ಕಲಬುರಗಿ: ಗುಲಬರ್ಗಾ విಶ್ವ విದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿಯಂತೆ ವೇತನ ಕೊಡಬೇಕು ಎಂದು ಆಗ್ರಹಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ವಿಶ್ವವಿದ್ಯಾಲಯದ ಕಾರ್ಯ ಸೌಧದ ಎದುರು ಬುಧವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ತರಗತಿಗಳನ್ನು ಬಹಿಷ್ಕರಿಸಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರು, ಕುಲಪತಿಗಳು, ಕುಲಸಚಿವರ ವಿರುದ್ಧ ಘೋಷಣೆ ಕೂಗಿದರು.
‘ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಗಂಟೆಗೆ ₹ 1500ರಂತೆ ಗರಿಷ್ಠ ತಿಂಗಳಿಗೆ ₹ 50 ಸಾವಿರ ವೇತನ ಕೊಡಬೇಕು. ವರ್ಷದ 12 ತಿಂಗಳೂ ವೇತನ ಪಾವತಿಸಬೇಕು’ ಎಂದು ಒತ್ತಾಯಿಸಿದ್ದರು.
ನ್ಯಾಯ ಸಿಗುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ. ಕುಲಪತಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ. ಘಟಿಕೋತ್ಸವದಂದು ಕಪ್ಪು ಬಟ್ಟೆ ಪ್ರದರ್ಶಿಸಿ ರಾಜ್ಯಪಾಲರ ಎದುರು ನ್ಯಾಯ ಒದಗಿಸುವಂತೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಅರುಣಕುಮಾರ ಕುರನೆ, ಎಂ.ಬಿ. ಕಟ್ಟಿ, ಸುನೀಲ ಜಾಬಾದಿ, ಶಿವಶರಣಪ್ಪ ಕೊಡ್ಲಿ, ಸಂತೋಷಕುಮಾರ, ಶಿವಗಂಗಾ ಯು.ಬಿ., ಪ್ರಕಾಶ ಎಚ್.ಸಂಗಮ, ಅಶೋಕ ದೊಡ್ಡಮನಿ, ಶಿವಾನಂದ, ಪ್ರಕಾಶ ಹುಗ್ಗಿ, ಕೆ.ಎಂ.ಕುಮಾರಸ್ವಾಮಿ, ಪ್ರಕಾಶ ಗೋಗಿ, ಡಾ. ರಾಜಕುಮಾರ ದಣ್ಣೂರ ಮತ್ತಿತರರು ಇದ್ದರು.