ಅಂಬೇಡ್ಕರ್ ಎಂದರೆ ಅರಿವು: ಎಸ್.ಎ.ಪಾರ್ಥ

0
31

ಚಿಂತಾಮಣಿ: ಅಂಬೇಡ್ಕರ್ ಎಂದರೆ ಅರಿವು. ಅವರನ್ನು ನಾವು ಪುಸ್ತಕಗಳಲ್ಲಿ ಓದಿಕೊಳ್ಳಬೇಕು ಹಾಗೂ ಅವರ ಸಿದ್ದಾಂತವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಎಸ್. ಎ. ಪಾರ್ಥ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಜನಪರ ಫೌಂಡೇಷನ್ ಕಚೇರಿಯಲ್ಲಿ ಯುವಯಾನ ಹಾಗೂ ಬಳ್ಳಿ ಬಳಗ ಕೌದಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ “ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿ ಸಮಾರಂಭ ಹಾಗೂ ಜೈಭೀಮ್ ಪುಸ್ತಕ ಬಿಡುಗಡೆ ಕಾರ್ಯಕ್ರಮ” ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಓದುವ ಮೂಲಕವೇ ಅಂಬೇಡ್ಕರ್ ಅವರನ್ನು ಅವರ ವಿಚಾರಗಳನ್ನು ಧಕ್ಕಿಸಿಕೊಳ್ಳಲು ಸಾಧ್ಯ.

Contact Your\'s Advertisement; 9902492681

ಸ್ವಾತಂತ್ರ್ಯ ಭಾರತದಲ್ಲಿ ಸಮಾನತೆ ಬೆಳಕು ಕಾಣುತ್ತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರೆ ನಿಜವಾದ ಕಾರಣ. ಅವರು ರಚಿಸಿರುವ ಸಂವಿಧಾನದಿಂದಲೇ ನಾವೆಲ್ಲರೂ ಇಂದು ಅಕ್ಷರವನ್ನು ಕಲಿಯಲು ಸಾಧ್ಯವಾಗಿದೆ. ತಳಮಟ್ಟದಿಂದ ಉನ್ನತ ಮಟ್ಟದವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಉದ್ಯೋಗಸ್ಥರಾಗಿದ್ದೇವೆ, ಅಧಿಕಾರ ಹಿಡಿದಿದ್ದೇವೆ. ನಾವಿರುವ ನೆಲೆಯಿಂದಲೇ ಅಂಬೇಡ್ಕರ್ವರ ತತ್ವ – ಸಿದ್ದಾಂತಗಳನ್ನು ಎಲ್ಲರಿಗೂ ತಲುಪಿಸಬೇಕಿದೆ.

ಸಮ ಸಮಾಜ ನಿರ್ಮಾಣಕ್ಕಾಗಿ ಯುವಜನತೆ ಎಚ್ಚೆತ್ತುಕೊಳ್ಳದಿದ್ದರೆ ಶತ ಶತಮಾನಗಳ ಹಿಂದಿನ ಅಂಧಕಾರದ ಕಗ್ಗತ್ತಲಿಗೆ ಮರಳುವುದರಲ್ಲಿ ಆಶ್ಚರ್ಯವಿಲ್ಲ. ಯಾರೊಬ್ಬರೂ ಪರಿಪೂರ್ಣ ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಆದರೆ, ಅವರ ಹಾದಿಯಲ್ಲಿ ಹತ್ತು ಹೆಜ್ಜೆಗಳನ್ನಾದರೂ ಇಡಬೇಕು. ಬದುಕಿನ ಪ್ರತಿ ಕ್ಷಣದಲ್ಲಿಯೂ ಅವರ ಆಶಯಗಳನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರುಣ್ ಜೋಳದ ಕೂಡ್ಲಿಗಿ ಅವರು ಸಂಗ್ರಹಿಸಿರುವ ಕೌದಿ ಪ್ರಕಾಶನ ಪ್ರಕಟಿಸಿರುವ ಜೈಭೀಮ್ ಪುಸ್ತಕ ಬಹಳ ಪ್ರಸ್ತುತ ಎನಿಸುತ್ತದೆ. ಈ ಪುಸ್ತಕದಲ್ಲಿ ನಾಡಿನ ಅನೇಕ ವಿದ್ವಾಂಸರು, ಹೋರಾಟಗಾರರು, ಚಿಂತಕರು, ಲೇಖಕರು ಬರೆದ ಲೇಖನಗಳು ಇವೆ. ಅವುಗಳನ್ನು ಜತೆಗೆ ಮತ್ತಷ್ಟು ಪುಸ್ತಕಗಳನ್ನು ಓದುವ ಮೂಲಕ ಅಂಬೇಡ್ಕರ್ ಅವರನ್ನು, ಅವರ ಪ್ರಭಲ ವಾದವನ್ನು ಆಳವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಕವಿ ಶಶಿರಾಜ್ ಹರತಲೆ ಅವರು ಮಾತನಾಡಿ,. ಚರಿತ್ರೆಯ ಸತ್ಯಗಳನ್ನು ನಾವು ಪುಸ್ತಕಗಳಿಂದ ಮಾತ್ರ ತಿಳಿಯಬಹುದು. ಸಾವಿರಾರು ವರ್ಷಗಳು ನಮ್ಮ ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ ಇತ್ತು ಎಂಬ ವಾಸ್ತವವನ್ನು ಕಂಡುಕೊಳ್ಳಬೇಕು. ಅದರಿಂದ ಸಮಾಜದ ಮೇಲೆ ಹೇಗೆ ಕೆಟ್ಟ ಪರಿಣಾಮಗಳು ಬೀರಿವೆ ಎಂಬುದನ್ನು ಯುವಜನರು ಅರಿತುಕೊಳ್ಳಬೇಕು. ಈ ಪದ್ದತಿಗಳನ್ನು ತೊಲಗಿಸಲು ಶ್ರಮವಹಿಸಿದಂತಹ ಅಂಬೇಡ್ಕರ್ ಅವರ ಶ್ರಮ, ತಾಳ್ಮೆ, ಕಷ್ಟಗಳನ್ನು ತಿಳಿಯಲು ನಮಗೆ ಓದಿನಿಂದ ಮಾತ್ರ ಸಾಧ್ಯ. ಸ್ವತಂತ್ರ್ಯ ಭಾರತದಲ್ಲೂ ಅಸಮಾನತೆ ಜಾತಿ ಕ್ರೌರ್ಯಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಇದರ ಹಿಂದಿನ ಲಾಭ ರಾಜಕಾರಣವನ್ನು ಯುವಜನರು ಅರಿಯಬೇಕು. ಬದಲಾವಣೆಯ ಹಾದಿಗೆ ತೆರೆದುಕೊಳ್ಳಬೇಕು, ಸತ್ಯಗಳನ್ನು ಅರಿಯಬೇಕು. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಆಳವಾದ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಯುವಯಾನ ಬಳಗದ ಮನೋಜ್ ಮಾತನಾಡಿ, ಇಡೀ ವಿಶ್ವದಾದ್ಯಂತ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವದ ಜ್ಞಾನದ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ನಾನು ನಿಮಗೆ ಅಕ್ಷರದಲ್ಲಿ ಕಾಣಿಸುತ್ತೇನೆ ಹೊರತು ಯಾವುದೇ ಆಡಂಭರದಲ್ಲಿ ಅಲ್ಲ ಎಂಬುದನ್ನು ಹೇಳಿದ್ದರು. ಈ ನಿಟ್ಟಿನಲ್ಲಿ ಅವರ ವಿಚಾರಗಳನ್ನು ಅರಿಯುವ ಮೂಲಕ, ಅವರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಖಜಾನೆ ಇಲಾಖೆ ಎಫ್ ಡಿ ಎ ಡಾ. ಸುಶೀಲ್ ಕುಮಾರ್, ಬಳ್ಳಿ ಬಳಗ ಕೃಷಿಕರ ವೇದಿಕೆಯ ಸಾವಯವ ಕೃಷಿಕ ಸುರೇಶ್, ಬೇರು ಬೆವರು ಕಲಾ ಬಳಗ ಕಲಾವಿದರಾದ ನಾರಮಾಕಲಹಳ್ಳಿ ಚಲಪತಿ, ಪೆದ್ದೂರು ಮುನಿರಾಜ್ ಯುವಯಾನ ಸಿರಿಕುಮಾರ್.ಟಿ, ಅಕ್ಷಯ್, ನವೀನ್, ಶಿವದರ್ಶಿನಿ, ನಯನ್, ಬಾಲಾಜಿ, ಶಿಶು ಪಾಲನ ಕೇಂದ್ರದ ಶಿಕ್ಷಕಿ ಹಸೀನಾ, ಜನಪರ ಫೌಂಡೇಷನ್ ನ ಚೌಡಪ್ಪ, ಬಾಬುರೆಡ್ಡಿ, ಗಾಯತ್ರಿ, ಹಾಗೂ ನಳಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here