ಬೆಂಗಳೂರು: ಸರ್ಕಾರದಿಂದ ಪ್ರತಿ ವರ್ಷ ನೀಡುವ ಪೋಸ್ಟ್ ಮೆಟ್ರಿಕ್, ಪ್ರೀ ಮೆಟ್ರಿಕ್ ಅರಿವು, ವಿದ್ಯಾಸಿರಿಯಂತಹ ವಿದ್ಯಾರ್ಥಿ ವೇತನ ಇನ್ನೂ ಕೂಡಾ ರಾಜ್ಯದ ಹಲವು ವಿದ್ಯಾರ್ಥಿಗಳಿಗೆ ಮಂಜೂರಾಗದೇ ಇರುವುದನ್ನು ಖಂಡಿಸುತ್ತಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಪೂಂಜಾಲ್ಕಟ್ಟೆ ಇಂದು ಬೆಂಗಳೂರಿನ ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು.
‘ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಎಲ್ಲಾ ವಿದ್ಯಾರ್ಥಿ ವೇತನವನ್ನು ಆನ್ಲೈನ್ ಸೇವೆ ಮಾಡಿ ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ, 2017-18 ಮತ್ತು 19 ನೇ ಸಾಲಿನ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬಾಕಿಯಿಟ್ಟಿರುವುದು ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ವಂಚನೆ ಮಾಡುತ್ತಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲೂ ಹಲವು ತಾಂತ್ರಿಕ ದೋಷಗಳು ಎದುರಿಸುತ್ತಿದ್ದು, ಅರ್ಜಿಯ ಪರಿಶೀಲನೆ ನಂತರ ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನದಲ್ಲೂ ಕೂಡ ವಿಳಂಬ ಮಾಡುತ್ತಿರುವುದು ಪ್ರತಿವರ್ಷ ಕಾಣಸಿಗುತ್ತಿದೆ.
ಶೈಕ್ಷಣಿಕ ವರ್ಷದ ಕೊನೆ ಅಂದರೆ ಡಿಸೆಂಬರ್ ಜನವರಿ ಒಳಗಡೆ ಬರಬೇಕಾದ ವಿದ್ಯಾರ್ಥಿವೇತನ ಹೊಸ ವರ್ಷ ಆರಂಭವಾದರೂ ಕೈಗೆ ಸಿಗದೇ ಇರುವುದು ಅಲ್ಪಸಂಖ್ಯಾತ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಗಳಿಗೆ ಭೇಟಿ ನೀಡಿದಾಗ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ಸಹಕರಿಸುತ್ತಿಲ್ಲ, ತಾಂತ್ರಿಕ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮತ್ತು ಅಸಡ್ಡೆ ತೋರುತ್ತಿದ್ದಾರೆ. ವರ್ಷಗಳ ಅರ್ಜಿಗಳು ಕೆಎಂಡಿಸಿ ಕಛೇರಿಯಲ್ಲಿ ಮಂಜೂರಾಗದೆ ಬಾಕಿಯಾಗಿದೆ.ಎಂದು ಅವರು ಆರೋಪಿಸಿದರು.
ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದ ಪರಿಣಾಮ ಕಾಲೇಜಿನ ಶುಲ್ಕ ಪಾವತಿ ಮಾಡದೇ ತೊಂದರೆಗೊಳಗಾಗಿದ್ದಾರೆ ಅಲ್ಲದೆ ಕಾಲೇಜಿನಲ್ಲಿ ಶುಲ್ಕ ಪಾವತಿ ಮಾಡದ ಕಾರಣದಿಂದ ಪರೀಕ್ಷಾ ಪ್ರವೇಶಾತಿ ನಿರಾಕರಿಸಿದ್ದು ಹಲವು ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿರುವುದು ಗಮನಕ್ಕೆ ಬಂದಿರುತ್ತದೆ.ಇದನ್ನು ಗಂಭೀರವಾಗಿ ಪರಿಗಣಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಳೆದ ಮೂರು ತಿಂಗಳುಗಳಿಂದ ಹಲವು ಹೋರಾಟಗಳನ್ನು ಹಮ್ಮಿಕೊಂಡಿದೆ.ಬೆಂಗಳೂರಿನ ಅಲ್ಪಸಂಖ್ಯಾತ ನಿರ್ದೇಶನಾಲಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದೆ. ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಕೂಡಾ ಹಮ್ಮಿಕೊಂಡಿತ್ತು ಮತ್ತು ಕಳೆದ ವಾರ ಬೆಂಗಳೂರಿನ ಅಲ್ಪಸಂಖ್ಯಾತ ಕಚೇರಿಗೆ ವಿದ್ಯಾರ್ಥಿಗಳ ಮೂಲಕ ಮನವಿ ಸಲ್ಲಿಸಿದ್ದು,ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿದ್ದಾರೆ.
ಆ ಸಂದರ್ಭದಲ್ಲಿ ಅಧಿಕಾರಿಗಳು ಎರಡು ಮೂರು ದಿವಸಗಳ ಒಳಗಾಗಿ ಎಲ್ಲಾ ಬಾಕಿ ಉಳಿದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿ ಪತ್ರಿಕಾಗೋಷ್ಠಿಯ ಮೂಲಕ ಘೋಷಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಇಲಾಖೆಯಿಂದಾಗಲೀ, ಅಧಿಕಾರಿಗಳಿಂದಾಗಲೀ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ವಿಪರ್ಯಾಸವೇ ಸರಿ.ಈ ಬಗ್ಗೆ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯು ನೇರವಾಗಿ ಸರ್ಕಾರವನ್ನು ಹೊಣೆ ಮಾಡುತ್ತಾ ರಾಜ್ಯದ ವಿದ್ಯಾರ್ಥಿಗಳನ್ನು ಸಂಘಟಿಸುತ್ತಾ ಬೃಹತ್ ಮಟ್ಟದ ಹೋರಾಟವನ್ನು ಸಂಘಟಿಸಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಹುಸೇನ್ ಬಾಷ,ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ,ಜೊತೆ ಕಾರ್ಯದರ್ಶಿ ಸಯದ್ ಆಕಿಬ್ ಉಪಸ್ಥಿತರಿದ್ದರು.