ವಾಡಿ: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಐದು ಕೋಟಿ ರೂ. ಅನುದಾನದ ಕಾಂಕ್ರೀಟ್ ದ್ವೀಪಥ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ನಿರ್ಮಿಸಲಾಗಿರುವ ಅರ್ಧ ರಸ್ತೆಯನ್ನು ಸಂಪೂರ್ಣ ತೆರವುಗೊಳಿಸಿ ಮರು ನಿರ್ಮಿಸಬೇಕು ಎಂದು ಜನಧ್ವನಿ ಜಾಗೃತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಲಿಂಗ ಹಳ್ಳಿಕರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಗುಡಿ ವೃತ್ತದಿಂದ ಕಾಕಾ ಚೌಕ್ ವರೆಗೆ ದ್ವೀಪಥ ರಸ್ತೆ ನಿರ್ಮಿಸಿ ವರ್ಷ ಕಳೆದಿದೆ. ಅರ್ಧಂಬರ್ಧ ಕಾಮಗಾರಿ ಮಾಡಿ ನಾಪತ್ತೆಯಾಗಿದ್ದ ಗುತ್ತಿಗೆದಾರ, ಗುಣಮಟ್ಟವನ್ನು ಕಾಯ್ದುಕೊಳ್ಳದ ಕಾರಣ ರಸ್ತೆ ಪೂರ್ಣಗೊಳ್ಳುವ ಮುಂಚೆಯೇ ಹಾಳಾಗಿದೆ. ಜಲ್ಲಿಕಲ್ಲುಗಳು ತೇಲಿ ತೆಗ್ಗುಗಳು ಬಿದ್ದಿವೆ. ಕಳಪೆ ಸಿಮೆಂಟ್ ಬಳಸಿದ್ದರಿಂದ ಧೂಳು ಆವರಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಿರ್ಮಿಸಿದ ಅರ್ಧ ರಸ್ತೆಯನ್ನು ಸಂಪೂರ್ಣ ಒಡೆದು ಪುನಹ ನಿರ್ಮಿಸಬೇಕಾದ ಗುತ್ತಿಗೆದಾರ, ಒಂದೆರಡು ಕಡೆ ರಸ್ತೆ ಒಡೆದು ಕಾಂಕ್ರೀಟ್ ಹಾಕಲು ಮುಂದಾಗಿದ್ದಾನೆ. ಇದು ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವಾಗಿದೆ ಎಂದು ದೂರಿದ್ದಾರೆ.
ಬೇಕಾಬಿಟ್ಟಿ ನಿರ್ಮಿಸಿರುವ ಕಾಂಕ್ರೀಟ್ ದ್ವೀಪಥ ರಸ್ತೆಯನ್ನು ಸಂಪೂರ್ಣ ತೆರವು ಮಾಡಬೇಕು. ಶ್ರೀನಿವಾಸಗುಡಿ ಚೌಕ್ ದಿಂದ ಕಾಕಾ ಚೌಕ್ ವರೆಗೆ ರಸ್ತೆ ಮರು ನಿರ್ಮಿಸಬೇಕು. ಕಾಮಗಾರಿಯಲ್ಲಿ ರಾಡು, ಸಿಮೆಂಟ್, ಮರಳು ಮತ್ತು ಜಲ್ಲಿಕಲ್ಲುಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು. ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಕೆಲವು ಕಡೆ ಮಾತ್ರ ರಸ್ತೆ ಒಡೆದು ಕಾಂಕ್ರೀಟ್ ಹಾಕಿದರೆ ರಸ್ತೆ ಮತ್ತಷ್ಟು ಹಾಳಾಗಲಿದೆ. ಸಂಬಂದಿಸಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಗುಣಮಟ್ಟ ಪರಿಶೀಲನೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡಲಾಗುವುದು ಎಂದು ಶಿವಲಿಂಗ ಹಳ್ಳಿಕರ ಆಗ್ರಹಿಸಿದ್ದಾರೆ.