ರೈಲು ಖಾಸಗೀಕರಣ: ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ

0
57
ವಾಡಿ: ರೈಲ್ವೆ ಖಾಸಗೀಕರಣ ವಿರೋಧಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ವಾಡಿ ರೈಲು ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು. ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ನೇತೃತ್ವ ವಹಿಸಿದ್ದರು.

ವಾಡಿ: ಖಾಸಗೀಕರಣದ ರತ್ನಗಂಬಳಿ ಹಾಸಿ ಬಂಡವಾಳಶಾಹಿಗಳ ಪಾದಸೇವೆಗೆ ನಿಂತಿರುವ ಕೇಂದ್ರ ಬಿಜೆಪಿ ಸರಕಾರ, ಲಾಭದಾಯಕ ಭಾರತೀಯ ರೈಲು ಮಾರಾಟ ಮಾಡಲು ಹೊರಟಿದೆ ಎಂದು ಆರೋಪಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಗುರುವಾರ ವಾಡಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ರೈಲು ನಿಲ್ದಾಣದ ಎದುರು ರೈಲು ಮಾರಾಟ ಒಪ್ಪೋದಿಲ್ಲ, ರೈಲ್ವೆ ಖಾಸಗೀಕರಣಕ್ಕೆ ಧಿಕ್ಕಾರ, ರೈಲ್ವೆಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಬೇಕು ಎಂಬಿತ್ಯಾದಿ ಬರಹಗಳುಳ್ಳ ಬಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರೈಲ್ವೆ ಖಾಸಗೀಕರಣದಿಂದ ಹಿಂದೆ ಸರಿಯಬೇಕು ಅಥವ ಉಗ್ರ ಹೋರಾಟ ಎದುರಿಸಲು ಸಿದ್ಧರಾಗಬೇಕು ಎಂದು ಗುಡುಗಿದರು.

Contact Your\'s Advertisement; 9902492681

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ರೈಲ್ವೆ ಖಾಸಗೀಕರಣ ಮಾಡಲು ಕಾನೂನು ತಿದ್ದುಪಡಿಗೆ ಮುಂದಾಗಿರುವ ಬಿಜೆಪಿ ಸರಕಾರ, ಲಕ್ಷಾಂತರ ಕಾರ್ಮಿಕರನ್ನು ಬೀದಿಗೆ ತಳ್ಳಲು ಹೊರಟಿದೆ. ರೈಲುಗಳು ಮತ್ತು ರೈಲು ನಿಲ್ದಾಣಗಳನ್ನು ವಿವಿಧ ಬಂಡವಾಳಶಾಹಿ ಶೋಷಕರಿಗೆ ಒತ್ತೆಯಿಡಲು ಎಲ್ಲಾ ರೀತಿಯಿಂದಲು ಸಿದ್ಧತೆ ಮಾಡಿಕೊಂಡಿರುವ ಮೋದಿ ಸರಕಾರ, ಕೋವಿಡ್ ಹೆಸರಿನಲ್ಲಿ ಹೇರಲಾದ ಲಾಕ್‌ಡೌನ್ ಪರಸ್ಥಿತಿಯನ್ನು ರಾಜಕೀಯವಾಗಿ ಸಂಪೂರ್ಣ ದುರುಪಯೋಗಪಡಿಸಿಕೊಳ್ಳುತ್ತಿದೆ. ಇಡೀ ದೇಶದ ಆಡಳಿತವನ್ನು ದೊಡ್ಡ ದೊಡ್ಡ ಉದ್ಯಮಿಪತಿಗಳ ಉಡಿ ತುಂಬಲು ತುದಿಗಾಲಮೇಲೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಸ್ತಿತ್ವದಲ್ಲಿರುವ ೧೦೯ ರೈಲು ಮಾರ್ಗಗಳಲ್ಲಿ ೧೫೧ ರೈಲುಗಳನ್ನು ಖಾಸಗಿಯವರಿಗೆ ಒಪ್ಪಿಸುವ, ರೈಲ್ವೆಯ ಸ್ವತ್ತುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ, ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳ ಕಾರ್ಪೊರೇಟೀಕರಣ ಮಾಡುವ ಮತ್ತು ರೈಲ್ವೆ ಕಾರ್ಮಿಕರ ಸೇವಾ ಅವಧಿ ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸುತ್ತಿರುವ ನೀತಿಗಳು ದೇಶದ ಸ್ವಾವಲಂಬಿ ಆರ್ಥಿಕತೆಯನ್ನು ದುರ್ಬಲಗೊಳಿಸಲಿವೆ. ಕೇಂದ್ರ ಸರ್ಕಾರದ ಈ ಕ್ರಮವು ರೈಲ್ವೇಯ ೧೨ ಲಕ್ಷ ಖಾಯಂ ಉದ್ಯೋಗಿಗಳು, ಲಕ್ಷಾಂತರ ಗುತ್ತಿಗೆ ಕಾರ್ಮಿಕರು ಮತ್ತು ಜೀವನಾಂಶಕ್ಕಾಗಿ ರೈಲ್ವೆ ಮೇಲೆ ಅವಲಂಬಿತವಾಗಿರುವ ಹಲವಾರು ಸಣ್ಣ ವ್ಯಾಪಾರಿಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ ವೀರಭದ್ರಪ್ಪ, ಕೂಡಲೇ ರೈಲು ಖಾಸಗೀಕರಣ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ ಮುಖಂಡರಾದ ಗುಂಡಣ್ಣ ಕುಂಬಾರ, ಶರಣು ಹೇರೂರ, ಗೌತಮ ಪರತೂರಕರ, ಮಲ್ಲಿನಾಥ ಹುಂಡೇಕಲ್, ವಿಠ್ಠಲ ರಾಠೋಡ, ರಾಜು ಒಡೆಯರ್, ಮಲ್ಲಿಕಾರ್ಜುನ ಗಂದಿ, ಮಲ್ಲಣ್ಣ ದಂಡಬಾ, ಅವಿನಾಶ ಒಡೆಯರ್, ಗೋವಿಂದ ಯಳವಾರ, ದತ್ತು ಹುಡೇಕರ, ಸಾಬು ಯಾಧವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈಲು ನಿಲ್ದಾಣ ವ್ಯವಸ್ಥಾಪಕ ಜೆ.ಎನ್.ರೆಡ್ಡಿ ಸ್ಥಳಕ್ಕಾಗಮಿಸಿ ಮನವಿಪತ್ರ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here