖಾಂತರ ಅಪರಾಧ ಮಾಡುತ್ತಿದ್ದೇವೆ. ಪ್ರಜ್ಞಾವಂತ ಮತದಾರರಾದ ನಾವುಗಳು ಅವಸ್ಥೆ ವಿರುದ್ಧ ಧ್ವನಿಯೆತ್ತುವ ಎದೆಗಾರಿಕೆ ಕಿಚ್ಚು ನಮ್ಮೊಳಗೆ ಹುಟ್ಟುಕೊಳ್ಳುಬೇಕಿದೆ . ಅವಸ್ಥೆ ಸಮಾಜ ದಿಕ್ಕರಿಸಿ ಪರ್ಯಾಯ ರಾಜಕಾರಣಕ್ಕೆ ನಾವೆಲ್ಲ ಕೈಜೋಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಸ ವ್ಯಾಖ್ಯಾನ ಬರೆಯಬೇಕಿರುವುದು ಯುವ ಜನತೆಯ ಮುಂದಿರುವ ಹೊಸ ಸವಾಲು .

ಬಹುಸಂಸ್ಕ್ರತಿ, ವಿವಿಧ ಪರಂಪರೆಯ ಬಹುತ್ವ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗುತ್ತಿದೆ. ಸಂವಿಧಾನ ಅಡಿಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸಂವಿಧಾನ ವಿರೋಧಿ ಮಾತನಾಡುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು ಹತ್ತಿಕ್ಕುವ ಹುನ್ನಾರ ಹಾಗೂ ವಿಚಾರವಾದಿಗಳ ಮೇಲೆ ಹಲ್ಲೆ, ಹತ್ಯೆ ನಡೆಸುವ ಹೀನಕ್ರತ್ಯಗಳು ಅಮಾನವೀಯತೆಯ ಶಕ್ತಿಗಳು ನಿರಂತರವಾಗಿ ನಡೆಸುತ್ತಲಿವೆ. ಇವೆಲ್ಲದಕ್ಕೂ ಆಡಳಿತ ಪಕ್ಷಗಳ ಸರ್ಕಾರಗಳೇ ನೇರ ಹೊಣೆಗಾರಿಕೆಯಾಗಿವೆ.

ಜಾತಿರಾಜಕಾರಣ, ಧರ್ಮರಾಜಕಾರಣದಲ್ಲಿ ಭ್ರಷ್ಟತೆ, ದೌರ್ಜನ್ಯ, ಹಿಂಸೆ ಕೋಮುವಾದ ಶಕ್ತಿಗಳ ಅಟ್ಟಹಾಸ ಮೆರೆಯುತ್ತಿವೆ.

ಬಹುತ್ವ ಭಾರತದ ಸಂಸ್ಕ್ರತಿ ಪರಂಪರೆ, ದೇಶಪ್ರೇಮ, ಜನಪರ, ಜೀವಪರ, ಸಮಾನತೆ, ಭಾವೈಕ್ಯತೆಯ ನೆಲೆಯೊಳಗೆ ಚಿಂತಿಸುವ ಪ್ರಜ್ಞಾವಂತ ಯುವ ಪ್ರತಿಭೆಗಳು ರಾಜಕಾರಣ ಕಡೆ ಮುಖಮಾಡಬೇಕಿದೆ. ನಿಷ್ಠಾವಂತ, ಪ್ರಾಮಾಣಿಕ, ಸರಳ, ಸಜ್ಜನ, ಜನಪರ, ಯುವ ನಾಯಕರು ಈ ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಕೈಜೋಡಿಸಬೇಕಿದೆ. ಬಡತನ, ನಿರುದ್ಯೋಗ, ಅಸಮಾನತೆ, ಜಾತೀಯತೆ, ಭ್ರಷ್ಟಚಾರ, ಕೋಮುವಾದ, ದುರಾಡಳಿತ ಅವಸ್ಥೆಯಿಂದ ಮುಕ್ತಿಗಾಗಿ ‘ಯುವ ಜನಾಂದೋಲನ’ ಆರಂಭಿಸಬೇಕಿದೆ. ದೇಶದ ತಳವರ್ಗ ಸಮುದಾಯಗಳ, ಬಡವ, ದೀನ, ಕೂಲಿಕಾರ್ಮಿಕ, ಶ್ರಮಿಕ, ರೈತರ ಮೂಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಸರ್ಕಾರಗಳ ಪ್ರತಿನಿಧಿಗಳು ಕೊಟ್ಯಾಂತರ ಮೌಲ್ಯದ ಅಧಿಪತಿಗಳಾಗಿ ಮೆರೆಯುತ್ತಿದ್ದಾರೆ. ಬಡವ ಮತ್ತಷ್ಟು ಬಡವನಾಗಿ ನರಕಯಾತನೆ ಅನುಭವಿಸುತ್ತಿದ್ದರೆ ಶ್ರೀಮಂತ ಮತ್ತಷ್ಟು ಸಿರಿವಂತನಾಗಿ ಬೆಳೆಯುತ್ತಿದ್ದಾನೆ. ಬಡವರಿಗೆ ದಕ್ಕಬೇಕಾದ ಸರ್ಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವ್ರದ್ಧಿಯಲ್ಲಿ ಕುಂಠಿತಗೊಳ್ಳುತ್ತಿದೆ .

ಈ ನಿಟ್ಟಿನಲ್ಲಿ ಪ್ರಜ್ಞಾವಂತ ಯುವಜನತೆ ದೇಶ ಅಂದರೆ ನೆಲ,ಜನ, ಈ ನೆಲ , ಜನರಿಗೆ ಪ್ರೀತಿಸಿದರೆ ದೇಶ ಪ್ರೀತಿಸಿದಂತೆ, ಜನರಿಗೆ ದ್ವೇಷಿಸಿದರೆ ಅದು ದೇಶಭಕ್ತಿಯಲ್ಲ ಎಂಬುದು ಮನದಟ್ಟು ಮಾಡಿಕೊಳ್ಳಬೇಕಿದೆ. ಮತ್ತೊಬ್ಬರ ಯೋಚನೆಗಳಿಗೆ ಮಾರುಹೋಗಿ ಜಪಿಸುವುದುಕ್ಕಿಂತ ಸ್ವತಂತ್ರವಾಗಿ ಚಿಂತಿಸುವ ಮನೋಭಾವ ಇಂದಿನ ಪ್ರಜ್ಞಾವಂತ ಯುವಕರಲ್ಲಿ ಮೂಡಬೇಕಿದೆ . ದೇಶದ ಸಮಾನತೆ, ಭಾವೈಕ್ಯತೆ, ಸಂವಿಧಾನ, ಪ್ರಜಾಪ್ರಭುತ್ವ ಬಲಿಷ್ಠತೆಗಾಗಿ ಇಂದಿನ ಯುವಜನತೆ ರಾಜಕೀಯ ಪ್ರವೇಶ ಮಾಡುವುದು ಉತ್ತಮ ಹಾಗೂ ಅನಿವಾರ್ಯತೆ ಕೂಡ ಹೌದು.

ಯುವ ಜನತೆಯ ನಡೆ – ಪ್ರಜಾಪ್ರಭುತ್ವ ಬಲಿಷ್ಠತೆ ಕಡೆ…

ಬಾಲಾಜಿ ಕುಂಬಾರ,

ಚಟ್ನಾಳ, ಬೀದರ

ಮೋ : 9739756216

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here