Monday, July 15, 2024
ಮನೆಬಿಸಿ ಬಿಸಿ ಸುದ್ದಿಸಾಹಿತ್ಯ ಪರರ ಹಿತ ಬಯಸಬೇಕು: ಪ್ರೋ ಪೋತೆ: ಸಾಹಿತ್ಯ ಕ್ಷೇತ್ರಕ್ಕೆ ಮೂರು ಕೃತಿಗಳ ಲೋಕಾರ್ಪಣೆ

ಸಾಹಿತ್ಯ ಪರರ ಹಿತ ಬಯಸಬೇಕು: ಪ್ರೋ ಪೋತೆ: ಸಾಹಿತ್ಯ ಕ್ಷೇತ್ರಕ್ಕೆ ಮೂರು ಕೃತಿಗಳ ಲೋಕಾರ್ಪಣೆ

ಕಲಬುರಗಿ: ಸಾಹಿತ್ಯ ಕ್ಷೇತ್ರ ವಿಶಾಲವಾಗಿ ಬೆಳೆಯುತ್ತಿದೆ. ಇದರಲ್ಲಿ ಕವಿಯಾದವನು ತನ್ನ ಕಾವ್ಯದೊಳಗೆ ಜೀವಿಸಬೇಕು. ಮತ್ತು ಆ ಸಾಹಿತ್ಯ ಪರರ ಹಿತ ಮತ್ತು ಸಮಾಜ ಹಿತ ಬಯಸುವಂತ್ತಿರಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಆಗಿರುವ ಸಾಹಿತಿ ಪ್ರೋ, ಎಚ್, ಟಿ ಪೋತೆ ಅವರು ಇಂದಿಲ್ಲಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಭವನದಲ್ಲಿ ಕಡಗಂಚಿಯ ಅಮರ್ಜಾ ಪ್ರಕಾಶನ ವತಿಯಿಂದ ಆಯೋಜಿಸಿದ ಸಮಾರಂಭದಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತ್ಯ ಚಲನಶೀಲತೆಯಿಂದ ಕೂಡಿರಬೇಕು. ಅದರೊಳಗೆ ಜೀವ ತುಂಬಿರಬೇಕಾಗಿದೆ. ಅಂದಾಗ ಮಾತ್ರ ಜನ ಸಮ್ಮುಖವಾಗುತ್ತದೆ. ಜೀವನದ ಕಷ್ಟ ಸುಖಗಳಿ ಹಾಗೂ ಜನ ಮಿಡಿತದ ಕಾವ್ಯಗಳು ಓದುಗರ ಹೃದಯ ತಟ್ಟಬೇಕಾಗಿದೆ. ಇದಕ್ಕಾಗಿ ಓದುವ ಸಂಸ್ಕೃತಿ ಬೆಳೆಯಬೇಕು. ಹಾಗೂ ಜಾತಿ ವ್ಯವಸ್ಥೆಯಿಂದ ದೂರಾಗುವ ಮತ್ತು ಮೌಢ್ಯತೆಯಿಂದ ದೂರಾಗಿಸುವ ಗಟ್ಟಿ ಸಾಹಿತ್ಯ ನಮ್ಮಲ್ಲಿ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಾ, ಸದಾನಂದ ಪೆರ್ಲ ಅವರು, ಸಾಹಿತ್ಯ ಜನ ಸಾಮಾನ್ಯರ ಧ್ವನಿಯಾಗಿ ನಿಲ್ಲಬೇಕು. ಮೌನ ಮಾತಾಡಿದಾಗ ಅನೇಕ ಸಮಸ್ಯೆಗಳಿಗೆ ಪರಿಹಾರವೂ ಅದರಲ್ಲಿರುತ್ತದೆ. ಬರಹಗಾರರು ಅಧ್ಯಯನಶೀಲರಾಗಿ ಕಾವ್ಯ ಓದುವ ಸಂಸ್ಕೃತಿ ಅಳವಡಿಸಿ ಕೊಳ್ಳಬೇಕು. ಸಮಾಜಮುಖಿ ಚಿಂತನೆಗಳು ಸಾಹಿತ್ಯದಲ್ಲಿದ್ದಾಗ ನಮ್ಮ ಕಾವ್ಯ ಶ್ರೀಮಂತಿಕೆ ಹೊಂದುತ್ತದೆ. ಆಕಾಶವಾಣಿ ಕೇಂದ್ರದಿಂದ ಪ್ರತಿವಾರ ಪುಸ್ತಕ ಓದು ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಅದರ ಸದುಪಯೋಗ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ಭಾಗದ ಲೇಖಕರ ಕೃತಿಗಳ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಹಿಂದೆಯೂ ಇಂಥ ಪುಸ್ತಕ ಖರೀದಿ ಕಾರ್ಯವಿತ್ತು. ಸಧ್ಯಕ್ಕೆ ಸ್ಥಗೀತಗೊಳಿಸಲಾಗಿದೆ. ಈ ಕುರಿತು ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಮಕ್ಕಳ ಹಿರಿಯ ಸಾಹಿತಿ ಎ ಕೆ ರಾಮೇಶ್ವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಮೂರು ಕೃತಿಗಳ ಕವಿಗಳು ಭರವಸೆಯ ಕವಿಗಳಾಗಿ ಬೆಳೆಯಲಿ ಎಂದು ಹಾರೈಸಿದರು.

ನಿವೃತ್ತ ಪ್ರಾಂಶುಪಾಲ ಶ್ರೀಶೈಲ ನಾಗರಾಳ ಅವರು ಕೃತಿಗಳ ಪರಿಚಯ ಮಾಡಿ ಕೊಟ್ಟರು. ಸಾಂಸ್ಕೃತಿಕ ಸಂಘಟಿಕ ವಿಜಯಕುಮಾರ ತೇಗಲತಿಪ್ಪಿ ಉಪಸ್ಥಿತರಿದ್ದರು, ಧರ್ಮಣ್ಣ ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಸಿದ್ದಾರ್ಥ ಚಿಮ್ಮಾ ಇದ್ಲಾಯಿ ತಂಡದವರಿಂದ ಗಾಯನ ನಡೆಯಿತು.

ಇದೇ ಸಂದರ್ಭದಲ್ಲಿ ಪತ್ರಕರ್ತ, ಶಿಕ್ಷಕ ಧರ್ಮಣ್ಣ ಎಚ್ ಧನ್ನಿ ಅವರು ಬರೆದ ಮೌನ ಮಾತನಾಡಿದಾಗ, ಮಹಾಂತೇಶ ಎನ್ ಪಾಟಿಲ ಅವರ ಜ್ಞಾನ ದೀವಿಗೆ ಹಾಗೂ ಶೈಲಾ ಹಿಟ್ನಳ್ಳಿ ಅವರ ಕಾಡತಾವ ನೆನಪ ಎಂಬ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು. ರೇಣುಕಾ ಎನ್ ಶ್ರೀಕಾಂತ ನಿರೂಪಿಸಿದರು. ಮಹಾಂತೇಶ ಯಾತನೂರ ಸ್ವಾಗತಿಸಿದರು. ಗೀತಾ ಭರಣಿ ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular