ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಟ್ಯಾಂಕರ ಲಾಭಿ ನಿವಾರಿಸಲು ಜಿಲ್ಲಾಧಿಕಾರಿ ಸೂಚನೆ

0
142

ಕಲಬುರಗಿ:  ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೆಯಿಂದಾಗಿ ಕುಡಿಯುವ ನೀರಿನ ತೊಂದರೆ ಉಲ್ಭಣವಾಗುತ್ತಿದೆ. ಇಂಥಹ ಸಂದರ್ಭದಲ್ಲಿ ನೀರಿನ ಟ್ಯಾಂಕರ ಹೊಂದಿರುವ ಮಾಲೀಕರು ಲಾಭಿ ನಡೆಸಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಲ್ಭಣಗೊಳಿಸುತ್ತಿರುವ ದೂರುಗಳು ಕೇಳಿಬರುತ್ತಿವೆ. ಆಯಾ ತಾಲೂಕಿನ ತಹಶೀಲ್ದಾರರು ಗ್ರಾಮ ಪಂಚಾಯತಿ ಅಧ್ಯಕ್ಷರ ಮುಖಾಂತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ತೊಡಗಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.

Contact Your\'s Advertisement; 9902492681

     ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಪ್ರದೇಶದ ಕುಡಿಯುವ ನೀರು ಸರಬರಾಜು ಕುರಿತು ಕರೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಸ್ಯಾತ್ಮಕ ಹಾಗೂ ಈಗಾಗಲೇ ಟ್ಯಾಂಕರ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಗ್ರಾಮಗಳಿಗೆ ತಹಶೀಲ್ದಾರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಇಂಜನೀಯರ, ಪಿ.ಡಿ.ಓ. ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಹಾಗೂ ಮುಂದೆ ಎದುರಿಸುವ ಗ್ರಾಮಗಳಲ್ಲಿ ಲಭ್ಯವಿರುವ ಬೋರವೆಲ್‌ಗಳ ಮಾಹಿತಿ ಪಡೆದು ಅವುಗಳಲ್ಲಿ ಫ್ಲಶಿಂಗ್ ಮಾಡಿದಲ್ಲಿ ನೀರು ಲಭ್ಯವಾಗುವಂಥಹ ಬೋರವೆಲ್‌ಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಗ್ರಾಮದ ಸಮೀಪದಲ್ಲಿರುವ ಖಾಸಗಿ ಬೋರವೆಲ್ ಅಥವಾ ತೆರೆದ ಬಾವಿಗಳ ಮಾಹಿತಿ ಸಂಗ್ರಹಿಸಬೇಕು. ಅಂತರ್ಜಲ ಮತ್ತು  ಭೂವಿಜ್ಞಾನಿಗಳಿಂದ ಮಾಹಿತಿ ಪಡೆದು ಹೊಸ ಬೋರವೆಲ್ ಕೊರೆಯಲು ಕ್ರಮ ಕೈಗೊಳ್ಳಬೇಕು. ಹದಿನೈದು ದಿನಗಳ ಹಿಂದೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೂ ಸಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಎಲ್ಲ ತಾಲೂಕಿನ ಸಹಾಯಕ ಇಂಜನೀಯರುಗಳಿಗೆ ನೋಟೀಸು ನೀಡಬೇಕೆಂದು ತಿಳಿಸಿದರು.

ಜಮೀನನ್ನು ಸರ್ಕಾರದ ಯೋಜನೆಗೆ ಹಸ್ತಾಂತರ ಮಾಡಿಕೊಳ್ಳದೇ  ಖಾಸಗಿ ಜಮೀನುಗಳಲ್ಲಿ ಸರ್ಕಾರದ ಯೋಜನೆಗಳ ವೆಚ್ಚದಲ್ಲಿ ತೆರೆದ ಭಾವಿ ಮತ್ತು ಬೋರವೆಲ್‌ಗಳನ್ನು ಕೊರೆಯಲಾಗಿದೆ. ಇದು ಕಾನೂನು ಬಾಹೀರವಾಗಿದ್ದು, ಸಂಬಂಧಿಸಿದ ಸಹಾಯಕ ಇಂಜನೀಯರ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ನೋಟೀಸು ನೀಡಬೇಕು. ಸರ್ಕಾರಿ ವೆಚ್ಚದಲ್ಲಿ ಖಾಸಗಿ ಜಮೀನಿನಲ್ಲಿ ಕುಡಿಯುವ ನೀರಿಗಾಗಿ ಕೊರೆದ ಕೊಳವೆ ಭಾವಿ ಅಥವಾ ತೆರೆದ ಭಾವಿಯಿಂದ ನೀರು ನೀಡಲು ಖಾಸಗಿ ವ್ಯಕ್ತಿಗಳು ಒಪ್ಪದಿದ್ದಲ್ಲಿ ಅಥವಾ ಅಡ್ಡಿಪಡಿಸಿದಲ್ಲಿ ಆ ಬಾವಿಯನ್ನು ಸರ್ಕಾರದ ವಷಕ್ಕೆ ಪಡೆಯಲು ಕ್ರಮ ಜರುಗಿಸಬೇಕು. ಈ ಕುರಿತು ತಹಶೀಲ್ದಾರರು ನೊಟೀಸು ಜಾರಿಗೊಳಿಸಬೇಕು ಎಂದರು.

ಈಗಾಗಲೇ ಟ್ಯಾಂಕರ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಅಳವಡಿಸಬೇಕು. ಜಿ.ಪಿ.ಎಸ್. ವರದಿಯ ಆಧಾರದ ಮೇಲೆ ನೀರು ಸರಬರಾಜಿಗೆ ಮೊತ್ತ ಪಾವತಿಸಬೇಕು. ತಹಶೀಲ್ದಾರ ಕಚೇರಿಯಿಂದ ಎಲ್ಲ ವಾಹನಗಳ ಜಿ.ಪಿ.ಎಸ್. ಮಾಹಿತಿಯನ್ನು ಪ್ರತಿದಿನ ಪರಿಶೀಲಿಸಬೇಕು. ಜಿ.ಪಿ.ಎಸ್. ಮಾಹಿತಿಯನ್ವಯ ಕುಡಿಯುವ ನೀರಿನ ಮೂಲಗಳು ಗ್ರಾಮದ ಸಮೀಪದಲ್ಲಿದ್ದರೆ ತಾತ್ಕಾಲಿಕವಾಗಿ ಪೈಪಲೈನ್ ಅಳವಡಿಸುವ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸಬೇಕು. ಟ್ಯಾಂಕರ ಮೂಲಕ ಕುಡಿಯವ ನೀರು ಪೂರೈಸುವುದು ತಾತ್ಕಾಲಿಕ ವ್ಯವಸ್ಥೆಯೆ ಹೊರತು ಶಾಸ್ವತ ಪರಿಹಾರವಲ್ಲ ಎಂಬುದನ್ನು ಅಧಿಕಾರಿಗಳು ಮನಗೊಳ್ಳಬೇಕು ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ.ಪಿ., ಕಲಬುರಗಿ ಸಹಾಯಕ ಆಯುಕ್ತ ರಾಹುಲ ತುಕಾರಾಮ ಪಾಂಡ್ವೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here