ಕ್ರಿಸ್ಮಸ್ ಹಬ್ಬದ ಸಾಂಸ್ಕೃತಿಕ ಉತ್ಸವ: ಬಡವರಲ್ಲಿ ಬಡವನಾಗಿ ಹುಟ್ಟಿದ ಏಸು: ಪಾಸ್ಟರ್

0
24

ವಾಡಿ: ಗುಲಾಮಿ ಬದುಕಿನ ವಿರುದ್ಧ ಹೋರಾಡಿದ ಏಸು ಕ್ರಿಸ್ತನು, ಬಡವರ ಬಂಧನಗಳ ಮುಕ್ತಿಗಾಗಿ ಬಡವನಾಗಿಯೇ ಹುಟ್ಟಿದ. ನಮಗಾಗಿ ತ್ಯಾಗ, ಪ್ರೀತಿ, ಸಹನೆ, ಸತ್ಯವನ್ನೇ ಬೋಧಿಸಿದ ದೇವರು ಆತ ಎಂದು ನಗರದ ಮೆಥೋಡಿಸ್ಟ್ ಚರ್ಚ್ ಪಾಸ್ಟರ್ ರೇವರೆಂಡ್ ಸುಭಾಷಚಂದ್ರ ಹೇಳಿದರು.

ಕ್ರಿಸ್ತ ಜಯಂತಿ ನಿಮಿತ್ತ ಬುಧವಾರ ಸಂಜೆ ಪಟ್ಟಣದ ಮೆಥೋಡಿಸ್ಟ್ ಚರ್ಚ ಆವರಣದಲ್ಲಿ ಚರ್ಚ್‌ನ ಸಂಡೇ ಸ್ಕೂಲ್ ಮಕ್ಕಳಿಂದ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಕ್ರಿಸ್ಮಸ್ ಹಬ್ಬದ ಸಂದೇಶ ನೀಡಿದರು.

Contact Your\'s Advertisement; 9902492681

ಏಸು ಎಲ್ಲಿ ಜನಿಸಿದ. ಹೇಗೆ ಜನಿಸಿದ. ಆತ ಭಾರತವನೋ ಅಥವ ಹೊರ ದೇಶದವನೋ ಎಂಬ ಪ್ರಶ್ನೆ ಮತ್ತು ವಾದಗಳಿಗೆ ಅರ್ಥವಿಲ್ಲ. ಕಾಯಿಲೆ, ಕಷ್ಟ, ಬಡತನ ಹಾಗೂ ಭಯಗಳ ಮಧ್ಯೆ ನಮ್ಮ ಬದುಕು ಸಾಗಿದ್ದು, ಅದರ ನಿವಾರಣೆಗಾಗಿ ಭಯಮುಕ್ತ ಜೀವನ ನೀಡಲು ಆತ ಭೂಮಿಗೆ ಬಂದಿದ್ದಾನೆ. ಏಸುವಿನಿಂದಲೇ ಈ ಸೃಷ್ಠಿ ಉಂಟಾಗಿದೆ ಎಂದು ಸತ್ಯವೇದ ಸ್ಪಷ್ಟವಾಗಿ ಹೇಳಿದ್ದು, ತ್ಯಾಗ ಮತ್ತು ಪ್ರೀತಿ ಎಂಬುದನ್ನು ನಾವುಗಳು ಸಭೆಯಲ್ಲಿ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹಂಚಿಕೊಳ್ಳಬೇಕು ಎಂದರು.

ಸಿಸ್ಟರ್ ಸೆಲೀನ್ ಮಾತನಾಡಿ, ಕೊರೊನಾ ಎಂಬ ಮಹಾಮಾರಿ ರೋಗ ಹೇಗೆ ಬಂತು, ಏಕೆ ಬಂತು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಅದು ಇಡೀ ವಿಶ್ವವನ್ನೇ ಬುಡಮೇಲು ಮಾಡಿತು. ದೇವರ ಮೇಲಿನ ವಿಶ್ವಾಸದಿಂದ ನಾವು ಸುರಕ್ಷಿತವಾಗಿ ಬದುಕಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರೂ ಪರೋಪಕಾರಿ ಗುಣ ಹೊಂದಬೇಕು. ಇದು ಮನಸ್ಸಿಗೆ ತುಂಬಾ ಸಂತಸವನ್ನು ನೀಡುತ್ತದೆ. ಸಣ್ಣ ಸಣ್ಣ ಸಹಾಯಗಳನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಪೊಲೀಸ್ ಇಲಾಖೆಯ ದತ್ತಾತ್ರೇಯ ಜಾನೆ, ಪತ್ರಕರ್ತ ಮಡಿವಾಳಪ್ಪ ಹೇರೂರ, ಮರಿಯಳು ಸುಭಾಷಚಂದ್ರ, ರವಿ ಅಲ್ಲಿಪುರ, ಸುರೇಂದ್ರ ಶಾಮ್ಯುವೆಲ್, ವಿನೋದ ದೊಡ್ಡಮನಿ, ಮಾರ್ಟೀನ್, ಎಸ್.ಆರ್.ಭಾಸ್ಕರ್, ರವಿ ಜಾನ್, ಸುಂದರ, ಸುಮಿತ್ರಾ, ರಾಜಣ್ಣ, ಅಬ್ರಾಹ್ಮ ರಾಜಣ್ಣ, ಸಾಲೋಮನ್ ರಾಜಣ್ಣ, ಜೋಸೆಫ್ ಎಸ್.ಟಿ, ಎಸ್.ಕೆ.ಜೋಸೆಫ್ ಪಾಲ್ಗೊಂಡಿದ್ದರು. ಮೇರಿ ಸ್ಯಾಮುವೆಲ್ ಸ್ವಾಗತಿಸಿದರು. ಇಮಾನ್ವೆಲ್ ನಿರೂಪಿಸಿದರು. ಐಶ್ವರ್ಯ ವಂದಿಸಿದರು. ಮಕ್ಕಳಿಂದ ಆಕರ್ಷಕ ಸಾಮೂಹಿಕ ನೃತ್ಯ ಮತ್ತು ನಾಟಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here