ವಚನ ಸಾಹಿತ್ಯ ಸಾರ್ಥಕ ಬದುಕಿನ ಸಾಕಾರ ರೂಪ: ಅಮರನಾಥ ಪಾಟೀಲ್

0
177

ಕಲಬುರಗಿ: ವರ್ಗ, ವರ್ಣ ಹಾಗೂ ಜಾತಿಯನ್ನು ಮೀರಿದ ಮಾನವೀಯ ಸಾಹಿತ್ಯವೇ ವಚನ ಸಾಹಿತ್ಯ ಎಂದು ಮಾಜಿ ಎಂಎಲ್ಸಿ ಅಮರನಾಥ ಪಾಟೀಲ ಹೇಳಿದರು.

ಸಮೃದ್ಧಿಯ ಸವಿನೆನಪಿನಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಗುರುವಾರ ನಗರದ ಕಲಾ ಮಂಡಳದಲ್ಲಿ ಏರ್ಪಡಿಸಿದ ‘ವಚನದೋಲಗ’ ಸಾಮಾಜಿಕತೆಯ ಸದ್ಚಿಂತನೆ ಎಂಬ ಒಂದು ದಿನದ ವೈಚಾರಿಕ ಚಿಂತನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ. ಅಲ್ಲದೇ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿ ಈ ಸಾಹಿತ್ಯಕ್ಕಿದೆ. ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸುವ ವಚನ ಸಾಹಿತ್ಯದ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ ಎಂದರು.

Contact Your\'s Advertisement; 9902492681

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ಅಮೂಲ್ಯವಾದ ಸಂಪತ್ತು ಅಡಗಿದೆ. ಅವುಗಳನ್ನು ಓದುವುದರಿಂದ ಜ್ಞಾನ ಮತ್ತು ವೈಚಾರಿಕತೆ ನಮ್ಮದಾಗುತ್ತದೆ. ಸಾಹಿತ್ಯಾಭಿರುಚಿ ವೃದ್ಧಿಸುತ್ತದೆ. ಅನುಸರಿಸುವುದರಿಂದ ಸರಳ ಮತ್ತು ಅರ್ಥಪೂರ್ಣ ಜೀವನ ಮಾರ್ಗ ನಮ್ಮದಾಗುತ್ತದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ-ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ಮಾತನಾಡಿ, ಬಸವಾದಿ ಶರಣರು ನೀಡಿರುವ ಸಂದೇಶಗಳು ವಿಶ್ವಸತ್ಯ ಆಗಿವೆ. ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಆಚರಣೆಗೆ ತರುವುದೇ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಅನುಭಾವ ನೀಡಿದ ಬೀದರಿನ ಶರಣ ಸಾಹಿತಿ ಶ್ರೀದೇವಿ ಹೂಗಾರ, ಸಹಜ ಮತ್ತು ಸರಳ ಭಾಷೆಯಲ್ಲಿ ಜೀವನಧರ್ಮವನ್ನು ಕಲಿಸುವ ವಚನಗಳು ಬದುಕಿಗೆ ಪುಷ್ಟಿಪೇಯವಿದ್ದಂತೆ. ಕಿರಿದು ಸಾಲುಗಳ ವಚನಗಳನ್ನು ಕಟ್ಟಿ ಹಿರಿದಾದ ಚಿಂತನೆಯನ್ನು ಹರಿಸಿದ ಶರಣರ ಮಾನವತೆಯ ಹಾದಿಯನ್ನು ತೋರಿದ ಮಹಾದಾರ್ಶನಿಕರು ಎಂದು ಮಾರ್ಮಿಕವಾಗಿ ಹೇಳಿದರು.

ಚಿಂತಕ ಬಸವರಾಜ ಬಿರಬಿಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪ್ರಬುಲಿಂಗ ಮೂಲಗೆ, ನಿವೃತ್ತ ಶಿಕ್ಷಕ ಶರಣಪ್ಪ ದೇಸಾಯಿ, ಈರಣ್ಣಾ ಗೋಳೆದ್, ಬಸವರಜ ಮದ್ರಿಕಿ ಶಹಾಬಾದ, ಶಕುಂತಲಾ ಪಾಟೀಲ ಜಾವಳಿ, ರವೀಂದ್ರ ಭಂಟನಳ್ಳಿ, ಶಿವರಾಜ ಅಂಡಗಿ, ಪರಮೇಶ್ವರ ಶಟಕಾರ, ಡಾ.ಕೆ.ಗಿರಿಮಲ್ಲ, ರಾಜಶೇಖರ ಪಾಟೀಲ ತೇಗಲತಿಪ್ಪಿ, ಶ್ರೀಕಾಂತ ಪಾಟೀಲ ತಿಳಗೂಳ, ಮಾಲತಿ ರೇಷ್ಮಿ, ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಕಾಡಸಿದ್ಧ ಜಮಶೆಟ್ಟಿ, ನಾಗಣ್ಣಾ ಹಾಗರಗುಂಡಗಿ ಯಡ್ರಾಮಿ, ಡಾ.ಛಾಯಾ ಭರತನೂರ, ದಾಸಿಮಯ್ಯ ವಡ್ಡನಕೇರಿ, ರಾಜೇಶ್ವರಿ ವಿ.ಪಾಟೀಲ ಸೇಡಂ ಜೇವರ್ಗಿ, ಶರಣಬಸಪ್ಪ ಕುಡಕಿ, ಶರಣರಾಜ್ ಛಪ್ಪರಬಂದಿ, ಗುಂಡಪ್ಪ ಕರೇಮನೋರ್, ವಿಠಾಬಾಯಿ ಸಿರಗಾಪೂರ ವಿಕೆ ಸಲಗರ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಗಮನ ಸೆಳೆದ ವೈಚಾರಿಕ ಗೋಷ್ಠಿಗಳು: ‘ಶರಣರ ಸತ್ಯ ದರ್ಶನ’ ದ ಕುರಿತು ಮಾತನಾಡಿದ ಅಫಜಲಪೂರಿನ ಶರಣ ಚಿಂತಕ ಅಮೃತರಾವ ಪಾಟೀಲ ಗುಡ್ಡೇವಾಡಿ, ನಮ್ಮೆಲ್ಲರ ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ-ನುಡಿಗಳು ಒಂದೇ ಆಗಿರಬೇಕು. ಶರಣರು ಜೀವನದಲ್ಲಿ ತಾವು ಕಂಡುಕೊಂಡ ಸತ್ಯದರ್ಶನವನ್ನು ಅಂತರಂಗದಲ್ಲಿ ಅಳವಡಿಸಿಕೊಂಡು, ತಮ್ಮ ನಡೆಯಲ್ಲಿ ಅನುಷ್ಠಾನಗೊಳಿಸಿದರು. ಸಮಾಜದಲ್ಲಿ ಸಮಾನತೆ ತರುವ ಮೂಲಕ ವ್ಯಕ್ತಿಯ ಕಲ್ಯಾಣಕ್ಕಾಗಿ ಶ್ರಮಿಸಿದರು. ಆ ಸಮಾಜಮುಖಿ ದರ್ಶನವನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ನಿವೃತ್ತ ಅಧಿಕಾರಿ ಶಾಂತಪ್ಪ ಸಂಗಾವಿ ಅಧ್ಯಕ್ಷತೆ ವಹಿಸಿದ್ದರು.ಸುರೇಶ ಪಾಟೀಲ ಜೋಗೂರ, ನೀಲಕಂಠ ಆವಂಟಿ, ಕವಿತಾ ಪಾಟೀಲ, ಅರವಿಂದ ಪೊದ್ದಾರ ಮಾತನಾಡಿದರು.

‘ಜಾತಿ ಮೀರಿದ ವಚನಜ್ಯೋತಿ’ ಕುರಿತು ಮಾತನಾಡಿದ ಶರಣ ಸಾಹಿತಿ ವೆಂಕಟೇಶ ಜನಾದ್ರಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯಾಯಿತು. ಬಹುಶ: ವಿಶ್ವದ ಯಾವ ಭಾಗದಲ್ಲೂ ಇಂಥ ಕ್ರಾಂತಿ ಆಗಿಲ್ಲ. ಸಮಾಜದಲ್ಲಿನ ಚತುವರ್ಣ ವ್ಯವಸ್ಥೆ ಕಾರಣಕ್ಕಾಗಿ ಸಾವಿರಾರು ಜಾತಿಗಳು ಹುಟ್ಟಿಕೊಂಡಿವೆ. ಶರಣರು ಈ ವ್ಯವಸ್ಥೆ ಒಡೆದು ಹಾಕಿ ಅಸಮಾನತೆ ತೊಲಗಿಸಿ ಮಾನವೀಯ ಮೌಲ್ಯಗಳಿಂದ ಕೂಡಿದ ಸಮಾನತೆ ಸಮಾಜದ ಕನಸು ಹೊತ್ತು ಮಹಾನ್ ಕ್ರಾಂತಿ ಮಾಡಿದರು. ದೇಶದ ಜಾತಿ ವ್ಯವಸ್ಥೆಗೆ ಚಲನಶಕ್ತಿ ದೊರಕಿದಾಗ ಬದಲಾವಣೆ ಸಾಧ್ಯ. ಇದಕ್ಕಾಗಿಯೇ ಶರಣರು ಹೋರಾಡಿದರು. ಆ ಕೆಲಸ ಮುಂದುವರಿಯಬೇಕಾಗಿದೆ ಎಂದರು.

ಸಾಹಿತಿ ಜಗನ್ನಾಥ ತರನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ದೇಸಾಯಿ, ಕಲ್ಯಾಣಕುಮಾರ ಶೀಲವಂತ, ಗುರುಬಸಪ್ಪ ಸಜ್ಜನಶೆಟ್ಟಿ, ಹಣಮಂತತ ಇಟಗಿ ಮಾತನಾಡಿದರು.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೆಂಕಟೇಶ ಮುದಗಲ್, ಈರಣ್ಣಾ ಮದಗುಣಕಿ, ಸಂಗನಬಸಪ್ಪ ಪಾಟೀಲ ದಿಕ್ಸಂಗಿ, ಪ್ರಬು ಆವಂಟಿ, ಮಾಲಾ ಕಣ್ಣಿ, ಕಲ್ಯಾಣಪ್ಪ ಬಿರಾದಾರ, ಹಣಮಂತ ಮಂತಟ್ಟಿ, ಸವಿತಾ ಬಿರಾದಾರ, ಸಚೀನ್ ಮಣೂರೆ ಹೀರಾಪೂರ, ಶಾಂತರೆಡ್ಡಿ ಪೇಠಶಿರೂರ, ಸಂದೀಪ ಭರಣಿ, ಶ್ರೀಧರ ನಾಗನಹಳ್ಳಿ, ಚೇತನ್ ಕೋಬಾಳ ಅವರನ್ನು ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಪ್ರಸಿದ್ಧ ಸಂಗೀತ ಕಲಾವಿದರಾದ ಬಾಬುರಾವ ಕೋಬಾಳ ಹಾಗೂ ಸಂಗಡಿಗರಿಂದ ಜರುಗಿದ ವಚನ ಗಾಯನ ಪ್ರೇಕ್ಷಕರ ಗಮನ ಸೆಳೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here