ಬೀದಿಯಲ್ಲಿ ಆಜಾದಿ : ಸಂವಿಧಾನದ ಸಮಾಧಿ : ನಾವು ಎಡವುತ್ತಿದ್ದೇವೆಯೇ..?

0
121

ಎನ್‌ಆರ್‌ಸಿ ಹಾಗೂ ಸಿಎಎ ಎಂಬ ಸಂವಿಧಾನ ವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟಿಸಲು ದೇಶದೆಲ್ಲೆಡೆ ಜನಸಮೂಹ ಒಂದುಗೂಡಿರುವ ಶುಭ ಸಂಗತಿಯ ನಡುವೆಯೂ ಹಲವಾರು ಕಡೆಗಳಿಂದ ಹಿಂಸಾಚಾರದ ಹಾಗೂ ಸಾವು ನೋವುಗಳ ಸುದ್ದಿ ವರದಿಯಾಗುತ್ತಿದೆ. ಅಸ್ಸಾಂ ರಾಜ್ಯದಲ್ಲಿ ನಡೆದ ಹಿಂಸಾಚಾರದಿಂದ ಹಿಡಿದು ಜಾಮೀಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಅಮಾನವೀಯ ದಾಳಿ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದರ ಮುಂದುವರಿದ ಭಾಗವೆಂಬಂತೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಿಂದ ಎರಡು ಪ್ರಾಣ ಹಾರಿತ್ತು. ಈ ಆಘಾತ ಮಾಸುವ ಮುನ್ನವೇ ದೇಶದ ಹಲವೆಡೆ ಇನ್ನಷ್ಟು ಸಾವು ನೋವುಗಳು ಸಂಭವಿಸಿದೆ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಅಪರಿಚಿತರಿಂದ ಭೀಕರ ಹಲ್ಲೆಗೊಳಗಾಗಿದ್ದಾರೆ.

ಈ ಎಲ್ಲಾ ಘಟನೆಗಳು ಮತ್ತೊಂದು ಮಹಾ ಸಂಗ್ರಾಮಕ್ಕಿರುವ ಮುನ್ನುಡಿ ಎಂಬಂತೆ ಭಾಸವಾಗ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಈ ಕರಾಳ ಮಸೂದೆಗಳ ವಿರುದ್ಧ ದನಿಯೆತ್ತುವವರ ಮೇಲಿನ ಈ ಹಿಂಸಾಕೃತ್ಯಗಳು ಬೇಗನೇ ಕೊನೆಗೊಳ್ಳುವುದಿಲ್ಲ ಎಂದು ಅನಿಸುತ್ತಿದೆ. ಇವೆಲ್ಲವೂ ಆಡಳಿತ ವ್ಯವಸ್ಥೆ ಅನಿರೀಕ್ಷಿತವಾಗಿ ಎದುರಿಸಬೇಕಾಗಿ ಬಂದ ಪ್ರತಿಭಟನೆಗಳನ್ನು, ಅವರು ಕನಸಿನಲ್ಲಿಯೂ ಎಣಿಸಿರದ ರೀತಿ ಎದ್ದಿರುವ ಪ್ರತಿರೋಧದ ಅಲೆಯನ್ನು ಮಟ್ಟಹಾಕಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರ ಎಂದರೆ ತಪ್ಪಾಗಲ್ಲ. ಸಂವಿಧಾನಬದ್ಧವಾದ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಕಾರ್ಯಾಂಗವೇ ವಾಮಮಾರ್ಗವನ್ನು ಅನುಸರಿಸುತ್ತಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಪ್ರತಿಭಟನೆಗಿಳಿದ ನಾಗರಿಕರ ಮನಸ್ಸಿನಲ್ಲಿ ಭಯವನ್ನು ಬಿತ್ತಿ ಹೋರಾಟದಿಂದ ಹಿಮ್ಮೆಟ್ಟಿಸುವ ತಂತ್ರವನ್ನು ಇಲ್ಲಿನ ದೃಶ್ಯಮಾಧ್ಯಮಗಳು ಕೂಡಾ ಸಮರ್ಥವಾಗಿ ಉಪಯೋಗಿಸುತ್ತಿವೆ.

Contact Your\'s Advertisement; 9902492681

ಅದೇನೇ ಇರಲಿ, ಈ ಕುಟಿಲ ತಂತ್ರಗಳಿಗೆ ಬೆದರಿ ಜನಸಮೂಹ ಈ ಪ್ರತಿಭಟನೆಗಳಿಂದ ಹಿಂದೆ ಸರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲ್ಲಿನ ಪ್ರಗತಿಪರ ಮತ್ತು ಸಂವಿಧಾನಪರ ನಿಲುವು ಹೊಂದಿರುವ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಮೇಲಿದೆ. ಈ ಕರಾಳ ಮಸೂದೆಗಳ ವಿರುದ್ಧ ಜನರನ್ನು ಸಂಘಟಿಸುವ ಹೊಣೆಗಾರಿಕೆ ಅವುಗಳ ನಾಯಕರ ಮೇಲಿದೆ. ಈ ಹೋರಾಟದ ಕಿಚ್ಚು ತಣಿಯದಂತೆ ನೋಡಿಕೊಳ್ಳುವ ಭಾರ ಅವರ ಹೆಗಲಿನ ಮೇಲಿದೆ. ಅದರಂತೆ ಆ ಸಂಘಟನೆಗಳೊಂದಿಗೆ ಕೈ ಜೋಡಿ‌ಸಬೇಕಾದದ್ದು ಕೂಡಾ ನೈಜ ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ.
ನಮ್ಮೊಳಗಿನ ಎಲ್ಲಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ಹೋರಾಟವನ್ನು ದಡ ಸೇರಿಸಲು ಪಣ ತೊಡಬೇಕಾದದ್ದು ಸದ್ಯದ ತುರ್ತು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಬರೀ ಪ್ರತಿಭಟನಾ ಸಭೆಗಳಿಂದ ಮಾತ್ರ ನಾವು ಈ ಮಸೂದೆಗಳ ವಿರುದ್ಧ ಹೋರಾಡಿ ಜಯಗಳಿಸಲು ಸಾಧ್ಯವಾಗದು. ಈ ಮಸೂದೆಗಳು ಇಲ್ಲಿ ಜಾರಿಗೊಂಡರೆ ನಮ್ಮ ದೈನಂದಿನ ಬದುಕಿನಲ್ಲಿ ಅವುಗಳ ದುಷ್ಪರಿಣಾಮ ಹೇಗಿರಬಹುದು ಎಂಬ ಸೂಕ್ಷ್ಮ ಸಂಗತಿಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕಾದದ್ದು ಇಂದಿನ ಅನಿವಾರ್ಯತೆಯೂ ಆಗಿದೆ. ಏಕೆಂದರೆ ಇಷ್ಟೆಲ್ಲಾ ಪ್ರತಿಭಟನೆಗಳು, ಸಮಾವೇಶಗಳು, ರ್‍ಯಾಲಿಗಳು ನಡೆದರೂ ಈ ಹೋರಾಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ತರಂಗವನ್ನೇ ಸೃಷ್ಟಿಸಿದ್ದರೂ ಇಂದಿಗೂ ಹೆಚ್ಚಿನ ಮಂದಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಈ ಮಸೂದೆಗಳ ಬಗ್ಗೆ ಇರುವ ಗೊಂದಲಗಳು ಇನ್ನೂ ನಿವಾರಣೆಯಾಗಿಲ್ಲ. ಆದ್ದರಿಂದ ಪ್ರತೀ ಗ್ರಾಮಗಳಲ್ಲಿ ಈ ಮಸೂದೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಆಯಾ ಗ್ರಾಮಗಳಲ್ಲಿ ಜಾಗೃತಿ ವೇದಿಕೆಗಳನ್ನು ರೂಪಿಸಿ, ಅವುಗಳ ಮೂಲಕ ಜನರ ಮನಸೆಳೆಯುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅದರೊಂದಿಗೆ ಮನೆ ಮನೆಗೆ ತೆರಳಿ ಈ ಕರಾಳ ಮಸೂದೆಯ ನೈಜ ಉದ್ದೇಶಗಳನ್ನು ತಿಳಿಯಪಡಿಸಬೇಕು. ಜನರ ಮನಸ್ಸಿನಲ್ಲಿರುವ ಗೊಂದಲಗಳನ್ನು ಸಮರ್ಪಕವಾಗಿ ನಿವಾರಿಸಬೇಕು. ಈಗಾಗಲೇ ಈ ಮಸೂದೆಗಳನ್ನು ಸಮರ್ಥಿಸುವ ವರ್ಗವೊಂದು ಜನಸಾಮಾನ್ಯರ ದಿಕ್ಕು ತಪ್ಪಿಸಲು ನಾನಾ ವಿಧದ ತಂತ್ರಗಳನ್ನು ಹೂಡುತ್ತಿದ್ದಾರೆ. ಅವುಗಳು ಜನರನ್ನು ತಲುಪುವ ಮುನ್ನವೇ ಈ ಕರಾಳ ಮಸೂದೆಗಳ ದುಷ್ಪರಿಣಾಮದ ಅರಿವು ಜನರಿಗೆ ಮೂಡಿದರೆ, ಸಂವಿಧಾನಬದ್ಧವಾದ ಈ ಹೋರಾಟದ ವ್ಯಾಪ್ತಿ ವಿಶಾಲಗೊಂಡರೆ ಮಾತ್ರ ನಿರೀಕ್ಷಿತ ಜಯಗಳಿಸಲು ಸಾಧ್ಯ.

ಆದರೆ ಮನೆ ಮನೆಗೆ ತೆರಳಿ ಸಂಘಟಿತರಾಗಿ ಈ ಬಗ್ಗೆ ಅರಿವು ಮೂಡಿಸುವುದು ಪ್ರಾಯೋಗಿಕವಾಗಿ ಸಾಧ್ಯವೇ ಅನ್ನೋದು ಮತ್ತೊಂದು ಪ್ರಶ್ನೆ. ಇದೇ ಕಾರಣಕ್ಕೆ ವಿದ್ಯಾವಂತ ಯುವಜನತೆ ತಮ್ಮ ತಮ್ಮ ಊರುಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿವಹಿಸಿಕೊಳ್ಳಬೇಕು. ಉದಾಹರಣೆಗೆ ಬೃಹತ್ ಪ್ರತಿಭಟನೆ ಹಾಗೂ ಸಾರ್ವಜನಿಕ ಸಭೆಯಿಂದ ಕೊಂಚ‌ ಮಟ್ಟಿನ ಬಿಡುವು ಪಡೆದುಕೊಂಡು ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಒಬ್ಬೊಬ್ಬರೂ ಒಂದೊಂದು ಸಂಘಟನೆಗಳಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ. ದಿನದ ಒಂದು ತಾಸು ಇದಕ್ಕೆಂದೇ ಮೀಸಲಿಟ್ಟರೆ ಇದೇನು ಮಹಾ ಕಷ್ಟದ ಕೆಲಸವಲ್ಲ. ಕೇವಲ ಬೀದಿಗಿಳಿದು ಪ್ರತಿಭಟನೆ ಮಾಡಿ ವೇದಿಕೆ ಹತ್ತಿ ಎದೆಗಾರಿಕೆ ಪ್ರಶ್ನಿಸುವುದರಲ್ಲಿ ಹುರುಳಿದೆ ಎಂದು ಅನಿಸುವುದಿಲ್ಲ.‌ ತುರ್ತಾಗಿ ಹಾಗೂ ಪ್ರಾಯೋಗಿಕವಾಗಿ ಜನ ಸಾಮಾನ್ಯರಿಗೆ ಈ ಕಾಯ್ದೆಯ ಬಗ್ಗೆಗಿನ ಸಂಪೂರ್ಣ ಅರಿವನ್ನು ಮೂಡಿಸುವುದು.‌ ಇದು ನಮ್ಮ ನೆರಹೊರೆಯಿಂದ ಮೊದಲು ಶುರುವಾಗಬೇಕಿದೆ.‌ ಇದಕ್ಕೆ ಯುವ ಸಮೂಹ ನಾಯಕತ್ವ ವಹಿಸಬೇಕಿದೆ.

~ ಸಫ್ವಾನ್ ಸವಣೂರು

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here