ಇ-ಮೀಡಿಯಾ ಲೈನ್ ಶಿವರಂಜನ್ ಸತ್ಯಂಪೇಟೆ ವಿಥ್ ಗೃಹ ಸಚಿವ ಎಂ.ಬಿ.ಪಾಟೀಲ್

0
359

ಕಲಬುರಗಿ: ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಪ್ರಚಾರ ನಿಮಿತ್ತ ಕಲಬುರಗಿಗೆ ಆಗಮಿಸಿದ್ದ ಗೃಹ ಸಚಿವರನ್ನು ಭೇಟಿಯಾಗಿ ಮಾತನಾಡಿಸಲು ಬೊಕೆ ತೆಗೆದುಕೊಂಡು ಹೋಗಿದ್ದೆಬೊಕೆ ನೀಡುತ್ತಲೇ, ಇವೆಲ್ಲ ಫಾರ್ಮಲಿಟಿಸ್ ಯಾಕೆ ರೀ? ಎಂದರು. ಉಬಯ ಕುಷಲೋಪರಿಯ ನಂತರ ನಾನೆ ಅವರನ್ನು ಮಾತಿಗೆಳೆದೆ.

Contact Your\'s Advertisement; 9902492681

ಪ್ರ: ನಿನ್ನೆ ನೀವು ಶ್ರೀನಿವಾಸ ಸರಡಗಿಯ ಮಠಕ್ಕೆ ಹೋಗಿದ್ದಿರಂತೆ?

ಉತ್ತರ: ಹೌದು ಹೋಗಿದ್ದೆ. ಈ ಮುಂಚೆಯೇ ನನ್ನನ್ನು ಅವರು ಆಹ್ವಾನಿಸಿದ್ದರು. ನೀವು ಕರೆದರೆ ನಾನು ಕಲಬುರಗಿಗೆ ಬಂದಾಗ ಬರುವೆ ಎಂದು ಹೇಳಿದ್ದೆ. ಮೇಲಾಗಿ ದುಶ್ಚಟಗಳ ಬಿಡಿಸುವ ಕಾರ್ಯಕ್ರಮವೊಂದನ್ನು ನಿನ್ನೆ ಅವರು ಅಲ್ಲಿ ಹಮ್ಮಿಕೊಂಡಿದ್ದರು. ಅದಕ್ಕೆ ಚಾಲನೆ ನೀಡಿ ಬಂದೆ. ರಾಜ್ಯದ ಗೃಹ ಸಚಿವನಾಗಿ ನಾನು ಹೋಗಲೇಬೇಕಾಗುತ್ತದೆ. ಇದು ನನ್ನ ಕರ್ತವ್ಯ ಕೂಡ.

ಪ್ರ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಎಲ್ಲಿಗೆ ಬಂತು?

ಉತ್ತರ: ಇದು ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ. ಜಾಮದಾರ ಹಾಗೂ ನೇತೃತ್ವ ವಹಿಸಿದ ಸ್ವಾಮೀಜಿಗಳಿಗೆ ಗೊತ್ತು. ಆದರೆ ಸೈದ್ಧಾಂತಿಕ ಮತ್ತು ತಾತ್ವಿಕ ದೃಷ್ಟಿಯಿಂದ ನಾನು ಆ ಹೋರಾಟದ ಪರವಾಗಿದ್ದೇನೆ. ಕಾನೂನು ಸಮರವಂತೂ ನಡೆಸಲೇಬೇಕಲ್ಲವೆ?

ಪ್ರ: ಶಾಮನೂರ ಶಿವಶಂಕರಪ್ಪ ಮತ್ತು ನಿಮ್ಮ ಜಗಳ ಮುಗಿಯಿತೇ?

ಉತ್ತರ: ಅವರದ್ದು ಮತ್ತು ನಮ್ಮದು ಹೊಲ- ಮನಿ ಜಗಳ ಇಲ್ರೀ. ಅವರು ನಮ್ಮ ಸಮಾಜದ ಹಿರಿಯರು. ನಮ್ಮಿಬ್ಬರ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ ವಿನಃ ನಾವಿಬ್ಬರೂ ವೈರಿಗಳಲ್ಲ. ಅವರ ಮನೆಗೆ ಹೋದಾಗ ಅವರ ಮಗ ಮಾತ್ರ ನನ್ನ ಜತೆ ಸ್ವಲ್ಪ ಅನುಚಿತವಾಗಿ ನಡೆದುಕೊಂಡ್ರು ಅಷ್ಟೇ. ಅದಕ್ಕಾಗಿ ಹಿರಿಯರಾದ ಶಾಮನೂರ ಶಿವಶಂಕರಪ್ಪ ಅವರು ಇಂದಿಗೂ ಫೀಲ್ ಮಾಡಿಕೊಳ್ಳುತ್ತಿದ್ದಾರೆ.

ಪ್ರ: ಕಲಬುರಗಿ ಲೋಕಸಭೆ ಚುನಾವಣೆ ಹಾಗೂ ಚಿಂಚೋಳಿ ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಬಹುದು?

ಉತ್ತರ: ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಮಲ್ಲಿಕಾರ್ಜುನ ಖರ್ಗೆಯವರು ಗೆದ್ದು ಬರಬೇಕು. ಚಿಂಚೋಳಿ ಉಪಚುನಾವಣೆಯಲ್ಲಿ ನಾವು ಇನ್ನೊಂದಿಷ್ಟು ಕೆಲಸ ಮಾಡಬೇಕಿದೆ. ಆದ್ರೂ ಖರ್ಗೆ ಮತ್ತು ಸುಭಾಷ ರಾಠೋಡ್ ಅವರು ಗೆದ್ದು ಬರುವ ವಿಶ್ಬಾಸವಿದೆ.

ಪ್ರ: ಕಲಬುರಗಿಯ ಖಡಕ್ ಬಿಸಿಲಿನಲ್ಲೂ ಟ್ರಾಫಿಕ್ ಸಿಗ್ನಲ್ ಕಾರ್ಯನಿರ್ವಹಿಸುತ್ತಿವೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಇದಕ್ಕೆ ಏನಾದರೂ ಆಲ್ಟರ್ನೇಟ್ (ಹಸಿರು ಹೊದಿಕೆ) ವ್ಯವಸ್ಥೆ ಮಾಡಬಹುದೆ?

ಉತ್ತರ: ನಿಮ್ಮ ಸಲಹೆ ಚೆನ್ನಾಗಿದೆ. ಆದರೆ ಇದು ಟೂ ಲೇಟ್. ಇನ್ನೊಂದೆರಡು ವಾರದಲ್ಲಿ ಬೇಸಿಗೆಯೇ ಮುಗಿಯುತ್ತದೆ. ಆದ್ರೆ ಟ್ರಾಫಿಕ್ ಸಿಗ್ನಲ್ ಬಂದ್ ಮಾಡುವ ಕುರಿತು ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.

ಪ್ರ: 23 ರ ನಂತರ ನಿಮ್ಮ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲ?

ಉತ್ತರ: ನಾನಂತೂ ಭವಿಷ್ಯಕಾರನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಮ್ಮ ಸರ್ಕಾರ ಸುಭದ್ರವಾಗಿರಲಿದೆ. ಇದನ್ನು ಆ ಭವಿಷ್ಯಕಾರರಿಗೆ ಕೇಳಿ. ನಾಳೆ ಏನಾಗಬಲ್ಲುದು ಎಂಬುದನ್ನು ಹೇಳಬಲ್ಲವರಾರು?

ಪ್ರ: ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಇಂದು ನಡೆಯುವ ಬಸವ ಜಯಂತಿ ಮೆರವಣಿಗೆ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವಿರಾ?

ಉತ್ತರ: ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳು ಸೇರಿ ನಾಲ್ಕು ದಿನಗಳ ಕಾಲ ಅರ್ಥಪೂರ್ಣ ಜಯಂತಿ ಆಚರಣೆ ಮಾಡಿದ್ದಾರೆ ಎಂದು ಕೇಳಿದ್ದೇನೆ. ಆದರೆ ನನ್ನ ಕಾರ್ಯಬಾಹುಳ್ಯದಿಂದಾಗಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ.

ಈ ಮಾತುಗಳ ಜೊತೆಗೆ ಕೆಲವು ಆಫ್ ದಿ ರೆಕಾರ್ಡ್ ಮಾತುಗಳನ್ನು ಕೂಡ ನನ್ನ ಜೊತೆ ಅವರು ಹಂಚಿಕೊಂಡರು. ಅವುಗಳನ್ನು ಸಂದರ್ಭ ಬಂದಾಗ ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹೀಗೆ ಮಾತನಾಡುತ್ತಿರಬೇಕಾದರೆ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ಫೋನ್ ಮಾಡಿ ಎಂ.ಬಿ. ಪಾಟೀಲರನ್ನು ತಮ್ಮ ಮನೆಗೆ ಉಪಹಾರಕ್ಕೆ ಆಹ್ವಾನಿಸಿ ತಾವು ಕರೆಯಲು ಬರುವುದಾಗಿ ತಿಳಿಸಿದರು. ಇಲ್ಲ ನೀವು ಬರಬೇಡಿ ನಾನೆ ನಿಮ್ಮ ಮನೆಗೆ ಬರುವುದಾಗಿ ಹೇಳಿದರು. ನಾನಿನ್ನೂ ಫ್ರೆಶ್ ಅಪ್ ಆಗಬೇಕೆಂದು ಹೇಳಿ ನಮ್ಮನ್ನು ಬೀಳ್ಕೊಟ್ಟರು. ಕೆಳಗಿಳಿದು ಬರುವಷ್ಟರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವರನ್ನು ಕಾಣಲು ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಅಜಯಸಿಂಗ್ ಹಾಗೂ ಅವರ ಬೆಂಬಲಿಗರು ಇವರು ಉಳಿದುಕೊಂಡಿದ್ದ ಕೋಣೆಯೆಡೆಗೆ ಧಾವಿಸುತ್ತಿರುವುದು ಕಂಡು ಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here