ಕಲಬುರಗಿ: ಧರ್ಮದ ಮೇಲೆ ಅಧರ್ಮದ ವಿಜಯದ ಸಂಕೇತವೇ ದಸರಾ ನವರಾತ್ರಿ ವಿಜಯ ದಶಮಿ ಹಬ್ಬದ ಸಂಕೇತ ಎಂದು ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅಭಿಪ್ರಾಯಪಟ್ಟರು.
ಇಲ್ಲಿನ ರಾಮಮಂದಿರ ಬಳಿಯ ಸಾಯಿರಾಮ ನಗರದಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ದಾಂಡಿಯಾ ನೈಟ್, ನೃತ್ಯ ಸ್ಪರ್ಧೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಧರ್ಮ ರಕ್ಷಣೆಗಾಗಿ ನಡೆಸಿದ ಹೋರಾಟದ ನೆನಪಿಗಾಗಿ ಮಾಡುವ ಹಬ್ಬವೇ ದಸರಾ ಹಬ್ಬವಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ವಿಧಾನ ಪರಿಷತ್ ಅಲ್ಲಮ ಪ್ರಭು ಪಾಟೀಲ್ ನೆಲೋಗಿ ಮಾತನಾಡಿ ಧರ್ಮಕ್ಕೆ ಜಯ ಎಂಬುದನ್ನು ಪ್ರತಿಪಾದಿಸುವುದೇ ದಸರಾ ಹಬ್ಬದ ವಿಶೇಷವಾಗಿದ್ದು ಎಲ್ಲರೂ ಧರ್ಮ ಮಾರ್ಗದಲ್ಲಿ ಸಾಗುವ ಮೂಲಕ ಧರ್ಮ ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕಿದೆ ಇಂತಹ ಕಾರ್ಯಕ್ರಮಗಳಿಂದ ಧರ್ಮ ಸಂಸ್ಕೃತಿ ರಕ್ಷಣೆಯಾಗುತ್ತದೆ ಎಂದು ಹೇಳಿದರು. ಯಾದಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ವೈಜನಾಥ ಹಿರೇಮಠ ಮಾತನಾಡಿ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಗ್ಗೂಡಲು ಇರುವ ವೇದಿಕೆಗಳಾಗಿದ್ದು ಇಂತಹ ಹಬ್ಬ ಹರಿದಿನಗಳಲ್ಲಿ ಒಂದೆಡೆ ಸೇರುವ ಮೂಲಕ ಹೊಸ ಶಕ್ತಿ, ಹುಮ್ಮಸ್ಸು ಪಡೆದುಕೊಂಡು ಒಗ್ಗಟ್ಟಿನಿಂದ ಮುಂದೆ ಸಾಗಲು ಸಂಕಲ್ಪಿಸಲು ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿದರು.
ಧರ್ಮಾಚರಣೆಗಳಿಂದ ಜನರಲ್ಲಿ ಒಗ್ಗಟ್ಟು ಮೂಡುತ್ತದೆ ಬದುಕಲು ಹೊಸ ಚೈತನ್ಯ ಉತ್ಸಾಹ ಹುಮ್ಮಸ್ಸು ಸಿಕ್ಕು ಮುಂದಿನ ಬದುಕು ಸಾಗಿಸಲು ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಸಾವಿರಾರು ವರ್ಷಗಳಿಂದ ಸನಾತನ ಧರ್ಮದಲ್ಲಿ ವಿವಿಧ ಹಬ್ಬ ಆಚರಣೆಗಳಿಂದಾಗಿ ಬದುಕು ಅನುಚಾನವಾಗಿ ನಡೆದುಕೊಂಡು ಬಂದಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು. ಸಾಯಿರಾಮ ನಗರ ವಾರ್ಡ ನಂ: ೫೫ರ ಕಲ್ಬುರ್ಗಿ ಮಹಾನಗರ ಪಾಲಿಕೆ ಸದಸ್ಯ ಮಹೇಶ ಹೊಸೂರ‍್ಕರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪವನ ಗುತ್ತೇದಾರ, ಸಂಜೋಗ ರಾಠಿ, ಮಹೇಶ ದೊಶೇಟ್ಟಿ, ಗುರುರಾಜ ಇಟಗಿ, ರಾಘವೇಂದ್ರ ದೇಸಾಯಿ, ಸೇರಿದಂತೆ ಅನೇಕರು ಇದ್ದರು. ನಂತರ ದಾಂಡಿಯಾ, ನೃತ್ಯ ಪ್ರದರ್ಶನಗಳು ಜರುಗಿದವು.
ಬಹುಮಾನ ವಿತರಣೆ: ಮೂರನೇ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ಮಹಾನಗರ ಪಾಲಿಕೆ ಸದಸ್ಯ ಮಹೇಶ ಹೊಸೂರ‍್ಕರ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ನಾರಾಯಣ ರಾಠೋಡ, ಅರುಣಾ ಹಿರೇಮಠ, ಅಶ್ವಿನಿ ದೇಸಾಯಿ, ಜ್ಯೋತಿ ಪಾಟೀಲ್, ನೀಲಂ, ಪ್ರಿಯಾಂಕ, ಮಾಲಾಶ್ರೀ, ಸುಶೀಲಾ, ಲಲಿತಾ, ಲಕ್ಷ್ಮೀ, ಸಾಕ್ಷಿ, ಮೇದಿನಿ, ವೈಷ್ಣವಿ ಸೇರಿದಂತೆ ಬಡಾವಣೆ ನಿವಾಸಿಗಳು ಪಾಲ್ಗೊಂಡಿದ್ದರು.