ಧಮ್ಮ ಪರಿವರ್ತನ ಮಾಸಾಚರಣೆ: ಮಾನಸಿಕ ಗುಲಾಮಗಿರಿಯೇ ದಲಿತರ ಶತ್ರು: ಬುದ್ಧರತ್ನ

0
65

ವಾಡಿ: ಮಾನಸಿಕ ಹಾಗೂ ದೈಹಿಕ ಗುಲಾಮಗಿರಿ ಎಂಬ ಆಂತರಿಕ ಶತ್ರುವಿನಿಂದ ದಲಿತರು ಮೊದಲು ಮುಕ್ತರಾಗಬೇಕು ಎಂದು ಬೌದ್ಧ ಗುರು ಬುದ್ಧರತ್ನ ಭಂತೇಜಿ ಹೇಳಿದರು.

ಧಮ್ಮ ಪರಿವರ್ತನ ಮಾಸಾಚರಣೆ ನಿಮಿತ್ತ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ವತಿಯಿಂದ ಏರ್ಪಡಿಸಲಾದ ಮನೆ ಮನೆಗೆ ಧಮ್ಮ ದೀಪ ಮೂವತ್ತು ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ಧಮ್ಮೋಪದೇಶ ನೀಡಿ ಅವರು ಮಾತನಾಡಿದರು. ಬಾಬಾಸಾಹೇಬರ ಪ್ರಬುಧ್ಧ ಭಾರತ ನಿರ್ಮಾಣ ಕನಸು ಹೊತ್ತು ಸಾಗಲು ದಲಿತರು ಕಂಕಣಬದ್ಧರಾಗಬೇಕು. ಪಂಚಶೀಲ, ಅಷ್ಟಾಂಗ ಮಾರ್ಗ ತತ್ವಗಳು ಮತ್ತು ಆರ್ಯ ಸತ್ಯಗಳು ಜೀವನದಲ್ಲಿ ಪಾಲನೆ ಮಾಡಬೇಕು. ಬುದ್ಧನನ್ನು ಅಪ್ಪಿಕೊಳ್ಳುವುದರಿಂದ ಮಾತ್ರ ಮೌಢ್ಯ ಮುಕ್ತ ಭಾರತ ಕಟ್ಟಲು ಸಾಧ್ಯವಾಗುತ್ತದೆ.

Contact Your\'s Advertisement; 9902492681

ಅಂಬೇಡ್ಕರರ ಶೀಲ, ಸಮಾದಿ ಪ್ರಜ್ಞೆಯೇ ನಮಗೆ ಆಧಾರವಾಗಿದ್ದು, ಬುದ್ಧನ ಮೈತ್ರಿ, ಧ್ಯಾನ ಬೋಧನೆಯೇ ನಮ್ಮ ಪರಿವರ್ತನೆಗೆ ಮಾರ್ಗವಾಗಿದೆ. ವಿಶ್ವಜ್ಞಾನಿ ಎಂದು ಕರೆಯಿಸಿಕೊಂಡಿರುವ ಅಂಬೇಡ್ಕರರು ಬುದ್ಧರಿಗೆ ಶರಣಾಗಿದ್ದಾರೆ ಎಂದರೆ ಗೌತಮ ಬುದ್ಧ ಎಷ್ಟು ಜ್ಞಾನಿಯಾಗಿರಬಹುದು ಎಂಬುದನ್ನು ಉಹಿಸಲು ಅಸಾಧ್ಯವಿಲ್ಲ ಎಂದರು.
ಬೌದ್ಧ ಧಮ್ಮ ಎಂಬುದು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ಪ್ರತಿಯೊಬ್ಬರ ಮನೆ ಮನಗಳಿಗೂ ಧಮ್ಮ ಬೆಳಕು ಪಸರಿಸಬೇಕು. ಜಾಗೃತಿ ಮತ್ತು ಪ್ರಜ್ಞೆ ಕೊರತೆಯಿಂದ ಆಚಾರ ಮತ್ತು ವಿಚಾರ ಬೇರೆ ಬೇರೆಯಾಗುತ್ತಿದೆ.

ಬೌದ್ಧ ಚಿಂತನೆಗೆ ಆಕರ್ಷಿತರಾಗುತ್ತಿರುವವರು ಮತ್ತೆ ಹಳೆಯ ಹಿಂದೂ ಧರ್ಮ ಚಿಂತನೆಗಳಿಗೆ ಮರಳುತ್ತಾರೆ ಎಂದರೆ ಅವರಲ್ಲಿ ಬುದ್ಧರ ವೈಜ್ಞಾನಿಕ ಸತ್ಯ ಸಾಕ್ಷಾತ್ಕಾರವಾಗಿಲ್ಲ ಎಂದೇ ಅರ್ಥ. ಭಂತೇಜಿಗಳಿಗೆ ಗೌರವ ನೀಡಿದ್ದಷ್ಟೇ ಬುದ್ಧರ ಚಿಂತನೆಗಳನ್ನೂ ಗೌರವಯುತವಾಗಿ ಪಾಲಿಸುತ್ತ ಸಮಾಜದ ಪರಿವರ್ತನೆಗೆ ಮುಂದಾಗಬೇಕು. ಟೀವಿಯಲ್ಲಿ ಬರುತ್ತಿರುವ ಮಹಾನಾಯಕ ದಾರವಾಹಿ ನೋಡಿ ಅಭಿಮಾನ ಮೆರೆದರೆ ಸಾಲದು. ಅವರ ಅನುಯಾಯಿಯಾಗಿ ಧಮ್ಮ ಜ್ಯೋತಿ ಬೆಳಗಿಸಬೇಕು ಎಂದು ವಿವರಿಸಿದರು.

ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ ಮಾತನಾಡಿ, ಅಕ್ಟೋಬರ್ ೧೪ ರಂದು ನಾಗಪುರದಲ್ಲಿ ಬಾಬಾಸಾಹೇಬರು ತಮ್ಮ ನೂರಾರು ಜನ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೂಕರಿಸುವ ಮೂಲಕ ದಲಿತರಿಗೆ ಹಿಂದೂ ಧರ್ಮದಿಂದ ಬಿಡುಗಡೆಗೊಳಿಸಿದರು. ಆ ನೆನಪಿಗಾಗಿ ವಾಡಿಯಲ್ಲಿ ಅ.೩೧ರ ವರೆಗೆ ಧಮ್ಮ ಮಾಸಾಚರಣೆ ಆಯೋಜಿಸಲಾಗಿದೆ. ಪ್ರತಿ ದಿನವೂ ಒಬ್ಬೊಬ್ಬ ಶೋಷಿತನ ಮನೆಗೆ ಹೋಗಿ ಭಂತೇಜಿಯವರು ಧಮ್ಮೋಪದೇಶ ಮತ್ತು ಧ್ಯಾನಮಾರ್ಗ ಹೇಳಿಕೊಡುತ್ತಿದ್ದಾರೆ ಎಂದರು.

ಬೌದ್ಧ ಉಪಾಸಕರಾದ ಸಂತೋಷ ಜೋಗೂರ, ನಿತೀಶ ವಾಡೇಕರ, ಶಿವುಕುಮಾರ ತುಮಕೂರಕರ, ಸಿದ್ಧಾರ್ಥ ಬನಸೋಡೆ, ಪರಶುರಾಮ ಮಂಗಳೂರಕರ, ಮಲ್ಲಿಕ್ ಬಟ್ಟರ್ಕಿ, ರಾಜು ಇಜೇರಿ, ಗುರುಲಿಂಗಪ್ಪ ಬೀಳವಾರ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here