ಭಾಗ-11: ಯಡ್ರಾಮಿ : ಕವಡಿ ಹಳ್ಳದ ದೆವ್ವಗಳು

0
226

ನಾವು ಸಣ್ಣ ಚುಕ್ಕೋಳಿದ್ದಾಗಿಂದಲೂ ಕವಡಿ ಹಳ್ಳದ ದೆವ್ವಗಳೆಂದರೆ ಭಾಳ ಫೇಮಸ್. ಗೊರಗುಂಡಿಗಿಯ ಗೂಗೀಹಳ್ಳ, ಅಖಂಡ್ಹಳ್ಳಿಯ ಕೆಂಪ್ಹಳ್ಳ ಮತ್ತು ದೊಡ್ಡಳ್ಳಿ ತೋಟದ ಹುಣಸೇ ತೋಪಿನ ದೆವ್ವಗಳಿಗೂ ಕವಡೀ ಹಳ್ಳದ ದೆವ್ವಗಳಿಗೂ ಗಳಸ್ಯ ಗಂಠಸ್ಯ ಸಂಬಂಧ.

ಈ ದೆವ್ವಗಳ ಕತೆ ಕೇಳಲು ಜೋಡು ಗುಂಡಿಗೆ ಬೇಕು. ಹಸಿ ಹಸೀ ಬಾಣಂತೇರು, ಮುಟ್ಟಾದ ಹರೇದ ಹುಡುಗೇರಂದ್ರೇ ಈ ದೆವ್ವಗಳಿಗೆ ಹಂಡೆ ಹಾಲು ಕುಡಿದ ಖಂಡುಗ ಖುಷಿ. ಇವು ಸೂತಕ ಪ್ರೇಮಿ ದೆವ್ವಗಳು. ಈ ದೆವ್ವದ ಕತೆಗಳ ವಾಹಿನೆ ಇಲ್ಲಿನ ಹಿರೀಕರಿಂದ ಕೇಳಿ ತಿಳಿಯುವುದೇ ಕುತೂಹಲದ ಸಂಗತಿ.

Contact Your\'s Advertisement; 9902492681

ದೆವ್ವಗಳಿಗೂ ಗಂಡ ಹೆಂಡತಿ ಮಕ್ಕಳು ಸಂಸಾರ., ಮದುವೆ ಮುಂಜಿ, ಊಟ ತಿಂಡಿ ಎಲ್ಲಬೇಕಂತೆ. ಅವಕ್ಕೆ ಅಮವಾಸ್ಯೆಯೆಂದರೆ ವೀಕೆಂಡ್ ಪಾರ್ಟಿ ಇದ್ದಂಗೆ. ಹುಣಸೇ ಮರದ ಮೆಳೆಗಳೆಂದರೆ ಪ್ರಾಣ ಪ್ರೀತಿಯ ಸಂಜೀವಿನಿ ವನಗಳು. ಮೂಗಿನ ದಾರಿ ಹಿಡಿದು ಹಿಮ್ಮುಖದಲಿ ದೆವ್ವಗಳು ಸುಂಟರ ಗಾಳಿಯಾಗಿ ಎಗ್ಗಿಲ್ಲದೇ ಸುಳಿದಾಡುವುದೇ ಅವುಗಳ ಸಹಜ ನಡಿಗೆ. ಅವುಗಳ ಪಾದ ಮನುಷ್ಯರ ಪಾದಗಳ ಉಲ್ಟಾ ಸ್ವರೂಪದಲ್ಲಿರ್ತವೆ. ಅಂದರೆ ಬೆರಳುಗಳು ಪಾದದ ಹಿಂದಿರ್ತವೆ.

ಸತ್ತ ಬಾಣಂತಿಯ ಎದೆ, ಪೃಷ್ಠ ಪ್ರದೇಶದ ಖಂಡ, ಮೂಳೆ, ಚಕ್ಕಳವೆಂದರೆ ಅವಕ್ಕೆ ಹಬ್ಬದೂಟ. ಅದೆಲ್ಲ ತಿಂದುಂಡು ಹುಣಸೆ ಮರಗಳ ಜೋಕಾಲಿಯಲ್ಲಿ ತೂಗಿಕೊಂಡು ಜೋಂಪು ಹತ್ತಿ ಮಲಗುತ್ತವೆಯಂತೆ. ರಾತ್ರಿ ಹೊತ್ತು ಪರ ಊರುಗಳಿಂದ ಬರುವವರಿಗೆ ದಾರಿ ತಪ್ಪಿಸುವುದು, ಎಳೆಯ ಕುರಿ ಮರಿಯಾಗಿ ಅಡ್ಡಡ್ಡ ಅಡಗಾಲು ಹಾಕಿ ಎತ್ತಿಕೊಳ್ಳುವಂತೆ ಮಾಡಿ,  ಊರು ಹತ್ತಿರ ಬರುತ್ತಲೇ ಹೆಣ ಭಾರವಾಗಿ ನೆಲಕ್ಕೆ ಬೀಳಿಸುತ್ತಿದ್ದಂತೆ ಕುರಿ ಮರಿ ಮಂಗಮಾಯ..!!

ಸುಂದರ ಯುವತಿಯರು ಬಯಲುಕಡಿಗೆ ಬಂದಾಗಲೋ ಬೇರೆ ಸಂದರ್ಭಗಳಲ್ಲಿ ಜಪ್ಪಿಸಿ ಕುಂತು ಅವಳಿಗೆ ಬಡಕೊಂಡು ತಮ್ಮೆಲ್ಲ ಆಸೆಗಳನ್ನು ಈಡೇರಿಸಿಕೊಳ್ಳುವ ಮಾಯ್ಕಾರ ದೆವ್ವಗಳ ಚಂದ್ರಮಂಚದ ಶೃಂಗಾರ ಕತೆಗಳೇ ಭಯಾನಕ.

ಅವು ಬೇರೆ ಊರಿನ ದೆವ್ವ ಪರಿವಾರದ ಜತೆ ನೆಂಟಸ್ತನ ಬೆಳೆಸುತ್ತವೆ.. ಗೊಡ್ಡ ಮಾವಿನ ಗಿಡದ ಸುಪ್ರಸಿದ್ದ ದೆವ್ವಗಳು ಇಂತಹ ನೆಂಟಸ್ತನ ಮಾಡಿಸುವಲ್ಲಿ ನಿಪುಣ ದೆವ್ವಗಳು. ಇವುಗಳ ಮದುವೆ ಕಾರ್ಯಕ್ರಮದ ಸಂಭ್ರಮ ಅವರ್ಣನೀಯವಾದುದು. ಮದುವೆಗೆ ಆಯಿತವಾರ ಅಮವಾಸೆಯೇ ಅವಕ್ಕೆ ಪ್ರಶಸ್ತ ದಿನವಂತೆ.

ದೆವ್ವಗಳ ಮಂಗಳಕರ ಕಾರ್ಯಕ್ರಮಗಳಿಗೆ ಜಕಣಿಯರ ದಿವ್ಯ ಸಾನಿಧ್ಯ. ಮೆಡಿಕಲ್ ದುಕಾನ್ ಸಾತಣ್ಣನ ಖೂನಿಯಾದ ಮಾದಬ್ಹಳ್ಳದ ಜಕಣಿಯರು, ನಿಂಗಯ್ಯನ ಗದ್ದುಗೆಯ ಮೂರ್ಹಳ್ಳದ ಜಕಣಿಯರು ದೆವ್ವಗಳ ಮಂಗಲಸಭೆ, ಸಮಾರಂಭಗಳಿಗೆ ಖಾಯಂ ಆಹ್ವಾನಿತರು…. ಹೀಗೆ ದೆವ್ವಗಳ ದೆವ್ವದಂತಹ ಕತೆಗಳು ಕೇಳಲು ರೋಚಕಾತಿರೋಚಕ.

ನಾವು ಸಾಲಿ ಮುಗಿಸಿ ಯಾವತ್ತೂ ದೊಡ್ಡಳ್ಳಿ ತೋಟದ ಸಣ್ಣಹಾದಿಯ ದಾರಿಗುಂಟ ಹೋಗುತ್ತಿರಲಿಲ್ಲ. ಹಾಗೆ ನೋಡಿದರೆ ಸಣ್ಣಹಾದಿ ನಮ್ಮೂರಿಗೆ ಭಾಳ ಸನಿಹ. ಕವಡೆ ಹಳ್ಳದ ದೆವ್ವಗಳ ದೆಸೆಯಿಂದಾಗಿ ನಾವೆಂದೂ ಆ ಹಾದಿಗುಂಟ ಹೋಗುತ್ತಿರಲಿಲ್ಲ. ಶಿರಸಪ್ಪನ ಬೆಂಚಿ ಕೂಗಳತೆ ಕೆಳಗಿಳಿದರೆ, ಕಾರೀಕಂಟಿ, ಬಾರೀಕಂಟಿ ಪೊದೆಗಳ ಸರಹದ್ದೇ ಕವಡಿ ಹಳ್ಳದ ಸಣ್ಣ ಹಾದಿ.

ಹೀಗೆ ನಮ್ಮ ನಿತ್ಯದ ದೀಡು ಹರದಾರಿ ದೂರದ ನಮ್ಮೂರ ಹಾದಿಗುಂಟ ಹೋಗುವಾಗಲೂ ಕವಡೆ ಹಳ್ಳದ ದೆವ್ವಗಳ ಪ್ರಭಾವಳಿಗಳು ಮುದ್ದಾಂ ನಮ್ಮೆಲ್ಲ ಇಂದ್ರಿಯಗಳನ್ನು ಗಾಢವಾಗಿ ಬಿಗಿದಪ್ಪುತ್ತಿದ್ದವು.

ದೆವ್ವಗಳ ಭಯ ನಿವಾರಣೆಗೆ ಮಾಳಿಗಡ್ಡಿ ಹತ್ತಿರದ ಯಲ್ಲಮ್ಮ ಎಲ್ಲರ ಪಾಲಿಗೆ ನಿರ್ಭಯ ದೇವತೆ. ಆ ಎಲ್ಲ ದೆವ್ವ, ಪಿಶಾಚಿಗಳ ಕಾಡಾಟ ನೀಗಿಸಿಕೊಳ್ಳಲು ಯಲ್ಲಮ್ಮನಿಗೆ ಎರಡು ಮತ್ತು ನಾಲ್ಕು ಕಾಲು ಪ್ರಾಣಿಗಳ ಬಲಿ. ಯಾವುದಕ್ಕು ಮಣಿಯದಿದ್ದರೇ ದೆವ್ವ ಬಿಡಿಸುವ ಕೆಲ ಸ್ಪೆಷಲಿಸ್ಟ್ ಗಳು ಆಗ ಇದ್ದರು.

– ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here