ನೇತಾಜಿ ರಾಜಿರಹಿತ ಹೋರಾಟದ ನೇತಾರ: ಜಗನ್ನಾಥ

0
45

ಕಲಬುರಗಿ: ನೇತಾಜಿ ಸುಭಾಷಚಂದ್ರ ಬೋಸ್ ಅವರು ರಾಜಿರಹಿತ ಹೋರಾಟದ ನೇತಾರರಾಗಿದ್ದರು. ಬ್ರಿಟೀಷರನ್ನು ದೇಶದಿಂದ ಹೊಡೆದೋಡಿಸಿ ಮಾನವನಿಂದ ಮಾನವನ ಶೋಷಣೆ ಮುಕ್ತ ಸಮಾಜ ನಿರ್ಮಿಸಬೇಕು ಎಂಬುದು ಅವರ ಕನಸ್ಸಾಗಿತ್ತು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರವಿವಾರ ಎಐಡಿವೈಒ, ಎಐಡಿಎಸ್‌ಒ ಹಾಗೂ ಆರ್‌ಕೆಎಸ್ ಸಂಘಟನೆಗಳು ಜಂಟಿಯಾಗಿ ಏರ್ಪಡಿಸಿದ್ದ ನೇತಾಜಿ ಬೋಸ್ ಅವರ ೧೨೫ನೇ ಜನ್ಮದಿನದ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಗಾಂಧೀಜಿಯವರ ಅಹಿಂಸಾ ಹೋರಾಟದ ಮೂಲಕ ಪರಕೀಯರಿಂದ ದೇಶವನ್ನು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂಬುದು ನೇತಾಜಿಯವರ ವಾದವಾಗಿತ್ತು. ದೇಶದೊಳಗೆ ಬ್ರಿಟೀಷ್ ಆಳ್ವಿಕೆಯೊಂದಿಗೆ ರಾಜಿ ಮಾಡಿಕೊಂಡಿದ್ದ ಕಾಂಗ್ರೆಸ್ ಹೋರಾಟವೂ ಮಂಕಾಗಿತ್ತು. ಕ್ರಾಂತಿಕಾರ ನಿಲುವಿನಿಂದ ಸುಭಾಷಚಂದ್ರ ಬೋಸ್ ಲಕ್ಷಾಂತರ ಜನತೆಯನ್ನು ಆಕರ್ಷಿಸಿದರು.

Contact Your\'s Advertisement; 9902492681

ಇಂತಹ ಸಂದರ್ಭದಲ್ಲಿ ಮಹಾತ್ಮಾಗಾಂಧಿ ಮತ್ತು ನೇತಾಜಿ ಮಧ್ಯೆ ಸೈದ್ಧಾಂತಿಕ ಭಿನ್ನತೆ ಸೃಷ್ಠಿಯಾಯಿತು. ಹೀಗಾಗಿ ಅವರು ಕಾಂಗ್ರೆಸ್ ತೊರೆದು ಐಎನ್‌ಎ ಸೈನ್ಯ ಕಟ್ಟುವ ಮೂಲಕ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಸ್ವಾತಂತ್ರ್ಯ ಚಳುವಳಿಯ ಚರಿಯತ್ರೆಯಲ್ಲಿ ನೇತಾಜಿಯವರ ಹೋರಾಟದ ಇತಿಹಾಸವನ್ನೆ ಕಾಂಗ್ರೆಸ್ ಮುಚ್ಚಿಡುತ್ತಲೇ ಬಂದಿದೆ ಎಂದು ದೂರಿದರು.

ಆರ್‌ಕೆಎಸ್ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಮಾತನಾಡಿ, ದೇಶದಲ್ಲಿ ಒಂದೆಡೆ ಜನರ ಜೀವನಮಟ್ಟ ಪಾತಾಳಕ್ಕೆ ಕುಸಿದಿದೆ. ಮತ್ತೊಂದೆಡೆ ರೈತರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಚಳಿಯಲ್ಲಿ ಐತಿಹಾಸಿಕ ಹೋರಾಟ ನಡೆಸುತ್ತಿದ್ದಾರೆ. ಸರಕಾರ ಮಾತ್ರ ಚಳುವಳಿಗಾರರ ಮೇಲೆ ದಮನಕಾರಿ ಕೃತ್ಯ ಎಸಗಿದೆ. ಅನ್ನ ಬೆಳೆಯುವ ರೈತನನ್ನು ಮಣ್ಣು ಮಾಡಲು ಮುಂದಾಗಿರುವ ಬಿಜೆಪಿ ಸರಕಾರ, ಅಂಬಾನಿ ಮತ್ತು ಅದಾನಿ ಎಂಬ ಬಂಡವಾಳಿಗರ ಹಿತಾಸಕ್ತಿ ಕಾಪಾಡಾಲು ಹಗಲಿರುಳು ಚಿಂತಿಸುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಶಿಕ್ಷಕರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೋರಾಟಗಳು ಭುಗಿಲೆದ್ದಿವೆ. ಜನವಿರೋಧಿ ಸರಕಾರವನ್ನು ಬಗ್ಗುಬಡಿಯಲು ನೇತಾಜಿಯವರಂತಹ ರಾಜಿರಹಿತ-ಧರ್ಮತೀತ ಹೋರಾಟ ಕಟ್ಟುವ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಮಕ್ಕಳ ತಜ್ಞ ಡಾ.ವೀರೇಶ ಎಸ್.ಇಂಗಳೇಶ್ವರ ಅವರು ನೇತಾಜಿ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದರು. ಎಸ್‌ಯುಸಿಐ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಅವರು ನೇತಾಜಿಯವರ ಹೋರಾಟ ಕುರಿತ ಸೂಕ್ತಿ ಪ್ರದರ್ಶನ ಉದ್ಘಾಟಿಸಿದರು.

ಎಐಡಿವೈಒ ಅಧ್ಯಕ್ಷ ಶರಣು ವಿ.ಕೆ ಅಧ್ಯಕ್ಷತೆ ವಹಿಸಿದ್ದರು. ಗೌತಮ ಪರತೂರಕರ, ಮಲ್ಲಿನಾಥ ಹುಂಡೇಕಲ್, ಶರಣು ಹೇರೂರ, ಪದ್ಮಾರೇಖಾ, ಸುಮಿತ್ರಾ ದೊರೆ, ವಿ.ಕೆ.ಕೇದಿಲಾಯ, ಜಯದೇವ ಜೋಗಿಕಲ್‌ಮಠ, ಭೀಮರಾವ ದೊರೆ, ಅರುಣ ಹಿರೇಬಾನರ, ಅರ್ಪಿತಾ, ಜಯಶ್ರೀ, ರಾಜು ಒಡೆಯರ ಪಾಲ್ಗೊಂಡಿದ್ದರು. ವೆಂಕಟೇಶ ದೇವದುರ್ಗ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here