– ನವೀನ್ ಸೂರಿಂಜೆ
2021 ಜನವರಿ 17 ರಂದು ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ರಾಜಕೀಯ ರ್ಯಾಲಿಯಲ್ಲಿ ಪಾಲ್ಗೊಂಡು ಕೊರೋನಾ ಗೈಡ್ ಲೈನ್ ಉಲ್ಲಂಘಿಸಿದವರ ಮೇಲೆ ಎಫ್ಐಆರ್ ಯಾಕೆ ದಾಖಲಿಸಿಲ್ಲ ? ಕರ್ನಾಟಕ ಹೈಕೋರ್ಟ್ ಮಂಗಳವಾರ ಬೆಳಗಾವಿ ಪೊಲೀಸ್ ಆಯುಕ್ತರನ್ನು ವಿಚಾರಣೆಗೆ ಒಳಪಡಿಸಿದೆ.
ಜನವರಿ 17 ರಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ರ್ಯಾಲಿ ನಡೆಸಿತ್ತು. ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆದ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಆದ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಯ್ತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ನ್ಯಾಯಪೀಠವು ಪೊಲೀಸ್ ಆಯುಕ್ತರನ್ನು ವಿಚಾರಣೆ ನಡೆಸಿ ತರಾಟೆಗೆ ತೆಗೆದುಕೊಂಡರು. ಪೊಲೀಸ್ ಇಲಾಖೆ ಸಲ್ಲಿಸಿದ್ದ ಅಫಿದಾವಿತ್ ಎಲ್ಲವನ್ನೂ ಹೇಳುತ್ತಿದ್ದರೂ ಎಫ್ಐಆರ್ ಮಾಡಿಲ್ಲದಿರುವುದನ್ನು ಹೈಕೋರ್ಟ್ ಆಕ್ಷೇಪಿಸಿತು. ಇದು ಬೆಳಗಾವಿ ಪೊಲೀಸರ ನಿರ್ಲಕ್ಷ್ಯ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
“ಬಹುಶಃ 2020 ರ ಕಾಯ್ದೆ (ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ) ಅಡಿಯಲ್ಲಿ ಮಾಡಲಾದ ನಿಯಂತ್ರಣದ ನಿಬಂಧನೆಗಳ ಬಗ್ಗೆ ಆಯುಕ್ತರಿಗೇ ತಿಳಿದಿಲ್ಲ ಎಂದು ಕಾಣುತ್ತದೆ. ಏಪ್ರಿಲ್ 15 ರ ಆದೇಶದಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಪಾಲಿಸದ ಕಾರಣ ಆಯುಕ್ತರಿಗೂ ಈ ಆದೇಶದ ಬಗ್ಗೆ ತಿಳಿದಿಲ್ಲ ಎಂದು ಕಾಣುತ್ತದೆ” ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
“….. ಪೊಲೀಸ್ ಆಯುಕ್ತರು ಲಕೋಟೆಯಲ್ಲಿ ಛಾಯಾಚಿತ್ರವನ್ನು ನೀಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಮತ್ತು ಮಾಸ್ಕ್ ಗಳನ್ನು ಧರಿಸದೆ, ಜನವರಿ 17 ರಂದು ಒಂದು ದೊಡ್ಡ ಸಭೆ ಆಯೋಜಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರು ನೀಡಿದ್ದ ಫೋಟೋಗಳೇ ಹೇಳುತ್ತದೆ. ಆದರೆ ಅದೇ ಪೊಲೀಸ್ ಆಯುಕ್ತರು ಹಾಕಿರುವ ಅಫಿಡವಿಟ್ ನಲ್ಲಿ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಒಂದೇ ಒಂದೇ ಎಫ್‌ಐಆರ್ ದಾಖಲಾಗಿಲ್ಲ ಎಂದೂ ಹೇಳುತ್ತಾರೆ. ಒಟ್ಟಾರೆಯಾಗಿ ಅಫಿಡವಿಟ್ ಅನ್ನು ಓದಿದಾಗ ಈ ವಿಷಯವನ್ನು ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಬೆಳಗಾವಿಯಲ್ಲಿ ಮಾಸ್ಕ್, ಅಂತರವಿಲ್ಲದೇ ಅಷ್ಟು ದೊಡ್ಡ ಸಭೆಯಾದರೂ ಕೇವಲ 20,900 ರೂ.ಗಳ ದಂಡವನ್ನು ವಸೂಲಿ ಮಾಡಿರುವುದು ಆಯುಕ್ತರಿಗೆ ತೃಪ್ತಿಯಾಗಿದೆ. 2020 ರ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯಾವುದೇ ಎಫ್‌ಐಆರ್‌ಗಳನ್ನು ಏಕೆ ಮಾಡಿಲ್ಲ ಎಂಬುದನ್ನು ವಿವರಿಸಲು ನಿರ್ದೇಶನ ನೀಡಲಾಗಿದೆ” ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ COVID-19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಕೋರಿ ಖಾಸಗಿ ಸಂಸ್ಥೆಯೊಂದು ಸಲ್ಲಿಸಿದ ಮನವಿಯ ವಿಚಾರಣೆಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರ ವಿಚಾರಣೆಯೂ ನಡೆಯಿತು.
ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ರಾಜ್ಯದ ಹಿಂದಿನ ಆದೇಶಗಳನ್ನು ರಾಜ್ಯ ಸರ್ಕಾರವೇ ಪಾಲಿಸಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದೆ.ಅಭಿಪ್ರಾಯಪಟ್ಟಿದೆ. ತನ್ನ ಏಪ್ರಿಲ್ 15 ರ ಆದೇಶದಲ್ಲಿ, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗಾಗಿ ಕೇವಲ ಜನರಿಗೆ ದಂಡ ಹಾಕುವುದಲ್ಲದೆ ಆಯೋಜಕರಿಂದಲೂ, ಸಭೆಯಲ್ಲಿ ಭಾಗವಹಿಸುವ ಎಲ್ಲರಿಂದಲೂ ವಸೂಲಿ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು.
2020 ರ ಕೋವಿಡ್ ಮಾರ್ಗಸೂಚಿ ಮತ್ತು ನ್ಯಾಯಾಲಯದ ಆದೇಶಗಳನ್ನು ಪಾಲಿಸದಿರುವುದೇ ರಾಜ್ಯದಲ್ಲಿ ಕೊರೋನಾ ಇಷ್ಟೊಂದು ತೀವ್ರವಾಗಿ ಹರಡಲು ಸಾಧ್ಯವಾಯಿತು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು.
“ಏಪ್ರಿಲ್ 15 ರ ಹೈಕೋರ್ಟ್ ಆದೇಶದಲ್ಲಿ ಹಲವು ನಿರ್ದೇಶನಗಳನ್ನು ನೀಡಲಾಗಿದೆ. ಹೇಳಿದ ನಿರ್ದೇಶನಗಳಿಗೆ ಅನುಸಾರವಾಗಿ ರಾಜ್ಯ ಸರ್ಕಾರ ವರದಿ ಮಾಡಿಲ್ಲ. ಕೊರೋನಾ ಹರಡಲು ಈ ಮೂಲಕ ಸರ್ಕಾರವೇ ಕಾರಣವಾಗಿದೆ. ಇದಲ್ಲದೆ, ಏಪ್ರಿಲ್ 22 ರ ಹೈಕೋರ್ಟ್ ಆದೇಶದ ಪ್ಯಾರಾ 2 ರಲ್ಲಿರುವ ನಿರ್ದೇಶನವನ್ನೂ ಪಾಲಿಸಲಾಗಿಲ್ಲ. ಆದ್ದರಿಂದ ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಜೂನ್ 03 ರ ಒಳಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸಮಯ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.