ಸುರಪುರ: ತಾಲ್ಲುಕಿನ ಅನೇಕ ಕಡೆಗಳಲ್ಲಿ ಸರಕು ಸಾಗಣೆ ವಾಹನಗಳ ಮೇಲೆ ಜನರನ್ನು ಕೂಡಿಸಿ ಸಾಗಿಸುತ್ತಿರುವುದು ಕಂಡು ಬಂದಿದೆ.ಅಂತಹ ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಹಾಯಕ ಉಪ ನಿರೀಕ್ಷಕ (ಎಎಸ್‌ಐ) ಹನುಮಂತಪ್ಪ ತಿಳಿಸಿದರು.
ನಗರದಲ್ಲಿ ಸುರಪುರ ಪೊಲೀಸ್ ಠಾಣೆಯಿಂದ ಹಮ್ಮಿಕೊಳ್ಳಲಾದ ಸರಕು ಸಾಗಣೆ ವಾಹನಗಳ ಮೇಲೆ ಜನರ ಸಾಗಿಸುವುದು ಅಪರಾಧ ವಿಷಯದ ಕುರಿತು ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾದ ನೇತೃತ್ವ ವಹಿಸಿ ಮಾತನಾಡಿ,ಸರಕು ಸಾಗಣೆ ವಾಹನಗಳ ಮೇಲೆ ಜನರನ್ನು ಸಾಗಿಸುವುದು ಅಪರಾಧವಾಗಿದೆ.ಇದರಿಂದ ಜನರು ಅಪಾಯಕ್ಕೀಡಾಗುವ ಸಂಭವವಿರುತ್ತದೆ.ಅಲ್ಲದೆ ಸರಕು ಸಾಗಣೆ ವಾಹನಗಳು ಕೇವಲ ಸರಕು ಸಾಗಾಣಿಕೆಗೆ ಪರವಾನಿಗೆ ಪಡೆದು ಜನರನ್ನು ಸಾಗಿಸುವುದು ಕಾನೂನಿನ ಉಲ್ಲಂಘಟನೆಯಾಗುತ್ತದೆ.
ಇಂತಹ ವಾಹನಗಳು ಕಂಡುಬಂದರೆ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುವುದು.ಕಳೆದ ಕೆಲ ದಿನಗಳ ಹಿಂದೆ ಸರಕು ಸಾಗಣ ವಾಹನದ ಮೇಲೆ ಜನರನ್ನು ಕೂಡಿಸಿ ಸಾಗಿಸುವಾಗ ಠಾಣೆ ಆರಕ್ಷಕ ನಿರೀಕ್ಷಕ ಆನಂದರಾವ್ ಸಾಹೇಬರು ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಮುಂದೆಯೂ ಅಂತಹ ವಾಹನಗಳು ಕಂಡು ಬಂದರೆ ವಾಹನಗಳ ಮೇಲೆ ಮತ್ತು ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗುವದು.ಸಾರ್ವಜನಿಕರು ಕೂಡ ಇಂತಹ ವಾಹನಗಳ ಮೇಲೆ ಕುಳಿತು ಪ್ರಯಾಣ ಮಾಡದಂತೆ ತಿಳಿಸಿದರು.
ಇದಕ್ಕು ಮುನ್ನ ನಗರದ ದರಬಾರ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಿದರು.ಈ ಜಾಥಾದಲ್ಲಿ ಆರಕ್ಷಕ ಸಿಬ್ಬಂದಿಗಳಾದ ಬಸವರಾಜ ಮುದ್ಗಲ್,ಸೋಮಯ್ಯ ಸ್ವಾಮಿ ಹಾಗು ಹಲವಾರು ಜನ ಸಾರ್ವಜನಿಕರಿದ್ದರು.