ಕಲಬುರಗಿ: ಕೋವಿಡ್-19 ತಪಾಸಣೆಯ ವೈದ್ಯಕೀಯ ವರದಿ ಸ್ಯಾಂಪಲ್ ಪಡೆದ 24 ಗಂಟೆಯಲ್ಲಿ ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಮಂಗಳವಾರ ಇಲ್ಲಿನ ಕೆ.ಕೆ.ಆರ್.ಡಿ.ಬಿ. ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಮತ್ತು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಮಂಡಳಿಯಿಂದ ನೀಡಲಾದ ಅನುದಾನದಲ್ಲಿ ತೆಗೆದುಕೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಸ್ಯಾಂಪಲ್ ನೀಡಿದ ವ್ಯಕ್ತಿಗೆ ತ್ವರಿತಗತಿಯಲ್ಲಿ ವೈದ್ಯಕೀಯ ವರದಿ ನೀಡುವತ್ತ ಹೆಚ್ಚಿನ ಗಮನಹರಿಸಬೇಕಾಗಿದೆ. ಸ್ಯಾಂಪಲ್ ಪಡೆದು ವಾರಗಟ್ಟಲೆಯಾದರು ವರದಿ ಬಾರದಿದ್ದಲ್ಲಿ ಜನರು ಅನಗತ್ಯ ಗೊಂದಲಕ್ಕೆ ಈಡಾಗುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಸ್ಯಾಂಪಲ್ಸ್ ಹೆಚ್ಚು ಸಂಗ್ರಹಗೊಂಡಲ್ಲಿ ಬೆಂಗಳೂರು ಅಥವಾ ಪುಣೆಗೆ ಕಳುಹಿಸಿ 24 ಗಂಟೆಯಲ್ಲಿ ವೈದ್ಯಕೀಯ ವರದಿಯನ್ನು ಸಂಬಂಧಿಸಿದ ವ್ಯಕ್ತಿಗಳಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್-19ನಿಂದ ಮೃತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ದತ್ತಾತ್ರೇಯ ಪಾಟೀಲ ರೇವೂರ ಅವರು ಜನರಲ್ಲಿ ಕೊರೋನಾ ರೋಗಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ವಿಶ್ವಾಸ ಬರಲು ವಿನುತನ ಪ್ರಯತ್ನಗಳು ಆಗಬೇಕಿದೆ. ಇದಲ್ಲದೆ ಮರಣ ಪ್ರಮಾಣ ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕಲುಟುಂಬ ಕಲ್ಯಾಣಾಧಿಕಾರಿಗಳು ಜಿಮ್ಸ್, ಇ.ಎಸ್.ಐ.ಸಿ. ಸೇರಿದಂತೆ ಎಲ್ಲ ಕೋವಿಡ್-19 ಆಸ್ಪತ್ರೆ ಮತ್ತು ಐ.ಎಂ.ಎ. ಪ್ರತಿನಿಧಿಗಳೊಂದಿಗೆ ಸಭೆ ಕರೆದು ಸಮನ್ವಯತೆ ಸಾಧಿಸಿ ನಿಯಂತ್ರಣ ಕ್ರಮದ ಸೂತ್ರ ರೂಪಿಸುವಂತೆ ಸಲಹೆ ನೀಡಿದರು.
ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೊರೋನಾ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಅಂಬುಲೆನ್ಸ್ ಸೇವೆ, ಹಾಸಿಗೆ ಲಭ್ಯತೆ, ಊಟೋಪಚಾರ ಸರಿಯಾಗಿ ತಲುಪುತ್ತಿಲ್ಲ ಎಂಬ ಆರೋಪ ಬರುತ್ತಿದ್ದು, ಮುಂದಿನ ದಿನದಲ್ಲಿ ವೈದ್ಯೋಪಚಾರ ಗುಣಮಟ್ಟವನ್ನು ಹೆಚ್ಚಿಸಬೇಕು. ಕನಿಷ್ಟ ಅರ್ಧ ಗಂಟೆಗೊಮ್ಮೆ ವೈದ್ಯ ಅಥವಾ ನರ್ಸ್ ಸಿಬ್ಬಂದಿ ರೋಗಿಗೆ ವೈಯಕ್ತಿಕವಾಗಿ ವಿಚಾರಿಸಿದಲ್ಲಿ ರೋಗಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಬೇಗ ಗುಣಮುಖನಾಗಲು ಸಾಧ್ಯ. ಜಿಮ್ಸ್‍ಗೆ ಬರುವ ಯಾವುದೇ ರೋಗಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಯಲ್ಲಿ ರೋಗಿ ಪ್ರವೇಶ ಪಡೆಯಲು ಅಗತ್ಯ ಕ್ರಮ ವಹಿಸಬೇಕು. ಕೋವಿಡ್-19 ನಿಯಂತ್ರಣಕ್ಕೆ ಮಂಡಳಿಯಿಂದ ನೀಡಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ದತ್ತಾತ್ರೇಯ ಪಾಟೀಲ ತಿಳಿಸಿದರು.
ಮಂಡಳಿ ಅನುದಾನ ಸದ್ಬಳಕೆ ಮಾಡಿಕೊಳ್ಳಿ: ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ನೀರು ಪೂರೈಸಲೆಂದೇ 2.77 ಕೋಟಿ ರೂ. ಮೊತ್ತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮೂಲಕ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲು ಕಳೆದ ಮಾರ್ಚ್ 2 ರಂದೇ ಅನುಮೋದನೆ ನೀಡಿದರು ಇದೂವರೆಗೆ ಕಾಮಗಾರಿ ಆರಂಭಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಕೂಡಲೆ ಕಾಮಗಾರಿ ಕೈಗೆತ್ತಿಕೊಲ್ಳುವಂತೆ ಮತ್ತು ಮಂಡಳಿ ಅನುದಾನ ಸದುಪಯೋಗ ಮಾಡಿಕೊಳ್ಳುವಂತೆ ಜಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಇದಲ್ಲದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಎಸ್.ಎನ್.ಸಿ.ಯು. ಕಟ್ಟಡ, ಸ್ಟರಿಲೈಜೇಷನ್ ಯೂನಿಟ್ ಕಟ್ಟಡ ಕಾಮಗಾರಿಗಳ ಬಗ್ಗೆಯೂ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರತಿಯೊಂದು ಕಾಮಗಾರಿಗೆ ಮಂಡಳಿಯಿಂದ ಅನುದಾನ ಪಡೆಯಲು ಮುಂದೆ ಬರದೆ ತಮ್ಮ ಮಾತೃ ಇಲಾಖೆಯಿಂದ ದೊರೆಯುವ ಅನುದಾನ ಪಡೆದು ಹೆಚ್ಚುವರಿ ಬೇಕಾದಲ್ಲಿ ಮಂಡಳಿಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಮಾತನಾಡಿ ಜಿಮ್ಸ್ ಕೋವಿಡ್-19 ಆಸ್ಪತ್ರೆ ಮತ್ತು ಐಸೋಲೇಷನ್ ವಾರ್ಡ್‍ನಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಊಟ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ನೆಲ ಮಹಡಿಯಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಇದಕ್ಕಾಗಿ ಎರಡು ಹಾಸಿಗೆಗಳನ್ನು ವೆಂಟಿಲೇಟರ್ ಸಮೇತ ಇಡಲಾಗಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ 2 ಅಂಬುಲೆನ್ಸ್ ವಾಹನಗಳು ಸೇವೆಗೆ ಲಭ್ಯವಿರುತ್ತವೆ. ಪ್ರಯೋಗಾಲಯಕ್ಕೆ ರೀ-ಏಜೆಂಟ್ ಸೇರಿದಂತೆ ಬೇಕಾದ ಎಲ್ಲಾ ಪೂರಕ ಮೆಡಿಸಿನ್, ಉಪಕರಣಗಳು ಲಭ್ಯವಿದ್ದು, ಯಾವುದೇ ತೊಂದರೆಯಿಲ್ಲ. ಕೊರೋನಾ ಸೋಂಕಿತರು ಕೋವಿಡ್-19 ಲಕ್ಷಣ ಕಂಡುಬಂದಲ್ಲಿ ಕೂಡಲೆ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯದೇ ಕೊನೆ ಕ್ಷಣದಲ್ಲಿ ದಾಖಲಾಗುತ್ತಿರುವುದೇ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಡಿ.ಹೆಚ್.ಓ. ಡಾ.ರಾಜಶೇಖರ್ ಮಾಲಿ ಮಾತನಾಡಿ ಜಿಲ್ಲೆಯಲ್ಲಿ ದೀರ್ಘ ಕಾಯಿಲೆ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರೆ ಕೋವಿಡ್-19ನಿಂದ ನಿಧನ ಹೊಂದುತ್ತಿರುವುದರಿಂದ ಇದನ್ನು ತಡೆಗಟ್ಟಲು ಮಧುಮೇಹ, ರಕ್ತದೊತ್ತಡವಿರುವ ವ್ಯಕ್ತಿಗಳನ್ನು ಮನೆ-ಮನೆ ತಪಾಸಣೆ ಮೂಲಕ ಪತ್ತೆ ಹಚ್ಚಿದ್ದು, ಇವರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಕಲಬುರಗಿ ನಗರದಲ್ಲಿ ಈಗಾಗಲೇ ಆರಂಭಿಸಲಾಗಿದೆ ಎಂದರು.
ಸಭೆಯಲ್ಲಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಡಿ.ಸಿ.ಪಿ. ಕಿಶೋರ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ, ಜಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಧನಂಜಯ ಕುರಿ, ಪ್ರಹ್ಲಾದ ಪೂಜಾರಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್, ಡಾ.ಸಂದೀಪ್, ಸಹಾಯಕ ಆಡಳಿತಾಧಿಕಾರಿ ಪಾರ್ವತಿ ಸೇರಿದಂತೆ ಇ.ಎಸ್.ಐ.ಸಿ. ಮತ್ತು ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಇದ್ದರು.