ಕಲಬುರಗಿ: ಮಹಿಳಾ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಲ್ಲಿನ ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ವತಿಯಿಂದ “ಸನ್ ಸಿಟಿ ಉತ್ಸವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ”ವನ್ನು ಮಾ.೭ ರಂದು ನಗರದ ಗೋಲ್ಡ್ ಹಬ್ ನ ೪ನೇ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿಯ ಅಧ್ಯಕ್ಷೆ ಸಪ್ನಾ ಲೋಯಾ ಅವರು, ಕೊರೊನಾ ಕಾರಣದಿಂದಾಗಿ ಸಣ್ಣ ಉದ್ಯಮ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುವ ಮಹಿಳೆಯರು ಸಾಕಷ್ಟು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಅವರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಉದ್ದೇಶದಿಂದ ಮಹಿಳೆಯರೇ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲು ಉತ್ಸವ ಆಯೋಜಿಸಲಾಗಿದ್ದು, ಸೀರೆ, ಆಭರಣ, ಮನೆ ಅಲಂಕಾರಿಕ ವಸ್ತುಗಳು ಸೇರಿದಂತೆ ಇನ್ನಿತರೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜೊತೆಗೆ ಆಹಾರ ವಲಯ (ಫುಡ್ ಝೋನ್) ಮತ್ತು ಆಟದ ವಲಯ (ಗೇಮ್ ಝೋನ್) ಸಹ ಪ್ರದರ್ಶನದಲ್ಲಿರಲಿದೆ. ತಂಬೋಲಾ (ಹೌಜಿ ಗೇಮ್) ಉತ್ಸವದ ವಿಶೇಷವಾಗಿರುತ್ತದೆ ಎಂದರು.
ಉತ್ಸವವು ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ನಡೆಯಲಿದ್ದು, ೧೦ ರೂ.ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಉತ್ಸವದಲ್ಲಿ ಸ್ಥಳೀಯ ೨೦ ಮಳಿಗೆಗಳು ಮತ್ತು ಹುಬ್ಬಳ್ಳಿ, ಲಾತೂರ, ಸೊಲ್ಲಾಪುರ, ಸಾಂಗ್ಲಿ ಸೇರಿದಂತೆ ಮತ್ತಿತರ ಕಡೆಯಿಂದ ೧೦ ಮಳಿಗೆಗಳು ಸೇರಿದಂತೆ ೩೫ ಮಳಿಗೆಗಳಿರಲಿವೆ ಎಂದರು.
ನಾಳೆ ಖ್ಯಾತ ಹೋರಾಟಗಾರರ ಯೋಗೇಂದ್ರ ಯಾದವ್ ಕಲಬುರಗಿಗೆ
ಡಾ.ಸುಧಾ ಹಾಲಕಾಯಿ ಮತ್ತು ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಅವರು ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ಇದುವರೆಗೆ ಅನೇಕ ಸಮಾಜಹಿತ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ನೆರವು ಮತ್ತು ವಯೋವೃದ್ಧರಿಗಾಗಿ ಆರೋಗ್ಯ ಶಿಬಿರ ನಡೆಸಲಾಗಿದೆ ಎಂದು ಸಪ್ನಾ ಲೋಯಾ ತಿಳಿಸಿದರು.
ಹರ್ಡೇಕರ ಮಂಜಪ್ಪ ಜಯಂತಿ ಮತ್ತು ನಾಟಕ ಪ್ರದರ್ಶನ
ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿಯ ಕಾರ್ಯದರ್ಶಿ ಯೋಗಿತಾ ಗಿಲ್ಡಾ, ಖಜಾಂಚಿ ಸುನೀತಾ ಬೋರಾ, ಉಪಾಧ್ಯಕ್ಷೆ ಪಲ್ಲವಿ ಮುಕ್ಕಾ, ಮಾಜಿ ಅಧ್ಯಕ್ಷರಾದ ಸಪ್ನಾ ದೇಶಪಾಂಡೆ, ಪ್ರಿಯಾ ಕಾವೇರಿ, ಶ್ವೇತಾ ಎಂ.ಜಿ., ನಿರ್ದೇಶಕರಾದ ವಿಜಯಲಕ್ಷ್ಮೀ ರೆಡ್ಡಿ, ಶೀತಲ್ ಗಿಲ್ಡಾ, ರೋಟರಿ- ಕೋ ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.