ಬಿಳಿದಾಳೆ ಪಾರ್ವತೀಶ ಎಂಬ ಬಿಡುವಿಲ್ಲದ ಕೆಲಸಗಾರ

0
33

ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಪಾರ್ವತೀಶ ಎಂ.ಎ.ಪತ್ರಿಕೋದ್ಯಮ ಕೋರ್ಸ್ ಅನ್ನು ಅದ್ಯಾಕೋ ಅರ್ಧಕ್ಕೆ ನಿಲ್ಲಿಸಿದವರು.

ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು ಪಾರ್ವತೀಶ ಅವರು. ಕೆಲ ಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ ಅವರು ನಂತರ ‘ಕರ್ನಾಟಕ ಪ್ರಗತಿರಂಗ’ ಹಾಗೂ ‘ಕರ್ನಾಟಕ ವಿಮೋಚನಾ ರಂಗ’ದ ಸಕ್ರಿಯ ಕಾರ್ಯಕರ್ತರಾಗಿದ್ದವರೂ ಆಗಿದ್ದರು.

Contact Your\'s Advertisement; 9902492681

ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ಪ್ರಮುಖ ವರದಿಗಾರನಾಗಿ ಕೆಲಸ ಮಾಡಿರುವ ಅವರು ‘ಸಾಕೇತ್’ ಎನ್ನುವ ವಾರಪತ್ರಿಕೆ‌ ಹುಟ್ಟು ಹಾಕಿ ಆರ್ಥಿಕ ಮುಗ್ಗಟ್ಟಿನಿಂದ ಆ ಸಕಾಲಿಕ, ಸಾಂದರ್ಭಿಕವಾಗಿದ್ದ ‘ಸಾಕೇತ್’ ನ್ನು ನಿಲ್ಲಿಸಿದರು. ಆದರೆ ಕೆಲವು ಜನವಿರೋಧಿಗಳು ಮತ್ತು ಪ್ರಜಾಸತ್ತಾತ್ಮಿಕವಾಗಿ ಇರದ ಅಲ್ಲದೇ ಮಾತಾಡಾದ ‘ಜನಶಕ್ತಿ’ ಎಂಬ ಸಂಘಟನೆಯ ಬರೀ ಎತ್ತುವಳಿಯ ಕೆಲವು ಗಿರಾಕಿಗಳು ಪಾರ್ವತೀಶ ‘ಸಾಕೇತ್’ ಎಂಬ ಪತ್ರಿಕೆಯನ್ನು ಬರೋಬ್ಬರಿ ಒಂದು ಕೋಟಿ ರೂಪಾಯಿ ಚಂದಾ ಎಬ್ಬಿಸಿಕೊಂಡು ಅದನ್ನು ನಿಲ್ಲಿಸಿದರು ಅಂತ ಪುಕಾರು ಹಬ್ಬಿಸಿದರು, ಮತ್ತೂ ಈಗಲೂ ಅದನೇ ಗುಲ್ಲೆಬ್ಬಿಸುತ್ತಿದ್ದಾರೆ.

ಒಮ್ಮೆ ಈ ಪತ್ರಿಕೆಗಳ ಸಹವಾಸವೇ ಬೇಡವೆಂದು ಕೃಷಿ ಮಾಡಲು‌ ಹಳ್ಳಿಗೆ ಹಿಂದಿರುಗಿದರು ಪಾರ್ವತೀಶ ಅವರು. ಆದರೆ ಈಗಿನ ‌ಕೃಷಿ ಕೂಡ ಅಲಾಭದಾಯಕವಾಗದ್ದಿದ್ದರಿಂದ ಕೃಷಿಯಲ್ಲೂ ಕೈಸುಟ್ಟುಕೊಂಡು ಮರಳಿ ಪತ್ರಿಕೋದ್ಯಮಕ್ಕೇ ಮರಳಿದರು ಪಾರ್ವತೀಶ ಅವರು. ಅದೇ ಗೌರಿ ಲಂಕೇಶ್ ರ ‘ಗೈಡ್’ ಎನ್ನುವ ಉದ್ಯೋಗ ಮಾಹಿತಿಯ ಮಾಸ ಪತ್ರಿಕೆಯ ಸಂಪಾದಕರಾಗಿಯೂ ದುಡಿದಿದ್ದರಿಂದ ಆ ಅನುಭವದಲ್ಲಿ ತಮ್ಮದೇ ಆದ ‘ಜಾಬ್ ನ್ಯೂಸ್’ ವಾರ ಪತ್ರಿಕೆಯನ್ನು ತರುತ್ತಿದ್ದರು ಆಗ. ಈಗ ಅದೂ ಕೂಡ ಪಾರ್ವತೀಶ ಅವರು ತಮ್ಮ ಕೈಸುಟ್ಟುಕೊಳ್ಳುವ ಅನುಭವ ಕೊಟ್ಟಿತು..!

ಈ‌ ‘ಜಾಬ್ ನ್ಯೂಸ್’ನ ಉದ್ಯೋಗ ಮಾಹಿತಿಯಿಂದ ಸಾಕಷ್ಟು ಸುರಕ್ಷಿತ ನಿರುದ್ಯೋಗಿಗಳಿಗೆ ಅನುಕೂಲವಾಗಿತ್ತು ಆಗ..! ಈ ವಿಷಯವೆಲ್ಲ ಇರಲಿ. ಹಾಗೇಯೇ ಸಾಂದರ್ಭಿಕವಾಗಿ ಒಂದಿಷ್ಟು ಕಚಗುಳಿ ವಿಷಯಗಳ ಬಗೆಗೆ ಮಾತನಾಡೋಣವೀಗ. ಹೀಗೆಯೇ ಒಮ್ಮೆ ಮೂರ್ನಾಲ್ಕು ಗೆಳೆಯರ ಜೊತೆಗೆ ಹಾವೇರಿಗೆ ಬಂದಿದ್ದರು ಪಾರ್ವತೀಶ ಅವರು. ‘ಸರ್ಕಿಟ್ ಹೌಸಿ’ನಲ್ಲಿ ಒಟ್ಟಿಗೇ ಒಟ್ಟಿಗೇ ತಂಗಿದ್ದೇವು. ಅವರ ಬಹು ದಿನಗಳ ‌ನಂತರದ ಭೇಟಿ, ಸಾಕಷ್ಟು ಮಾತುಕತೆಯೂ ಆಯಿತು. ಹಾಗೆಯೇ ಒಂದು ಬೈಟಕ್ ಗುಂಡಿನೊಂದಿಗೆ ಸಾಕಷ್ಟು ಚರ್ಚೆಗಳಾದವು. ಪತ್ರಿಕೆಯ ಆಗುಹೋಗುಗಳನ್ನು ಸಾಕಷ್ಟು ಮಾತಾಡಿದೆವು ಆಗ. ಈ ಪತ್ರಿಕಾ ಏಜೆಂಟ್ ರ ಅಸಹಕಾರದ ಬಗೆಗೆ ಸಾಕಷ್ಟು ಚರ್ಚಿಸಿದೆವು..!

ಆಗವರು ‘ಜಾಬ್ ನ್ಯೂಜ್’ನ ಸಕ್ರೀಯ ಸಂಪಾದಕರಾಗಿ ದುಡಿಯುತ್ತಿದ್ದರೂ ಇನ್ನೂ ಹಳೆಯ ‘ಗೌರಿ ಲಂಕೇಶ್’ ಪತ್ರಿಕೆಯ ಕೋರ್ಟ್ ಕೆಲಸಗಳು ‌ಇನ್ನೂ ಮುಗಿದಿರಲಿಲ್ಲ. ತಮ್ಮ ಸ್ವಂತದ ‘ಜಾಬ್ ನ್ಯೂಸ್’ ಬಿಡುವಿಲ್ಲದ ಕೆಲಸದ ಜೊತೆಗೇ ಆ ಹಳೆಯ ‘ಗೌರಿ ‌ಲಂಕೇಶ್’ ಕೋರ್ಟ್ ಕೆಲಸಗಳನ್ನೂ ನೋಡಿಕೊಳ್ಳಬೇಕಾಗಿತ್ತು ಪಾರ್ವತೀಶ ಏಕಾಂಗಿಯಾಗಿ..!

ಹೀಗೆಯೇ ಒಮ್ಮೆ ನಾನು ಬೆಂಗಳೂರಿಗೆ ಹೋದಾಗ, ಪಾರ್ವತೀಶರು ಅದೇ ‘ಗೌರಿ ಲಂಕೇಶ್’ ಪತ್ರಿಕೆಯ ಹಳೆಯ ಕೋರ್ಟ್ ಕೇಸ್ ಗೆ ಹಾಜರಾಗಲು ತುಮಕೂರಿಗೆ ಹೋಗಿದ್ದರು. ನಾನು ಫೋನ್ ‌ಮಾಡಿದಾಗ ದಾರಿಯಲ್ಲಿ ಇದ್ದೇನೆ ಶಿವು ಬರುತ್ತಿದ್ದೇನೆ. ಇರಿ, ಹೋಗಬೇಡಿ, ಭೇಟಿ ಆಗೋಣ ಅಂದರು.‌ ಆದರೆ ನನಗಾಗ ಒಂದಿಷ್ಟು ಹುಷಾರಿರಲಿಲ್ಲ. ಅದಕ್ಕಾಗಿ ನಾನು ಹಾಗೇ ಹಾವೇರಿಗೆ ಬಂದುಬಿಟ್ಟೆ. ಪಾಪ ಅವರು ಬೆಂಗಳೂರಿಗೆ ಬಂದು ನನಗೆ ಫೋನ್ ಮಾಡಿದರು. ನಾನಾಗ ಹಾವೇರಿಗೆ ವಾಪಸ್ ಹೋಗುತ್ತಿದ್ದೇನೆ ಸರ್ ಅಂದೆ, ಅಲ್ಲದೇ ‌ಅವರು‌ ಭೇಟಿ ಆಗದಿದ್ದಿಕ್ಕೆ ನನಗೂ ಮತ್ತು ಪಾರ್ವತೀಶರವರಿಗೂ ಬಹಳ ಬೇಸರವಾಯಿತು..!

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನಂದರೆ ಮೊನ್ನೆ ಸಾಕಷ್ಟು ನೆನಪಾದರು ಪಾರ್ವತೀಶ ಅವರು. ಬಹು ದಿನವಾಯಿತು ಅವರೋಡನೆ ಮಾತಾಡಿ, ಭೇಟಿಯಾಗಿ..! ಇರಲಿ. ಕೂಡೋಣ. ಈಗ ಅವರೇ ಬರೆದ ಒಂದು ಲೇಖನ ನೋಡೋಣವೀಗ ಅನ್ನಿಸಿ ಇದನ್ನೆಲ್ಲಾ ‌ಬರೆದೆ. ಆ ಲೇಖನ ‌ಹೀಗಿದೆ ನೋಡಿ.

  • # ಪಾರ್ವತೀಶ ಅವರ ಹೀಗೊಂದು ‌ಪ್ರಯೋಗವೂ–
  • ಪ್ರಿಯ ಯುವ ಮಿತ್ರರೆ,
  • ಇದೊಂದು ಪ್ರಯೋಗ,
  • ಇದರ ಬಗ್ಗೆ ಈಗಾಗಲೇ ನಿಮ್ಮೊಂದಿಗೆ ಮಾತಾಡಿದ್ದೇನೆ.

ನಾವು ಹೊಸ ಅರಿವನ್ನು ಪಡೆಯುವಲ್ಲಿ ಕೆಲವು ಘಟನೆಗಳು, ವ್ಯಕ್ತಿಗಳು, ಓದು-ಓಡಾಟ, ನೋಡಿದ್ದು, ಕೇಳಿದ್ದು ಹೀಗೆಯೇ ಹಲವು ರೀತಿ ಪ್ರಭಾವ ಬೀರಿರುತ್ತವೆ. ಅವನ್ನು ತಿಳಿಯುವಷ್ಟು ವಿವೇಚನೆ ನಮಗಿದ್ದರೆ ತಿಳಿದು ಬೆಳೆಯುತ್ತೇವೆ, ನಮ್ಮಗಳ ವ್ಯಕ್ತಿತ್ವ ಬೆಳೆದು ವಿಕಾಸವಾಗುವುದು ಹೀಗೆನೇ, ನಾನಂತೂ ಕಲಿತದ್ದು ಇದೇ ರೀತಿಯಾಗಿ. ಅವನ್ನೇ ಇಲ್ಲಿ ಮಾತಾಡಲಿದ್ದೇನೆ.

ನಮ್ಮ ಈ ಪಯಣದಲ್ಲಿ ಕರ್ನಾಟಕ ಯುವಜನ ಶಕ್ತಿಯ ವಿಧ್ಯಾರ್ಥಿ ಯುವ ನಾಯಕ ಸರೋವರ್ ಬೆಂಕಿಕೆರೆಯವರನ್ನೂ ಆಹ್ವಾನಿಸಿದ್ದೆ, ಆದರೆ ಅವರು ಜೊತೆಗೂಡಲು ಮನಸ್ಸು ಮಾಡಲಿಲ್ಲ, ಇರಲಿ, ಅವರು ಮುಂದೆಯೂ ಸಹ ಬಂದು ಸೇರಲು ಅವಕಾಶ ಮುಕ್ರವಾಗಿರುತ್ತದೆ.

ಈಗ ಈ ಪ್ರಯೋಗವೇಕೆಂದರೆ ನನಗೆ ಈ ‘ಜನಶಕ್ತಿ’ಯವರೊಂದಿಗೆ ಒಂದು ವಾಗ್ವಾದವಾದಾಗ ಅದೇ ಸಂಘದ ಕೆಲವು ಯುವ ಮಿತ್ರರು ಮುಂದೆ ಬಂದು ನನ್ನ ಮೇಲೆ ಊಹಾತೀತ ಮಾತಿನ ದಾಳಿ ನಡೆಸಿದರು. ನಾನದರಿಂದ ವಿಚಲಿತನಾಗಲಿಲ್ಲ. ಬದಲಾಗಿ ಕೆಲವೊಮ್ಮೆ ಕಿಡಿಗೇಡಿತನದ ಪ್ರತಿಕ್ರಿಯೆ ನೀಡಿದೆನಾದರೂ ಒಟ್ಟಾರೆಯಾಗಿ ನನಗಾ ಯುವಜನರ ಮೇಲೆ ಅಸಹನೆಯಾಗಲಿಲ್ಲ, ಅವರೊಂದಿಗೆ ಬೇರೆ ರೀತಿ ಒಡನಾಡಲು ಬಯಸಿದಿದ್ದೇ, ಅದಕ್ಕೂ ಕಾರಣಗಳಿವೆ..!

ನಮ್ಮಂತವರು ಈ ಸಮಾಜದ ಕೆಡಕುಗಳ ವಿರುದ್ದ ಯಾವ ಯುವಜನರು ದನಿ ಎತ್ತಲಿ ಎಂದು ಬಯಸುತ್ತೇವೆಯೋ ಅದೇ ತರದ ಯುವಜನರು ಇವರಾಗಿರುವಾಗ ನಾನು ಅದು ಹೇಗೆ ಅಂತವರ ವಿರುದ್ಧ ಹೋರಾಡಲಿ, ನನಗೆ ವಾಗ್ವಾದವಿರುವುದು ಅವರ ಲೀಡರ್ ಗಳ ಜೊತೆಯೇ ವಿನಃ ಈ ಯುವಜನರೊಂದಿಗಲ್ಲವಲ್ಲ ಅನಿಸಿತು. ಇದು ನನ್ನ ಸರಳ ಗ್ರಹಿಕೆ, ಅದರ ಹಿಂದೆ ಬೇರಾವುದೇ ಲೆಕ್ಕಾಚಾರಗಳಿಲ್ಲ. ಅವರ ವಿಚಾರ ಇಲ್ಲಿಗೇ ಬಿಡೋಣ,

ಇದು ಒಂದು ತರ ನಮ್ಮ ವಿರುದ್ಧ ನಾವೇ ಯೋಚಿಸಿಕೊಳ್ಳಬೇಕಾದ ಸಂಗತಿ ಬರುತ್ತದೆ, ನಾನೀಗ ಮಾಡುತ್ತಿರುವುದು ಅದೆಷ್ಟರಮಟ್ಟಿಗೆ ಸರಿ ಅಂತ ಪದೇ ಪದೇ ನಮ್ಮನ್ನೇ ಪ್ರಶ್ನಿಸಿಕೊಳ್ಳುವುದು, ಮುಂದೆ ಸಾಗುವುದು ಹೀಗೆಯೇ..!

ಮಲೆನಾಡಿನ ರಂಗಾಸಕ್ತ, ಉಪನ್ಯಾಸಕ ಕುಂಸಿ ಉಮೇಶ್ ರವರು ಒಮ್ಮೆ ಹೊಳೇಹೊನ್ನೂರಿನ ಅವರ ಡಿಗ್ರಿ ಕಾಲೇಜಿಗೆ ತೇಜಸ್ವಿಯವರ ಸಿದ್ದಾಂತಗಳ ಬಗ್ಗೆ ಮಾತನಾಡಲು ಕರೆದರು. ಆಗಲೆಂದು ಹೇಳಿದ ನಾನು ಅದಾಗಲೇ ಓದಿದ್ದ ತೇಜಸ್ವಿ, ಕುವೆಂಪುರ ಬರಹಗಳನ್ನೆಲ್ಲ ಇನ್ನೊಮ್ಮೆ ತಿರುವಿ ಹಾಕಿದೆ. ಆದರೆ ಅಲ್ಲಿ ನನಗೆಲ್ಲೂ ‘ತೇಜಸ್ವಿಯವರ ಸಿದ್ದಾಂತ ನಂ 1, ಸಿದ್ದಾಂತ ನಂ 2 ಎಂಬ ಪ್ರಮೇಯಗಳು ಸಿಗಲಿಲ್ಲ, ಸೆಮಿನಾರಿನ ದಿನ ಹತ್ತಿರವಾಗುತ್ತಲಿತ್ತು, ಮೊಗಳ್ಳಿ ಗಣೇಶ್, ಕಡಿದಾಳು ಶಾಮಣ್ಣ ಮುಂತಾದವರು ಅವತ್ತು ಮಾತನಾಡುವವರಿದ್ದರು. ನನಗೆ ನನ್ನ ಮರ್ಯಾದೆ ಹೋಗುವುದು ಗ್ಯಾರಂಟಿ ಅನಿಸಿತು, ಆದರೂ ಇರಲಿ ಎಂದು -Reading between the lines – ಅನ್ನುತ್ತೇವಲ್ಲ , ಅದೇ ರೀತಿ ಅವರ ನಿರೂಪಣೆಯಲ್ಲಿ ಸಿಗಬಹುದಾದ ಒಳನೋಟಗಳತ್ತ ಗಮನ ಹರಿಸಿದೆ. ಅಲ್ಲಿ ಒಮ್ಮೆ ತೇಜಸ್ವಿಯವರನ್ನು ಕೂರಿಸಿಕೊಂದು ಕುವೆಂಪುರವರು ‘ ನಮ್ಮ ಬದುಕಿನಲ್ಲಿ ವಾಸ್ತವಗಳತ್ತ [Objectivity] ಹೇಗೆ ಚಲಿಸಬೇಕೆಂಬುದನ್ನು ವಿವರಿಸುವ ಒಂದು ಪ್ರಸಂಗ ಸಿಕ್ಕಿತು.

ತೇಜಸ್ವಿಯವರು ನಿಮ್ಮ ಹಾಗೆಯೆ ಯುವಕರಾಗಿದ್ದಾಗ, ಮೈಸೂರಿನಲ್ಲಿ ಓದುತ್ತಿದ್ದಾಗೊಮ್ಮೆ ಕಡಿದಾಳು ಶಾಮಣ್ಣ, ನಂಜುಂಡಸ್ವಾಮಿ ಮುಂತಾದವರ ಸಹವಾಸದಲ್ಲಿ ಒಂದು ಹೋರಾಟ ಮಾಡಲು ಹೋಗಿ ಅದು ಪೋಲಿಸ್ ಕೇಸ್ ಆಗಿರುತ್ತದೆ. ಕೋರ್ಟ್ ನಿಂದ ಸಮನ್ಸ್ ಬಂದಾಗ ಅದಕ್ಕೆ ಕಾರಣವೇನೆಂದು ಮನೇಲಿ ಚರ್ಚೆಯಾಗುತ್ತದೆ. ತೇಜಸ್ವಿ ತನ್ನದೇನೂ ತಪ್ಪಿಲ್ಲವೆಂದಾಗ ಕುವೆಂಪು ‘ಸ್ಟ್ರೈಕ್ ಮಾಡಿ, ಗಲಾಟೆ ಮಾಡಿ ಈಗ ತಪ್ಪಿಲ್ಲವೆಂದರೆ ಹೇಗೆ, ಆಗ ನಿಮ್ಮ ಕೆಲಸ ನೀವು ಮಾಡಿದ್ದೀರಿ, ಈಗ ಪೋಲಿಸು/ಸರ್ಕಾರ ತನ್ನ ಕೆಲಸ ಮಾಡುತ್ತಿದೆ’ ಅನ್ನುತ್ತಾರೆ.

ತೇಜಸ್ವಿಗೆ ಇದರಿಂದ ಶಾಕ್ ಆಗುತ್ತದೆ, ತನ್ನ ಕೆಲಸವನ್ನು ತಂದೆ ಹೊಗಳಬಹುದೆಂದಿತ್ತೇನೊ ಅವರಿಗೆ, ಆದರೆ ಕುವೆಂಪು ವಿಮರ್ಶಿಸುತ್ತಿದ್ದಾರೆ! “ಕರೆಕ್ಟ್, ನಾನು ನಿನ್ನ ವಿರುದ್ಧ ವಾದ ಮಾಡ್ತಿರೋದು ನಿಜ, ಆದರೆ ಅದನ್ನು ನೀನೇ ಮಾದ್ಕೊಳೋದನ್ನ ಕಲೀಬೇಕು, ನೀನು ಎಷ್ಟೆಷ್ಟು ನಿನ್ನ ವಿರುದ್ಧ ಯೋಚನೆ ಮಾಡಿಕೊಳ್ಳೋದನ್ನು ಕಲೀತಿಯೋ ಅಷ್ಟಷ್ಟು ನಿನ್ನ ದೃಷ್ಟಿ ಆಬ್ಜೆಕ್ಟೀವ್” ಆಗುತ್ತೆ. ವಸ್ತುನಿಷ್ಟ ಆಗುತ್ತೆ. ಬರೀ ಈ ಕೋರ್ಟಿನ ಕೇಸೊಂದಕ್ಕೇ ಅಲ್ಲ, ಜೀವನದಲ್ಲೂ ಇದು ತುಂಬಾ ಅಗತ್ಯ, ಕಣ್ಣು ಪಟ್ಟಿ ಕಟ್ಟಿದ ಕುದುರೆ ಹಾಗೆ ನಿನ್ನ ಮೂಗಿನ ನೇರಕ್ಕೇ ನೀನು ಯೋಚನೆ ಮಾಡೋದು ಸರಿಯಲ್ಲ, ಸಾಹಿತ್ಯದಲ್ಲೂ ಅಸ್ಟೇ, ಒಳ್ಳೆ ಬರಹಗಾರನಿಗೂ ಕೆಟ್ಟ ಬರಹಗಾರನಿಗೂ ಇರೋ ವ್ಯತ್ಯಾಸ ಇಷ್ಟೇ”,

ಹೀಗೆ ಕುವೆಂಪು ಮಾತುಗಳು ಸಾಗುತ್ತವೆ. ನನಗೆ ಅಲ್ಲಿ ಸಿಕ್ಕ ಪಾಠ ಏನೆಂದರೆ, ಯಾವುದೇ ಸನ್ನಿವೇಶ, ವ್ಯಕ್ತಿ, ಘಟನೆ ಕುರಿತು ನಿಲುವು ತಾಳುವ ಮುನ್ನ ನಾವೆಷ್ಟು ಸರಿ ಎಂದು ಆದಷ್ಟೂ ನಮ್ಮ ನಮ್ಮ ನಿಲುವುಗಳ ವಿರುದ್ಧವೇ ಯೋಚಿಸುತ್ತಾ ಹೋದಲ್ಲಿ ವಸ್ತುಸ್ಥಿತಿಯ ಹತ್ತಿರಕ್ಕೆ ಚಲಿಸಲು ಆಗಬಹುದೆಂದು.

ನನ್ನ ಮಗಳೊಮ್ಮೆ ಬಹುಷಃ 7 ನೇ ಕ್ಲಾಸಿನಲ್ಲಿದ್ದಾಗ ‘ನಮ್ ಮನೇಲಿ ನಾನೇ ಜಾಸ್ತಿ ಎಜುಕೆಟೆಡ್’ ಅಂದಳು. “ಹೇಗೆ!!” ಅಂತ ಕೇಳಿದೆ. ಅದಕ್ಕೆ ನನ್ನ ಮಗಳು ಚಾರುಮತಿ ‘ನಾನು ಕೇಳುವಷ್ಟು ಪ್ರಶ್ನೆ ನೀವ್ಯಾರೂ ಕೇಳಲ್ಲ, ಮತ್ತೆ ಆ ಎಲ್ಲಾ ಪ್ರಶ್ನೆಗೆ ಉತ್ತರಾನೂ ಕೊಡಲ್ಲ, ಅದಕ್ಕೆ” ಅಂದಿದ್ದಳು. ಪ್ರಶ್ನೆ ಕೇಳುವುದು, ಅದಕ್ಕಿಂತಾ ಮುಖ್ಯವಾಗಿ ಕೇಳಬೇಕು ಅನಿಸುವುದು ಮುಖ್ಯ ಅನಿಸಿತು ನನಗಾವಾಗ.

ನಾವು ಬೆಳೆಯುತ್ತಾ ಹೋದಂತೆ ನಮ್ಮ ಮನಸ್ಸಿನ ಸುತ್ತಾ ಹಲವು ಸ್ತರದ ಸೆರೆಮನೆಗಳು ನಿರ್ಮಾಣಗೊಳ್ಳುತ್ತಾ ಹೋಗುತ್ತವೆ, ಹಲವು ದೃಷ್ಟಿಗೋಚರ, ಮತ್ತಲವು ಅದೃಶ್ಯ. ಸಾಮಾಜಿಕ ಸೆರೆಮನೆಗಳು [ಜಾತಿ, ಧರ್ಮ, ಕ್ಲಾಸ್ ಇತ್ಯಾದಿ], ಸಂಘಟನೆಗಳ ಸೆರೆಮನೆಗಳು [ಸಿದ್ಧಾಂತಗಳ ಆರಾಧನೆ ವ್ಯಕ್ತಿಪೂಜೆ, ನಾಯಕ ನಿಷ್ಟೆ ಇತ್ಯಾದಿ] ಇವುಗಳ ಗೋಜಲಿನಿಂದ ಬಿಡಿಸಿಕೊಂಡು ಒಂದು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ದೀರ್ಘ ಪ್ರಯಾಣ. ಇದರರ್ಥ ಸಾಮಾಜಿಕ ಕೆಲಸಗಳಿಂದ ದೂರವಿರಬೇಕೆಂಬುದಲ್ಲ, ಬದಲಾಗಿ ನಮ್ಮ ವಿವೇಚನಾ ಶಕ್ತಿಯ ಬೆಳವಣಿಗೆಗೆ ನಮ್ಮ ಬದ್ಧತೆಯೆಂಬುದು ಸ್ವಯಂ ಸರಪಳಿ ಆಗಬಾರದೆಂಬುದಷ್ಟೆ..! ನಮ್ಮಗಳ ಸಾಮಾಜಿಕ ಬದ್ಧತೆಯು ನಮ್ಮ ನಮ್ಮ ಬುದ್ದಿಮತ್ತೆಯನ್ನು ಒತ್ತೆ ಇಡುವಂತಾಗಬಾರದು ಅಸ್ಟೇ.

ಅವರು ನಿಮ್ಮಂತಹ ಯುವಜನರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು, ಕಂದಾ, ಕೂಸು, ಮರಿ ಮುಂತಾದ ಅಕ್ಕರೆಯ ಮಾತುಗಳಿಂದ ಅವರ ಮಾತುಗಳು ಶುರುವಾಗುತ್ತಿದ್ದವು. ಪುರಾಣದ ಆ ಗೌರಿ ತನ್ನ ದೇಹದ ಮಣ್ಣಿನಿಂದ ಗಣೇಶನನ್ನು ನಿರ್ಮಿಸಿದಳು ಎನ್ನುತ್ತಾರೆ, ಆದರೆ ನಮ್ಮ ಕ್ಯಾಪ್ಟನ್ ಆಗಿದ್ದ ಗೌರಿಯವರನ್ನು ನಿಮ್ಮಂತಹ ಜನ-ಯುವಜನರೇ ತಮ್ಮ ಕೈಗಳಿಂದ, ಈ ಕರ್ನಾಟಕದ ಮಣ್ಣಿನಿಂದಲೇ ನಿರ್ಮಿಸಿದರು, ಅವರ ವ್ಯಕ್ತಿತ್ವ, ಆಶಯ, ಸಾಮಾಜಿಕ ಕಾಳಜಿಗಳೆಂಬ ಶಿಲ್ಪವನ್ನು ಕೆತ್ತಿದರು.

ಗೌರಿ ತಮಗೆ ತಿಳಿದಿದ್ದನ್ನು ಇತರರಿಗೆ ಕಲಿಸಿದರು, ಇತರರಿಂದಲೂ ಹಲವನ್ನು ಕಲಿತರು, ಅದೊಂದು ಏಳು-ಬೀಳುಗಳ ಪಯಣ. No one is perfect ಅನ್ನುವುದು ಅವರ ನಿತ್ಯದ ಮಾತಾಗಿತ್ತಾದರೂ ತಾನು ಆದಷ್ಟೂ ತನ್ನ ವಿರುದ್ಧವೇ ಯೋಚಿಸಲು ಕಲಿಯುತ್ತಾ ಇರಬೇಕಿರದಿದ್ದನ್ನು ಬಿಟ್ಟು ಬೇಕಾದ್ದನ್ನು ಎಲ್ಲರಿಂದಲೂ ಹೆಕ್ಕಿಕೊಂಡರು ನಮ್ಮ ವ್ಯಕ್ತಿತ್ವಗಳು ವಿಕಾಸವಾಗುವಾಗ ಕಣ್ಣೀರು ಕಂಡರೆ ಬದುಕಿನ ಕೆಲ ಪಾಠಗಳು ನಮ್ಮ ಮನಸ್ಸು ಹೃದಯವನ್ನು ತಾಕಿದೆ ಎಂದರ್ಥ, ನಮ್ಮ ಮಾತು ವರ್ತನೆಗಳು ಬದಲಾದರೆ ನಾವೇನೋ ಹೊಸದನ್ನು ಕಲಿಯುತ್ತಿದ್ದೇವೆ ಎಂತಲೂ ಆಗಬಹುದು. ಇದು ಶತಮಾನಗಳಿಂದ ನಡೆದು ಬಂದಿದೆ. ನಾನೂ, ನೀವೂ ಅದಕ್ಕೆ ಹೊರತಲ್ಲ..!

ಅಂತಹ ಹಲವು ಘಟನೆಗಳನ್ನು, ಜೊತೆಗೆ ಇನ್ನೂ ಹಲವು ನಮ್ಮ ಸುತ್ತಲಿನ ಆಗುಹೋಗುಗಳನ್ನು ಮುಂದೆ ಓದೋಣ. ಅವುಗಳಲ್ಲಿ ಕೆಲವು ಪುಟ್ಟವು, ದೊಡ್ಡವು, ವ್ಯಾಪ್ತಿ ಪ್ರದೇಶದ ಹೊರಗಿನವೂ ಆಗಿರಬಹುದು. ಆದರೆ ಒಟ್ಟಾರೆ ಒಂದು ಚೌಕಟ್ಟಿನಲ್ಲಿರುತ್ತವೆ ಮತ್ತು ಪದಮಿತಿಯಲ್ಲಿರುತ್ತವೆ.

ಮೊದಲನೆಯವರು ನನಗೆ ಬದುಕಿನ ಮೊದಲ ಪಾಠಗಳನ್ನು ತಿಳಿಹೇಳಿದವರು, ಎರಡನೆಯವರು ಈಗಲೂ ನನ್ನ ವಿವೇಕವನ್ನು ತಿದ್ದುತ್ತಿರುವವರು. ಮೂರನೆಯವರು ಕುಂಸಿ ಉಮೇಶ್ ಭೇಟಿ ನಿತ್ಯವಿರದ್ದಿದ್ದರೂ ಸಹ ಜೀವನ ದೃಷ್ಟಿ ಕುರಿತಂತೆ ನಾನು ನಟರಾಜ್ ಮತ್ತು ಮೋಹನ್ ರಿಂದ ಕಲಿತದ್ದು ಅನೇಕ. ಅಂದಹಾಗೆ ‘ಜನಶಕ್ತಿ’ಯವರೊಂದಿಗಿನ ನನ್ನ ಜಗಳಕ್ಕೂ, ಇಲ್ಲಿನ ನಿರೂಪಣೆಯ ನಿಲುವಿಗೂ ನನಗಿವರೊಂದಿಗಿನ ಸ್ನೇಹಕ್ಕೂ ನೇರ ಸಂಬಂಧವಿಲ್ಲ, ನಾನವರಿಂದ ಉಪಕೃತ ಅಷ್ಟೇ, ಮತ್ತು ಈ ಪ್ರಯೋಗದಲ್ಲಿ ಜಗಳವಿರುವುದಿಲ್ಲ, ಬದುಕಿರುತ್ತದೆ ಮಾತ್ರ..!

  • # ಪಾರ್ವತೀಶ ಬಿಳಿದಾಳೆ
  • # ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here