ರಾಜಕೀಯ ಸುದ್ದಿ ಪ್ರಸಾರ ಮಾಡುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

0
115



Contact Your\'s Advertisement; 9902492681

ಕಲಬುರಗಿ:  ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಪರವಾಗಿ ಏಕಪಕ್ಷೀಯವಾಗಿ ಪ್ರಚಾರ ಮಾಡುತ್ತಿರುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದನ್ನು ಮುಂದುವರೆಸಿದಲ್ಲಿ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು, ಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಿಗೆ ಖಡಕ್ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡುತ್ತ, ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಅದರಲ್ಲಿಯೂ ರಾಜಕೀಯವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಸಮೂಹವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಪರವಾಗಿ ಸಾರ್ವಜನಿಕ ಅಭಿಪ್ರಾಯ ಮೂಡುವಂತೆ ಬಿಂಬಿಸುವುದು, ವ್ಯಕ್ತಿ ನಿಂದನೆ ಮಾಡುವುದು ಐ.ಪಿ.ಸಿ. ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಜಿಲ್ಲೆಯಲ್ಲಿ ಕಾಸಿಗಾಗಿ ಸುದ್ದಿ ಮೇಲೆ ನಿಗಾ ಇಡಲು ನೊಂದಾಯಿತ ಪತ್ರಿಕೆ, ಕೇಬಲ್ ವಾಹಿನಿಗಳು ಹಾಗೂ ಎಫ್.ಎಂ.ರೇಡಿಯೋಗಳ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ನು ಇಟ್ಟಿದೆ. ಕಾಸಿಗಾಗಿ ಸುದ್ದಿ ಪ್ರಕಟಗೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಲೋಗೋ, ಕ್ಯಾಮರಾ ಹಿಡಿದು ರಾಜಕೀಯ ನಾಯಕರಿಂದ ಹೇಳಿಕೆ, ಪ್ರತಿಹೇಳಿಕೆ ಪಡೆದು ಯಾವುದೇ ಹೊಣೆಗಾರಿಕೆಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಚ್ಚೆಯಂತೆ ಪೋಸ್ಟ್ ಮಾಡುವ ಮೂಲಕ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಕೂಡಲೆ ಇಂತಕ ಪೋಸ್ಟ್‌ಗಳ ಪ್ರಸಾರವನ್ನು ನಿರ್ಬಂಧಿಸಬೇಕು ಎಂದು ಸೂಚನೆ ನೀಡಿದರು.

ಮಧ್ಯರಾತ್ರಿಯೊಳಗೆ ಚುನಾವಣಾ ಕಂಟೆಂಟ್ ತೆರವುಗೊಳಿಸಿ:- ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಪೋಸ್ಟ್, ಆಡಿಯೋ, ವಿಡಿಯೋ, ಮೆಸೇಜ್‌ಗಳನ್ನು ಈಗಾಗಲೆ ಅಪಲೋಡ್ ಮಾಡಿದಲ್ಲಿ ಅವುಗಳೆಲ್ಲವನ್ನು ಮಧ್ಯರಾತ್ರಿ ಒಳಗಾಗಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಡಿಲಿಟ್ ಮಾಡಬೇಕು. ನೀತಿ ಸಂಹಿತೆ ಮುಗಿಯುವವರೆಗೆ ಯಾವುದೇ ರೀತಿಯ ಪ್ರಸಾರವನ್ನು ಮಾಡಬಾರದು. ಜಿಲ್ಲಾಡಳಿತ ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.  ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲೆಂದೇ ಪ್ರತ್ಯೇಕ ಸೆಲ್ ಸಹ ರಚಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ಸದಸ್ಯ ಕಾರ್ಯದರ್ಶಿ ಸಿದ್ದೇಶ್ವರಪ್ಪ ಜಿ.ಬಿ., ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು, ಪ್ರತಿನಿಧಿಗಳು ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here