ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಲ್ಮಾ ಫಹೀಮ್ ಸೂಚನೆ

0
23

ಕಲಬುರಗಿ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ದೋಷರಹಿತ ಮತದಾರರ ಪಟ್ಟಿ ತುಂಬಾನೇ ಅವಶ್ಯಕ. ಹೀಗಾಗಿ ಪಾರದರ್ಶಕವಾಗಿ, ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಸಲ್ಮಾ ಕೆ. ಫಹೀಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಇಲ್ಲಿನ ಡಿ.ಸಿ.ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕುರಿತು ಜಿಲ್ಲೆಗೆ ಎರಡನೇ ಬಾರಿಗೆ ಆಗಮಿಸಿದ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ದಾಖಲಾಗುವ ದೂರುಗಳನ್ನು ಪ್ರಥಮಾಧ್ಯತೆ ಮೇಲೆ ವಿಲೇವಾರಿ ಮಾಡಬೇಕು. ವಿಳಂಬ ನೀತಿ ಸಲ್ಲದು ಎಂದರು.

Contact Your\'s Advertisement; 9902492681

ಕಳೆದ ನವೆಂಬರ್ 9ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿ ಪ್ರಕಾರ ಯುವ ಮತದಾರರ (18-19 ವಯಸ್ಸು) ರಾಜ್ಯದಲ್ಲಿ ನೋಂದಣಿ ಪ್ರಮಾಣ ಶೇ.1.35 ಇದ್ದರೆ, ಕಲಬುರಗಿ ಜಿಲ್ಲೆಯದು 0.43 ಇತ್ತು. ಈ ಪ್ರಮಾಣ ಹೆಚ್ಚಿಸಲು ಪ್ರಸ್ತುತ ಪರಿಷ್ಕರಣೆಯಲ್ಲಿ ಒತ್ತು ನೀಡಲಾಗಿದಿಯೇ ಎಂದು ಅಧಿಕಾರಿಗಳಿಗೆ ಮತ ಪಟ್ಟಿ ವೀಕ್ಷಕಿ ಸಲ್ಮಾ ಕೆ. ಫಹೀಮ್ ಪ್ರಶ್ನಿಸಿದರು. ಜಿಲ್ಲೆಯಲ್ಲಿ ಯುವ ಮತದಾರರ ವಿಶೇಷವಾಗಿ ಮಹಿಳಾ ಮತದಾರರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ, ಮುಂದೆ ಪ್ರಕಟಿಸಲಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಇದರ ನಿಖರ ಅಂಕಿ-ಅಂಶ ಸಿಗಲಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಡಿಲಿಟ್, ವರ್ಗಾವಣೆಗೆ ಅರ್ಜಿ ಸಲ್ಲಿಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಕೂಡಲೆ ವಿಲೇವಾರಿಗೊಳಿಸಬೇಕು ಎಂದ ಅವರು ತಾಲೂಕುವಾರು ನಮೂನೆ-6, 7 ಹಾಗೂ 8 ಪುರಸ್ಕøತ ಮತ್ತು ತಿರಸ್ಕೃತ ಅರ್ಜಿಗಳನ್ನು ಖುದ್ದಾಗಿ ಪರಿಶೀಲಿಸಿದರು. ವಿಧಾನಸಭಾ ಕ್ಷೇತ್ರದಲ್ಲಿ ಡಬಲ್ ಎಂಟ್ರಿ ಇರುವ ಹೆಸರನ್ನು ಡಿಲಿಟ್ ಮಾಡುವಾಗ ಸರಿಯಾಗಿ ವಿಧಾನಗಳು ಅನುಸರಿಸಬೇಕು ಎಂದರು.

ಜಿಲ್ಲೆಯಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಶೇ.68ಆಗಿದ್ದು, ಇದನ್ನು ಮತ್ತಷ್ಟು ಉತ್ತಮಗೊಳಿಸಬೇಕು. ಕಲಬುರಗಿಗೆ ತೆಲಂಗಾಣಾ, ಮಹಾರಾಷ್ಟ್ರ ರಾಜ್ಯದ ಗಡಿ ಇರುವುದರಿಂದ ವಲಸಿಗ ಮತದಾರರು ಎರಡು ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಿ.ಎಲ್.ಓ ಗಳು ಮತದಾರರ ಹೆಸರು ಸೇರ್ಪಡೆ ಮುನ್ನ ಕೂಲಂಕುಷವಾಗಿ ಪರಿಶೀಲಿಸಿ ಹೆಸರು ಸೇರ್ಪಡೆ ಮಾಡಬೇಕು ಎಂದರು.

ನಂದಿನಿ ಬೂತ್‍ಗಳಲ್ಲಿ 1950 ಪ್ರಚಾರಗೊಳಿಸಿ: ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ದೂರುಗಳು ಸಾರ್ವಜನಿಕರು ದಾಖಲಿಸಲು 1950 ಟೋಲ್ ಫ್ರೀ ಸಂಖ್ಯೆ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ನಂದಿನಿ ಬೂತ್‍ಗಳಲ್ಲಿ ಈ ಕುರಿತು ಭಿತ್ತಿ ಪತ್ರ ಅಂಟಿಸಿ ಪ್ರಚಾರ ಮಾಡಿ ಎಂದು ಅಧಿಕಾರಿಗಳಿಗೆ ಸಲ್ಮಾ ಕೆ. ಫಹೀಮ್ ನಿರ್ದೇಶನ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಕುಮಾರ ದೇವಿದಾಸ್ ಮಾತನಾಡಿ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರ ಪರಿಷ್ಕರಣೆ ಭಾಗವಾಗಿ ಅರ್ಜಿ ಸಲ್ಲಿಸಲು ಕೊನೆ ದಿನವಾದ ಡಿಸೆಂಬರ್ 8ರ ವರೆಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಹೆಸರು ಸೇರ್ಪಡೆಗೆ ನಮೂನೆ-6 ರಲ್ಲಿ ಸಲ್ಲಿಕೆಯಾದ 57,057 ಅರ್ಜಿ ಪೈಕಿ 50,891, ಹೆಸರು ತೆಗೆದು ಹಾಕಲು (ಡಿಲಿಟ್) ನಮೂನೆ-7ರಲ್ಲಿ ಸಲ್ಲಿಕೆಯಾದ 43,033 ಅರ್ಜಿ ಪೈಕಿ 36,319 ಹಾಗೂ ವರ್ಗಾವಣೆ ಮತ್ತು ತಿದ್ದುಪಡಿಗೆ ನಮೂನೆ-8 ರಲ್ಲಿ ಸಲ್ಲಿಕೆಯಾದ 10,772 ಅರ್ಜಿ ಪೈಕಿ 9,863 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ನಿಧನ ಮತ್ತು ಡಬಲ್ ಎಂಟ್ರಿ ಪ್ರಕರಣದಲ್ಲಿ ಒಟಾರೆ ಜಿಲ್ಲೆಯಾದ್ಯಂತ 36,319 ಹೆಸರನ್ನು ಡಿಲಿಟ್ ಮಾಡಲಾಗಿದೆ. ಜಿಲ್ಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು, ಕಾರ್ಪೋರೇಟರ್, ಸೆಲಿಬ್ರಿಟಿಗಳು, ಗಣ್ಯ ವ್ಯಕ್ತಿಗಳು, ಹಿರಿಯ ಅಧಿಕಾರಿಗಳ ಹೆಸರು ಮತಪಟ್ಟಿಯಲ್ಲಿ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ, ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಕಾರ್ತಿಕ್ ಸೇರಿದಂತೆ ತಾಲೂಕಿನ ತಹಶೀಲ್ದಾರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here