ಆಗಸ್ಟ್ 31 ರೊಳಗೆ ಪಡಿತರ ಚೀಟಿಗೆ ಇ.ಕೆ.ವೈ.ಸಿ. ಮಾಡಿಸುವಂತೆ ಡಿ.ಸಿ.ಸೂಚನೆ

0
262

ಕಲಬುರಗಿ; ಜಿಲ್ಲೆಯ ಪಡಿತರ ಚೀಟಿ ಸದಸ್ಯರ ಪೈಕಿ ಇದೂವರೆಗೆ ಇ.ಕೆ.ವೈ.ಸಿ. ಮಾಡದ 58,449 ಜನ ಇದ್ದು, ಇವರೆಲ್ಲರು ಇದೇ ಆಗಸ್ಟ್ 31 ರೊಳಗೆ ಇ.ಕೆ.ವೈ.ಸಿ. ಮಾಡಿಸಿಕೊಳ್ಳಬೇಕು. ಎಫ್.ಪಿ.ಎಸ್. ಮಟ್ಟದಲ್ಲಿ ಪಡಿತರ ಚೀಟಿದಾರರಿಗೆ ಹೆಚ್ಚಿನ ಮಾಹಿತಿ ನೀಡಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯ ತರನ್ನುಮ್ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ತಮ್ಮ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಇ.ಕೆ.ವೈ.ಸಿ. ಮಾಡಿಸಿಕೊಳ್ಳದ ಸದ್ಯಸರ ಹೆಸರನ್ನು ಪಡಿತರ ಚೀಟಿಯಿಂದ ಕೈಬಿಡಬೇಕೆಂದು ತಿಳಿಸಿದರು.

Contact Your\'s Advertisement; 9902492681

ಸಿರಿವಂತರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ.ಪಿ.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಹಾರ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದರು.

ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರು ಮಾತನಾಡಿ ಈಗಾಗಲೆ ಜಿಲ್ಲೆಯಲ್ಲಿ 1.25 ಲಕ್ಷ ಆದಾಯಕ್ಕಿಂತ ಹೆಚ್ಚಿರುವ 76 ಸಾವಿರ ಪಡಿತರ ಚೀಟಿಯ ವಿವರವನ್ನು ಜಿಲ್ಲೆಯ 990 ಪಡಿತರ ಅಂಗಡಿಯಲ್ಲಿ ಪ್ರಕಟಿಸಿ ಆಕ್ಷೇಪಣೆ ಕೋರಲಾಗಿದೆ ಎಂದರು. ಆಗ ಡಿ.ಸಿ. ಅವರು ಮಾತನಾಡಿ ಕ್ಷೇತ್ರ ತಪಾಸಣೆ ಮಾಡಿ, ಅರ್ಹತೆ ಇದ್ದವರಿಗೆ ಮಾತ್ರ ಬಿ.ಪಿ.ಎಲ್. ಪಡಿತರ ಚೀಟಿ ವಿತರಿಸಬೇಕು ಎಂದರು.

15,535 ಪಡಿತರ ಚೀಟಿ ಅಮಾನತ್ತು: ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರ ಮಾತನಾಡಿ ಕಳೆದ 6 ತಿಂಗಳಿನಿಂದ ಪಡಿತರ ಪಡೆಯದ 15,535 ಪಡಿತರ ಚೀಟಿ ಅಮಾನತ್ತು ಮಾಡಲಾಗಿದೆ. ಮೃತ 5,313 ಜನರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗಿದ್ದು, ಇದರಿಂದ 265 ಕ್ವಿಂಟಾಲ್ ಪಡಿತರ ಧಾನ್ಯ ಉಳಿಯಲಿದೆ. 1,565 ಆದಾಯ ತೆರಿಗೆ ಪಾವತಿ ಮಾಡುವವರ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಎ.ಪಿ.ಎಲ್ ಪಡಿತರ ಚೀಟಿಗೆ ಬದಲಾಯಿಸಿದೆ. ಅದೇ ರೀತಿ ಸರ್ಕಾರಿ-ಅರೇ ಸರ್ಕಾರಿ ನೌಕರರು ಹೊಂದಿರುವ 360 ಬಿ.ಪಿ.ಎಲ್. ಪಡಿತರ ಚೀಟಿ ಎ.ಪಿ.ಎಲ್. ಚೀಟಿಗೆ ಬದಲಾಯಿಸಿ ಸರ್ಕಾರಿ ಸೌಲಭ್ಯ ದುರಪಯೋಗ ಮಾಡಿಕೊಂಡಿದಕ್ಕೆ ನೋಟಿಸ್ ಸಹ ಜಾರಿ ಮಾಡಲಾಗಿದೆ ಎಂದರು.

ಜಿಲ್ಲೆಯ ಒಟ್ಟಾರೆ 19,64,642 ಪಡಿತರ ಚೀಟಿಯ ಸದಸ್ಯರ ಪೈಕಿ 19,06,193 ಜನ ಇ.ಕೆ.ವೈ.ಸಿ. ಮಾಡಿಕೊಂಡಿದ್ದು, ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪ್ರಗತಿ ವಿವರವನ್ನು ಸಭೆಗೆ ಮಾಹಿತಿ ನೀಡಿದ ಅವರು, ಅರ್ಹತೆ ಇಲ್ಲದಿದ್ದರೂ ಬಿ.ಪಿ.ಎಲ್. ಪಡಿತರ ಚೀಟಿ ಪಡೆದಿದ್ದಲ್ಲಿ ಕೂಡಲೆ ಪಡಿತರ ಅಂಗಡಿ, ತಹಶೀಲ್ದಾರ(ಆಹಾರ) ಕಚೇರಿಗೆ ಸರೆಂಡರ್ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ನಿರ್ದೇಶಕರಾದ ಡಿ.ಬಿ.ಪಾಟೀಲ, ರೇಖಾ, ಕರ್ನಾಟಕ ಆಹಾರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸಿದ್ದಮ್ಮ ಸೇರಿದಂತೆ ಆಹಾರ ಇಲಾಖೆಯ ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here