ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ

0
15

ಕಲಬುರಗಿ: ಓದುವ ಮಕ್ಕಳಲ್ಲಿ ಆಸಕ್ತಿ ಬರಬೇಕು. ಬಹು ಮುಖ್ಯವಾಗಿ ಶಿಕ್ಷಕರಲ್ಲೂ ಮಕ್ಕಳ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಭೋದನೆ ಅಳವಡಿಸಿಕೊಂಡಲ್ಲಿ ಫಲಿತಾಂಶ ಸುಧಾರಣೆಗೆ ಪೂರಕವಾಗುವುದು ಎಂದು ಶಿಕ್ಷಣ ಇಲಾಖೆಯ ಅಪರ ಆಯುಕ್ತ ಕಚೇರಿಯ ನಿರ್ದೇಶಕರಾದ ಬಸವರಾಜ ಗೌನಳ್ಳಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಹಿರಿಯ ವಿದ್ಯಾರ್ಥಿಗಳ ಸಂಘ ಭೈರಾಮಡಗಿ ಇವರ ವತಿಯಿಂದ  ಅಫಜಲಪುರ ತಾಲೂಕಿನ ಭೈರಾಮಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸರ್ಕಾರ ಈ ಭಾಗದಲ್ಲಿ ಶಿಕ್ಷಕರ ಕೊರತೆ ನಿವಾರಿಸಲು ನೇಮಕ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೊಸ ಶಿಕ್ಷಕರು ಬಂದ ನಂತರ ಶೈಕ್ಷಣಿಕ ಸುಧಾರಣೆಗೆ ಪೂರಕವಾಗುತ್ತದೆ ಎಂದರು.

ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾದ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಮಾತನಾಡಿ, ಸರ್ಕಾರಿ  ಶಾಲೆಯಲ್ಲಿ ಓದಿದವರೇ ಉನ್ನತ ಸ್ಥಾನ ಪಡೆದಿದ್ದಾರೆ. ಗುರಿ ಇಟ್ಟುಕೊಂಡು ಪ್ರಮಾಣಿಕ ಹಾದಿಯಲ್ಲಿ ಮುನ್ನೆಡೆದರೆ ಯಶಸ್ಸು ನಿಶ್ಚಿತ ಎಂದರು. ಮಾದರಿ  ಸಾಧಕರನ್ನು ಹಾಗೂ ತಂದೆ ತಾಯಿಯನ್ನು ಗೌರವಿಸಿ. ಫಲಿತಾಂಶ ಆಧಾರದ ಮೇಲೆ ಗುರಿ ಇಟ್ಟುಕೊಳ್ಳಬೇಡಿ. ಪ್ರಮಾಣಿಕವಾಗಿ ಮುನ್ನೆಡೆಯಿರಿ ಎಂದು ಕಿವಿ ಮಾತು ಹೇಳಿದರು.

ಕುಡಾ ಮಾಜಿ ಅಧ್ಯಕ್ಷ ಶಾಮರಾವ ಪ್ಯಾಟಿ ಮಾತನಾಡಿ, ಬರೀ ಅಂಕ ಶಿಕ್ಷಣ ಮಾನದಂಡವಲ್ಲ.‌ ಸರ್ಕಾರಿ ಶಾಲೆ, ದೊಡ್ಡ ಶಾಲೆ ಎಂಬ ಬೇಧ ಭಾವ ಬೇಡ. ಬಡವರೇ ದೊಡ್ಡ ಸಾಧನೆ  ಮಾಡಿದ್ದಾರೆ. ಕಷ್ಟದಿಂದ ಓದಿದರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಉದಾಹರಣೆ ಸಮೇತ ತಿಳಿ ಹೇಳಿದರು. ಎಸ್.ಎಸ್ ಎಲ್.ಸಿ ನೋಡಲ್ ಅಧಿಕಾರಿ ರಮೇಶ್ ಜಾನಕರ್ ಎಸ್.ಎಸ್.ಎಲ್ ಸಿ ಫಲಿತಾಂಶ  ಹೆಚ್ಚಳದ 15 ಅಂಶಗಳ ಕುರಿತು ಮಾಹಿತಿ ನೀಡಿದರು.

ಸರ್. ಸಿ.ವಿ. ರಾಮನ್ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಸ್.‌ಜೋಗದ್ ಅಧ್ಯಕ್ಷತೆ ವಹಿಸಿ, ಓದಿಗೆ ಬಡತನ ಕಾರಣವಾಗಬಾರದು.‌ ಶಿಕ್ಷಕರು ಬದಲಾಗಬೇಕು. ಪರಿವರ್ತನೆ ಹೊಂದಬೇಕು.‌ ಹೊಸ ಶಿಕ್ಷಣ ನೀತಿ ಬದಲಾವಣೆ ಪರಿಣಾಮ ಕಾದು ನೋಡಬೇಕಿದೆ ಎಂದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ,  ಶಿಕ್ಷಕರ ಕೊರತೆ ನಿವಾರಿಸಿದಲ್ಲಿ ಫಲಿತಾಂಶ ಸುಧಾರಣೆಗೆ ಪೂರಕ ವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ತಲಾ ಐದು ಸಾವಿರ ರೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸರ್ವಜ್ಷ ಸಮೂಹ ಶಿಕ್ಷಣ ಸಂಸ್ಥೆಯಿಂದ ಹೊರ ತರಲಾದ ಎಸ್.ಎಸ್ ಎಲ್ ಸಿ ಸ್ಕೋರ್ ಬೂಸ್ಟರ್ ಬಿಡುಗಡೆಗೊಳಿಸಲಾಯಿತು.

ಶಾಲೆಯ ಮುಖ್ಯ ಗುರುಗಳಾದ ಜುಬ್ರಾಯಿಲ್ ಮುಲ್ಲಾ, ಎಸ್ ಡಿಎಂಸಿ ಅಧ್ಯಕ್ಷ ತುಕಾರಾಂ ಯಳಸಂಗಿ, ಮುಖಂಡರಾದ ಈರಣ್ಣಗೌಡ ಪಾಟೀಲ್, ಲಕ್ಷ್ಮೀ ಪುತ್ರ ಜವಳಿ, ಹುಸೇನಿ ಜಮಾದಾರ, ಅಶೋಕ ಗುತ್ತೇದಾರ, ಶಂಕರ ಪಾಟೀಲ್ ಸೇರಿದಂತೆ ವಿವಿಧ ಶಾಲೆಗಳು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮದ ಸಂಯೋಜಕ ಸಂತೋಷ ಕುಮಾರ ಖಾನಾಪುರೆ ಅತಿಥಿಗಳ ಪರಿಚಯ ಮಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ ನಿರೂಪಿಸಿದರು. ‌ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ಹಣಮಂತರಾವ ಹಿರೇಗೌಡ ವಂದಿಸಿದರು.‌

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here