ಕೇಂದ್ರ, ರಾಜ್ಯ ಸರ್ಕಾರದಿಂದ ರೈತರ ನೆರವಿಗೆ ಹಲವಾರು ಯೋಜನೆ ಜಾರಿ: ಸಚಿವ

0
39

ಕಲಬುರಗಿ: ರೈತರು ಈ ದೇಶದ ಉಸಿರಾಗಿದ್ದು, ಅನ್ನದಾತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಜನಪ್ರಿಯ ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ. ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ವಿ. ಕತ್ತಿ ಅವರು ಹೇಳಿದರು.

ಮಂಗಳವಾರ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಾರತದ 72ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಉಳುಮೆ-ಬಿತ್ತನೆಯ ಕೃಷಿ ಸಲಕರಣೆಯಿಂದ ಹಿಡಿದು ಬೆಳೆದ ಫಸಲು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುವವರಿಗೂ ಮಣ್ಣಿನ ಮಕ್ಕಳ ಕೈಹಿಡಿಯುವ ವಿವಿಧ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲೇ ಮೊದಲು ಕಾಣಿಸಿಕೊಂಡ ಕೋವಿಡ್ ಸಾವಿನ ಪ್ರಕರಣ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಇದೀಗ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಪ್ರಧಾನಿ ಶ್ರೀ ನರೇಂದ್ರಮೋದಿ ಅವರ ಇಚ್ಛಾಶಕ್ತಿಯಿಂದ ಭಾರತ ಮೊಟ್ಟಮೊದಲು “ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್” ಎಂಬ ಎರಡು ಲಸಿಕೆಗಳನ್ನು ಕಂಡು ಹಿಡಿಯುವ ಮೂಲಕ ಕೋವಿಡ್ ವಿರುದ್ಧದ ಸಮರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡುವ ಕೋವಿಡ್ ಲಸಿಕೆ ಕಾರ್ಯ ಮುಂದುವರೆದಿದೆ. ಜನವರಿ 16ರಿಂದ 25 ರವರೆಗೆ ತಾಲ್ಲೂಕು ಆಸ್ಪತ್ರೆಗಳು ಸೇರಿ 108 ಕೇಂದ್ರಗಳಲ್ಲಿ 9489 ಆರೋಗ್ಯ ಸಿಬ್ಬಂದಿ ಪೈಕಿ 5350 ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 56 ರಷ್ಟು ಗುರಿ ಸಾಧಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14ನೇ ಸಾಲಿನಿಂದ 2020-21ನೇ ಸಾಲಿನವರೆಗೆ ರೂ.7,385 ಕೋಟಿ ರೂಗಳ ಅನುದಾನ ಹರಿದು ಬಂದಿದ್ದು, ಇದರಲ್ಲಿ ರೂ.5,299 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ ರೂ.5,279 ಕೋಟಿ ಅನುದಾನ ವೆಚ್ಚವಾಗಿದ್ದು, ಬಿಡುಗಡೆಯಾದ ಅನುದಾನಕ್ಕೆ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

2013-14ನೇ ಸಾಲಿನಿಂದ ಡಿಸೆಂಬರ್-2020ರ ಅಂತ್ಯಕ್ಕೆ ಒಟ್ಟು 21,203 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಪೈಕಿ 18,466 ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳು ವಿವಿಧ ಹಂತದಲ್ಲಿವೆ. 2020-21ನೇ ಸಾಲಿನಲ್ಲಿ ಸರ್ಕಾರವು ಮಂಡಳಿಗೆ ರೂ.1,132 ಕೋಟಿ ಅನುದಾನ ನಿಗದಿಪಡಿಸಿ, ಇದೇ ಜನವರಿ 2 ರಂದು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು, ಕಳೆದ ಜೂನ್ 9 ರಂದು ಅಸ್ತಿತ್ವಕ್ಕೆ ಬಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘವು ಕೃಷಿ, ಶಿಕ್ಷಣ, ಸ್ವಯಂ ಉದ್ಯೋಗ ಕ್ಷೇತ್ರದ ಬೆಳವಣಿಗೆಗಾಗಿ ಟೊಂಕಕಟ್ಟಿ ನಿಂತಿದೆ. ಐಎಎಸ್, ಕೆಎಎಸ್ ಅಕಾಂಕ್ಷಿಗಳಿಗಾಗಿ ಉಚಿತವಾಗಿ ತರಬೇತಿ ನೀಡುವ ಕಾಯಕದಲ್ಲಿ ತೊಡಗಿದೆ. ಕೌಶಾಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಇತ್ತೀಚೆಗೆ ಸಂಘದ ಕಾರ್ಯಚಟುವಟಿಕೆಗಳ ಮಾಹಿತಿ ನೀಡಲು ವೆಬ್‍ಸೈಟ್ ತೆರೆಯಲಾಗಿದೆ. ಈ ಭಾಗದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದರು.

ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದೆಂಬ ಮಾನವೀಯತೆಯಿಂದ ಪ್ರಧಾನಮಂತ್ರಿಗಳ ನಿರ್ದೇಶನದ ಮೇರೆಗೆ ರಾಜ್ಯದ ವಿವಿಧ ವರ್ಗದ ಜನತೆ ಸೇರಿದಂತೆ ವಲಸಿಗರಿಗೂ ಉಚಿತವಾಗಿ ಪಡಿತರ ವಿತರಿಸಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ/ಪಿ.ಯು.ಸಿ/ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ 4,583 ವಿದ್ಯಾರ್ಥಿಗಳಿಗೆ ಒಟ್ಟು ರೂ.689 ಲಕ್ಷ ಪ್ರೋತ್ಸಾಹಧನ ಪಾವತಿಸಲಾಗಿದೆ. ಅಂತರ್ ಜಾತಿ ವಿವಾಹವಾದ 180 ದಂಪತಿಗಳಿಗೆ ಒಟ್ಟು ರೂ.411.50 ಲಕ್ಷ ಪ್ರೋತ್ಸಾಹಧನ ಪಾವತಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಪ್ರಾಧಿಕಾರ, ಕಲಬುರಗಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ನಗರ, ಪಟ್ಟಣಗಳಲ್ಲಿ 3ನೇ ಪ್ಯಾಕೇಜ್ ಅಡಿಯಲ್ಲಿ 3,300 ಮನೆಗಳಿಗೆ ರೂ. 180 ಕೋಟಿ ಮಂಜೂರಾಗಿದ್ದು, ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದರು.

ಕೋವಿಡ್À-19 ಸಂದರ್ಭದಲ್ಲಿ ವಿವಿಧ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮೀಣ ಭಾಗದ ಜನರು ಹಳ್ಳಿಗಳಿಗೆ ಹಿಂತಿರುಗಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ(ನರೇಗಾ) ಅಡಿ ಒಟ್ಟು 54,751 ಕುಂಟುಂಬಗಳಿಗೆ ಉದ್ಯೋಗ ಚೀಟಿ ಒದಗಿಸಿದ್ದು, ಇದರಲ್ಲಿ 1,13,398 ಕೂಲಿ ಕಾರ್ಮಿಕರಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 1,54,346 ಕುಟುಂಬಗಳನ್ನು ಒಳಗೊಂಡಂತೆ 2,70,048 ಜನರಿಗೆ ಕೆಲಸ ನೀಡಲಾಗಿದೆ. 2020-21ನೇ ಸಾಲಿನಲ್ಲಿ 51,98,548 ಮಾನವ ದಿನಗಳನ್ನು ಸೃಜಿಸಿ ನೀಡಲಾದ ಗುರಿಗೆ ಶೇ.79.97 ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ವಿಮಾನನಿಲ್ದಾಣ ಈ ಭಾಗಕ್ಕೆ ಕಲಶವಿದ್ದಂತೆ, ಬೆಂಗಳೂರು, ದೆಹಲಿ(ಹಿಂಡನ್), ತಿರುಪತಿಗಳಿಗೆ ವಿಮಾನಗಳ ಹಾರಾಟ ನಡೆದಿದ್ದು, ಇದರಿಂದ ಈ ಭಾಗದ ವ್ಯಾಪಾರ-ವಹಿವಾಟು ಮತ್ತಷ್ಟು ಚಿಗುರಲಿದೆ ಎಂದರು.

ಈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ಶುರುವಾಗಿದ್ದು, ಪೈಲಟ್ ಆಗಬೇಕೆಂದಿದ್ದ ಈ ಭಾಗದ ಆಕಾಂಕ್ಷಿಗಳ ಕನಸಿಗೆ ರೆಕ್ಕೆ ಮೂಡಿದೆ ಎಂದ ಅವರು, ರಾತ್ರಿವೇಳೆಯೂ ವಿಮಾನ ಸಂಚಾರ (ಇಳಿಸುವ) ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತದ 72ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಪರೇಡ್ ಕಮಾಂಡರ್ ಕಲಬುರಗಿ ಆರ್.ಪಿ.ಐ. ಡಿ.ಎ.ಆರ್. ಹನುಮಂತ ನಾಯಕ ಹಾಗೂ ಸಹಾಯಕ ಪರೇಡ್ ಕಮಾಂಡರ್ ಆರ್.ಎಸ್.ಐ., ಕೆ.ಎಸ್.ಆರ್.ಪಿ. ನಾಗೇಂದ್ರ ಕುಂಬಾರ ನೇತೃತ್ವದಲ್ಲಿ ನಡೆದ ಪರೇಡಿನಲ್ಲಿ ಡಿ.ಎ.ಆರ್., ಕೆ.ಎಸ್.ಆರ್.ಪಿ., ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಸಿವಿಲ್ ಜಿಲ್ಲಾ ತಂಡ, ಸಿವಿಲ್ ನಗರ ತಂಡ, ಕೇಂದ್ರ ಕಾರಾಗೃಹ, ಹೋಮಗಾರ್ಡ್, ಅಬಕಾರಿ ಇಲಾಖೆ, ಅರಣ್ಯ ಕಾರ್ಯಕಡೆ, ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ವಾದ್ಯ ವೃಂದ ಸೇರಿದಂತೆ ಒಟ್ಟು 11 ತುಕಡಿಗಳಿಂದ ಸಚಿವರು ಪೆÀರೇಡ್ ಗೌರವ ವಂದನೆ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ವಿಠ್ಠಲ ಬೀರಣ್ಣ ಪೂಜಾರಿ, ವಿಜಯಕುಮಾರ ಪ್ರಭುರಾವ್ ತಡಕಲ್, ಶಂಕರೆಪ್ಪ ರಾಮಶೆಟ್ಟಪ್ಪ ಹುಗ್ಗಿ, ಶಿವಲಿಂಗಪ್ಪ ಬಸಲಿಂಗಪ್ಪ ಪಾಟೀಲ ಹಾಗೂ ವೆಂಕಟರಾವ ಅರ್ಜುನ ಶಿಂಧೆ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರಾದ ವಿಜಯವಾಣಿ ವರದಿಗಾರ ಜಯತೀರ್ಥ ಪಾಟೀಲ, ಟಿವಿ-9 ವರದಿಗಾರ ಸಂಜಯ ಚಿಕ್ಕಮಠ, ನ್ಯೂಸ್-18 ಕ್ಯಾಮರಾಮನ್ ವಿಜಯಕುಮಾರ ಗಾಜರೆ ಹಾಗೂ ದಿ ಹಿಂದೂ ಪತ್ರಿಕೆಯ ಫೋಟೋಗ್ರಾಫರ್ ಅರುಣಕುಮಾರ ಕುಲಕರ್ಣಿ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಅತ್ಯುತ್ತಮ ಸೇವೆ ಸಲ್ಲಿಸಿದ ಜಿಲ್ಲೆಯ ಏಳು ಜನ ವೈದ್ಯಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ತಲಾ 1 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ 11 ಜನ ರೈತರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ಮಹಾನಗರ ಪಾಲಿಕೆಯ ಪ್ಲಾಸ್ಟಿಕ್ ನಿಷೇಧ ಕುರಿತು “ಪ್ಲಾಸ್ಟಿಕ್ ಭೂತ” ಹಾಗೂ “ಶೌಚಾಲಯ ಬಳಸಿ” ಎಂಬ ಸಂದೇಶವುಳ್ಳ ಸ್ತಬ್ದ ಚಿತ್ರ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆಯ ಸ್ತಬ್ದ ಚಿತ್ರಗಳು ಎಲ್ಲರ ಗಮನ ಸೆಳೆದವು. ಇದಲ್ಲದೇ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸ್ತಬ್ದ ಚಿತ್ರಗಳೂ ಜಾಗೃತಿ ಸಂದೇಶ ಸಾರಿದವು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಲೋಕಸಭಾ ಸದಸ್ಯರಾದ ಡಾ. ಉಮೇಶ ಜಿ. ಜಾಧವ, ವಿಧಾನಸಭೆ ಶಾಸಕರುಗಳಾದ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ವಲ್ಲ್ಯಾಪುರೆ, ಶಶೀಲ ನಮೋಶಿ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ತಾಲೂಕು ಪಂಚಾಯತ್ ಅಧ್ಯಕ್ಷ ಶಿವಾರಾಜ ಸಜ್ಜನ್ ಅವರು ಉಪಸ್ಥಿತರಿದ್ದರು.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ, ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಮನೀಷ್ ಖರ್ಬಿಕರ್, ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ. ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಉಪ ಪೊಲೀಸ್ ಆಯುಕ್ತ (ಕಾ.ಸು.) ಡೆಕ್ಕಾ ಕಿಶೋರ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ನಲಿನ್ ಅತುಲ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ. ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ ಸೇರಿದಂತೆ ಇತರೆ ಗಣ್ಯರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here