ಬಸವಣ್ಣನವರ ಸಂಘಟನೆ ಮತ್ತೆ ಮರುಕಳಿಸೀತೆ?

0
91

ವಚನ ಚಳವಳಿಯ ನೇತೃತ್ವ ವಹಿಸಿದ್ದ ಬಸವಣ್ಣನವರು ಇಂದಿನ ಪ್ರಜಾಪ್ರಭುತ್ವ ಮಾದರಿಯಲ್ಲೇ ಶರಣರನ್ನು ಸಂಘಟಿಸಿರುವುದನ್ನು ನೋಡಿದರೆ ಅವರಲ್ಲಿರುವ ಕತೃತ್ವ ಶಕ್ತಿ ಎಂಥದು ಎಂಬುದರ ಅರಿವಾಗುತ್ತದೆ. ಬಿಜ್ಜಳನ ಆಸ್ಥಾನದಲ್ಲಿ ಅರ್ಥ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದರೂ ಪ್ರಜಾಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಅವರು ಕಂಡುಕೊಂಡಿದ್ದ ಮಾರ್ಗೋಪಾಯಗಳನ್ನು ಗಮನಿಸಿದರೆ ನಮಗೆ ಇಂದಿಗೂ ಆಶ್ಚರ್ಯವೆನಿಸುತ್ತದೆ.

ಜಾತಿ-ಧರ್ಮ, ವರ್ಗ-ವರ್ಣ, ಮೇಲು-ಕೀಳು, ಬಡವ-ಬಲ್ಲಿದ ಎಂಬಿತ್ಯಾದಿ ಏರಿಳಿತಗಳಿಂದ ಕೂಡಿದ ಸಮಾಜ, ಮೂಢನಂಬಿಕೆ, ಕಂದಾಚಾರ, ಶೋಷಣೆ, ಸುಲಿಗೆಯಿಂದ ಕೂಡಿದ ಧರ್ಮ ಹಾಗೂ ಇನ್ನಿತರ ಕ್ಷೇತ್ರಗಳ ಕಲುಷಿತ ವಾತಾವರಣ ಕಂಡ ಅವರು, ಸಮ ಸಮಾಜದ, ಏಕದೇವೋಪಾಸನೆಯ ಪರ್ಯಾಯ ಮಾರ್ಗ ಕಂಡುಕೊಂಡರು. ಅದುವೆ ಬಸವ ಮಾರ್ಗ ಅಥವಾ ಶರಣ ಮಾರ್ಗ.

Contact Your\'s Advertisement; 9902492681

ನೆಲದೊಳಗಿನ ನಿಧಿ ತೆಗೆಯಲು ಸಹಾಯ ಮಾಡುವುದು, ರಾಜ್ಯ ಭಂಡಾರದ ಸೋರಿಕೆ ತಡೆಗಟ್ಟುವುದು ಈ ಮುಂತಾದ ಕಾರ್ಯಗಳಿಂದಾಗಿ ಬಿಜ್ಜಳನ ವಿಶ್ವಾಸ ಗಳಿಸಿಕೊಂಡ ಬಸವಣ್ಣನವರು, ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಧರ್ಮ, ದೇವರ ಹೆಸರಿನಲ್ಲಿ ನಡೆದುಕೊಂಡು ಬಂದ ಹಲವು ಕುರುಡು ನಂಬಿಕೆ, ಅವುಗಳ ಹೆಸರಿನಲ್ಲಿ ನಡೆಯುವ ಮುಗ್ಧ ಜನರ ಶೋಷಣೆ ತಡೆಯುವುದಕ್ಕಾಗಿ ಉಪಾಯ ಕಂಡುಹಿಡಿದರು. ಆದರೆ ಪಟ್ಟಭದ್ರರು, ಪುರೋಹಿತಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿ, ದವರನ್ನು ಕೈ ಹಿಡಿದು ಮುನ್ನಡೆಸುವುದು ಸುಲಭದ ಮಾತು ಕೂಡ ಆಗಿರಲಿಲ್ಲ.

ಒಂದು ವ್ಯವಸ್ಥೆಗೆ ಹೊಂದಿಕೊಂಡ ಜನರನ್ನು ಇನ್ನೊಂದು ವ್ಯವಸ್ಥೆ ಕಲ್ಪಿಸುವುದು ಬಹಳ ಕಷ್ಟ. ಅವರಿಗೆ ಪರ್ಯಾಯ ಮಾರ್ಗ ತೋರಿಸಿಕೊಡಬೇಕು. ಆ ಮಾರ್ಗವನ್ನು ಎಲ್ಲರೂ ಒಪ್ಪುವಂತಿರಬೇಕು. ಬಹು ಜನರು ಅನುಸರಿಸುವಂತಿರಬೇಕು. ಹೀಗೆ ಜನರನ್ನು ಒಂದು ಕಡೆಗೆ ತರುವುದು ಬಹಳ ದುಸ್ತರವಾದ ಕೆಲಸ. ಈ ದುಸ್ತರವಾದ ಕೆಲಸವನ್ನು ಸವಾಲಾಗಿ ಸ್ವೀಕರಿಸಿದ ಬಸವಣ್ಣನವರು ಸ್ವಾಭಿಮಾನದಿಂದ ಕೂಡಿದ ಸ್ವಾವಲಂಬನೆಯ ಸಮಾಜ ಕಟ್ಟಿದರು. ೧.ಮಹಾಮನೆ, ೨.ಕಾಯಕ, ೩. ದಾಸೋಹ ೪) ಇಷ್ಟಲಿಂಗ ಮುಂತಾದ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದರು.

ಬಸವಣ್ಣನವರ ಕೀರ್ತಿವಾರ್ತೆ ಕೇಳಿದ ಅನೇಕರು ನಾಡಿನ ವಿವಿಧ ಮೂಲೆಗಳಿಂದ ಕಲ್ಯಾಣಕ್ಕೆ ನಡೆದು ಬಂದರು. ಹಾಗೆ ಬಂದವರನ್ನು ಮಹಾಮನೆಗೆ ಆಹ್ವಾನಿಸಿ, ಅವರ ಕೈಗೆ ಲಿಂಗ (ಅರಿವಿನ ಕುರುಹು) ಕೊಟ್ಟು ಭಕ್ತಿಯ ರಸವನ್ನು ತುಂಬಿದರು. ಅಣ್ಣನ ಮಹಾಮನೆಯ ಪ್ರಸಾದ ಸ್ವೀಕರಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಓಲಾಡಿದ ಶರಣರಿಗೆ ಕಾಯಕ-ದಾಸೋಹದ ಮಹತ್ವವನ್ನು ಅರುಹಿದರು. ಕಾಯಕವೇ ಕೈಲಾಸ. ಕಾಯಕದಿಂದಲೇ ಜೀವನ್ಮುಕ್ತಿ ಎಂದು ಬೋಧಿಸಿದರು.

ತಾವು ಅಂದುಕೊಂಡ ಯೋಜನೆಯನ್ನು ಜಾರಿಗೆ ತರುವುದಕ್ಕಾಗಿ ಶರಣಗಣ (ಲಕ್ಷಾಂತರ), ಪ್ರಮಥಗಣ (೧,೯೬,೦೦೦) ಮತ್ತು ಅಮರಗಣಂಗಳನ್ನು (೭೭೦) ಸಜ್ಜುಗೊಳಿಸಿದ್ದರು. ಅಲ್ಲಮ, ಸಿದ್ಧರಾಮ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ ಮುಂತಾದವರು ಬಸವಣ್ಣನವರಿಗೆ ಬೆನ್ನೆಲುಬು ಆದರು. ಪರಿಣಾಮ ಅನುಭವ ಮಂಟಪ ತಲೆಎತ್ತಿತು. ಸರ್ವ ಸಮಾನತೆಯ ಲಿಂಗತತ್ವ ನಾಡಿನಾದ್ಯಂತ ಪಸರಿಸಿತು. ಬಸವಣ್ಣನವರ ನಾಯಕತ್ವದಲ್ಲಿ ರೂಪುಗೊಂಡ ಲಿಂಗಾಯತ ಧರ್ಮವು ಪ್ರಜಾಪ್ರಭುತ್ವ ಅಂಶಗಳನ್ನೊಳಗೊಂಡ ಕನ್ನಡದ ಮೊಟ್ಟ ಮೊದಲ ಸ್ವತಂತ್ರ ಧರ್ಮವಾಗಿ ಪರಿಣಮಿಸಿತು.

ಇದನ್ನು ಸಹಿಸಿಕೊಳ್ಳದ ಕೆಲವು ಜನರು ಬಸವಣ್ಣ ಹಾಗೂ ಬಿಜ್ಜಳರ ನಡುವಿನ ಸ್ನೇಹ ಸಂಬಂಧದಲ್ಲಿ ಹುಳಿ ಹಿಂಡಿದರು. ಇದರಿಂದಾಗಿ ಕಲ್ಯಾಣಕ್ರಾಂತಿ ಉಂಟಾಯಿತು. ಸಮಾಜ, ಧರ್ಮ, ರಾಜಕೀಯ, ಆರ್ಥಿಕತೆ ಸೇರಿದಂತೆ ಬದುಕಿನ ಎಲ್ಲ ಆಯಾಮಗಳಿಗೆ ಹೊಸ ವ್ಯಾಖ್ಯಾನ ಬರೆದ ಶಿವಶರಣರು ಸ್ಥಾಪಿಸಿದ ಬಸವಧರ್ಮ, ಶರಣಧರ್ಮ, ಲಿಂಗಾಯತ ಧರ್ಮ ಜಗತ್ತಿನ ಶ್ರೇಷ್ಠ ಧರ್ಮವಾಗಿ ಪರಿಣಮಿಸಿದೆ.

ಆದರೆ ಇಂತಹ ಒಂದು ಸಂಘಟನೆಯನ್ನು ಹುಟ್ಟು ಹಾಕುವುದು ನಮಗೇಕೆ ಸಾದ್ಯವಾಗುತ್ತಿಲ್ಲ ಎಂಬುದು ಅವಲೋಕನ ಮಾಡಿದರೆ ಬಸವಣ್ಣ ಮಂತ್ರಿಯಾಗಿದ್ದರಿಂದ ಸಂಘಟನೆ ಕಟ್ಟಲು ಸಹಕಾರಿಯಾಯಿತು. ಅವರ ಸಂಘಟನೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿತ್ತು. ಬಸವಣ್ಣನವರ ಕನಸಿನ ಕಲ್ಯಾಣ ರಾಜ್ಯ ಕಟ್ಟಲು ಆಗ ಸತ್ಯುಳ್ಳ ಶರಣರ ದೊಡ್ಡ ದಂಡು ಇತ್ತು. ಲಕ್ಷಾಂತರ ಸಂಖ್ಯೆಯಲ್ಲಿದ್ದ ಶರಣರಲ್ಲಿಯೇ ಪ್ರಮಥರನ್ನು ಆಯ್ಕೆ ಮಾಡುವುದು, ಪ್ರಮಥರಲ್ಲಿಯೇ ಅಮರಗಣಂಗಳನ್ನು ಹೆಕ್ಕಿ ತೆಗೆಯುವ ಕಾರ್ಯ ಸದಾ ನಡೆದಿರುತ್ತಿತ್ತು. ಇವರೆಲ್ಲರೂ ಚರಜಂಗಮರಾಗಿ ನಾಡಿನಾದ್ಯಂತ ಸುತ್ತಾಡಿ ಲಿಂಗತತ್ವವನ್ನು ಪಸರಿಸುವುದಿತ್ತು. ಈ ಕಾರ್ಯವನ್ನು ಅವರು ಶಿರಸಾವಹಿಸಿ ಪಾಲಿಸುತ್ತಿದ್ದರು.

ಆದರೆ ದಿನಗಳೆದಂತೆ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಅದು ತನ್ನ ಇಭ್ರತಿಯನ್ನು ಕಳೆದುಕೊಳ್ಳುತ್ತಿದೆ. ಬಸವಣ್ಣನ ತಾತ್ವಿಕ ಚಿಂತನೆ ಮರೆಯಾಗಿ ಕೇವಲ ಬಂಡವಾಳದ ವಸ್ತುವಾಗಿ ಪರಿಣಮಿಸಿದ್ದಾನೆ. ಬಸವಣ್ಣ ಕೇಔಲ, ಭಾಷಣ, ಬರಹದ ವಸ್ತುವಾಗಿ ಪರಿಣಮಿಸಿದ್ದಾನೆ. ಅವರು ಬೋಧಿಸಿದ ನಡೆ-ನುಡಿ ಸಿದ್ಧಾಂತವನ್ನು ಕೇವಲ ಬಾಯಿಂದ ಹೇಳುತ್ತಿದ್ದೇವೆ ವಿನಃ ಅದನ್ನು ಜಾರಿಗೆ ತರುತ್ತಿಲ್ಲ. ಬಸವಣ್ಣ ಮಂತ್ರಿಯಾಗಿದ್ದರಿಂದ ಆತನಿಗೆ ಶರಣ ಸಂಘಟನೆ ಕಟ್ಟಲು ಸಾಧ್ಯವಾಯಿತು.

ಸಮಾಜದ ಒಳಿತಿಗಾಗಿ ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದ ಬಸವಣ್ಣ ಮತ್ತು ಆತನ ಧರ್ಮ ಕುರಿತು ಬಹಳಷ್ಟು ಚಿಂತನೆ, ಚರ್ಚೆ ನಡೆದಿದೆ. ಆತನ ವಾರಸುದಾರರು ಎಂದು ಕರೆಯಿಸಿಕೊಳ್ಳುವ ಲಿಂಗಾಯತರು ಮತ್ತೆ ಅಂತಹ ಸಂಘಟನೆ ಕಟ್ಟಲು ಸಾಧ್ಯವಿಲ್ಲವೇ? ಎಂದು ಕೇಳಿಕೊಂಡರೆ ಇಲ್ಲ ಎನ್ನುವ ಉತ್ತರ ಶತಸಿದ್ಧ. ಆದರೆ ಈಗ್ಗೆ ಎರಡು ವರ್ಷಗಳಿಂದ ಲಿಂಗಾಯತ ಧರ್ಮಕ್ಕೆ ಸರ್ಕಾರ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಾಂತ ಅಷ್ಟೇ ಏಕೆ ನೆರೆಯ ಮಹಾರಾಷ್ಟ್ರ, ತೆಲಂಗಾಣದಲ್ಲಿ ನಡೆದ ಹೋರಾಟ ಸಮಾಧಾನ ತರುವಂಥದ್ದು. ಆಗ ಎಲ್ಲೆಡೆ ಅತ್ಯಂತ ಹುರುಪು-ಹುಮ್ಮಸ್ಸಿನಿಂದ ಬಸವ ನಾಮಸ್ಮರಣೆ, ಜಯಘೋಷಗಳು ಮೊಳಗಿದವು.

ಸ್ವತಂತ್ರ ಧರ್ಮದ ಮಾನ್ಯತೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಸೈನ್ಯ ಅಷ್ಟೊಂದು ಕ್ರಿಯಾಶೀಲವಾಗಿಲ್ಲ. ಅದಕ್ಕೆ ಹಲವಾರು ಕಾರಣಗಳು ಇದ್ದಿರಬಹುದು. ಆದರೆ ಬಸವಣ್ಣನ ಸಂಘಟನೆ ನಮಗ್ಯಾಕೆ ಸಾಧ್ಯವಾಗುತ್ತಿಲ್ಲ? ನಾವು ಎಡವುತ್ತಿರುವುದು ಎಲ್ಲಿ? ಎಂಬ ಆತ್ಮಾವಲೋಕನ ಮಾಡಿಕೊಂಡು ಮಜಬೂತಾದ ಸಂಘಟನೆಯ ಕಾರ್ಯಚಟುವಟಿಕೆ ಇಂದು ಅಗತ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here