ಕಲಬುರಗಿ: ಪ್ರಸ್ತುತ ಲೋಕಸಭಾ ಚುನಾವಣೆ ದೇಶದ ಮಟ್ಟಿಗೆ ಬಹಳ ಪ್ರಮುಖ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ ಇದನ್ನು ಜನರು ಅರಿತುಕೊಂಡು ಮತ ಚಲಾಯಿಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೇಸ್ ನಾಯಕ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದರು.
ಅವರು ಅಫಜಲಪೂರ ತಾಲೂಕಿನ ಗೊಬ್ಬೂರು ( ಬಿ) ಗ್ರಾಮದಲ್ಲಿ ಬ್ಲಾಕ್ ಕಾಂಗ್ರೇಸ್ ಕಮಿಟಿ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರಚಾರಸಭೆನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸಮಗ್ರತೆ ಹಾಗೂ ಪ್ರಜೆಗಳಿಗೆ ಸಮಾನ ಹಕ್ಕು ದೊರಕಿಸಿಕೊಡುವ ಉದ್ದೇಶದಿಂದ ಸಂವಿಧಾನವನ್ನು ರಚಿಸಲಾಯಿತು. ಆದರೆ, ಕೆಲ ಜನರು ಈ ದೇಶಕ್ಕೆ ತಾವೇ ಸ್ವಾತಂತ್ರ್ಯ ತಂದುಕೊಟ್ಟವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೇಸ್ ನ ನೂರಾರು ಜನ ತ್ಯಾಗ ಮಾಡಿದ್ದಾರೆ. ಬಿಜೆಪಿಯಲ್ಲಿ ಯಾರಿದ್ದಾರೆ? ದೇಶದ ಅಭಿವೃದ್ದಿಯಲ್ಲಿ ಕಾಂಗ್ರೇಸ್ ಪಾಲು ದೊಡ್ಡದಿದೆ ಬಿಜೆಪಿ ಪಕ್ಷದ್ದು ಏನಿದೆ ಎಂದು ಪ್ರಶ್ನೆ ಮಾಡಿದ ಖರ್ಗೆ ಅವರು ನಾವು ತಂದ ಯೋಜನೆಗಳಿಗೆ ಸುಣ್ಣಬಣ್ಣ ಹಚ್ಚಿದಷ್ಟೆ ಮೋದಿ ಮಾಡಿದ ಕೆಲಸ ಎಂದು ಟೀಕಿಸಿದರು.
” ನಾನು ಇಲ್ಲಿಂದ ಲೋಕಸಭೆಗೆ ಅರಿಸಿ ಹೋದ ಮೇಲೆ ಸಂಸತ್ ನಲ್ಲಿ ಕಲಬುರಗಿಯ ಘನತೆಯನ್ನು ಎತ್ತಿ ಹಿಡಿದೆ. ಸೋಲಾಪುರದಿಂದ ಅಫಜಲಪೂರ ಮೂಲಕ ಬೆಂಗಳೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಅಫಜಲಪೂರ ತಾಲೂಕಿನ ಗ್ರಾಮಾಂತರ ಭಾಗದ ರಸ್ತೆಗಳು, ಬ್ಯಾರೇಜ್ ನಿರ್ಮಾಣ ಮಾಡಿದ್ದೇನೆ. ಇದಕ್ಕೆ ನನ್ನನ್ನು ಸೋಲಿಸುತ್ತೀರಾ?” ಎಂದು ಪ್ರಶ್ನಿಸಿದರು.
ಸಚಿವನಾಗಿದ್ದಾಗ ಹಾಗೂ ಸಂಸದನಾಗಿ ನಾನು ಮಾಡಿದ ಅಭಿವೃದ್ದಿ ಕೆಲಸದ ಲೆಕ್ಕ ಕೊಡುತ್ತೇನೆ. ಆದರೆ, ಗಲ್ಲಿಯಿಂದ ದಿಲ್ಲಿಯವರೆಗೆ ನನ್ನನ್ನು ಸೋಲಿಸಲು ಓಡಾಡುವವರು ತಮ್ಮ ಅಭಿವೃದ್ದಿ ಲೆಕ್ಕ ಕೊಡಿ. ಖರ್ಗೆಯನ್ನು ಸೋಲಿಸಬೇಕು ಎಂದು ಮೀಸೆ ಮೇಲೆ ಕೈಹಾಕಿಕೊಂಡು ತಿರುಗುವವರು ಕೇಳುತ್ತಿದ್ದೇನೆ ನನ್ನನ್ನು ಸೋಲಿಸಲು ನಾನು ಯಾರದಾದರೂ ಗಂಟು ತಿಂದೆದ್ದೇನಾ? ಎಂದು ಖಾರವಾಗಿ ಪ್ರಶ್ನಿಸಿದರು.
ಇತ್ತೀಚಿನವರೆಗೆ ನನ್ನೊಂದಿಗೆ ಇದ್ದವರು ಇವತ್ತು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ವಿರುದ್ದ ಚುನಾವಣೆಯಲ್ಲಿ ನಿಂತ ವ್ಯಕ್ತಿಯನ್ನು ನನ್ನೊಂದಿಗೆ ಹೋಲಿಸಿ ನೋಡಿ. ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ ಹಾಗಿದ್ದರೂ ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ. ” ಖರ್ಗೆ ಛಲೋ ಇದ್ದಾರ, ಮಗ ಸರಿಯಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಜಾಗದಲ್ಲಿ ಚುನಾವಣೆಗೆ ನಿಲ್ಲಲು ವ್ಯಕ್ತಿಗಳು ಇಲ್ಲದಿರುವಾಗ ಪ್ರಿಯಾಂಕ್ ನನ್ನು ನಿಲ್ಲಿಸಿದವರೆ ಇಂದು ಅವರ ವಿರುದ್ದ ಮಾತನಾಡುತ್ತಿದ್ದಾರೆ. ಆದರೆ ಅವರಿಗೆ ಏನೂ ಆಗಿಲ್ಲ ಗೆಲ್ಲುತ್ತಾ ನಡೆದಿದ್ದಾರೆ. ಅವರನ್ನ ವಿರೋಧಿಸಿದರು ಇಂದು ಸೋತು ಸುಣ್ಣವಾಗಿದ್ದಾರೆ” ಎಂದು ಕುಟುಕಿದರು.
ಮೋದಿ ಜನವಿರೋಧಿ ನೀತಿ ಹಾಗೂ ಸರಕಾರವನ್ನು ವಿರೋಧಿಸಿದ್ದೇವೆ. ಪಾಕಿಸ್ತಾನ, ಚೀನಾ, ಜಪಾನ್ ಸೇರಿದಂತೆ ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ ಆದರೆ ಅಲ್ಲಿ ನಡೆದ ಮಾತುಕತೆಗಳ ವಿವರ ಸಂಸತ್ತಿನಲ್ಲಿ ಮೋದಿ ಹೇಳಿಲ್ಲ ಎಂದು ದೂರಿದ ಖರ್ಗೆ ಅವರು ಕಾಂಗ್ರೇಸ್ ಪಕ್ಷದಿಂದ ಮಾತ್ರ ಜನಪರ ಆಡಳಿತ ಸಾಧ್ಯ ಹಾಗಾಗಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿರುವ ನನಗೆ ಮತ್ತೊಮ್ಮೆ ಗೆಲ್ಲಿಸಿ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ. ” ನಿಮ್ಮ ಆಶೀರ್ವಾದ ಇರುವವರಿಗೆ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಸೋಲಿಸುತ್ತೇವೆ ಎನ್ನುತ್ತಿರುವವರು ಮೊದಲು ತಾವು ಗೆಲ್ಲಲ್ಲಿ” ಎಂದು ಸವಾಲು ಹಾಕಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ರಾಜ್ಯ ಸಭಾ ಸಮಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ಮೋದಿ ನೀತಿಗಳು ದೇಶಕ್ಕೆ ಮಾರಕ. ಅದಕ್ಕಾಗಿ ಮೋದಿಯನ್ನು ಸೋಲಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆ ಯನ್ನು ರಕ್ಷಿಸಬೇಕು ಎಂದ ಕರೆ ನೀಡಿದರು.
ಶಾಸಕ ಎಂ. ವೈ. ಪಾಟೀಲ್ ಮಾತನಾಡಿ ಕ್ಷೇತ್ರದ ಅಭಿವೃದ್ದಿಗೆ ಸಚಿವ ಪ್ರಿಯಾಂಕ್ ಖರ್ಗೆ ಕೊಡುಗೆ ಅಪಾರ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೇರಿದಂತೆ ಇತರರು ಇದ್ದರು.