ದಾಖಲೆ ಇಲ್ಲದ 50 ಸಾವಿರ ರೂ. ಮೇಲ್ಪಟ್ಟ ಹಣ ತೆಗೆದುಕೊಂಡು ಹೋಗುವಂತಿಲ್ಲ: ಬಿ.ಫೌಜಿಯಾ ತರನ್ನುಮ್

0
133

ಕಲಬುರಗಿ; ಸಾರ್ವತ್ರಿಕ ಲೋಕಸಭಾ ಚುನಾವಾಣೆಗೆ ಇದೇ ಮೇ 7 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೂ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ರಿಂದ 72 ಗಂಟೆ ಅವಧಿಯಲ್ಲಿ ಅಂದರೆ ಮೇ-4ರ ಸಾಯಂಕಾಲ 6 ಗಂಟೆಯಿಂದ ಅನ್ವಯಯವಾಗುವಂತೆ ಯಾವುದೇ ವ್ಯಕ್ತಿ ಡಿ.ಇ.ಓ ಅಥವಾ ಚುನಾವಣಾಧಿಕಾರಿಗಳ ಅನುಮತಿ ಮತ್ತು ದಾಖಲೆ ಇಲ್ಲದೆ 50 ಸಾವಿರ ರೂ. ಮೇಲ್ಪಟ್ಟ ಹಣವಾಗಲಿ ಅಥವಾ 10 ಸಾವಿರ ರೂ. ಮೇಲ್ಪಟ್ಟ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಮತದಾನ ಮುಕ್ತಾಯದ ಕೊನೆಯ 48 ರಿಂದ 72 ಗಂಟೆ ವರೆಗೆ ಅಂದರೆ ಮೇ 4ರ ಸಂಜೆ 6 ರಿಂದ ಅನ್ವಯವಾಗುವಂತೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿರುವ ಅವರು, ಯಾವುದೇ ರೀತಿಯ ಧ್ವನಿವರ್ಧಕ, ಕ್ಲಾಥ್ ಬ್ಯಾನರ್ಸ್, ಕ್ಲಥ್ ಫ್ಲ್ಯಾಗ್ಸ್, ಹ್ಯಾಂಡ್ ಬಿಲ್ಸ್, ಪೋಸ್ಟರ್ಸ್, ಸಿ.ಡಿ.ಗಳು, ಚೇರ್, ಟೇಬಲ್, ಪೆಂಡಾಲ್, ಹೆದ್ದಾರಿ ಫಲಕ, ಕಟೌಟ್ಸ್ ಬಳಸಿ ಜಾಹೀರಾತು ಮಾಡಬೇಕಿದಲ್ಲಿ ಚುನಾವಣಾಧಿಕಾರಿ-ಸಹಾಯಕ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಮೈಕ್, ಲೌಡ್ ಸ್ಪೀಕರ್, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬಹುದು, ರಾತ್ರಿ 10ರ ನಂತರ ಬಳಸುವಂತಿಲ್ಲ.

Contact Your\'s Advertisement; 9902492681

ಬಹಿರಂಗ ಪ್ರಚಾರ ಮೇ 5ರ ಸಂಜೆ 6ಕ್ಕೆ ಮುಕ್ತಾಯವಾಗಲಿರುವ ಕಾರಣ ತದನಂತರ ಯಾವುದೇ ರೀತಿಯ ಬಲ್ಕ್ ಎಸ್.ಎಂ.ಎಸ್., ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ಒಳಗೊಂಡಂತೆ ಯಾವುದೇ ರೀತಿಯ ಮಾಧ್ಯಮದ ಮೂಲಕ ಪ್ರಚಾರ ಮಾಡುವಂತಿಲ್ಲ. ಧ್ವನಿವರ್ಧಕ ಬಳಕೆ ಸಹ ಕೊನೆಯ 48 ಗಂಟೆಯಲ್ಲಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸಬಾರದು. ಮತದಾನ ಶಾಂತಿಯುತವಾಗಿ ನಡೆಯಲು ಮತದಾನಕ್ಕೆ ಕೊನೆಯ 48 ಗಂಟೆ ಅಂದರೆ ಮತದಾನ ಹಾಗೂ ಮತದಾನ ಪೂರ್ವ ದಿನದಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿ ಚುನಾವಣಾ ಉದ್ದೇಶಕ್ಕೆ ಸಾರ್ವಜನಿಕ-ಖಾಸಗಿ ಜಮೀನು, ಕಟ್ಟಡ, ವಾಹನಗಳ ಮೇಲೆ ಫ್ಲ್ಯಾಗ್ ಪೋಸ್ಟ್, ಬ್ಯಾನರ್, ನೋಟಿಸ್ ಮತ್ತು ಸ್ಲೋಗನ್ ಅಂಟಿಸುವಂತಿಲ್ಲ ಮತ್ತು ಸರ್ಕಾರಿ ಆವರಣವನ್ನು ವಿರೂಪಗೊಳಿಸುವಂತಿಲ್ಲ. ಆರ್.ಓ., ಡಿ.ಇ.ಓ ಅನುಮತಿ ಇಲ್ಲದೆ ಯಾವುದೇ ರೀತಿಯ ವಾಹನ ಸಹ ಬಳಸುವಂತಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮತದಾರರನ್ನು ಕರೆತರುವಂತಿಲ್ಲ: ಮೇ 7 ಮತದಾನ ದಿನದಂದು ರಾಜಕೀಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತದಾರರನ್ನು ವಾಹನದಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ತರುವುದಾಗಲಿ ಅಥವಾ ಮತಗಟ್ಟೆಯಿಂದ ಮನೆಗೆ ಬಿಡುವಂತ ಯಾವುದೇ ಸೇವೆ ನೀಡುವಂತಿಲ್ಲ.

ಕ್ಷೇತ್ರದಲ್ಲದವರು ಹೊರಡಬೇಕು: ಗುಲಬರ್ಗಾ ಲೋಕಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಪದಾಧಿಕಾರಿಗಳು ಬಹಿರಂಗ ಪ್ರಚಾರ ಅಂತ್ಯವಾದ ಕೂಡಲೆ ಕ್ಷೇತ್ರವನ್ನು ತೊರೆಯಬೇಕು. ಈ ಸಂಬಂಧ ಹೋಟೆಲ್, ಲಾಡ್ಜ್, ಕಲ್ಯಾಣ ಮಂಟಪ, ಸಮುದಾಯ ಭವನ, ಅತಿಥಿಗೃಹಗಳನ್ನು ತಪಾಸಣೆಗೆ ಒಳಡಿಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here