ಜಗತ್ತಿನಲ್ಲಿರುವುದು ಒಂದೇ ಧರ್ಮ ಅದು “ನಿಸರ್ಗ ಧರ್ಮ”

0
127
ನೆಲನೊಂದೆ ಹೊಲಗೇರಿ ಶಿವಾಲಯಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ
ನಿಮ್ಮನರಿದವಂಗೆ
                                       -ಬಸವಣ್ಣ

ಒಂದು ಜೀವವನ್ನು ಕೊಲ್ಲುವ ಹಕ್ಕು ನಿನಗಿದ್ದರೆ ಜೀವ ಕೊಡುವ ತಾಕತ್ತು ನಿನ್ನಲ್ಲಿರಬೇಕಾಗುತ್ತದೆ ಎಂಬುದು ಬುದ್ಧನ ಸಂದೇಶ. ಬಸವ, ಮಹಾವೀರ, ಕನಕ, ಪುರಂದರ ಮುಂತಾದ ಮಹಾತ್ಮರು ಕೂಡ ಇದನ್ನೇ ಹೇಳಿದ್ದಾರೆ. ಆದರೆ ಧರ್ಮದೊಳಗಿನ ಕೆಲ ಕುತಂತ್ರಿಗಳ ಅಟ್ಟಹಾಸದಿಂದ ಇಂದು ಮನುಷ್ಯತ್ವ ಮರೆ ಮಾಚಿದೆ. ಎಲ್ಲ ಧರ್ಮ, ಸಿದ್ಧಾಂತಗಳು ಜೀವ, ಜಗತ್ತು ಮತ್ತು ಪರಮಾತ್ಮ ಎಂಬ ಈ ಮೂರು ವಿಚಾರಧಾರೆಗಳನ್ನೇ ಪ್ರತಿಪಾದಿಸುತ್ತವೆ. ಎಲ್ಲರೂ ಈ ಜೀವ ಜಗತ್ತನ್ನು ಸೃಷ್ಟಿ ಮಾಡಿದ ಪರಮಾತ್ಮನ ಅಸ್ತಿತ್ವದ ಬಗ್ಗೆಯೇ ಮಾತನಾಡಿದ್ದಾರೆ. ಅವರೆಲ್ಲರೂ ವಿಚಾರಧಾರೆ, ಉಪಾಸನೆ, ಬಾಳಬಟ್ಟೆ ಕುರಿತಾಗಿಯೇ ಚಿಂತನೆ ನಡೆಸಿದ್ದಾರೆ. ಅವರು ಹೇಳಿದ ವಿಚಾರಗಳನ್ನು ಆಚರಣೆಗೆ ತಂದಲ್ಲಿ ಅದು ಬದುಕಿನ ಮಾರ್ಗವಾಗಬಲ್ಲದು. ಅದುವೇ ಬಸವ ಮಾರ್ಗ.

Contact Your\'s Advertisement; 9902492681

ನಮ್ಮೆಲ್ಲರಿಗೆ ಮುಂಚಿನಿಂದಲೂ ದೇವರು-ಧರ್ಮದ ಬಗ್ಗೆ ಅನೇಕ ಗೊಂದಲಗಳಿವೆ. ನಾವೆಲ್ಲರೂ ಈ ಗೊಂದಲಗಳ ಮಧ್ಯೆದಲ್ಲಿ ಸಿಲುಕಿದ್ದೇವೆ. ವಿಜ್ಞಾನಿಗಳು ಜೀವ-ಸೃಷ್ಟಿಯ ಮೇಲೆ ಪ್ರಯೋಗ ಮಾಡಿದರೆ, ಮಹಾತ್ಮರು ಕೇವಲ ಜೀವ-ಪರಮಾತ್ಮನ ಮೇಲೆ ಪ್ರಯೋಗ ಮಾಡಿದ್ದಾರೆ. ದೇವರಿದ್ದಾನೆ ಎಂದು ಎಲ್ಲರೂ ಪ್ರತಿಪಾದನೆ ಮಾಡಿದರು. ಆದರೆ ಹೇಗಿದ್ದಾನೆ ಎಂದು ಯಾರೂ ಹೇಳಲಿಲ್ಲ. ಏಕೆಂದರೆ ಆತ ಆಕಾರ ಹೊಂದಿಲ್ಲ. ಆದರೆ “ಮಧ್ಯೆದಲ್ಲಿ ಬಂದವರು” ಮಹಾತ್ಮರು ಸ್ಪಷ್ಟೀಕರಿಸಿದ ಎಲ್ಲ ಪಥವನ್ನು ತಮಗೆ ಅನುಕೂಲವಾಗುವಂತೆ ಬದಲಾವಣೆ ಮಾಡಿಕೊಂಡು ಜಗತ್ತಿಗೆ ತಪ್ಪು ಸಂದೇಶ ನೀಡಿದರು.

ವಿಜ್ಞಾನ ಮತ್ತು ತ್ವಜ್ಞಾನದಿಂದ ಅಂಗಚೇಷ್ಟೆಯುಳ್ಳ ಮನುಷ್ಯ ಬದಲಾವಣೆ ಆಗಿರುವನು. ಬುದ್ಧ, ಬಸವ, ಮಹಾವೀರ, ಪೈಗಂಬರ್, ಏಸುವಿನ ನಂತರ ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ ದಂಪತಿ, ಕೇರಳದಲ್ಲಿ ನಾರಾಯಣ ಗುರು, ಆಂಧ್ರಪ್ರದೇಶದಲ್ಲಿ ಆಂಡಯ್ಯ, ತಮಿಳುನಾಡಿನಲ್ಲಿ ಈರೋಡ್ ಪೆರಿಯಾರ್ ಮುಂತಾದವರು ಅಖಂಡ ದೇಶದ ಏಕತೆಗೆ ದುಡಿದರು. ಇವರು ಸಮಾಜದಲ್ಲಿರುವ ಅಜ್ಞಾನ, ಅಂಧಕಾರ, ಶೋಷಣೆಯನ್ನು ತೊಡೆದು ಹಾಕಿದರು. ಜಾತಿ ವಾಸನೆಯಿಂದ ಹೊರ ಬಂದವರಿಗೆ ಧರ್ಮ, ದೇವರ ಬಗ್ಗೆ ಸ್ಪಷ್ಟ ಕಲ್ಪನೆ ಬರುತ್ತದೆ. ಅಂತೆಯೇ ಬಸವಣ್ಣನವರು “ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವನಯ್ಯ” ಎಂದು ಹೇಳಿದ್ದಾರೆ. ನೀನೂ ಬದುಕು ಇತರರನ್ನು ಬದುಕಿಸು ಎಂಬುದು ಪ್ರಕೃತಿ ಸಿದ್ಧಾಂತ. ಶರಣರು ಇಂತಹ ಜೀವಪರ ಮತ್ತು ಜನಪರ ಸಿದ್ಧಾಂತವನ್ನು ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡಿದರು.

ಜಗತ್ತಿನಲ್ಲಿರುವ ಯಾವ ಧರ್ಮವೂ ಮೇಲಲ್ಲ. ಕೀಳಲ್ಲ. ಎಲ್ಲ ಧರ್ಮಗಳ ಸಾರ ಒಂದೇ! ಮಹಾತ್ಮರ ಮೂಲ ವಿಚಾರಧಾರೆಯನ್ನು ತಪ್ಪಾಗಿ ಪ್ರತಿಪಾದನೆ ಮಾಡುತ್ತಿರುವುದರಿಂದ ಜಗತ್ತಿನಲ್ಲಿ ಕೋಲಾಹಲ ಉಂಟಾಗುತ್ತಿದೆ. ಧರ್ಮ. ದೇವರ ಬಗೆಗೆ ನಮ್ಮೊಳಗಿನ ಅಜ್ಞಾನದ ಕತ್ತಲೆಯೇ ಇದಕ್ಕೆಲ್ಲ ಕಾರಣ. ಧರ್ಮವೆಂದರೆ ಪ್ರೀತಿ, ಪ್ರೇಮ, ಸಹನೆ, ಸಹಬಾಳ್ವೆ, ಸಹ ಚಿಂತನೆ ಬಿಟ್ಟು ಬೇರೇನೋ ನಿಗೂಢವಾದುದು ಅಲ್ಲ. ದೇವರು, ಧರ್ಮದ ಹೆಸರು ಹೇಳಿ ಮುಗ್ಧ ಜನರ ಮೇಲೆ ಸವಾರಿ ನಡೆಸುವುದು, ಶೋಷಣೆ ಮಾಡುವುದು ಸರಿಯಲ್ಲ. ಬಸವಣ್ಣನವರು “ಲಿಂಗಪೂಜೆಯ ಮಾಡುವ ಅಣ್ಣಗಳಿರಾ ಜಂಗಮವ ನೋಡಿರೆ, ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬೇಕು” ಎಂದು ಹೇಳಿದ್ದಾರೆ. “ನಾಮವಿಲ್ಲದ ದೇವರಿಗೆ ನೇಮವೇತಕೆ?” ಎಂದು ಅಲ್ಲಮಪ್ರಭು ಪ್ರಶ್ನಿಸಿದ್ದಾರೆ. ಮದರ್ ತೆರೆಸಾ ಅವರಿಗೆ ಧರ್ಮಕ್ಕಿಂತ ಸೇವೆ ದೊಡ್ಡದಾಗಿತ್ತು.

ಕುಡಿಯುವ ನೀರು, ಉಸಿರಾಡುವ ಗಾಳಿ, ಹರಿವ ರಕ್ತ, ಬೆಳೆವ ಭೂಮಿ ಒಂದೇ ಆಗಿರುವಾಗ ಎಲ್ಲರೂ ಕೂಡಿ ಬಾಳುವುದೇ ನಿಜವಾದ ಧರ್ಮ. “ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ನಿನ್ನ ಎದೆಯ ದನಿಗಿಂತ ಮಿಗಿಲಾದ ಶಾಸ್ತ್ರ ಉಂಟೇ?” ಎಂದು ಕವಿ ಕುವೆಂಪು ನಮ್ಮನ್ನು ಜಾಗೃತಗೊಳಿಸಿದ್ದಾರೆ. ಈ ದೇಹ ಜಾತಿಯ ದೇಹವಲ್ಲ. ಧರ್ಮದ ದೇಹವಲ್ಲ. ಧರ್ಮವೆಂದರೆ ಅಂಧಾನುಕರಣೆ, ಅಂದಶ್ರದ್ಧೆ ಅಲ್ಲ. ನಾವೆಲ್ಲರೂ ಜಾತಿ, ಧರ್ಮದ ವಾಸನೆಯಿಂದ ಹೊರ ಬರಬೇಕು. ಈ ದೇಹ ನಿಸರ್ಗದ ದೇಹ. ಈ ದೇಹದಲ್ಲಿ ಭೂಮಿ ತತ್ವ ಅಡಗಿದೆ. ಶರಣರು ದೇಹಕ್ಕೆ ದೇವಾಲಯದ ಮಹತ್ವ ತಂದುಕೊಟ್ಟರು. ಮನುಷ್ಯ ಪ್ರಕೃತಿಯ ಕೂಸು. ದೇವರು ಕೊಟ್ಟ ಈ ದೇಹವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಂದಾಗ ಮಾತ್ರ ನಿಜವಾದ ದೇವರು ಮತ್ತು ಧರ್ಮದ ಸಾಕ್ಷಾತ್ಕಾರ ಆಗಬಲ್ಲದು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here