ಆನುದೇವ ಹೊರಗಣವರಾಗಿ ಹೊರಗಿನವರನ್ನೊಳಗೊಳ್ಳೋಣ…

0
245

ಇಂದಿಗೂ ಈ ನಾಡಲ್ಲಿ ಕೆಲವು ಸಂದರ್ಭದಲ್ಲಿ ಅಸ್ಪೃಶ್ಯತೆಯ ಆಚರಣೆ ನಡೆಯುತ್ತಿರುವುದು, ಅಸ್ಪೃಷ್ಯರಿಗೆ ಸಣ್ಣಪುಟ್ಟ ಕಾರಣಗಳಿಗಾಗಿಯೇ ಬಹಿಷ್ಕಾರ ಹಾಕುವುದು, ದೇವಸ್ಥಾನದೊಳಗೆ ಅವರುಗಳನ್ನು ಬಿಟ್ಟುಕೊಳ್ಳದಿರುವ ಹಲವಾರು ಪ್ರಕರಣಗಳನ್ನು  ಗಮನಿಸುತ್ತಿರುತ್ತೇವೆ. ಇಂಥ ಸಂದರ್ಭದಲ್ಲೆಲ್ಲ ನಮ್ಮಂಥವರ ಕಣ್ಣಂಚು ಒಂಚೂರು ಒದ್ದೆಯಾಗುತ್ತದೆ. ಏನೋ ಒಂದು ಬರೆದೋ, ಒಂದಿಷ್ಟು ಮಾತನಾಡಿಯೋ ಕೈ ತೊಳೆದುಕೊಳ್ಳ್ಳುತ್ತೇವೆ. ಆದರೆ ನಾವು ಅವರಾಗಿ ಯೋಚಿಸಿದಾಗ? ಇದೆಂಥ ಅಮಾನವೀಯತೆ ಎನಿಸುತ್ತದೆ. ಸಂಕಟಪಡುತ್ತೇವೆ. ಹನ್ನೆರಡನೆ ಶತಮಾನದಲ್ಲಿ ಇನ್ನೆಂಥ ಅಮಾನವೀಯತೆ ಇದ್ದೀತೆಂದು ಒಂದಿನಿತು ಯೋಚಿಸಿದರೆ ದಿಗ್ಭ್ರಮೆಯಾಗುತ್ತದೆ.

Contact Your\'s Advertisement; 9902492681

ಹೌದು, ಅಂದು ಅಸ್ಪೃಷ್ಯನೊಬ್ಬನ ಬದುಕಿನ ಕ್ರಮ ತೀರಾ ನಿಕೃಷ್ಟವಾಗಿತ್ತು. ಊರೊರಗಡೆ ಇದ್ದ ತನ್ನ ಕೇರಿ ಬಿಟ್ಟು ಊರೊಳಗಿರುವವರ ಸ್ಥಳಕ್ಕೆ ಬರುವಂತಿರಲಿಲ್ಲ. ಆಕಸ್ಮಿಕವಾಗಿ ಬರಬೇಕಾದರೆ ಆತನ ನೆರಳು ಸಹ ನೆಲದ ಮೇಲೆ ಬೀಳಲು ಹೆಚ್ಚು ಅವಕಾಶವಿಲ್ಲದ ಅವಧಿ ಅಂದರೆ ಮಧ್ಯಾಹ್ನ ಸುಮಾರು ಹನ್ನೆರಡಕ್ಕೆ ಹೆಚ್ಚಿನ ಜನ ಸಂಚಾರವಿಲ್ಲದ ಸಮಯದಲ್ಲಿ ಬರಬೇಕು. ತಾನು ನಡೆದುಕೊಂಡು ಹೋದ ನಂತರ ತನ್ನ ಹೆಜ್ಜೆ ಗುರುತುಗಳೂ ಸಹ ಉಳಿಯದಂತೆ ಮಾಸಿ ಹೋಗಬೇಕು ಅದಕ್ಕಾಗಿ ಬೆನ್ನ ಹಿಂದೆ ಪೊರಕೆಯೊಂದನ್ನು ಕಟ್ಟಿಕೊಂಡು ನಡೆಯಬೇಕು ಆತ ಮುಂದೆ ಮುಂದೆ ಸಾಗಿದಂತೆ ಆ ಪೊರಕೆ ಆತನ ಹೆಜ್ಜೆ ಗುರುತುಗಳನ್ನು ಅಳಿಸುವಂತಿರಬೇಕು. ಆತ ನೆಲದ ಮೇಲೆ ಉಗುಳಬಾರದು. ಉಗುಳಬೇಕೆನಿಸಿದರೆ ಕೊರಳಲ್ಲೊಂದು ಬಟ್ಟಲು ಕಟ್ಟಿಕೊಂಡಿರಬೇಕು ಅದರಲ್ಲಿಯೇ ಉಗುಳಬೇಕು. ಆತ ನಡೆದುಕೊಂಡು ಬರುವಾಗ ಉಚ್ಛ ಜಾತಿಯವರು ಆಕಸ್ಮಾತ್ತಾಗಿ ಆತನಿಗೆದುರಾಗಿ ಬಂದರೆ ಆತನ ದೃಷ್ಠಿ ಅವರ ಮೇಲೆ ಬಿದ್ದು ಅವರಿಗೆ ಕೆಟ್ಟದ್ದಾಗಬಹುದೆಂದು ಯಾರೂ ಎದುರಿಗೆ ಬರುತ್ತಿರಲಿಲ್ಲ. ಆತ ಬರುತ್ತಿದ್ದಾನೆಂದು ತಿಳಿದುಕೊಳ್ಳಲು ಹಾಗೆ ನಡೆದುಕೊಂಡು ಬರುತ್ತಿರುವ ಅಸ್ಪೃಷ್ಯ ಸಂಭೋಳಿ ಎಂದು ಕೂಗುತ್ತಾ ನಡೆದುಕೊಂಡು ಬರುತ್ತಿರಬೇಕು. ಈ ಶಬ್ದ ಕೇಳಿಸಿಕೊಂಡರೆ ಉಚ್ಛ ಜಾತಿಯವರು ತಾವಿರುವಲ್ಲಿಯೇ ಮರೆಯಾಗಿಬಿಡುತ್ತಿದ್ದರು.

ಅಬ್ಬಾ ಈ ಚಿತ್ರಣವನ್ನೊಮ್ಮೆ ಸುಮ್ಮನೆ ಊಹಿಸಿಕೊಳ್ಳಿ. ಮನಸ್ಸಿಗೆ ಎಷ್ಟೊಂದು ಹಿಂಸೆಯಾಗುತ್ತದೆಯಲ್ಲವೇ? ನಿಜ ಇದು ಅಂದಿನ ಕಟು ವಾಸ್ತವತೆ. ಕರ್ಮಠರ ಅಮಾನವೀಯತೆಯ ಪರಮಾವಧಿ. ಮೌಢ್ಯತೆಯ ಅಂಧಶ್ರದ್ಧೆಯಾಗಿತ್ತು. ಮೀನ-ಹಂದಿ (ಮತ್ಸ್ಯ-ವರಹಾವತಾರ)ಗಳೂ ಸಹ ದೇವರ ಅವತಾರವಾಗಿ ಪೂಜಿಸಿಕೊಳ್ಳುತ್ತಿದ್ದ ಕಾಲದಲ್ಲಿ ಒಬ್ಬ ಮನುಷ್ಯನನ್ನು ಇಷ್ಟೊಂದು ನಿಕೃಷ್ಠವಾಗಿ ಕಾಣುವುದು ನಿಜಕ್ಕೂ ಅಕ್ಷಮ್ಯ.

ಇದೇ ಅವಧಿಯಲ್ಲಿ ಬಸವಕಲ್ಯಾಣದ ಭಾಗದಲ್ಲಿ ನಾಗ ಎಂಬ ಒಬ್ಬ (ಶ್ವಪಚ)ಅಸ್ಪೃಷ್ಯನಿದ್ದ. ಈತನಿಗೆ ಸಂಭೋಳಿ ನಾಗ, ಸಂಭೋಳಿ ನಾಗಯ್ಯ ಎಂದೇ ಗುರುತಿಸಿದ್ದರು. ಬಹುಶಃ ಈತ ಕಂಬಳಿ ನೇಯುವ ಕಾಯಕ ಮಾಡುತ್ತಿರುವುದರಿಂದ ಈತನಿಗೆ ಕಂಬಳಿ ನಾಗಯ್ಯ ಎಂತಲೂ ಕರೆಯುತ್ತಿದ್ದರು. ಮೂಲತಃ ವಿಳಾಸವಿಲ್ಲದ ಇಂಥವರನ್ನು ಹೀಗೆ ತಾನೇ ನಮ್ಮ ಸಮಾಜ ಗುರುತಿಸುವುದು. ಮೇಲೆ ವಿವರಿಸಿದ ಮಾದರಿಯಲ್ಲಿಯೇ ಈತ ಅವಶ್ಯವಿದ್ದಾಗ ಊರೊಳಗೆ ಪ್ರವೇಶ ಮಾಡುತ್ತಿರಬೇಕಾಗಿದ್ದೊಂದು ಅನಿವಾರ್ಯತೆ ಇತ್ತು. ಒಂದೊಮ್ಮೆ ಆಕಸ್ಮಿಕವಾಗಿ ’ಸಂಭೋಳಿ’ ಎಂದು ಕೂಗುವುದನ್ನು ಬಿಟ್ಟು ಹಾಗೆ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿದ ಕೆಲ ಉಚ್ಚ ಜಾತಿಯ ಕರ್ಮಠರು ಈತನನ್ನು ಹಿಡಿದುಕೊಂಡು ಮನಬಂದಂತೆ ಥಳಿಸುತ್ತಾರೆ. ಹಿಂಸೆ ಕೊಡುತ್ತಾರೆ. ಅವರ ಏಟುಗಳನ್ನು ತಾಳದೇ ತಲೆ ತಗ್ಗಿಸಿ ತಪ್ಪಾಯ್ತು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ಈತನ ಆಕ್ರಂದನಕ್ಕೆ ಸ್ಪಂದಿಸುವವರು ಅಲ್ಲಿರಲಿಲ್ಲ. ಆಗ ಭೌತಿಕ ನೋವಿಗಿಂತಲೂ ಮಾನಸಿಕವಾಗಿ ಅನುಭವಿಸುವ ಹಿಂಸೆಯು ತೀವ್ರವಾಗಿರುತ್ತದೆ.

ತಕ್ಷಣಕ್ಕೆ ಯಾರೋ ಒಬ್ಬರು ಆಪ್ತವಾಗಿ ಈತನನ್ನು ತಬ್ಬಿಕೊಂಡು ಸಂತೈಸುವಂತೆ ಈತನ ಗಮನಕ್ಕೆ ಬರುತ್ತದೆ. ತಲೆತಗ್ಗಿಸಿ ಕಣ್ಣು ಮುಚ್ಚಿಕೊಂಡಿದ್ದ ಈತನನ್ನುದ್ದೇಶಿಸಿ ತಬ್ಬಿಕೊಂಡಿರುವ ಅವರು ನಾಗಯ್ಯ ನಾನಾರು ಹೇಳಬಲ್ಲೆಯಾ ಎನ್ನುತ್ತಾರೆ. ಇಂಥ ಸಂಕಷ್ಟದಲ್ಲಿ ನನ್ನಂಥ ನೀಚ ಕುಲದವನನ್ನು ಸಂತೈಸುತ್ತಿರಬೇಕಾದರೆ ನೀವು ಬಸವಣ್ಣನಲ್ಲದೇ ಮತ್ತಾರಿರಲು ಸಾಧ್ಯ. ನೀವು ಬಸವತಂದೆಯೇ ಇದ್ದಿರಬೇಕು ಎಂದೆನ್ನುತ್ತಾರೆ ನಾಗಯ್ಯ. ಬಸವಣ್ಣನ ಬಗ್ಗೆ ಅಷ್ಟೊಂದು ಆಪ್ತ ಭರವಸೆ ನಾಗಯ್ಯನದ್ದು. ಬಸವಣ್ಣನವರು  ತಾವು ಚಿಂತಿಸಿ ನುಡಿದಿದ್ದನ್ನು ನಡೆಯಲ್ಲಿ ತರುವ ಈ ಪರಿಗೆ, ಅವರ ನಡೆಯ ಕಂಡು ಅವರ ಲಿಂಗ ಮೆಚ್ಚಿ ಹೌದೌದೆನ್ನುತ್ತಿತ್ತು. ಇದೇ ಈ ನಡೆಯೇ ಶರಣರ ಸಾರ್ಥಕತೆಯಾಗಿದೆ.

ಅಂದು ಅಸ್ಪೃಷ್ಯರ ಪಾಲಿಗೆ ಬಸವಣ್ಣ ಮಹಾಮಾನವ, ದೇವಮಾನವರಾಗಿದ್ದರು. ಬಸವಣ್ಣನವರು ನೆರೆದವರನ್ನೆಲ್ಲ ಚೆದುರಿಸಿ ಸಂಭೋಳಿ ನಾಗಯ್ಯನನ್ನು ಬಿಡಿಸಿಕೊಂಡು ಸಂತೈಸಿಸುತ್ತಾರೆ. ತಮ್ಮ ಸಂಸರ್ಗಕ್ಕೆ ಬಂದ ಆತನಿಗೆ ಲಿಂಗತತ್ವ ತಿಳಿಸಿ, ಇಷ್ಟಲಿಂಗ ಧಾರಣೆ ಮಾಡಿಸಿ ಶರಣನನ್ನಾಗಿಸುತ್ತಾರೆ. ಎಲ್ಲರ ದೃಷ್ಟಿಯಲ್ಲಿ ಸಂಭೋಳಿ ನಾಗ, ಸಂಭೋಳಿ ನಾಗಯ್ಯನಾಗಿದ್ದು ನಿಕೃಷ್ಟವಾದ ಬದುಕನ್ನು ಬದುಕಿ ಬಸವಳಿದಿದ್ದ ಆತನನ್ನು ಶರಣ ಶಿವನಾಗಮಯ್ಯನಾಗುವಂತೆ ಮಾಡುತ್ತಾರೆ. ತುಳಿತಕ್ಕೊಳಪಟ್ಟ ಇಂಥವರ ಒಡಲ ಅಳಲಿಗೆ ಧ್ವನಿಯಾದವರೇ ಬಸವಣ್ಣ. ಈ ಬಗೆಯ ಅಂತಃಕರಣ ಬಸವಣ್ಣನಿಗಲ್ಲದೇ ಮತ್ತಾರಿಗಿದೆ?

ಹೀಗೆ ತುಳಿತಕ್ಕೊಳಪಟ್ಟ ಅನೇಕರನ್ನು ಬಸವಣ್ಣನವರು ತಮ್ಮೊಂದಿಗೆ ಶರಣ ಸಂಸ್ಕೃತಿಯಲ್ಲಿ ಸಮಾನವಾಗಿ ಗುರುತಿಸಿಕೊಂಡಿದ್ದಾರೆ. ಅಂದು ಸವರ್ಣಿಯರೂ ಸೇರಿದಂತೆ ಕೆಳಜಾತಿಯವರೂ ಬಸವಣ್ಣನವರ ಪರಿಕಲ್ಪನೆಯ ಇಷ್ಟಲಿಂಗ ಧಾರಣೆ ಮಾಡಿಕೊಳ್ಳುವ ಮೂಲಕ ಸರ್ವಸಮ್ಮತದ ನವ ಸಮಾಜವೇ ತಾವಾಗಿದ್ದು ಹೊರಗಡೆ ದೇವರನ್ನುಡುಕುವ ಗೋಜಿಗೋಗದೇ ತಮ್ಮೊಳಗಿನ ದೇವರ ಅರಿವನ್ನು ಅರಿತುಕೊಂಡು ಎಲ್ಲರೂ ಸಮಾನರಾಗಿ ಪ್ರತಿಯೊಬ್ಬರೂ ಆ ಪರಮಾತ್ಮನ ಅಂಶವಾದ ಆತ್ಮವಾಗಿ, ಜೀವಾತ್ಮವಾಗಿ ಅಂದಿನವರೆಗಿದ್ದ ಅಸಮಾನತೆಯನ್ನು ಬೇರಿನೊಂದಿಗೆ ಕಿತ್ತೊಗೆದಿದ್ದರು. ಇದೊಂದು ಬಗೆಯ ಸಾಮಾಜಿಕ ಕ್ರಾಂತಿಯೇ ಆಗಿತ್ತು. ಬಸವಣ್ಣನವರ ಧೋರಣೆಯಂತೆ ಅಂತರಂಗದೊಂದಿಗೆ ಬಹಿರಂಗದ ಶುದ್ಧಯೂ ಆಗಿತ್ತು.

ಹೀಗೆ, ಬಸವಣ್ಣನವರ ಸಂಸರ್ಗದಿಂದ ಶರಣ ಶಿವನಾಗಮಯ್ಯರಾದ ಸಂಭೋಳಿ ನಾಗಿದೇವರು ಬಸವಣ್ಣನವರ ಸಮಕಾಲೀನರಾಗಿದ್ದವರು. ಇವರ ಕಾಲ ೧೧೬೦ ಇವರು ಸುಮಾರು ಮೂರು ವಚನಗಳನ್ನು ನಾಗಪ್ರಿಯ ಚೆನ್ನರಾಮೇಶ್ವರ ಎಂಬ ಅಂಕಿತ ನಾಮದಲ್ಲಿ ರಚಿಸಿದ್ದಾರೆ. ಇಂದು ಬಸವಕಲ್ಯಾಣದಲ್ಲಿ ಕಂಬಳಿ ನಾಗಿದೇವರ ಮಠವೊಂದಿದೆ. ಅಲ್ಲೊಂದು ಗದ್ದುಗೆ, ಲಿಂಗ, ನಂದಿ, ಜೋಡಿ ಪಾದುಕೆಗಳಿವೆ. ಇಲ್ಲಿಯೇ ನಾಗಿದೇವರು ಇರುತ್ತಿದ್ದರೆಂಬುದೊಂದು ಪ್ರತೀತಿ. ಅಸ್ಪೃಶ್ಯರ ಮಠ ನಡು ಊರಲ್ಲಿದ್ದದು ಹೆಚ್ಚಿನ ಮಹತ್ವವಿದೆ. ಶರಣರ ಭೌತಿಕ ಬದುಕಿನ ಬಗ್ಗೆ ಸ್ಥಳ, ಕಾಲ, ತಂದೆ-ತಾಯಿ, ಲಿಂಗೈಕ್ಯ, ಸಮಾಧಿ ಇವೆಲ್ಲವುಗಳ ನೈಜತೆಗಿಂತ ಶರಣರು ತೋರಿದ ಧೋರಣೆ ಮತ್ತು ಅನುಭಾವಿಸಿದ ವಿಚಾರಗಳಿಗೆ ಮಹತ್ವ ಕೊಡಬೇಕೆಂದೇ ನನ್ನ ಅನಿಸಿಕೆ. ಈ ದೃಷ್ಟಿಯಿಂದ ನನ್ನ ವಿಚಾರಗಳನ್ನು ಅವಲೋಕಿಸಿ.

ಲಿಂಗ ತತ್ವದ ಮಹತ್ವವನ್ನು ಕೇವಲ ಲಿಂಗ ಧರಿಸುವುದರಲ್ಲಿಲ್ಲ ಲಿಂಗ ತತ್ವದ ಆಚಾರದಲ್ಲಿದೆ. ನಡೆಯಲ್ಲಿದೆ ಎಂಬ ವಿಚಾರಗಳನ್ನು ಬಹಳ ಆಪ್ತವಾಗಿ ಶಿವನಾಗಮಯ್ಯ ತಮ್ಮ ವಚನಗಳಲ್ಲಿ ಬಿಂಬಿಸುತ್ತಾರೆ. ಅಂಗದ ಮೇಲೆ ಲಿಂಗಿವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು. ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗ ಮುಂತಾಗಿ ಎಲ್ಲಾ ಕ್ರೀಗಳನೂ ಗಮಿಸಬೇಕಲ್ಲದೆ ಅಂಗ ಮುಂತಾಗಿ ಗಮನಿಸಲಾಗದು. ಲಿಂಗ ಸಂಬಂಧಿಯಾಗಿ ಅಂಗ ಮುಂತಾಗಿಪ್ಪವರು ಲಿಂಗಕ್ಕೆ ದೂರವಯ್ಯಾ ನಾಗಪ್ರಿಯ ಚೆನ್ನರಾಮೇಶ್ವರಾ.  ಎಂಬುದೊಂದು ಇವರ ಪ್ರಸಿದ್ದ ವಚನವಾಗಿದೆ. ಇದೊಂದು ವಚನವೇ ಸಾಕು ಲಿಂಗನಿಷ್ಠೆ ಮತ್ತು ಶರಣ ತತ್ವಗಳಾಚರಣೆಯಲ್ಲಿರುವ ಇವರ ಕಕ್ಕಲುತನ, ಕಳಕಳಿಯನ್ನು ಅರಿಯಲು. ಇವರ ಈ ವಚನವನ್ನು ಹಲವಾರು ಆಯಾಮಗಳಲ್ಲಿ ವಿಶ್ಲೇಷಿಸಿಕೊಳ್ಳಬಹುದಾಗಿದೆ. ಇಷ್ಟಲಿಂಗಧಾರಿಗಳನ್ನುದ್ದೇಶಿಸಿ, ಅಂಗದ ಮೇಲೆ ಲಿಂಗವಿದ್ದ ಬಳಿಕ ಅವರು ಲಿಂಗವಂತರಾಗಿರಲೇಬೇಕು. ಲಿಂಗಧಾರಣೆ ಮಾಡಿಕೊಂಡವರು ಲಿಂಗ ಧರಿಸದವರನ್ನು ಬೇರೆಯಾಗಿಡುವುದಲ್ಲ. ಲಿಂಗವಿಲ್ಲದಿದ್ದರೂ ಲಿಂಗತತ್ವವನ್ನಳವಡಿಸಿಕೊಂಡವರನ್ನೂ ಸಹ ಇವನಾರವ ಇವನಾರವನೆಂದೆಣಿಸದೇ ತಮ್ಮವರೆನ್ನಬೇಕು. ಇಲ್ಲಿ ಸಮಸಮಾಜದ ಭಾವವನ್ನು ಕಾಣುತ್ತೇವೆ.

ಹೀಗೆ ಲಿಂಗಧಾರಿಯಾಗಿರಲಿ ಅಥವಾ ಲಿಂಗಧಾರಿಗಳಾಗಿರದೇ ಲಿಂಗತತ್ವಗಳನ್ನಳವಡಿಸಿಕೊಂಡವರೇ ಆಗಿರಲಿ ತಾವು ದೈನಂದಿನ ನಡೆಯಲ್ಲಿ ನಡೆದುಕೊಳ್ಳುತ್ತಿರುವ ಎಲ್ಲಾ ಕ್ರಿಯೆಗಳನ್ನು ಬಹಳ ಗಂಭೀರವಾಗಿ ಎಚ್ಚರಿಕೆಯಿಂದ ಗಮನಿಸುತ್ತಿರಬೇಕು. ಬರೀ ಲಿಂಗವನ್ನಷ್ಟೇ ಗಮನಿಸುತ್ತಿದ್ದರೆ, ಲಿಂಗವನ್ನಿಡಿದುಕೊಂಡಿದ್ದರಷ್ಟೇ ಸಾಲದು ನಾನು ಅನುಸರಿಸುತ್ತಿರುವ ನನ್ನ ನಡೆಯಲ್ಲಿ ಲಿಂಗತತ್ವವಿದೆಯೇ? ನನ್ನ ನುಡಿ-ನಡೆ ಒಂದಾಗಿವೆಯೇ? ಎಂಬುದನ್ನು ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊಳ್ಳ್ಳುತ್ತಿರಬೇಕು. ನನ್ನ ನಡೆಯನ್ನು ಕಂಡ ನನ್ನ ಲಿಂಗ ಮೆಚ್ಚಿ ಹೌದೌದೆನ್ನಬೇಕು. ಅಂಗ-ಲಿಂಗಗಳಲ್ಲಿ ಸಾಮರಸ್ಯವಿದೆಯೇ? ಅಂಗದೆಲ್ಲಾ ಚಟುವಟಿಕೆಗಳು ಕಟ್ಟಿಕೊಂಡ ಲಿಂಗಕ್ಕೆ ಅಥವಾ ಲಿಂಗ ತತ್ವಕ್ಕೆ ತಲೆಬಾಗುವಂತಿರಬೇಕು. ನೆಪ ಮಾತ್ರಕ್ಕೆ ಲಿಂಗವನ್ನು ಕಟ್ಟಿಕೊಂಡು ಅಂಗಗುಣಗಳ ಆಮಿಷಕ್ಕೆ ಒಳಗಾಗಿದ್ದವರು ಲಿಂಗಕ್ಕೆ ಅಥವಾ ಲಿಂಗ ತತ್ವಕ್ಕೆ ದೂರಿದಂತೆ, ನಿಂದಿಸಿದಂತೆ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಹೀಗೆ ಇಷ್ಟಲಿಂಗವೆಂಬುದು ಕೇವಲ ಕೊರಳಲ್ಲಿ ಧಾರಣೆ ಮಾಡಿಕೊಂಡರಷ್ಟೇ ಸಾಲದು ಅಂಗದ ಮೇಲಿನ ಆ ಇಷ್ಟಲಿಂಗ ಅಂಗದೊಳಗಿಳಿದು ಅಂಗಾಂಗವೆಲ್ಲವೂ ಲಿಂಗಾಂಗವಾಗಿ, ಅಂಗವೇ ಲಿಂಗವಾಗಿ, ಆತನೇ ಲಿಂಗವಾಗಿ, ಆತನ ನುಡಿ ಮತ್ತು ನಡೆಗಳನ್ನು ಗಮನಿಸಿದ ಆತನೊಳಗೇ ಇರುವ ಲಿಂಗವೇ ಮೆಚ್ಚಿ ಹೌದೌದೆನ್ನುವಂತಿರಬೇಕು. ಹೀಗೆ ಈ ವಚನ ಭೌತಿಕ ಲಿಂಗಧಾರಿಗಳಿಗೆ ಉತ್ತಮ ಮಾರ್ಗದರ್ಶಿಯಾಗಿದೆ. ಹಾಗೆಯೇ ಭೌತಿಕ ಇಷ್ಟಲಿಂಗವಿಲ್ಲದೆಯೂ ಲಿಂಗತತ್ವವನ್ನಳವಡಿಸಿಕೊಂಡು ತತ್ವ ಸಂಬಂಧಿಯಾಗಿ ಮನದೊಳಗಣ ಇಷ್ಟಲಿಂಗಕ್ಕೆ ಬದ್ದರಾಗಿ ನಡೆ-ನುಡಿಯನ್ನೊಂದಾಗಿಸಿಕೊಳ್ಳಲೂಬಹುದೆಂಬುದನ್ನು ಈ ವಚನದೊಳಗಿನ ಸೂಕ್ಷ್ಮತೆಯಲ್ಲಿ ತಿಳಿದುಬರುತ್ತದೆ. ಇಂಥ ಇಷ್ಟಲಿಂಗಧಾರಿಗಳು ತಮ್ಮ ಪೂರ್ವಾಶ್ರಮವನ್ನೆಂದಿಗೂ ಅರಸಲೇಬಾರದು. ಮನುವಾದಿಗಳಿಂದ ಅಸ್ಪೃಶ್ಯರೆನಿಸಿಕೊಂಡವರನ್ನು ಇಷ್ಟಲಿಂಗಧಾರಿಗಳು ಕಡೆಗಾಣಿಸಿದರೆ ಲಿಂಗತತ್ವಕ್ಕೆ ಅಪಚಾರ ಮಾಡಿ ದೂರವಾದಂತೆಯೇ ಸರಿ.

ಘನಸುಖ ಮಹಾಸುಖವ ಮುಟ್ಟಲು, ಸಮಸುಖಂಗಳ ಸುಖಿಸಬಲ್ಲ, ಸುಖವನಲ್ಲಿಯೇ ಕೊಯ್ದು ಸೂಡ ಕಟ್ಟಬಲ್ಲ, ನಾಗಪ್ರಿಯ ಚೆನ್ನರಾಮೇಶ್ವರಾ ಎಂಬ ಇನ್ನೊಂದು ವಚನದಲ್ಲಿ ಉತ್ಕೃಷ್ಟವಾದ ಸುಖವನ್ನಾಗಲೀ ಮಹಾ ಸುಖವನ್ನಾಗಲೀ ಮುಟ್ಟಿ ಅನುಭವಿಸಲು ಸಮಾನತೆಯನ್ನು ಯಾರು ಸುಖಿಸುತ್ತಾರೆಯೋ ಅಂದರೆ ಸಮಸುಖಂಗಳ ಸುಖಿಸುವಾತನಿಗೆ ಮಾತ್ರ ಸಾಧ್ಯ ಹೀಗೆ ಸಮಾನತೆಯಲ್ಲಿ ಸಮಸುಖಿಯಲ್ಲಿ ಸುಖಿಯಾಗಿರಬಲ್ಲಾತ ಸುಖವನ್ನು ಕೊಯ್ದು ಸೂಡು ಕಟ್ಟಿಕೊಳ್ಳಬಲ್ಲ. ಅಂಥ ಸಂಬೃದ್ಧವಾದ ಪರಮ ಸುಖವನ್ನು ಸುಖಿಸಬಲ್ಲ ಎಂಬ ವಿಚಾರವನ್ನು ಸಮಾನತೆಯ ತತ್ವದಲ್ಲಡಗಿದ ಉತ್ಕೃಷ್ಟವಾದ ಸುಖದ ಪರಿಕಲ್ಪನೆಯನ್ನು ಬಿಂಬಿಸಿದ್ದಾರೆ. ಹಾಗೆಯೇ ಅಂಥ ಸುಖವನ್ನನುಭವಿಸುವ ಕ್ರಮವನ್ನು ಸಹ ತಿಳಿಸಿದ್ದಾರೆ.

ಸ್ಪರ್ಷಿಸಿಕೊಳ್ಳಲು, ಸ್ಪರ್ಷಿಸಲು ಅಯೋಗ್ಯವೆನಿಸಿಕೊಳ್ಳುವ ವ್ಯಕ್ತಿಯನ್ನು ಸ್ಪರ್ಷಿಸಿ ಸಂತೈಸಿ ಆತನನ್ನೇ ಶಿವಶರಣನನ್ನಾಗಿಸಿ ಆತನಿಂದಲೇ ಬಹು ಅದ್ಭುತವಾದ ಇಷ್ಟಲಿಂಗ ಮತ್ತು ಇಷ್ಟಲಿಂಗ ತತ್ವದ ಮೂಲಕ ಇಡೀ ಶರಣಸಂಕುಲಕ್ಕೆ ಮಾರ್ಗದರ್ಶಿಯಾಗುವಂಥ ತತ್ವವನ್ನು ಅನಾವರಣಗೊಳಿಸಲು ಬಸವಣ್ಣ ಕಾರಣನಾಗುತ್ತಾರೆ. ಹೀಗೆ ನುಡಿದು ನಡೆದುಕೊಂಡ ’ಶಿವನಾಗಮಯ್ಯ’ ಅಥವಾ ’ಶಿವನಾಗಿದೇವ’ ಶರಣರು ಇಂದು ಶರಣ ಸಂಕುಲದಲ್ಲಿ ಉಪಮಿಸಬಾರದ ಉಪಮಾತೀತರು. ಯಾರನ್ನು ನಿಕೃಷ್ಟರೆಂದು ಈ ವ್ಯವಸ್ಥೆ ತಿಳಿದುಕೊಂಡಿತ್ತೋ ಅಂಥವರಲ್ಲಿ ಇಂಥ ಅದ್ಭುತವಾದ ಚಿಂತನೆಗಳಿವೆ ಎಂಬುದನ್ನು ಗುರುತಿಸಿದ ಬಸವಣ್ಣನವರ ಜೊತೆಜೊತೆಗೆ ಅಕ್ಷರಶಃ ಅನಾಮಿಕರಾಗಿಯೇ ಉಳಿದುಬಿಟ್ಟಿರುವ ಇಂಥ ಮಹಾ ಶರಣರ ಬಗ್ಗೆಯೂ ತಿಳಿದುಕೊಳ್ಳುವ ಅವಶ್ಯಕತೆ ಇಂದಿದೆ. ನುಡಿದರೆ ಲಿಂಗ ಮೆಚ್ಚಿ ಹೌದೌದೆನ್ನಬೇಕೆಂದಿರುವ ಬಸವಣ್ಣನವರ ಪ್ರೇರಣೆಯಿಂದಲೇ ಮುಂದುವರಿದೆ ಶಿವನಾಗಿದೇವರು ನಡದರೆ ಲಿಂಗ ಮೆಚ್ಚಿ ಹೌದೌದೆನ್ನಬೇಕು ಎನ್ನುವ ಸಿದ್ದಾಂತಕ್ಕೆ ಬದ್ದರಾಗುತ್ತಾರೆ. ತಮ್ಮ ನಡೆಯಿಂದಲೇ ಲಿಂಗವನ್ನು ಮೆಚ್ಚಿಸಿ ಅದು ಹೌದೌದೆನ್ನಬೇಕೆಂಬುದು ಇಂಥವರ ಒಡಲಳಲು. ಅವರ ಒಡಲ ಹಸಿವೂ ಆಗಿತ್ತು.

ಬಸವಣ್ಣನವರು ಶಿವನಾಗಮಯ್ಯರನ್ನು ’ಹಿರಿಯ ಮಾಹೇಶ್ವರರು’ ಎಂದು ಮಾನ್ಯತೆ ಕೊಟ್ಟು ಗೌರವಿಸುತ್ತಿದ್ದರು. ಒಂದೊಮ್ಮೆ ಬಸವಣ್ಣ ಶಿವನಾಗಮಯ್ಯನ ಮನೆಯಲ್ಲಿ ಪ್ರಸಾದ ಸ್ವೀಕರಿಸಿದ ಕಾರಣಕ್ಕೆ ಬಿಜ್ಜಳ ರಾಜ ಬಯಲಲ್ಲಿ ನಿಲ್ಲಿಸಿ ಬಹಿರಂಗ ವಿಚಾರಣೆಗೊಳಪಡಿಸಿದ್ದ, ತುಳಿತಕ್ಕೊಳಗಾದವರಿಗಾಗಿ ಬಹಿರಂಗ ವಿಚಾರಣೆಗೊಳಗಾದ ಒಬ್ಬ ಪ್ರಧಾನಿ ಬಹುಶಃ ವಿಶ್ವದ ಇತಿಹಾಸದಲ್ಲಿಯೇ ಇಲ್ಲವೇನೋ?

ಇಂದಿಗೂ ಸಹ ಅಸ್ಪೃಷ್ಯತೆಯನ್ನು ಗೌರವದಿಂದಲೇ ಆಚರಿಸುತ್ತಿರುವ ಕೆಲ ಮತಿಹೀನರಿಗೆ ಈ ಎಲ್ಲಾ ವಿಚಾರಗಳು ಮನಮುಟ್ಟುವಂತಾಗಲಿ. ಲಿಂಗವಂತರು, ಲಿಂಗತತ್ವಿಗಳಾದವರಾದರೂ ಇಂಥ ಅಮಾನವೀಯತೆಯ ಅಸ್ಪೃಷ್ಯತೆಯಾಚರಣೆಗೆ ವಿಮುಖವಾಗಿ ಉಚ್ಛ-ನೀಚಗಳೆಂಬ ಭಿನ್ನಭಾವವನ್ನು ತೊರೆಯಲಿ. ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಮೇದಾರ ಕೇತಯ್ಯ, ಹಡಪದ ಅಪ್ಪಯ್ಯ….ಅನುಯಾಯಿಗಳನ್ನು ಅವರವರ ಜಾತಿ/ಗುಂಪಿಗೆ ಸೀಮಿತಗೊಳಿಸದಂತೆ ಅವರನ್ನೂ ಮತ್ತು ಎಲ್ಲರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು ಲಿಂಗಸಂಭಂಧಿಗಳೆಂಬ ಭಾವದಲ್ಲಿ ಸಮಸುಖ-ಸಮಸಮಾಜವೆಂಬ ಬಸವನ ಚಿಂತನೆಗೆ ನೀರೆರೆದು ಮತ್ತೇ ಚಿಗುರಿಸಬೇಕಾಗಿದೆ.

ಅಪಾರ ಕಷ್ಟಕೋಟಲೆಗಳನ್ನನುಭವಿಸಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸಬೇಕೆನ್ನುವ ಶರಣರ ಆಶಯದಂತೆ ನಡೆದುಕೊಂಡು ಅವರೊಳಗೇ ಇರುವ ಅವರದೇ ಇಷ್ಟಲಿಂಗ ಮೆಚ್ಚಿ ಹೌದೌದೆನ್ನುವಂತೆ ಬದುಕಿದ್ದೇ ಆದರೆ ಶಿವನಾಗಮಯ್ಯನವರು ಸ್ಮರಿಸಿಕೊಂಡು ಧನ್ಯರಾಗೋಣ. ಅವರ ಬೆಳಕಿನ ಮಾರ್ಗದಲ್ಲಿ ಸಾಗುತ್ತಲೇ ಇಂದಿಗೂ ಅಲ್ಲಲ್ಲಿ ಅಜ್ಞಾತವಾಗಿಯೇ ಇರುವ ನಾಗ, ಕೆಂಚ, ಮಾದ, ಸಂಕವ್ವ, ಕಾಳವ್ವ, ಮತ್ತು ದುರ್ಗವ್ವರಂಥ ವಿಳಾಸವಿಲ್ಲದವರ ಪರವಾಗಿ ನಿಂತು ಅವರುಗಳ ಒಡಲಿನ ಅಳಲು ಮತ್ತು ಅವರ ಒಡಲಿನ ಹಸಿವು ಏನಾಗಿತ್ತೆಂಬುದನ್ನು ಅಂತಃಕರಣದಿಂದ ಅರಿಯಬೇಕಿದೆ. ಬಸವಾದಿ ಪ್ರಮಥರ ಆಶಯದಂತೆ, ಅವರು ಕಾಣಬೇಕೆಂದು ಬಯಸಿದ್ದ ಪ್ರಗತಿಪರ ವ್ಯವಸ್ಥೆಯ ಕಟ್ಟುವಿಕೆಗಾಗಿ ನಾವು ಆನುದೇವ ಹೊರಗಣವರಾಗಿ ಹೊರಗಿನವರೆಲ್ಲರನ್ನೂ ಒಳಗಳೆದುಕೊಂಡು, ಒಳಗೊಳಗೇ ದೇವರಿಗೆ ಹತ್ತಿರವಾದವರೆಂದುಕೊಂಡವರನ್ನು ಬೆಚ್ಚಿಬೀಳಿಸೋಣ. ಅವರನ್ನು ಭ್ರಮನಿರಸವಾಗಿಸೋಣ. ಸಮಸಮಾಜವನ್ನೇ ಉಸಿರಾಗಿಸಿಕೊಂಡು ಬದುಕೋಣ. ಅದೇ ನಮ್ಮ ಭವ್ಯ ಸಂಸ್ಕೃತಿಯಾಗಿರಲೆನ್ನೋಣ.

  • ವೆಂಕಟೇಶ ಕೆ. ಜನಾದ್ರಿ, ಕನಕಗಿರಿ.

ಲೆಕ್ಕಪತ್ರ ಅಧೀಕ್ಷಕ, ಈಕರಸಾ.ಸಂಸ್ಥೆ , ಕೇಂದ್ರ ಕಛೇರಿ, ಕಲ್ಬುರ್ಗಿ-585102

ಮೊ: 9945330492 ಮಿಂಚಂಚೆ: venjanadri@gmail.com

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here