ಆಧ್ಯಾತ್ಮಿಕ ಪ್ರವಚನ ಭಾಗ-2

0
16
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ
ಒಂದರೆ ಘಳಿಗೆಯಿತ್ತಡೆ
ನಿನ್ನ ನಿತ್ತೆ ಕಾಣಾ ರಾಮನಾಥ
-ಜೇಡರ ದಾಸಿಮಯ್ಯ

ಸಾವಿರ ಸಾವಿರ ವರುಷಗಳಿಂದ ಈ ನಾಡಿನೊಳಗೆ ಶ್ರೇಷ್ಠ ಅನುಭಾವಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು ಆಗಿ ಹೋಗಿದ್ದಾರೆ. ಭಾರತದ ಜ್ಞಾನ ಬೆಳಕನ್ನು ಜಗತ್ತಿನಲ್ಲೆಲ್ಲ ಹರಡಿದೆ. ಅದು ಅಂತರ್‍ಜ್ಞಾನ ಅದು ಬಾಹ್ಯ ಜಗತ್ತಿನ ಜ್ಞಾನ. ಜ್ಞಾನ ಅದೊಂದು ಅಪ್ರತಿಮವಾದಂಥ ವಸ್ತು. ಅದು ದೀಪವಿದ್ದಂತೆ. ಪ್ರಣತೆ ಎಷ್ಟು ಬೆಲೆ ಬಾಳುತ್ತದೆ ಮುಖ್ಯವಲ್ಲ.

ದೀಪವೇ ಮುಖ್ಯ. ಇದೊಂದು ಪ್ರಣತಿ ಅದರಲ್ಲಿ ಎಣ್ಣೆ, ಒತ್ತಿ, ಅದಕ್ಕೊಂದು ಜ್ಞಾನದ ಜ್ಯೋತಿ. ಪ್ರಣತೆಗಳ ಬೆಲೆ ಬೇರೆ ಬೇರೆ ಇದೆ. ದೀಪದ ಬೆಲೆ ಕಟ್ಟಲಾಗದು. ಜ್ಯೋತಿ-ಜ್ಞಾನದ ಜ್ಯೋತಿ ಜೀವ ಜ್ಯೋತಿ. 100 ವರ್ಷ ಹೀಗೆ ಬೆಳಗುತ್ತದೆ. ಕಣ್ಣಿನ ಮೂಲಕ ಮಾತಿನ ಮೂಲಕ ಜ್ಞಾನ ಹರಹುತ್ತದೆ ಜಗತ್ತಿನಲ್ಲೆಲ್ಲ. ಇಂಥ ಮಹಾನುಭಾವರ ದೇಶ ಭಾರತ. ಇಲ್ಲಿಯ ಮಹಾತ್ಮರು ಜ್ಞಾನಿಗಳು, ಮಹಾನುಭಾವರು ಬೆಳಕಿನಲ್ಲಿ ತನ್ಮಯರಾದವರು ಇಂಥವರು ಇರುವ ದೇಶ ಭಾರತ.
ಭಾರತೀಯರು ಅಂದರೆ ಜ್ಞಾನ ಪ್ರಕಾಶದಲ್ಲಿ ಪ್ರಕಾಶಿಸುವರು.

Contact Your\'s Advertisement; 9902492681

ಜ್ಞಾನವೇ ಸಂಪತ್ತು. ಶರಣರು ಸಂತರು ವಿಜ್ಞಾನಿಗಳು ಅವರೇನೂ ಗಳಿಸಲಿಲ್ಲ. ಮನೆ ದೊಡ್ಡದು ಕಟ್ಟಲಿಲ್ಲ. ಜ್ಞಾನದ ಸಿರಿವಂತಿಕೆ ಬೆಳೆಸಿದರು. ಮನೆ ಕಟ್ಟಲಿಲ್ಲ ಮನ ಕಟ್ಟಿದರು. ಇಂಥ ದೇಶದಲ್ಲಿ ವಾಸಿಸುವ ನಾವೇ ಧನ್ಯರು. ಬೆಳಕಿನ ಮನಸ್ಸು ಬೆಳಕಿನ ವ್ಯಕ್ತಿಗಳು ಮಾತಿನ ಶಬ್ದಗಳಲ್ಲಿ ಜ್ಞಾನವನ್ನು ಇಟ್ಟರು. ಮಾತಿಗೆ ಜ್ಯೋತಿರ್ಲಿಂಗ ಎಂದರು. “ಮಾತೆಂಬುದು ಜ್ಯೋತಿರ್ಲಿಂಗ” ಅದರಲ್ಲಿ ಆನಂದ ಸೌರಭವಿದೆ.

ಅನುಭಾವವಿದೆ. ಇವರೆಲ್ಲ ಭಾರತೀಯರು. ಎಲ್ಲ ದೇಶದಲ್ಲಿ ಇಂಥ ಜ್ಞಾನಿಗಳಿದ್ದರೂ, ಭಾರತೀಯರಿಗೆ ವಿಶೇಷತೆ ಇದೆ. ಒಬ್ಬ ಶರಣ ಜೇಡರ ದಾಸಿಮಯ್ಯರು ಹೇಳಿದರು.

ಎಲ್ಲೋ ಹಿಮಾಲಯದ ಬೆಟ್ಟದಲ್ಲಿ ಕುಳಿತಿ ತಪಸ್ಸು ಮಾಡಲಿಲ್ಲ. ಬಟ್ಟೆ ನೇಯುವ ಕಾಯಕ ಮಾಡುತ್ತಲೇ ಇಂಥ ಅದ್ಭುತ ನುಡಿ ಹೇಳಿದರು. ಸಂಪತ್ತು ಬೇಡ. ಬಲ್ಲವರ ಜ್ಞಾನದ ಮಾತು ಕೊಡು ಎಂದು ಬೇಡಿಕೊಂಡಿದ್ದಾರೆ.

ತಕ್ಕಡಿ(ಪರಡೆ)ಯಲ್ಲಿ ಸಂಪತ್ತು ಮತ್ತು ಜ್ಞಾನ ತೂಗಿದರೆ ಜ್ಞಾನದ ತೂಕವೇ ಹೆಚ್ಚು. ಅದರ ಬೆಲೆ ಹೆಚ್ಚು. ಆನೆ, ಸಂಪತ್ತು, ರಾಜ್ಯ ಕೇಳಲಿಲ್ಲ. ಮಹಾತ್ಮರ ಮಾತು ಕೇಳಿಸುವ ಕ್ಷಣ ಕೇಳಿದರು. ಒಂದರಗಳಿಗೆ ಅಂಥ ಮಾತು ಕೊಟ್ಟರೆ ಭಗವಂತನೇ ನಿನ್ನನ್ನೇ ಕೊಟ್ಟಂತೆ. ಒಂದೊಂದು ಮಾತು ಭಗವಂತ ರಾಮನಾಥನೆಂಬ ದೇವರ ದರ್ಶನ ಮಾಡಿಸುವ ಮಾತಿನ ಬೆಲೆ ಹೆಚ್ಚು. ಅದು ಬೆಳಕನ್ನು ಕೊಡುತ್ತದೆ. ಯಾವ ಮಾತು ಕೇಳಿದರೆ ಮನಸ್ಸು ಹಗುರ ವಿಸ್ತಾರ ಪರಿಶುದ್ಧ ಆಗುತ್ತದೋ ಅಂಥ ಮಾತು ಕೊಡು. ಭಗವಂತನೇ ಸಿರಿತನ ಬೇಡ ಒಳ್ಳೆಯ ಮಾತು ಕೇಳುವ ಸೌಭಾಗ್ಯ ಕೊಡು ಮಹಾತ್ಮರ ಮಾತು ಸಾಮಾನ್ಯವಲ್ಲ. ಅದ್ಭುತ ಸಾಧನ. ಜ್ಞಾನವನ್ನೇ ತನ್ನ ಉಡಿಯಲ್ಲಿ ತುಂಬಿ ಕೊಂಡಿದೆ ಮಾತು.

ಜ್ಞಾನಿಗಳು ಸಂಪತ್ತು ಬಿಟ್ಟು ಹೋಗಲಿಲ್ಲ. ಮಾತು ಬಿಟ್ಟು ಹೋದರು. ವಿಸ್ತಾರ ಮತ್ತು ಸಂಕುಚಿತಗೊಳಿಸುವ ಶಕ್ತಿ ಮಾತುಗಳಿಗಿದೆ. ಒಂದೊಂದು ಶಬ್ದ ಅಂದಾಗ ಕಣ್ಣ ಮುಂದೆಯೇ ಕಾಣುವುದು. ಹಿಮಾಲಯ ಚಿತ್ರಿಸುವುದು ಅಮೇರಿಕಾ ಸುಳಿಯುತ್ತದೆ. ಸೂರ್ಯ ಹೊಳೆಯುತ್ತದೆ. ಬ್ರಶ್, ಉಳಿ, ವಸ್ತುಗಳಲ್ಲಿ ಇಲ್ಲದ ಶಕ್ತಿ ಮಾತುಗಳಲ್ಲಿದೆ. ಬಡವ ಎಂದಾಗ ಬಡತನದ ಭಾಗ.

ಮಂತ್ರ, ಅಭಂಗ, ಜ್ಯೋತಿರ್ಲಿಂಗ ಎಂದು ಮಾತಿಗೇ ಕರೆದರು. ಭಂಗ ಆಗದ ಮಾತು. ಸುಂದರ ಮಾತು ಹೃದಯದಲ್ಲಿ ತುಂಬಿದಾಗ ಭಾವ ಅರಳುತ್ತದೆ. ಜ್ಯೋತಿರ್ಲಿಂಗವೇ ಮಾತು. ನಮ್ಮ ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ಪ್ರಸಾರ ಮಾಡಿದ್ದಾರೆ. ಮಾಸಿಲ್ಲ ಕೆಟ್ಟಿಲ್ಲ ತೇಲುತ್ತಿವೆ. ಒಂದು ನಿಮಿಷ ಮೌನವಾಗಿ ಕುಳಿತು ಕೇಳಬೇಕು ಅಷ್ಟೇ. ಮಾತಿನ ಶಕ್ತಿ ಸಾಮಥ್ರ್ಯ ಸುಲಭವಾಗಿ ಅಳೆಯಲಾಗುವುದಿಲ್ಲ. ಐನ್‍ಸ್ಟೈನ್ ಒಬ್ಬ ವಿಜ್ಞಾನಿ. ಮಹಾ ಸಂಶೋಧನೆ ಮಾಡಿದರು. ಒಂದು ಮಾತು ಹೇಳಿದರು. ಅದು ಜಗತ್ತಿನ ರಹಸ್ಯ ಬೇಧಿಸಿತು.

ಇದಕ್ಕಾಗಿ ಜೀವನವೇ ಮುಡಿಪಾಗಿಟ್ಟರು. ಮಾತಿನಲ್ಲಿ ಅದ್ಭುತ ಶಕ್ತಿ ಇದೆ. ಅದು ಒಂದು ವಸ್ತುವಿನಲ್ಲಿರುವ ಪರಮಾಣು ತರಹ ಇದೆ. ಪರಮಾಣು ಸಣ್ಣದು ಅದರಲ್ಲಿರುವ ಶಕ್ತಿ ಅಪ್ರತಿಮ, ಅದ್ಭುತ, ಹುದುಗಿಕೊಂಡಿದೆ. ಬಿಚ್ಚಿಟ್ಟರೆ ಜಗತ್ತನ್ನೇ ಬೆಳಗುತ್ತದೆ ಆ ಅಣು. ಜಗತ್ತನ್ನೇ ಬದಲಾಯಿಸಿತು. ಜಗತ್ತನ್ನೇ ದೇವನ ಎತ್ತರಕ್ಕೆ ಕೊಂಡೊಯ್ದರು. ಹಾಗಾಗಿ ಮಾತು ಮಂತ್ರ. ಮನಸ್ಸು ಪವಿತ್ರಗೊಳಿಸುತ್ತದೆ. ಕತ್ತಲೆ ಕಳೆಯುತ್ತದೆ.

ಶರಣರು ಆಡಿದ ಮಾತುಗಳು ಮಂತ್ರಗಳು ಮನಸ್ಸು ತೊಳೆಯುತ್ತವೆ. ವಿಕಸಿತಗೊಳಿಸುತ್ತದೆ. ಅಣುವಿನ ಶಕ್ತಿಗಿಂತ ಮಾತಿನ ಶಕ್ತಿ ಮೇಲು. ಅನುಭಾವ ತುಂಬಿದ ಮಾತುಗಳಿಂದ ದೇವನನ್ನು ಹಿಡಿದಿಟ್ಟರು. ಶರಣರ ಮಾತು ಕೇಳಿದ ನಾವು ಬಡವರಲ್ಲ. ಐನ್‍ಸ್ಟೈನ್ ಹೊರಗೆ ಸಿರಿವಂತನಲ್ಲ. ಅವನ ಮಾತು ಸಿರಿತನ ತುಂಬಿತ್ತು.

ಭಗವಂತನೇ ನನಗೇನು ಕೊಡಬೇಡ ಮಹಾತ್ಮರ ಮಾತು ಕೇಳುವ ಸೌಭಾಗ್ಯ ಕೊಡು. ಸೂಳ್ನುಡಿ ಎಂದರೆ ಸತ್ಯದ ಬೆಳಕು, ಆರದಂತ ಬೆಳಕು, ಆನಂದ ಪೂರ್ಣಗೊಳಿಸುವ ಶಕ್ತಿ. ಅದು ಜಗತ್ತನ್ನು ವಿಸ್ತಾರಗೊಳಿಸುತ್ತದೆ. ಅಂಥ ಮಾತು ಮೆಲುಕು ಹಾಕಬೇಕು. ಮನಸ್ಸು ಆನಂದದಿಂದ ತುಂಬಿಸುತ್ತದೆ. ಒಳ್ಳೆಯ ಮಾತು ಎದೆಯೊಳಗಿದ್ದರೆ ನಾವೆಲ್ಲ ಸಿರಿವಂತರು. ಅದು ಅಭೌತ ಸಂಪತ್ತು. ಮಾನವನಿಗೆ ದೇವನ ಅನುಭೂತಿ ತಂದು ಕೊಡುತ್ತದೆ.

ಸಂತರ ಶರಣರ ಮಾತುಗಳು ಬದುಕು ಅದ್ಭುತಗೊಳಿಸುತ್ತದೆ. ಕೇಳಬೇಕು ಹೇಳಬೇಕು ಮೆಲುಕು ಹಾಕಬೇಕು ಭಾವನೆಗಳು ಅಮೃತ. ಅವಕಾಶ ಕಲ್ಪಿಸಿಕೊಳ್ಳಬೇಕು. ನನ್ನವೂ ಅಲ್ಲ ನಿಮ್ಮವೂ ಅಲ್ಲ. ನುಡಿದರೆ ಮುತ್ತಿನಂಥ ನುಡಿಗಳು ಶರಣರವು. ಅವು ಆತ್ಮನಿಗೆ ಪರಮಾತ್ಮನನ್ನು ದರ್ಶಿಸುತ್ತದೆ. ಸುಂದರ ಮಾತುಗಳು ಕೇಳುವ ಅವಕಾಶ ಕೊಡು ಭಗವಂತನೆ. ಹಬ್ಬದ ದಿನಗಳಲ್ಲಿ ತಾವು ಕೇಳುವುದೆಲ್ಲ ಮಾತು. ಹೃದಯದಲ್ಲಿ ಇಳಿದಾಗ ಮಾನವನೇ ಶರಣ. ತಾವೆಲ್ಲರೂ ಶರಣರು. ಕಿಸೆ ತುಂಬುವುದಕ್ಕಿಂತ ಎದೆ ತುಂಬಿಕೊಳ್ಳಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here