ಸರಕಾರಿ ನೌಕರರ ಮುಷ್ಕರದಿಂದ ಕಛೇರಿಗಳು ಬಂದ್ : ಸರ್ಕಾರದ ಅಧಿಕೃತ ಆದೇಶ ಬೆನ್ನಲ್ಲೆ ಮುಷ್ಕರ ವಾಪಸ್

0
7

ಶಹಾಬಾದ : ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಬುಧವಾರ ರಾಜ್ಯ ಸರ್ಕಾರಿ ನೌಕರರು ರಾಜ್ಯಾದಾದ್ಯಂತ ನಡೆಸಲಾದ ಮುಷ್ಕರಕ್ಕೆ ಮಣಿದ ಸರಕಾರ ಸರ್ಕಾರಿ ನೌಕರರಿಗೆ 17 ಪ್ರತಿಶತ ವೇತನ ಏರಿಕೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಂತರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ.

7ನೇ ವೇತನ ಆಯೋಗ ಜಾರಿ ಹಾಗೂ ನೂತನ ಪಿಂಚಣಿ ಪದ್ಧತಿ (ಎನ್’ಪಿಎಸ್) ರದ್ದು ಮಾಡಬೇಕೆಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಶಹಾಬಾದ ಸರಕಾರಿ ನೌಕರರು ಗೈರು ಹಾಜರಾಗಿದ್ದರಿಂದ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು.

Contact Your\'s Advertisement; 9902492681

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಸೇವೆಗಳು ಬಹುತೇಕ ಬಂದ್ ಆಗಿದ್ದವು. ತಹಶೀಲ್ದಾರ್ ಕಚೇರಿ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನೌಕರರು ಸ್ವಯಂ ಪ್ರೇರಿತ ರಜೆ ಮಾಡಿದ್ದು, ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಶಾಲಾ ಮಕ್ಕಳು ಬೆಳಿಗ್ಗೆ ಗೊಂದಲ ಉಂಟಾಗಿದ್ದು, ನಂತರ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಯಿತು. ಶಾಲಾ ಕಾಲೇಜುಗಳ ಸಿಬ್ಬಂದಿಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿರುವ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ಮತ್ತು ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಯಿತು. ಅಲ್ಲದೇ ಸರಕಾರಿ ನೌಕರರ ಸಂಘ, ಅನುದಾನಿತ ಶಿಕ್ಷಕ ಶಿಕ್ಷಕೇತರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರ ಸಂಘಗಳ ಪದಾಧಿಕಾರಿಗಳು ಬೆಳಿಗ್ಗೆ ಶಹಾಬಾದ ನಗರದ ಸರಕಾರಿ ನೌಕರರ ಸಂಘದ ಕಾರ್ಯಾಲಯದ ಮುಂಭಾಗದ ಆವರಣದಲ್ಲಿ ಸೇರಿ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಮುಷ್ಕರಕ್ಕೆ ಬೆಂಬಲಿಸಲು ಸೂಚನೆ ನೀಡಿದರು.

ಮುಷ್ಕರ್ ಆರಂಭಿಸಿದ್ದ ಕೇವಲ ಸರಕಾರಿ ನೌಕರರು ಮುಷ್ಕರವನ್ನು ಪ್ರಾರಂಭಿಸಿ ಅರ್ಧ ದಿನದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ 17 ಪ್ರತಿಶತ ವೇತನ ಏರಿಕೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.ಇದರ ಬೆನ್ನಲ್ಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ರಾಜ್ಯ ಸರ್ಕಾರಿ ನೌಕರರಿಗೆ ವೇತನ ಏರಿಕೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆಯಲು ತಿಳಿಸಿದ್ದಾರೆ. ಅಲ್ಲದೇ ಸರ್ಕಾರಿ ನೌಕರರು ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ವೇತನ ಏರಿಕೆಗೆ ಮಧ್ಯಂತರ ಆದೇಶ ನೀಡಿದ್ದಾರೆ. ನಮ್ಮ ಭರವಸೆ ಈಡೇರಿಸದೇ ಹೋದಲ್ಲಿ ಮತ್ತೆ ಮುಷ್ಕರ ನಡೆಸುತ್ತೇವೆ. ಮುಷ್ಕರದಿಂದಾಗಿ ಶಹಾಬಾದ ತಾಲೂಕಿನ ಸಾರ್ವಜನಿಕರಿಗೆ ತೊಂದರೆಯಾಗಿರುವುದಕ್ಕೆ ಕ್ಷಮೆಯಾಚಿಸುತ್ತೆವೆ ಎಂದು ಶಹಾಬಾದ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here