ದಮನಿತರ ದನಿ ಸಗರ ನಾಡಿನ ಸನ್ಮಿತ್ರನ ಕುರಿತು

0
96

….ನಿನ್ನೆಯ ಸಂಚಿಕೆಯಿಂದ..

ಬಸವರಾಜ ಸಗರ ಮೂಲತಃ ಓರ್ವ ಸೃಜನಶೀಲ ಬರಹಗಾರ. ಕಲಬುರ್ಗಿಯ ಶಾಸನ, ಸತ್ಯಕಾಮ, ಸೇರಿದಂತೆ ಅನೇಕ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ನಾನು ಇವರನ್ನು ಲಂಕೇಶ್ ಮೇಷ್ಟ್ರು ಮತ್ತು ನನ್ನ ಪ್ರೀತಿಯ ಗೆಳೆಯ ರವಿ ಬೆಳಗೆರೆಗೆ ಪರಿಚಯಿಸಿದೆ. ಅವರ ಟ್ಯಾಬ್ಲಾಯಿಡ್ ( ಸಾಪ್ತಾಹಿಕ ) ಗಳಿಗೂ ಕೆಲಕಾಲ ಬಸವರಾಜ ಬರೆದರು. ಬಸವರಾಜ ಬರವಣಿಗೆಯಲ್ಲಿ ವಸ್ತು ಮತ್ತು ಸತ್ಯನಿಷ್ಠೆಗಳಿರ್ತಿದ್ದವು.

Contact Your\'s Advertisement; 9902492681

ಅವರದೇ ” ಆರೋಗ್ಯ ಕಾರ್ಯಕರ್ತ ” ಮಾಸಿಕ ಶುರುವಾದ ಮೇಲೆ ಆರೋಗ್ಯ ಇಲಾಖೆಯಲ್ಲಿ ಸಂಚಲನ ಮೂಡಿದಂತಾಯಿತು. ಇಲಾಖೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸುಳಿವು ಸಿಗುತ್ತಿದ್ದಂತೆ ಅಲ್ಲಿ ಬಸವರಾಜ ಧುತ್ತೆಂದು ಪ್ರತ್ಯಕ್ಷಗೊಂಡು ಪ್ರತ್ಯಕ್ಷದರ್ಶನದ ವರದಿ ಅವರ ಪತ್ರಿಕೆಯಲ್ಲಿ. ಹೀಗೆ ಪತ್ರಿಕೆ ಮನೆ ಮಾತಾಗಿ ದಮನಿತ ಕೇಡರ್ ಪ್ರೀತಿ ಗಳಿಸಿತು .

ಬೀದರ ಜಿಲ್ಲೆ ಮಂಠಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ , ಕೊಡಗಿನ ಕೋಮಲ ಚಿತ್ತದ ಹುಡುಗಿ ಭಾಗೀರಥಿಯ ಮೇಲೆ ವ್ಯವಸ್ಥಿತವಾಗಿ ಜರುಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಕಟವಾದ ಇವರ ಪತ್ರಿಕೆ ವರದಿ ವಿಧಾನ ಸಭೆಯಲ್ಲೂ ಪ್ರಸ್ತಾಪ ಗೊಂಡಿತು. ಸಾಮೂಹಿಕ ಅತ್ಯಾಚಾರಕ್ಕೀಡಾದ ಆಕೆಯ ಕೋಮಾಸ್ಥಿತಿಯ ದೇಹವನ್ನು ಮೂರ್ನಾಲ್ಕು ದಿನಗಳ ಕಾಲ ಹುಮನಾಬಾದ, ಹೈದ್ರಾಬಾದ ದವಾಖಾನೆಗಳಿಗೆ ತಿರುಗಾಡಿಸಿದ ದುರುಳರ ದುಷ್ಕೃತ್ಯದ ಎಲ್ಲ ವಿವರಗಳನ್ನು ಅಂದು ಪತ್ರಿಕೆ ಕರಾರುವಾಕ್ಕಾಗಿ ಬರೆದಿತ್ತು. ಕಡೆಗೆ ಪ್ರಕರಣ ಸಿ.ಐ.ಡಿ.ಗೆ ಹೋಗುವಷ್ಟರ ಮಟ್ಟಿಗೆ ಪತ್ರಿಕೆಯ ಹೋರಾಟ ಫಲಪ್ರದಗೊಂಡಿತ್ತು.

ಆಗ ಆರೋಗ್ಯ ಕಾರ್ಯಕರ್ತರ ಬೀದರ ಜಿಲ್ಲಾ ಸಂಘದ ಅಧ್ಯಕರಾಗಿ ಬಕ್ಕಪ್ಪ ಎಂಬುವವರು ಇದ್ದ ನೆನಪು ?. ರಾಜ್ಯ ಮಟ್ಟದಲ್ಲಿ ಈ ಪ್ರಕರಣ ಹೋರಾಟಕ್ಕೆ ನಾಂದಿ ಹಾಡಿತು. ಪ್ರಕರಣದ ಹಿಂದೆ ಮಂತ್ರಿಯೊಬ್ಬರ ಸಂಬಂಧಿ ಇದ್ದರೆಂಬುದಾಗಿ ದೈನಿಕಗಳು ಸುದ್ದಿ ಪ್ರಕಟಿಸಿದವು.

ಆದರೊಂದು ಮಾತು ಹೇಳಲೇಬೇಕು: ಪ್ರಕರಣ ಬಯಲು ಮಾಡಿದ ಈ ಎಲ್ಲ ಹೋರಾಟದ ಹಿಂದಿನ ಅಕ್ಷರಶಕ್ತಿ ನಮ್ಮ ಬಸವರಾಜ ಸಗರ. ಅವರೊಬ್ಬ ನೇಪಥ್ಯದ ವಿರಾಟ ಪುರುಷ. ಇಂತಹ ಹತ್ತು ಹಲವು ಕಣ್ಮರೆಯಾಗಿ ಹೋಗ ಬಹುದಾದ ಪ್ರಕರಣಗಳನ್ನು ಬಯಲಿಗೆಳೆಯುವ ಹರಸಾಹಸ ಮಾಡಿದ ಶ್ರೇಯಸ್ಸು ಇವರದು. ಕೂಡ್ಲಿಗಿಯ ಸಿಸ್ಟರೊಬ್ಬರಿಗೆ ಪಿಂಚಣಿ ಬರುತ್ತಿರಲಿಲ್ಲ. ಪತ್ರಿಕೆಗೆ ಬರೆಯುವ ಮೂಲಕ ಪರಿಹಾರ ಸಿಕ್ಕಿತು. ಇಂತಹ ಅನೇಕ ಪ್ರಕರಣಗಳು ಪತ್ರಿಕೆ ಮೂಲಕ ಪರಿಹಾರ ದೊರಕಿಸುವಲ್ಲಿ ಅವರು ಯಶಸ್ಸು ಕಂಡುಕೊಂಡರು.

ಇಂತಹ ಆಪ್ತಮಿತ್ರ ಕಲಬುರ್ಗಿಯಲ್ಲಿ ಹೃದಯಾಘಾತದಿಂದ ತೀರಿ ಹೋದರು. ಅವರು ಬದುಕಿದ್ದಾಗ ಮಾಡಿದ ಕೆಲಸಗಳನ್ನು ಬರಹ ರೂಪದಲ್ಲಿ ಸಂಗ್ರಹಿಸಿದ ಅವರ ಪತ್ನಿ ಸಾವಿತ್ರಕ್ಕ ” ಬೆರಗು – ಬೆಡಗು ” ಹೆಸರಿನ ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಕಳೆದ ಮಾರ್ಚ್ ತಿಂಗಳು ಮೂರನೇ ತಾರೀಖು ( 03-03-2019 ) ಕಲಬುರ್ಗಿಯಲ್ಲಿ ನಾನು ಆ ಗ್ರಂಥ ಬಿಡುಗಡೆ ಮಾಡುವ ಅವಕಾಶ ಸಿಕ್ಕಿತು. ತೀರಿ ಹೋದ ಹಿರಿಯ ಗೆಳೆಯನ ತೀರದ ನೆನಪುಗಳು ನನ್ನನ್ನು ಬಿಡುಗಡೆಯ ಸಂದರ್ಭದಲ್ಲಿ ಎಡಬಿಡದೆ ಕಾಡಿದವು.

ಅಂತೆಯೇ ಬಸವರಾಜ ಸಗರ ನನ್ನ ಪಾಲಿನ ಪ್ರಾತಃಸ್ಮರಣೀಯ ಗೆಳೆಯ. ಗೊತ್ತಿಲ್ಲ… ಸಗರನಂಥವರ ಸಾವಿಗೇನು ಅವಸರವಿತ್ತೋ… ಹೋಗಿ ಬಾ ಗೆಳೆಯ ನಮಸ್ಕಾರ..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here