ಕಡಕೋಳ ಕಾಲಂ ಭಾಗ-12: ಚುನಾವಣೆಗಳು ಮತ್ತು ಗ್ರಾಮ ಸಮರ

0
76

ಜಾಗತೀಕರಣ ಹಾಗೂ ಅದರ ಪೂರ್ವದ ಚುನಾವಣೆಗಳಿಗೂ ಮತ್ತೆ ಇತ್ತೀಚೆಗೆ ನಡೆಯುತ್ತಿರುವ ನಿನ್ನೆ ಮೊನ್ನೆಯ ಚುನಾವಣೆಗಳಿಗೂ ಬಹಳೇ ಫರಕು. ಹಣದ ರುದ್ರ ನರ್ತನ, ವರ್ಗ ಮತ್ತು ವರ್ಣ ಸಂಘರ್ಷಗಳು ಜಾತಿ ಮತಗಳ ನೆಪದಲ್ಲಿ ತಾರಕಕ್ಕೇರಿ ಮನುಷ್ಯ ಸಂಬಂಧಗಳು ಛಿದ್ರ ಛಿದ್ರಗೊಂಡು, ಪ್ರಾಣ ಹರಣಗಳ ಸ್ಥಿತಿ ತಲುಪಿವೆ.

ಬೆಂಗಳೂರಿನಂತಲ್ಲಾದರೆ ಯಾವುದೋ ಮೂಲೆಯಿಂದ ಬಂದು ಜಗಳವಾಡಿ, ಹೊಡೆದಾಡಿ, ಪರಸ್ಪರ ಮುಖ ಕೆಡಿಸಿಕೊಂಡು ಬಿಡಬಹುದು. ಆದರೆ ಹಳ್ಳಿಗಳಲ್ಲಿ ನಿತ್ಯವೂ ಒಬ್ಬರ ಮುಖ ಮತ್ತೊಬ್ಬರು ನೋಡಿ ಮಾತಾಡಿಸಲೇಬೇಕು. ಅದು ಮೌಖಿಕ ಮತ್ತು ಮುಖಾಮುಖಿ ಸಂಸ್ಕೃತಿ. ಗ್ರಾಮಗಳ ಬದುಕು ಸಿಲಿಕಾನ್ ಸಿಟಿಗಳಷ್ಟು ನಿರ್ಮಾನುಷಗೊಂಡಿಲ್ಲವೆಂಬ ನಂಬುಗೆ.

Contact Your\'s Advertisement; 9902492681

ಬಹುತ್ವದ ಗ್ರಾಮ ಭಾರತವದು. ಅಲ್ಲಿ ಕಸುಬು, ಕಾಯಕ ಪರಂಪರೆಯ ಜೀವನದಿಂದಲೇ ಪರಸ್ಪರ ಸಹಾಯ ಸಹಕಾರದ ನಿಜವಾದ ಮನುಷ್ಯ ಸಂಬಂಧಗಳು ಅಲ್ಲಿ ನಿತ್ಯ ಕ್ರಿಯಾಶೀಲಗೊಂಡು ಗ್ರಾಮ ಸಮಾಜದ ರಥ ಸಾಗಬೇಕಿದೆ.

ಚುನಾವಣೆಗಳೆಂಬ ಜಾತ್ರೆಗಳು ಬಂದು, ಹಳ್ಳಿಗಳ ಸಾಮರಸ್ಯಗಳನ್ನು ಘೋರವಾಗಿ ಕದಡುತ್ತಿವೆ. ಪ್ರಜಾಪ್ರಭುತ್ವದ ಎಲ್ಲ ಚುನಾವಣೆಗಳು ಹಳ್ಳಿಯ, ರಾಜ್ಯದ, ದೇಶದ ಸ್ವಾಸ್ಥ್ಯಭರಿತ ವ್ಯಕ್ತಿತ್ವ ರೂಪಿಸಬೇಕು. ಆದರೆ ಆಗುತ್ತಿರುವುದೇ ಬೇರೆ. ಸೋಲು ಗೆಲುವಿನ ಫಲಿತಾಂಶಗಳು ಹಳ್ಳಿಗಳ ವಯಕ್ತಿಕ ಬದುಕಿನ ನೆಲೆಗಳ ಮೇಲೆ ಮಾರಣಾಂತಿಕ ಪರಿಣಾಮ ಬೀರುತ್ತಿರುವುದು ಶೋಚನೀಯ.

ಇದಕ್ಕೆ ಬಿಹಾರದ ಬೇಗುಸರಾಯ್ ಸೇರಿದಂತೆ ಕರ್ನಾಟಕದ ನಾಗರಹಳ್ಳಿ ಹೊರತಲ್ಲ. ಸಣ್ಣ ಸಣ್ಣ ಹಟ್ಟಿ, ಹಳ್ಳಿ ತಾಂಡಾ, ಮೊಹಲ್ಲಾಗಳ ಖಾಸಗಿ ಬದುಕಿನ ಮೇಲೂ ಚುನಾವಣೆಯ ಭೀಕರ – ವಿಷಮ ಗಾಳಿ. ಕಾಯಕ ಜೀವನ ಕ್ರಮದ ಮೇಲೆ ಕ್ಷುದ್ರ ರಾಜಕಾರಣದ ಕ್ರುದ್ದ ಕರಿನೆರಳು.

ಹಾಗಾದರೆ ಡೆಮಾಕ್ರಸಿಯ ಬ್ಯುಟಿನೆಸ್ ಕುರೂಪಗೊಳ್ಳುತ್ತಿದೆಯಾ..? ಹೌದು ಒಂದು ಲೆವೆಲ್ಲಿಗಿದು ವಾಸ್ತವ. ಪಕ್ಷ ಪ್ರಣೀತ ರಾಜಕಾರಣ, ಮತ ಮತ್ತು ಜಾತಿ ಪ್ರಣೀತ ಆಗುತ್ತಿರುವುದು, ವ್ಯಕ್ತಿನಿಷ್ಠೆ, ವ್ಯಕ್ತಿಪೂಜೆ, ಮತಪ್ರಜ್ಞೆ ಸರಕಿನಂತೆ ಬಳಕೆ ಆಗುತ್ತಿರುವುದು.

ಹೀಗೆ ಇನ್ನೂ ಅನೇಕ ಬೆಳವಣಿಗೆಗಳಿಂದಾಗಿ ಡೆಮಾಕ್ರಸಿಯ ಬ್ಯುಟಿನೆಸ್ ಕಳೆಗುಂದಿದೆ. ಯಾವುದೇ ಪಕ್ಷ, ಜಾತಿ, ಮತಗಳ ಕುಮ್ಮಕ್ಕಿನಿಂದ ಎಸಗುವ ಹಲ್ಲೆ, ದಬ್ಬಾಳಿಕೆ ಖಂಡನೀಯ. ಹಾಗೇ ಯಾವ ಹಿನ್ನೆಲೆಯಿಲ್ಲದೇ ಎಸಗುವ ದೌರ್ಜನ್ಯಗಳೂ ಖಂಡನಾರ್ಹವೇ.

ನೆನಪಿರಲಿ: ನಾವು ಮತ ಹಾಕಿ ಕಳಿಸುವ ಸೋತ ಮತ್ತು ಗೆದ್ದ ರಾಜಕಾರಣಿಗಳು ಪರಸ್ಪರ ಯಾವತ್ತೂ ನಮ್ಮ ಹಾಗೆ ಕೈ ಕೈ ಮಿಲಾಯಿಸಿ ಹೊಡೆದಾಡುವುದಿಲ್ಲ. ನಾವೇಕೆ ಅವರನ್ನು ಆರೋಪಿಸಿಕೊಂಡೋ, ಸಮೀಕರಿಸಿಕೊಂಡೋ ಹೊಡೆದಾಡಬೇಕು.? ದ್ವೇಷದ ದಳ್ಳುರಿಯಲ್ಲಿ ನಮ್ಮ ಹಳ್ಳಿ , ಕುಟುಂಬದ ಬದುಕುಗಳು ದಹಿಸಬೇಕು.?

ಇಂದು ನಮ್ಮ ಮತಗಳಿಂದ ಗೆದ್ದು – ಸೋತು ಹೋದವರು ಮುಂದಿನ ಚುನಾವಣೆಗಳಲ್ಲಿ ಹಿಂದಿನಂತೆ ಇಬ್ಬರೂ ಒಂದಾಗಿ ಬಂದರೆ ಅಚ್ಚರಿ ಪಡಬೇಕಿಲ್ಲ. ಕಡೆಯ ಪಕ್ಷ ನಾವು ನೀತಿ ಭ್ರಷ್ಟರಾಗದೇ ಚುನಾವಣೆಯ ಮರುದಿನವೇ ಹಳ್ಳಿಗಳಲ್ಲಿ ಸಾಮರಸ್ಯದ ಸಹೃದಯ ವಾತಾವರಣ ಸೃಷ್ಟಿಸಬೇಕಿದೆ.

ನಾವು ಹಳ್ಳಿಗಳಲ್ಲೇ ಇರಬೇಕಾದ ಅನಿವಾರ್ಯ ಕಾರಣದಿಂದ ಮಾತ್ರವಲ್ಲ. ಒಂದು ಸ್ವಾಸ್ಥ್ಯಪೂರ್ಣ ತಳಾಶಯಗಳ ಬಹುತ್ವ ಭಾರತದ ಪುನರ್ ನಿರ್ಮಾಣ ಆಗಬೇಕಿರುವುದೇ ಅಲ್ಲಿಂದಲೇ ಅಲ್ಲವೇ..?

– ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here