ವಾಡಿ (ಚಿತ್ತಾಪುರ): ವಿದೇಶದಲ್ಲಿರುವ ಕಪ್ಪುಹಣ ತರುತ್ತಾರೆ ಎಂದು ವಾಗ್ಧಾನ ಮಾಡಿದ್ದ ಮೋದಿ ಕಪ್ಪು ಹಣ ತರುವ ಬದಲು ವಿದೇಶದಿಂದ ಚೀತಾ ಹಿಡಿದುಕೊಂಡು ಬಂದು ಭಾರೀ ಸಾಧನೆ ಮಾಡಿದವರ ತರ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ವ್ಯಂಗ್ಯವಾಡಿದರು.
ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಯುವಗರ್ಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿದೇಶದಿಂದ ಕಪ್ಪು ಹಣ ತರುವುದಾಗಿ, ರೈತರ ಆದಾಯ ದ್ವಿಗುಣ ಮಾಡುವುದಾಗಿ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ಹಣ ಹಾಕುವುದಾಗಿ ಹೇಳಿದ್ದ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಮಾತು ಕೊಟ್ಟಿದ್ದ ಮೋದಿ ತಮ್ಮ ಮಾತು ಮರೆತು ಮೋಸ ಮಾಡಿದ್ದಾರೆ. ಯಾವ ಮುಖವಿಟ್ಟುಕೊಂಡು ಮತ್ತೆ ಮತ ಕೇಳಲು ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್ ಸಿಲೆಂಡರ್ ದರ ಮೂರು ಪಟ್ಟು ಹೆಚ್ಚಾಗಿದೆ. ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ. ರೈತರ ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬಡವರ ರೈತರ ವಿರೋಧ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. 2023 ರ ಚುನಾವಣೆ ಅತ್ಯಂತ ಪ್ರಮುಖವಾದ ಚುನಾವಣೆ ಈ ಭ್ರಷ್ಟ ಸರ್ಕಾರವನ್ನು ನೀವು ಕಿತ್ತೊಗೆಯಬೇಕು ಎಂದು ಮನವಿ ಮಾಡಿದರು.
ಬಿಜೆಪಿಯ ಖದೀಮರೆಲ್ಲ ಸೇರಿ ಪ್ರಿಯಾಂಕ್ ಖರ್ಗೆಯನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಅವರ ಪ್ರಯತ್ನ ಫಲಿಸದಂತೆ ನೀವು ನೋಡಿಕೊಳ್ಳಬೇಕು. ಅವರನ್ನ ನೀವು ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ದಿಗೆ ದಾರಿ ಮಾಡಿಕೊಡಬೇಕು ಎಂದರು.