ವಾಡಿ: ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ನ್ಯೂ ಪ್ಲಾಂಟ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ಇಂಗಳಗಿ ಗ್ರಾಮ ನಿವಾಸಿ ಸುಭಾಷ ರಾಠೋಡ (51) ಮೃತ ದುರ್ದೈವಿ.ಕಂಪನಿಯ ತಾಜ್ ಗ್ರೂಪ್ ಗುತ್ತಿಗೆ ಕಾರ್ಮಿಕ ಸುಭಾಷ ರಾಠೋಡ, ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗಿದ್ದ. ಗೂಡ್ಸ್ ರೈಲಿಗೆ ಸಿಮೆಂಟ್ ಚೀಲಗಳ ಲೋಡಿಂಗ್ ಮಾಡುತ್ತಿದ್ದ ವೇಳೆ ಬೆಲ್ಟ್ ಮತ್ತು ಯಂತ್ರದ ಹೊಡೆತದಿಂದ ಸುಮಾರು 25 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದ್ದು, ಸುಡುವ ಸಿಮೆಂಟ್ ಧೂಳಿನಲ್ಲಿ ಬಿದ್ದ ಪರಿಣಾಮ ಉಸಿರಾಟದ ಮೂಲಕ ಸಿಮೆಂಟ್ ದೇಹ ಸೇರುವ ಜತೆಗೆ ರೈಲು ಹಳಿಗೆ ತಲೆ ಪೆಟ್ಟಾಗಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಸುರಕ್ಷತಾ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯಕ್ಕೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದು ಕಂಪನಿ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಎಸಿಸಿ ಕಂಪನಿ ಮುಂದೆ ತಾಜ್ ಗ್ರೂಪಿನ ನೂರಾರು ಕಾರ್ಮಿಕರು ಜಮಾಯಿಸಿ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಮೃತನ ಕುಟುಂಬಕ್ಕೆ ರೂ.20 ಲಕ್ಷ ಪರಿಹಾರ ಹಾಗೂ ಆತನ ಪುತ್ರನಿಗೆ ಕಂಪನಿಯಲ್ಲಿ ಖಾಯಂ ನೌಕರಿ ನೀಡಲು ಕಂಪನಿಯ ಎಚ್ ಆರ್ ಮುಖ್ಯಸ್ಥ ನಾಗೇಶ್ವರಾವ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಡಿವೈಎಸ್ಪಿ ಉಮೇಶ ಚಿಕ್ಕಮಠ, ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ಪಿಎಸ್ ಐ ವಿಜಯಕುಮಾರ ಭಾವಗಿ ಬಂದೋಬಸ್ತ್ ಒದಗಿಸಿದ್ದರು. ಕಾರ್ಮಿಕ ಸಂಘದ ಉಪಾಧ್ಯಕ್ಷ ರಮೇಶ ಕಾರಬಾರಿ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ ಸೇರಿದಂತೆ ತಾಜ್ ಗ್ರೂಪ್ ಕಾರ್ಮಿಕರು ಇದ್ದರು.