ಕಲಬುರಗಿ: ದೇಶಪ್ರೇಮವೆಂದರೆ ಭೂಪಟವನ್ನು ಪೂಜಿಸುವುದಲ್ಲ. ಜನಕೋಟಿಯನ್ನು ಪ್ರೀತಿಸುವುದು. ಅವರ ಸ್ಥಿತಿಗತಿ ಉತ್ತಮಪಡಿಸುವುದು. ಅವರಿಗೆ ವಿದ್ಯಾಬುದ್ಧಿಯನ್ನು ಕೊಡುವುದು ಇದನ್ನು ಮಾಡದವರು ದೇಶ ಭಕ್ತರಲ್ಲ. ಆಚಾರ್ಯರಲ್ಲ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು ಎಂದು ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಸ್ವಾಮಿ ವಿವೇಕಾನಂದ ಪ್ರಸಾರ ಕೆಂದ್ರ ಬೆಂಗಳೂರು ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ನಗರದ ಅನನ್ಯ ಡಿಗ್ರಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ೧೩೧ ನೆಯ ಚಿಕಾಗೋ ಭಾಷಣದ ಸ್ಮರಣೆಯ ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿವೇಕಾನಂದರು ಭಾರತದ ಆತ್ಮಗೌರವದ ಪ್ರತೀಕವಾಗಿದ್ದರು ಎಂದರು.
ನಮ್ಮ. ದೇಶಕ್ಕೆ ಶೂರರು, ಪ್ರಾಮಾಣಿಕರು, ಸತ್ಯ ಸಂದರು, ಚಾರಿತ್ರ್ಯವಂತರು ಬೇಕಾಗಿದ್ದಾರೆ ಎಂದು ಹೇಳಿದ ವಿವೇಕಾನಂದರು ದರಿದ್ರರು, ಅಮಾಯಕರು, ಅಸ್ಪೃಶ್ಯರಲ್ಲಿ ದೇವರನ್ನು ಕಾಣುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ಆಕಾಶವಾಣಿ ಕೇಂದ್ರದ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಮಾತನಾಡಿ, ಹಿಂದು ಧರ್ಮದ ಶ್ರೇಷ್ಠತೆ ಸಾರಿದ ವಿವೇಕಾನಂದರ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸುವುದು ಅನನ್ಯ ಕಾರ್ಯಕ್ರಮ ಎಂದು ಬಣ್ಣಿಸಿದರು.
ಸ್ವಾಮಿ ವಿವೇಕಾನಂದರು ಚಿಕ್ಯಾಗೋ ನಗರದಲ್ಲಿ ಮಾಡಿದ ಭಾಷಣ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಜಗತ್ತಿಗೆ ಸಾರಿದ ಅಪೂರ್ವ ಗಳಿಗೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶರಣು ಬಿ.ಹೊನ್ನಗೆಜ್ಜೆ ಮಾತನಾಡಿದರು. ಡಾ ಡಾ.ಕೆ.ಎಸ್.ಬಂಧು ಅತಿಥಿಯಾಗಿದ್ದರು. ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಜಕುಮಾರ ಮಾಳಗೆ, ಡಾಕಪ್ಪ ಮೋತಿಲಾಲ ವೇದಿಕೆಯಲ್ಲಿ ಇದ್ದರು.