ಆರೋಗ್ಯ ಸಹಾಯಕರ ನೂತನ ಅಭಿದಾನದೊಂದಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ ನಲವತ್ತೊಂದು ವರ್ಷಗಳ ಅಖಂಡ ಐಕ್ಯತೆ ಮುರಿದು ಬಿದ್ದಿದೆ. ೧೫.೦೪.೧೯೮೦ ರಿಂದ ಲಿಂಗ ತಾರತಮ್ಯದ ಎಳ್ಳರ್ಧದಷ್ಟೂ ನೆನಪು ಇಲ್ಲದಂತೆ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ಹಟ್ಟಿ, ಗ್ರಾಮ, ನಗರ ಸಮುದಾಯಗಳ ಲೋಕಪ್ರಜ್ಞೆಯ ಭಾಗವಾಗಿ ಉಪಕೇಂದ್ರ ಎಂಬ ಜನಾರೋಗ್ಯ ರಥದ ಎರಡು ಚಕ್ರಗಳಂತೆ ಸೇವಾ ಕೈಂಕರ್ಯ ಮೆರೆದಿದ್ದಾರೆ. ಅದು ಭಾರತ ಸರ್ಕಾರದ Public Health Policy ಕೂಡಾ.
ಅಂತಹ ಅಖಂಡ ಆರೋಗ್ಯ ರಥದ ಎರಡು ಚಕ್ರಗಳ ಹೆಸರುಗಳನ್ನು ಸರಕಾರ ವಿಘಟಿತಗೊಳಿಸಿದೆ. ಆರೋಗ್ಯ ಸಹಾಯಕ ಹುದ್ದೆಯಲ್ಲಿದ್ದ ಇಬ್ಬರನ್ನೂ ಸರಕಾರ ಬೇರೆ ಬೇರೆ ಹೆಸರಿಗೆ ರೂಪಾಂತರಿಸಿದೆ. ಪುರುಷರನ್ನು Health Inspecting Officer ಮತ್ತು ಮಹಿಳೆಯರನ್ನು Primary Health Care Officer ಗಳೆಂದು ಹೊಸದಾಗಿ ಹೆಸರಿಸಿದೆ. ತನ್ಮೂಲಕ ಮಹಿಳೆ ಮತ್ತು ಪುರುಷರೆಂಬ ಗಟ್ಟಿಯಾದ ತಾರತಮ್ಯ ಹುಟ್ಟುಹಾಕಿದೆ.
ಒಂದೇ ಉಪಕೇಂದ್ರದ ಸಮಾನ ಕೆಲಸ, ವೇತನ ಮತ್ತು ಸಮಾನ ಹುದ್ದೆಯಲ್ಲಿದ್ದು ಜನಾರೋಗ್ಯ ಸೇವೆಸಲ್ಲಿಸುವಾಗ ಒಬ್ಬರು Health Inspecting ಮಾಡುವ, ಇನ್ನೊಬ್ಬರು Health Care ಮಾಡುವ ಅಧಿಕಾರಿಗಳೆಂದು ಸರಕಾರ ಪದನಾಮೀಕರಣ ಮಾಡಿರುವ ಯುಕ್ತಿ ಕೌಶಲ್ಯ ಲೋಕೋಪಯೋಗಿಯಂತೂ ಅಲ್ಲ. ಅಧಿಕಾರಿಗಳೆಂದು ಪದನಾಮ ಬದಲಿಸುವ ಭರದಲ್ಲಿ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರನ್ನು ಪ್ರತ್ಯೇಕಿಕರಣ ಮಾಡಲಾಗಿದೆ.
ಆ ಮೂಲಕ ಐಕ್ಯತೆಯ ಸಮಾನ ಸೇವಾಯಜ್ಞಕ್ಕೆ ಧಕ್ಕೆ ತರುವಂತಾಗಿದೆ. ಜನಾರೋಗ್ಯ ಸೇವೆಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಅದೂ ಕೊವಿಡ್ ನಂತಹ ಈ ದುರಿತಕಾಲದಲ್ಲಿ ಇಂತಹ ಬೆಳವಣಿಗೆ!. ಖುದ್ದು ಆರೋಗ್ಯ ಸಚಿವರು ಇವರೆಲ್ಲ ಬಿ.ಎಸ್ಸಿ. ನರ್ಸಿಂಗ್ ಪದವೀಧರರು ಎಂದು ಹೇಳುವ ಮೂಲಕ ಆರೋಗ್ಯ ಸಹಾಯಕರ ಕುರಿತಾದ ಖಚಿತ ಮಾಹಿತಿ ಪ್ರಭುತ್ವಕ್ಕೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆರೋಗ್ಯ ಇಲಾಖೆ ಎಂದರೆ ಡಾಕ್ಟರ್, ನರ್ಸ್, ಕಾಂಪೌಂಡರ್ಸ್ ಎಂಬ ಚರ್ವಿತಚರ್ವಣ ನಂಬುಗೆ.
೧೫.೦೪.೧೯೮೦ ರ ಪೂರ್ವದಲ್ಲಿದ್ದ ಆರೋಗ್ಯ ಇಲಾಖೆಯ ಜನಾರೋಗ್ಯ ಸೇವಾಕ್ಷೇತ್ರದ ವಿವಿಧ ಹೆಸರುಗಳ ಕಾರ್ಯನಿರ್ವಾಹಕ ಸಿಬ್ಬಂದಿ ವಿವಿಧೋದ್ದೇಶ ಆರೋಗ್ಯ (ಎಂ. ಬಿ. ಸಿಂಗ್ ಆಯೋಗ) ಕಾರ್ಯಕ್ರಮದಡಿ ಆರೋಗ್ಯ ಕಾರ್ಯಕರ್ತ( ಮಹಿಳೆ ಮತ್ತು ಪುರುಷ)ರಾಗಿ, ತದನಂತರ ಆರೋಗ್ಯ ಸಹಾಯಕರೆಂದು ಅಭಿದಾನಗೊಂಡು ನಲವತ್ತೊಂದು ವರ್ಷಕಾಲ ಸಮಗ್ರತೆ ಮೆರೆದಿದ್ದಾರೆ.
ವಿಶೇಷವಾಗಿ ಗ್ರಾಮಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಗಳ ಅನುಷ್ಠಾನಕ್ಕಾಗಿ ಬದ್ಧತೆ ತೋರಿದ್ದಾರೆ. ವೃಂದ ಸಂಘಟನೆಗಳನ್ನು ಬಂಧುರಗೊಳಿಸಿದ್ದಾರೆ. ಅಂತೆಯೇ ಅವರನ್ನು ಆರೋಗ್ಯ ಇಲಾಖೆಯ ಸ್ಥಂಭಗಳೆಂದು ಇಲಾಖೆಯ ಪ್ರಭುತ್ವ ಗುರುತಿಸಿದೆ. ಸಕಾರಾತ್ಮಕವಾದ ನೂರಾರು ಹೋರಾಟಗಳಲ್ಲಿ ಸಾಗರದಂತೆ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಮಹಿಳೆ, ಪುರುಷ ಆರೋಗ್ಯ ಸಹಾಯಕರು ಜತೆ ಜತೆಯಲಿ ವಿಧಾನಸೌಧದವರೆಗೆ ಐಕ್ಯತೆ ಮೆರೆದಿದ್ದಾರೆ. ಹಿರಿಯರು ಕಟ್ಟಿದ ಅಂತಹ ಐಕ್ಯಹೋರಾಟಕ್ಕೆ ಇಂದು ಧಕ್ಕೆ ಬಂದಿದೆ. ಆರೋಗ್ಯ ಸಹಾಯಕರ ಸಂಘಟನೆ ಹೋಳಾಗಿದ್ದರೇ ಬೇಸರ ಮಾತ್ರ ಆಗುತಿತ್ತು. ಈಗ ಹಾಳಾಗುತ್ತಿರುವುದಕ್ಕೆ ಸಂಕಟವಾಗುತ್ತಿದೆ.
ಜನಸಮುದಾಯದ ಆರೋಗ್ಯ ಸೇವೆಗೆ ಮುಡಿಪಾಗಿರುವ ಆರೋಗ್ಯ ಸಹಾಯಕ ವೃಂದವನ್ನು ಅಧಿಕಾರಿಗಳೆಂದೇ ಕರೆಯುವುದಾಗಿದ್ರೇ Community Health Officer ಎಂದು ಇಬ್ಬರ ಪದನಾಮ ಬದಲಾಯಿಸಬಹುದಿತ್ತು. ಅದು ಆರೋಗ್ಯ ಸಹಾಯಕರ ಬೇಡಿಕೆಯೂ ಆಗಿತ್ತು. DHO, THO, ನಂತರದ ಮಾದರಿಯಲ್ಲಿ CHO ಪದನಾಮ ಹೆಚ್ಚು ಅರ್ಥಪೂರ್ಣ ಆಗಿರುತಿತ್ತು. ಅಷ್ಟಕ್ಕೂ ಇದುವರೆಗೆ ಇಲಾಖೆಯಲ್ಲಿ ಆ ಹೆಸರಿನ ಸರಕಾರಿ ನೌಕರರು ಇರಲಿಲ್ಲ. ಇಲ್ಲವೇ ಆ ಪದನಾಮವನ್ನು ಯಾರಿಗಾದರೂ ಕೊಡಬೇಕೆಂದು ಅಧಿಕಾರಿಗಳು ಮೀಸಲಾಗಿಟ್ಟು ಕೊಂಡಿದ್ದಾರೆಯೇ.?