ಮಹಿಳೆಯರಿಗೆ ವಂಚನೆ ಮಾಡಿದ ಕೇಂದ್ರ ಬಜೆಟ್

0
12

ಕಲಬುರಗಿ: 2024 ರಲ್ಲಿ  ಚುನಾವಣೆ ಇರುವುದರಿಂದ ಮೋದಿ ಸರಕಾರದ ಅವಧಿಯ ಪೂರ್ಣ ಪ್ರಮಾಣದ  ಬಜೆಟ್ ಮಂಡನೆಯಾಗಿದೆ ಎಂದು ಅಧ್ಯಕ್ಷರು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಡಾ.ಮೀನಾಕ್ಷಿ ಬಾಳಿ ಮೀನಾಕ್ಷಿ ಬಾಳಿ ಟೀಕಿಸಿದ್ದಾರೆ.

ಈ ಬಜೆಟ್ ದೊಡ್ಡ ಬಂಡವಾಳಿಗರನ್ನು ಪ್ರೋತ್ಸಾಹಿಸುವ ಬಜೆಟ್ ಆಗಿದ್ದು  ದೇಶದ ಮಹಿಳೆಯರು ಮತ್ತು ದುಡಿಯುವ ಜನರ ಕಣ್ಣಿಗೆ ಮಣ್ಣೆರಚಿದೆ.ಸರಕಾರ ಮಂಡಿಸಿದ ಬಜೆಟ್ ಎಂಬ ಕಣ್ಕಟ್ಟಿನ‌ ಮೂಲಕ ಹಸಿ ಸುಳ್ಳುಗಳನ್ನು ಪೋಣಿಸಿ ಎಲ್ಲವೂ ಬಹಳ ಉತ್ತಮವಾಗಿದೆ ಎಂಬ ಅಭಿಪ್ರಾಯವನ್ನು ಹರಿ ಬಿಟ್ಟಿದೆ. ವಾಸ್ತವಾಂಶ ಬೇರೆಯೇ ಇದೆ ಎಂಬುದನ್ನೀಗ ನಾವು ಅರಿಯಬೇಕು ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಮಂಡಿಸಿರುವ ಬಜೆಟ್ ಈಗಾಗಲೇ ಇರುವ  ಅಸಮಾನತೆಯನ್ನು ಇನ್ನಷ್ಟು  ಹೆಚ್ಚಿಸಿದೆ ಮತ್ತು ಅರ್ಥಿಕ ಸಂಕಷ್ಟ ವನ್ನು ತೀವ್ರಗೊಳಿಸಿದೆ. 2022 ರ ವಿಶ್ವ ಅಸಮಾನತೆಯ ವರದಿ ತೋರಿಸಿದಂತೆ ಬಿ.ಜೆ.ಪಿ.ಯ ಪ್ರಿಯರಾದ ದೊಡ್ಡ ಬಂಡವಾಳಿಗರಾಗಿರುವ 1%  ಜನರು 40% ಸಂಪತ್ತಿನ  ಮೇಲೆ ಹಿಡಿತ ಹೊಂದಿದ್ದಾರೆ. ಕೆಳಗಿನ 50% ಕೇವಲ 3% ಸಂಪತ್ತಿನ ಒಡೆಯರಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ದುರಿದ್ದಾರೆ.

ಬಹುತೇಕ ಬಡ ಮತ್ತು ಮಧ್ಯಮ  ಕುಟುಂಬಗಳು ಹಾಗೂ ಎಲ್ಲ ಸ್ಥರದ ಮಹಿಳೆಯರು ನಿರುದ್ಯೋಗವೂ ಸೇರಿದಂತೆ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ  ಹೊತ್ತಿನಲ್ಲಿ ಬಜೆಟ್ ಈ ವಾಸ್ತವಾಂಶವನ್ನು ಮರೆತಿದೆ. ಬಜೆಟ್ ನಲ್ಲಿ ಸಂಬಳ ಪಡೆಯುವ ವಿಭಾಗಕ್ಕೆ ಕನಿಷ್ಟ ತೆರಿಗೆ ವಿನಾಯಿತಿ ನೀಡಿದೆ. ಆದರೆ ಬಹುಸಂಖ್ಯಾತ ಸ್ವಯಂ ಉದ್ಯೋಗಿಗಳು ಮತ್ತು ಅಸಾಂಪ್ರದಾಯಿಕ ವಲಯದವರನ್ನು  ಗಣನೆಗೇ ತೆಗೆದುಕೊಂಡಿಲ್ಲ. ಇದು ದೇಶದೊಳಗೆ ಈಗಾಗಲೇ ಇರುವ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಕೂಲಂಕಷವಾಗಿ ಬಜೆಟ್ ನ್ನು ಅವಲೋಕನ ಮಾಡಿದಾಗ ಸರಕಾರ ತನ್ನ ವೆಚ್ಚಗಳನ್ನು ಕಡಿತ‌ಮಾಡಿದೆ. ಸರಕಾರದ ವೆಚ್ಚದ ಗಾತ್ರ‌ ಚಿಕ್ಕದಾಗಿದೆ.

2022-23 ರಲ್ಲಿ ಜಿ.ಡಿ.ಪಿ.ಯ 15.3% ಇದ್ದ ಬಜೆಟ್ ಗಾತ್ರ 23-24 ಕ್ಕೆ 14.9% ಗೆ ಇಳಿಸಲಾಗಿದೆ. ಇಂದಿನ ಹಣದುಬ್ಬರ ದರಕ್ಕೆ ಹೋಲಿಸಿದಲ್ಲಿ ಕೇಂದ್ರ ಸರಕಾರದ  ಬಜೆಟ್ ವೆಚ್ಚದಲ್ಲಿ ಸಂಪೂರ್ಣ ಕಡಿತವಾಗಿದೆ. ಪ್ರಧಾ‌ನ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳು ಇದೊಂದು ಮಹಿಳಾ ಪರ ಬಜೆಟ್ ಎಂದು ಹೆಗ್ಗಳಿಸಿಕೊಂಡಿದ್ದಾರೆ. ಆದರೆ ಅಲ್ಲಿನ ವಸ್ತು ಸ್ಥಿತಿ ಬೇರೇಯೇ ಹೇಳುತ್ತದೆ. 2022-23 ರಲ್ಲಿ ಜಿ.ಡಿ.ಪಿ.ಯ 0.71% ಇದ್ದ ಜೆಂಡರ್ ಬಜೆಟ್ 2023-24 ರಲ್ಲಿ  0.73%ಗೆ ಏರಿಸಲಾಗಿದೆ. ಹಣದುಬ್ಬರದ ಪ್ರಮಾಣವನ್ನು ಹೋಲಿಸಿ ನೋಡಿದಾಗ ಅದು ಕಳೆದ ವರ್ಷಕ್ಕಿಂತಲೂ ಸರಿ‌ ಸುಮಾರು 3% ಕಡಿತವಾಗಿದೆ. ಮುಂದುವರಿದಂತೆ ಅಲ್ಪ ಸ್ವಲ್ಪ ಹೆಚ್ಚಳ ಕಂಡದ್ದೂ ಕೂಡಾ

ಪ್ರಧಾನ ಮಂತ್ರಿ ಆವಾಸ ಯೋಜನೆ ಯಂತಹ ಯೋಜನೆಗಳಿಗೆ ದೊಡ್ಡ ಬಜೆಟ್ ಅನ್ನು ಮೀಸಲಿಟ್ಟಂತೆ‌ ತೋರಿಸುವ ಮೂಲಕ ಕಾಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ ವಾಸ್ತವ ಸಂಗತಿ ಎಂದರೆ ಕೇಂದ್ರ ಸರಕಾರ ಬಿಡುಗಡೆ ಮಾಡುವ ಮತ್ತು ವೆಚ್ಚ ಮಾಡುವ ಹಣ ಅತ್ಯಲ್ಪ ಎಂಬುದು ದೃಢ ಪಟ್ಟಿದೆ. ಬಹಳ ರಾಜ್ಯಗಳಿಗೆ 22-23 ರಲ್ಲಿ ಮಂಜೂರಾದ ಹಣದ 50% ಮಾತ್ರ ಬಿಡುಗಡೆ ಮಾಡಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಒಟ್ಟು ವೆಚ್ಚ  0.05%ನೀಡಲಾಗಿದೆ. ಅದರ 80% ಸಕ್ಷಮ ಅಂಗನವಾಡಿ ಪೋಷಣ್ ಯೋಜನೆ 2.0 ಗೆ ಮೀಸಲಿದೆ. ಮಹಿಳೆಯರ ಮೇಲಿನ ಹಿಂಸೆಯನ್ನು ನಿರ್ನಾಮಿಸಿ ಅವರಿಗೆ ಸಂಪೂರ್ಣ ಸುರಕ್ಷತೆ ಒದಗಿಸಲು  ತೀರಾ ಕಡಿಮೆ ಪ್ರಮಾಣದ ‌ಹಣ ನಿಗದಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಮಹಿಳಾ ಕ್ರೀಡಾ ಪಟುಗಳ ಸುರಕ್ಷತೆಯ ಪ್ರಶ್ನೆಗಳು ಎದ್ದು ಬಂದಿರುವ ಹೊತ್ತಿನಲ್ಲಿಯೂ  ಏನೇನೂ ಗಮನ ಕೊಡದಿರುವುದು ಗಮನಿಸಬೇಕಾದ ವಿಷಯವಾಗಿದೆ. ಬಜೆಟ್ ನ ಪ್ರಮುಖ ಗಮನ ಮಹಿಳೆಯರ ‌ಉಳಿತಾಯವನ್ನು ಕ್ರೋಡೀಕರಿಸುವ ಮತ್ತು ಅದನ್ನು ಕಾರ್ಪೊರೇಟ್ ‌ಸಪ್ಲೆ ಕೊಂಡಿಗೆ ಜೋಡಿಸುವುದರತ್ತ ಇದೆ. ವಿತ್ತ ಮಂತ್ರಿಗಳು ಹೇಳಿಕೊಂಡಂತೆ    ದೀನ್ ದಯಾಲ್ ರಾಷ್ಟ್ರೀಯ  ಜೀವನೋಪಾಯ ಗ್ರಾಮೀಣ  ಅಡಿಯಲ್ಲಿ 81 ಲಕ್ಷ  ಉಳಿತಾಯ ಗುಂಪುಗಳಿದ್ದು ಅವುಗಳನ್ನು ಉನ್ನತ ದರ್ಜೆಗೇರಿಸಿ ಅವನ್ನು ಬೃಹತ್ ಎಂಟರ್ಪ್ರೈಸಸ್‌ ಮಾಡುವ ಉದ್ದೇಶವಿದೆ ಎಂದಿದ್ದಾರೆ.

ಆದರೆ ಅವರಿಗೆ ಕೊಡುವ ಸಾಲ ಬಹುತೇಕ ಖಾಸಗಿಯವರಿಂದ ಆಗಿದ್ದು ಬಡ್ಡಿ ದರವನ್ನು ಕಡಿಮೆ ಮಾಡುವ ಕುರಿತು ಪ್ರಸ್ತಾಪವೇ ಇಲ್ಲ. ಜೊತೆಗೆ ಮಹಿಳಾ ಸಮ್ಮಾನ ಉಳಿತಾಯ ಪತ್ರವು ಉಳಿತಾಯ ಮಾಡಬಹುದಾದ ಕೆಲವೇ ಕೆಲವರಿಗೆ  ಮಾತ್ರ ಅನ್ವಯವಾಗುತ್ತದೆ. ಆದ್ದರಿಂದ ಸರಕಾರದಿಂದ ಘೋಷಣೆಯಾದ ಹಣಕಾಸು ಯೋಜನೆಗಳು ಮಹಿಳೆಯರ ಸಾಲದ ಸುಳಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ದೇವಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ದೇವಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಾಲದ ಸುಳಿಯ ಮೂಲ ಕಾರಣ ಜೀವನೋಪಾಯದ‌ ಮಾರ್ಗವಿಲ್ಲದಿರುವುದು ಮತ್ತು ‌ಎಂ.ಎಫ್.ಐ.ಗಳು ಸಣ್ಣ ಹಣಕಾಸು ಬ್ಯಾಂಕ್ ಗಳು ವಿಧಿಸುವ ವಿಪರೀತ ಬಡ್ಡಿದರಗಳಲ್ಲಿ ಇದೆ. ಮಹಿಳೆಯರ ಉಳಿತಾಯಗಳು ಬಹುತೇಕ ಖಾಸಗೀ ಸಂಸ್ಥೆಗಳ ಪಾಲಾಗುತ್ತವೆ, ಮೋದಿ ಸರಕಾರದ ನೀತಿಗಳ ಭಾಗವಾಗಿ ಅದು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಉದ್ಯೋಗಾವಕಾಶ ಒದಗಿಸುವ

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ  33%ಕಡಿತ ಮಾಡಲಾಗಿದೆ.ನಿಜವೆಂದರೆ ಇಂತಹ ಕಡಿತಗಳು ಮಹಿಳಾ ಉದ್ದೇಶಿತ ಯೋಜನೆಗಳ ಮೇಲಿನ ನೇರ‌ ಧಾಳಿಯಾಗಿದೆ. ಯೋಜನಾ ನೌಕರರನ್ನು ಗುರುತಿಸುವ ಅಥವಾ ಅವರ ಸಂಭಾವನೆಯನ್ನು ಹೆಚ್ಚಿಸುವ ಯಾವ ಪ್ರಸ್ತಾಪವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಗಂಡ ಸತ್ತವರಿಗೆ ಕೊಡುವ ವೇತನ  ಹಾಗೂ ಎಸ್.ಸಿ.ಎಸ್.ಟಿ ಕಲ್ಯಾಣ ಯೋಜನೆಗಳಿಗೆ ಅತಿ ಕಡಿಮೆ ಹಣಕಾಸು ಮೀಸಲಿಟ್ಟಿರುವುದು ಅದರ ಮಹಿಳಾ ವಿರೋಧಿ ಧೋರಣೆಯನ್ನು ದರ್ಶಿಸುತ್ತದೆ.  80 ಕೋಟಿ ಜನರಿಗೆ ಉಚಿತ ಆಹಾರ ನೀಡುವ ಮತ್ತು ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸುವ ಪ್ರಸ್ತಾಪದೊಂದಿಗೆ ದೊಡ್ಡ ಸದ್ದು ಮಾಡುತ್ತಿರುವ ಸಮಯದಲ್ಲಿ, ವಾಸ್ತವದಲ್ಲಿ ಆಹಾರ ಸಬ್ಸಿಡಿ ಯಲ್ಲಿ31% ಕಡಿತವಾಗಿದೆ. ಇದೂ ಕೂಡಾ ಕಳೆದ ಸಾಲಿನ ನೈಜ ವೆಚ್ಚದ 1/3 ಭಾಗ ಕಡಿತವಾಗಿದೆ. ರಾಷ್ಟ್ರೀಯ ಮಧ್ಯಾಹ್ನ ದ ಬಿಸಿಯೂಟದ ಯೋಜನೆಗೂ ಕಡಿತವಾಗಿದ್ದು, ಅಂಗನವಾಡಿ ಗೂ ಕೂಡಾ ಕಳೆದ ವರ್ಷದ ರಿವೈಸ್ಡ್ ಬಜೆಟ್ ನಷ್ಟೇ ನೀಡಲಾಗಿದೆ.ಹಣದುಬ್ಬರಕ್ಕೆ ಹೋಲಿಸಿದಲ್ಲಿ ಈ ಮೀಸಲು ಕೂಡಾ ಕಡಿತವಾಗಿದೆ.

ಶಿಕ್ಷಣಕ್ಕೆ ನಿಗದಿ ಪಡಿಸಿದ ಬಜೆಟ್ ಕೂಡಾ ತೀರಾ ಕಡಿಮೆ ಏರಿಕೆಯಾಗಿದೆ. ಅದರ ಜೊತೆಗೇ ಆತಂಕದ ಸಂಗತಿಯೆಂದರೆ ಶಿಕ್ಷಣಕ್ಕೆ ಮಾಡುವ ವೆಚ್ಚದಲ್ಲಿ ಡಿಜಿಟಲ್   ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.  ರಾಜೀವ್ ಗಾಂಧಿ ಮತ್ತು ‌ಮೌಲಾನಾ‌ ಆಜಾದ್ ಫೆಲೋಷಿಪ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಮತ್ತು ಶಿಕ್ಷಣ ಸಾಲಕ್ಕೆ ಒತ್ತುಕೊಡುವ ಮಾದರಿಯನ್ನು ಪ್ರಚುರಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇವೆಲ್ಲವೂ ಮಹಿಳೆಯರ ಮತ್ತು ಬಾಲಕಿಯರ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮಿಷನ್ ಗೆ ಕಾಯ್ದಿರಿಸುವ ಹಣದಲ್ಲಿ ಕೂಡಾ ಒಂದಿಷ್ಟು ಇಳಿಕೆ ಮಾಡಲಾಗಿದೆ‌. ಬಹುತೇಕ ಖಾಸಗಿಯವರ ಹಿಡಿತ ದಲ್ಲಿರುವ ಆಯುಷ್ಮಾನ್ ಯೋಜನೆಗೆ  ಸಾಕಷ್ಟು ಮೊತ್ತವನ್ನು ಕೊಡಲಾಗಿದೆ. ಎಲ್ಲರನ್ನೂ ಒಳಗೊಳ್ಳುವ  ಅಭಿವೃದ್ದಿ ಮಾದರಿಗೆ ಬದಲಾಗಿ ಸರಕಾರಿ ಅಥವಾ ಸಾರ್ವಜನಿಕ ವಲಯದ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ತೀವ್ರ ಕಡಿತ ಮಾಡಲಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಸಹಾಯವಾಗುವ ಬಜೆಟ್ ಮಂಡಿಸಿ ದೇಶದ ಮಹಿಳೆಯರ ಮತ್ತು ಅವರ‌ ಕುಟುಂಬವನ್ನು ಸಂಕಷ್ಟಕ್ಕೆ ನೂಕಿದ  ಬಜೆಟ್ ಇದೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಟ್ಟಿದೆ. ತನ್ನೆಲ್ಲ ಘಟಕಗಳು ಇದರ ವಿರುದ್ಧ ಪ್ರತಿಭಟಿಸಬೇಕಲ್ಲದೇ 2024 ರ ಚುನಾವಣೆಯಲ್ಲಿ ಈ ಸರಕಾರವನ್ನು ಕಿತ್ತೊಗೆಯಲು ಜನರನ್ನು ಅಣಿನೆರೆಸಲು ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here