ವಿದ್ಯುತ್-ಗ್ಯಾಸ್ ದರ ಏರಿಕೆ: ಮನೆಯಿಂದಲೇ ಎಸ್‌ಯುಸಿಐ ಪೋಸ್ಟರ್ ಪ್ರೋಟೆಸ್ಟ್

0
42

ವಾಡಿ: ಕೊರೊನಾ ಆತಂಕ ಮತ್ತು ಲಾಕ್‌ಡೌನ್ ಸಂಕಷ್ಟ ಲೆಕ್ಕಿಸದೆ ಏಕಾಏಕಿ ವಿದ್ಯುತ್ ಮತ್ತು ಅಡುಗೆ ಅನಿಲ ದರ ಏರಿಕೆಗೆ ಕಾರಣವಾದ ಕೇಂದ್ರ ಸರಕಾರದ ವಿರುದ್ಧ ಮಹಿಳೆಯರು ಅಡುಗೆ ಮನೆಯಿಂದಲೇ ಪ್ರೊಟೆಸ್ಟ್ ಮಾಡಿದ್ದಾರೆ. ಬೆಲೆ ಏರಿಕೆ ವಾಪಸ್ಸಾಗಲಿ ಎಂಬ ಪೋಸ್ಟರ್ ಪ್ರದರ್ಶನ ಮಾಡುವ ಮೂಲಕ ಪ್ರಧಾನಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕರೆಯ ಮೇರೆಗೆ ಆನ್‌ಲೈನ್ ಆಂದೋಲನಕ್ಕೆ ಮುಂದಾದ ಮಹಿಳೆಯರು, ಕೊರೊನಾ ನೀತಿ ನಿಯಮಗಳನ್ವಯ ಮನೆಯಂಗಳದಲ್ಲಿ ನಿಂತು ದೆಹಲಿ ಸರಕಾರದ ವಿರುದ್ಧ ಗುಡುಗಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ವಿದ್ಯುತ್, ಅಡುಗೆ ಅನಿಲ, ಬಸ್ ಪ್ರಯಾಣ ದರ, ದಿನಸಿ ಸೇರಿದಂತೆ ಇನ್ನಿತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಒಂದರ ಹಿಂದೊಂದರಂತೆ ಗಣನೀಯವಾಗಿ ಏರಿಕೆ ಕಾಣುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಜನರನ್ನು ಮನೆಯಲ್ಲಿ ಕಟ್ಟಿಹಾಕಿರುವ ಸರಕಾರ, ಉದ್ಯೋಗದಿಂದ ವಂಚಿಸಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸಿ ತುಸು ಉಸಿರಾಡುತ್ತಿರುವ ಜನಸಾಮಾನ್ಯರನ್ನು ಕತ್ತು ಹಿಸುಕಿ ಸಾಯಿಸಲು ಯೋಜನೆ ರೂಪಿಸಿದೆ. ದುಡಿಯುವ ಜನಗಳ ಗೋಳು ಅರ್ಥವಾಗದ ಸರ್ವಾಧೀಕಾರಿ ಪ್ರಧಾನಿ ದೇಶದ ತನ್ನ ಪ್ರಜೆಗಳ ನೆಮ್ಮದಿ ಕಸಿದಿದ್ದಾನೆ. ಬೆಲೆ ಏರಿಕೆಯ ಬಾಣದಿಂದ ಬಡ ಜನರನ್ನು ಮತ್ತಷ್ಟು ಕೊಲ್ಲಲು ಹೊರಟಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Contact Your\'s Advertisement; 9902492681

ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಳುವ ಸರಕಾರ ಜನರ ಏಳಿಗೆಯನ್ನು ಕೈಬಿಟ್ಟಿರುವುದು ಅಪ್ರಜಾತಾಂತ್ರಿಕ ನೀತಿಯಾಗಿದೆ. ವಿದ್ಯುತ್ ದರ ಏರಿಕೆ ಮಾಡಿ ಬಡವರ ಬದುಕಿನಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಅಡುಗೆ ಅನಿಲ ಬೆಲೆ ಹೆಚ್ಚಳದಿಂದ ಬಿಜೆಪಿ ಸರಕಾರದ ಹೊಗೆ ಮುಕ್ತ ಮನೆ ಕನಿಸಿಗೆ ಪ್ರಧಾನಮಂತ್ರಿಗಳೇ ಕಲ್ಲೆಸೆದಂತಾಗಿದೆ. ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಸರಕಾರಕ್ಕೆ ಕೆಟ್ಟ ದಿನಗಳು ಅಣುಕಿಸುತ್ತಿವೆ. ರಾಮರಾಜ್ಯದ ಕನಸು ಹೊತ್ತವರಿಂದಲೇ ವ್ಯಾಪಕವಾಗಿ ಜನರ ಸುಲಿಗೆ ನಡೆಯುತ್ತಿದೆ.

ದೇಶದ ಶ್ರೀಮಂತ ಬಂಡವಳಾಶಾಹಿಗಳ ಹಿತಾಸಕ್ತಿ ಕಾಪಾಡಲು ಎಲ್ಲಾರೀತಿಯ ಕಾನೂನುಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಬಿಜೆಪಿ ಸರಕಾರದಲ್ಲಿ ಜನರಿಗೆ ನೆಮ್ಮದಿಯಿಲ್ಲ ಎಂದು ಹರಿಹಾಯ್ದಿರುವ ಮಹಿಳೆಯರು, ಜನವಿರೋಧಿ ಕೇಂದ್ರ ಬಿಜೆಪಿ ಸರಕಾರ ತೊಲಗಲಿ. ಬೆಲೆ ಏರಿಕೆ ವಾಪಸ್ಸಾಗಲಿ. ಶೋಷಣೆ ಮುಕ್ತ ಸಮಾಜವಾದಿ ವ್ಯವಸ್ಥೆ ಸ್ಥಾಪನೆಗಾಗಿ ಜನಾಕ್ರೋಶ ಭುಗಿಲೇಳಲಿ. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಚಿರಾಯುವಾಗಲಿ. ಜನರ ಪಾಲಿನ ಪ್ರಜಾತಾಂತ್ರಿಕ ದಿನಗಳು ಮರುಕಳಿಸಲಿ ಎಂದು ಪ್ರತಿಭಟನಾಕಾರರಾದ ಕು.ಅರ್ಪಿತಾ ವಿ. ಕಾಳೆಬೆಳಗುಂದಿ, ಕೋಕಿಲಾ ಶರಣು ಹೇರೂರ, ವಿ.ಪದ್ಮಾರೇಖಾ, ಸೀತಾಬಾಯಿ ಎಂ.ಎಚ್, ಜ್ಯೋತಿ ಒಡೆಯರಾಜ್, ಶ್ರೀದೇವಿ ಎಸ್.ಮಲಕಂಡಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಲಾಡ್ಲಾಪುರ, ಹಳಕರ್ಟಿ, ರಾವೂರ, ಕಮರವಾಡಿ ಗ್ರಾಮದ ಮಹಿಳೆಯರೂ ಮನೆಯಿಂದಲೇ ಆನ್‌ಲೈನ್ ಚಳುವಳಿಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here