ಶಹಾಪುರ : – ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಹತ್ತು ವರ್ಷ ಗತಿಸಿದರೂ ಇನ್ನೂ ಉದ್ಘಾಟನೆಗೊಳ್ಳದೆ ಹಾಗೂ ಒಂದು ಹನಿ ನೀರು ಕಾಣದೆ ಈ ಹಳ್ಳ ಹಿಡಿದಿರುವ ಯೋಜನೆ ತಾಲ್ಲೂಕಿನ ಸಗರ ಗ್ರಾಮದಲ್ಲಿ ಕಂಡು ಬಂದಿದೆ.
ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಮಾಡುತ್ತಿದೆ ಆದರೆ ಸಮರ್ಪಕವಾಗಿ ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸಾರ್ವಜನಿಕರು ಹಾಗೂ ಜನನಾಯಕರು ವಿಫಲರಾಗಿದ್ದಾರೆ ಎಂದು ಹೇಳಬಹುದು.ನಿರ್ಮಿಸಿ ಸುಮಾರು ವರ್ಷಗಳು ಗತಿಸಿದರೂ ಇದಕ್ಕೆ ಇನ್ನೂ ಒಂದು ಹನಿ ನೀರು ಕಂಡಿಲ್ಲ ಜೊತೆಗೆ ನೀರು ಸರಬರಾಜು ಮಾಡುವುದಕ್ಕೆ ಈ ಟ್ಯಾಂಕಿಗೆ ಬೋರ್ವೆಲ್ ಕೊರೆಸಿಲ್ಲ, ಪೈಪ್ಲೈನ್ ಕೂಡ ಮಾಡಿಲ್ಲ ಈ ರೀತಿಯಾಗಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರಕಾರದ ದುಡ್ಡು ಪೋಲಾಗಿದೆ.
ಈ ನೀರಿನ ಟ್ಯಾಂಕ್ ಅವೈಜ್ಞಾನಿಕತೆಯಿಂದ ಕೂಡಿದ್ದು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಹಾಗೆ ಹಾಳು ಬಿದ್ದು ಶಿಥಿಲ ಸ್ಥಿತಿಯಲ್ಲಿದೆ ಅಲ್ಲದೇ ಅಂಗನವಾಡಿಯ ಕಾಂಪೌಂಡಿನಲ್ಲಿ ಈ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ ಮುಂದೆ ಯಾವುದಾದರೂ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಜೆಡಿಎಸ್ ಯುವ ಮುಖಂಡ ದೇವೇಂದ್ರಪ್ಪ ಬಸ್ಸಾ ಆರೋಪಿಸಿದ್ದಾರೆ.