ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ವಾಪಸ್ ಪಡೆಯಲು AIDYOಪ್ರತಿಭಟನೆ

0
59

ಕಲಬುರಗಿ: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣ ಕೈ ಬಿಡಬೇಕೆಂದು ಆಗ್ರಹಿಸಿ AIDYO – AIMSS ಸಂಘಟನೆ  ಗಳಿಂದ  ಮಿನಿ ವಿಧಾನಸೌಧ  ಎದುರುಗಡೆ ಪ್ರತಿಭಟನಾ ಪ್ರದರ್ಶನ  ನಡೆಸಿ ನಂತರ ಜಿಲ್ಲಾಧಿಕಾರಿ ಗಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ನಿಂಗಣ್ಣ ಜಂಬಗಿ ಮಾತನಾಡಿ, ಖ್ಯಾತ ನ್ಯಾಯವಾದಿಗಳು ಹಾಗೂ ಹಿರಿಯ ಹೋರಾಟಗಾರರಾದ ಪ್ರಶಾಂತ ಭೂಷಣರವರ ಮೇಲಿನ ನ್ಯಾಯಾಂಗ ನಿಂದನೆಯ ಪ್ರಕರಣವು ದುರುದ್ದೇಶಪೂರಿತವಾಗಿದ್ದು, ನ್ಯಾಯವಾದಿ ಮಾಡಿದ ಎರಡು ಸಾಲುಗಳ ಟ್ವೀಟ್ ನಿಂದ ತನ್ನ ಘನತೆ ಮತ್ತು ಗೌರವಕ್ಕೆ ಬೆದರಿಕೆ ಉಂಟಾಗಿದೆ ಎಂದು ಭಾವಿಸುವ ಮಟ್ಟಿಗೆ ಭಾರತದ ಸರ್ವೋಚ್ಚ ನ್ಯಾಯಾಲಯ ತನ್ನದೇ ಸ್ವಂತ ಸಮಗ್ರತೆ ಮತ್ತು ನೈತಿಕತೆಯ ಮೇಲೆ ವಿಶ್ವಾಸ ಕಳೆದುಕೊಂಡಿದೆ.? ಪ್ರಜೆಗಳ ಜನತಾಂತ್ರಿಕ ಹಕ್ಕುಗಳಿಗೆ ಮತ್ತು ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ತುರ್ತು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ, ಈ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡು ಮೂವರು ನ್ಯಾಯಾಧೀಶರ ಪೀಠ ನೀಡಿದ ತೀರ್ಪು ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದರು.

Contact Your\'s Advertisement; 9902492681

ವಾಸ್ತವದಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಭ್ರಷ್ಟಾಚಾರದ ಆರೋಪಗಳು ಹೊಸದೇನಲ್ಲ. ಪ್ರಶಾಂತ್ ಭೂಷಣ್ ಅವರು ಒಂಬತ್ತು ವರ್ಷಗಳ ಹಿಂದೆಯೇ ಇಂತಹ ಆರೋಪವನ್ನು ಮಾಡಿದ್ದರು ಮತ್ತು ನ್ಯಾಯಾಲಯವು ಇದರಲ್ಲಿ ಯಾವುದೇ ದುರುದ್ದೇಶವನ್ನು ಕಂಡಿರಲಿಲ್ಲ. ಹಾಗಿದ್ದರೆ ಈಗಲೇ ಏಕೆ? ಈ ನಿರ್ಭೀತ, ಪ್ರಾಮಾಣಿಕ ನ್ಯಾಯವಾದಿ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಪ್ರತಿಯೊಂದು ಅನ್ಯಾಯದ ಘಟನೆಯ ವಿರುದ್ಧ ದನಿ ಎತ್ತುತ್ತಿದ್ದಾರೆ ಎಂಬ ಕಾರಣದಿಂದಲೇ? ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಕೆಡವುತ್ತಿರುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಫ್ಯಾಸಿಸ್ಟ್ ಮಾದರಿಯಲ್ಲಿ ಕತ್ತು ಹಿಸುಕುತ್ತಿರುವ ಈ ವಾತಾವರಣದಲ್ಲಿ, ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಸರ್ವಾಧಿಕಾರಿ ಶಕ್ತಿಗಳಿಗೆ ಪುಷ್ಟಿ ನೀಡಿದಂತಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತೀದಿಯಾ ಎಂಬ ಅನುಮಾನ ಕಾಡುತ್ತಿದೆ ಎಂದರು.

ನ್ಯಾಯವಾದಿ ಪ್ರಶಾಂತ ಭೂಷಣ್ ನ್ಯಾಯಾಂಗ ನಿಂದನೆಯ ತೀರ್ಪನ್ನು ವಾಪಸ್ ಪಡೆಯಬೇಕು ಮತ್ತು ಅವರಿಗೆ ಯಾವುದೇ ಶಿಕ್ಷೆ ನೀಡಬಾರದೆಂದು ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಹೆಚ್, ಗೌರಮ್ಮ ಸಿ.ಕೆ. ರಾಜ್ಯ ನಾಯಕರಾದ ಮಹೇಶ ನಾಡಗೌಡ ,ಸಂಘಟನಾಕಾರರಾದ ಸಿದ್ಧು ಚೌಧರಿ, ಶರಣು ವಿ.ಕೆ., ಭೀಮಾಶಂಕರ ಪಾಣೇಗಾಂವ, ಶಿವಕುಮಾರ ಇ.ಕೆ., ಈಶ್ವರ ಕೆ., ರಾಧಾ ಗೌಡ, ತಿಮ್ಮಯ್ಯ ಮಾನೆ, ನೀಲಕಂಠ ಎಮ್. ಹುಲಿ, ವಿಶ್ವನಾಥ ಸಿಂಘೆ, ಪ್ರವೀಣ ಬಣಮಿಕರ, ಅಭಿನಂದನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here